ಮನ ತಣಿಸಿದ ಮಾನವ ಸರಪಳಿ

ದೇಶದ ಗಣರಾಜ್ಯೋತ್ಸವದ ಅಂಗವಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧಿಕೃತ ವಿದ್ಯಾ ಸಂಘಟನೆಯಾದ ಎಸ್ಕೆಎಸ್ಸೆಸ್ಸೆಫ್ ’ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಳೆದ ಒಂಬತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಮಾನವ ಸರಪಳಿ ಕಾರ್ಯಕ್ರಮವು ಈ ಬಾರಿಯು  ದ.ಕ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿಯ ವತಿಯಿಂದ  ಮಿತ್ತಬೈಲಿನಲ್ಲಿ ಬಹಳ ಅದ್ದೂರಿಯಿಂದ ನಡೆಯಿತು.
ಕರ್ನಾಟಕದ ಅಗ್ರಗಣ್ಯ ಉಲಮಾಗಳು, ಜನಪ್ರತಿನಿಧಿಗಳು ಸಮಾಜಿಕ ನೇತಾರರು, ವಿದ್ತಯಾರ್ಥಿಗಳು ಸೇರಿದಂತೆ ಸಾವಿರಾರು ಜನರ ಸಮಕ್ಷಮದಲ್ಲಿ ನಡೆದ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮವು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ, ರಾಜ್ಯ ಅರಣ್ಯ ಸಚಿವರೂ ಆಗಿರುವ
ಶ್ರೀ.ಬಿ ರಮಾನಾಥ ರೈ ಮಾತನಾಡಿ, ’ಮಾನವ ಸರಪಳಿಯು ಇಡೀ ದೇಶಕ್ಕೆ ಮಾದರಿ ಕಾರ್ಯಕ್ರಮವಾಗಿದ್ದು, ದಾರಿತಪ್ಪುತ್ತಿರುವ ಯುವ ಜನತೆಯಲ್ಲಿ ದೇಶಪ್ರೇಮ ತುಂಬುವಲ್ಲಿ ಯಶಸ್ವಿಯಾಗಿದೆ. ಅಲ್ಪಸಂಖ್ಯಾತರ ಕೋಮುವಾದವು ಅವರ ಸಮುದಾಯಕ್ಕೆ ಕೇಡಾದರೆ ಬಹುಸಂಖ್ಯಾತರ ಕೋಮುವಾದ ಇಡೀ ದೇಶಕ್ಕೆ ಅಪಾಯವಾಗಿದೆ ಎಂದು ಅಭಿಪ್ರಯಾಪಟ್ಟರು..

ಉಗ್ರವಾದ, ಭಯೋತ್ಪಾಧನೆ ಇಸ್ಲಾಮಿಗೆ ಅನ್ಯ: ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್

’ಸಮಸ್ತ 90’ ಪಾಣಕ್ಕಾಡ್ ತಂಙಳ್‌ರ ಉದ್ಘಾಟನಾ ಭಾಷಣದ ಸಂಕ್ಷಿಪ್ತ ರೂಪ.
ನಮ್ಮ ಪರಿಸರದಲ್ಲಿ ಧರ್ಮ ಪ್ರಜ್ಞೆ, ಶೈಕ್ಷಣಿಕ ಜಾಗ್ರತಿಯ ಮೂಲಕ ಉತ್ತಮ ಸಮಾಜವನ್ನು ಕಟ್ಟಿ ಶ್ರೇಷ್ಟ ಸಮಾಜವಾಗಿ ಗುರುತಿಸುವಂತೆ ಮಾಡಿದ, ಕೇರಳದಲ್ಲಿ ಜನುಮ ತಾಳಿದ ’ಸಮಸ್ತ’ ಸಂಘಟನೆ ಇಂದು ದೇಶದ ವಿವಿಧ ಕಡೆ, ಕಡಲು ದಾಟಿ ವಿದೇಶ ರಾಷ್ಟ್ರಗಳಿಗೂ ವಿಸ್ತರಿಸಿಕೊಂಡು ಬಲಿಷ್ಟವಾಗಿ ಬೆಳೆದು ನಿಂತಿದೆ.
’ಆದರ್ಶ ಪರಿಶುದ್ಧತೆಯ ತೊಂಬತ್ತು ವರ್ಷ’ ಎಂಬ ಧ್ಯೇಯ ವಾಕ್ಯದೊಂದಿಗೆ ’ಸಮಸ್ತ’ ಅದರ ದೀರ್ಘ ಪರಂಪರೆ ಹಾಗೂ ಅಭಿಮಾನದ ಇತಿಹಾಸವನ್ನು ನೆನಪಿಸುತ್ತಾ ಪ್ರಚಾರ ಕಾರ್ಯವನ್ನು ಇನ್ನಷ್ಟು ಬಲಪಡಿಸುವ ಸುಸಂದರ್ಭವಿದು.
ಸಂದೇಶ ಪ್ರಚಾರದ ಹಾದಿಯಲ್ಲಿ  ಕೇರಳವನ್ನು ದಾಟಿ ಬಂದು ಆದರ್ಶ ಕ್ಷೇತ್ರದಲ್ಲಿ ಒಗ್ಗೂಡಿ ಇಲ್ಲಿ ಬಂದು ಸೇರಿದ ಈ ಮಹಾ ಜನ ಸಾಗರ, ಉಲಮಾ- ಉಮರಾಗಳು ಎಂದೆಂದಿಗೂ ಆ ಆದರ್ಶ ಸಂರಕ್ಷಣೆಯ ಪ್ರತಿಜ್ಞೆ ಮಾಡಬೇಕಿದೆ.
’ಸಮಸ್ತ’ದ ಸಂದೇಶ ಅಥವಾ ಪವಿತ್ರ ದೀನುಲ್ ಇಸ್ಲಾಮಿನ ತಿರುಳಾದ ಅಹ್ಲ್ ಸುನ್ನತ್ ವಲ್ ಜಮಾಹತ್ ನ ಸಂದೇಶವನ್ನು ಗ್ರಾಮ, ಗ್ರಾಮಗಳಿಗೆ ತಲುಪಿಸುವುದು ನಮ್ಮ ಇಹಪರ ಯಶಸ್ವಿಗೆ ಕಾರಣವಾಗುವ ಸತ್ಕರ್ಮವಾಗಿದೆ ಅಲ್ಲಾಹನು ಸ್ವೀಕರಿಸಲಿ.
ಇದು ಪ್ರವಾದಿ (ಸ.ಅ.)ರವರ ಜನುಮ ದಿನ ಕೊಂಡಾಡುವ ತಿಂಗಳಾಗಿದ್ದು, ಅವರ ಸತ್ಯ ಶಾಂತಿ, ಪ್ರೀತಿಯ ಸಂದೇಶವನ್ನು ಎಲ್ಲೆಡೆ ಪ್ರಚಾರ ಪಡಿಸಬೇಕು. ಐಸಿಸ್‌ನಂತಹ ಮನುಷ್ಯ ವಿರೋಧಿ ಸಂಘಟನೆಗಳಿಗೆ ಇಸ್ಲಾಮಿನಲ್ಲಿ ಸ್ಥಾನವಿಲ್ಲ, ಉಗ್ರವಾದ, ಭಯೋತ್ಪಾದನೆಗಳು ಇಸ್ಲಾಮಿಗೆ ವಿರುದ್ಧವಾಗಿದೆ. ಶಾಂತಿ, ಪ್ರೀತಿ, ಮಾನವೀಯತೆಯೇ ಇಸ್ಲಾಮಿನ ಮೂಲವಾಗಿದೆ.
ದೇಶದ ಜಾತ್ಯಾತೀತ ಪರಂಪರೆಯನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದ್ದು, ಸಹಿಷ್ಣುತೆಗೆ ಭಂಗ ತರುವ ಕೋಮುವಾದ, ಉಗ್ರವಾದಗಳನ್ನು ಯಾರೇ ನಡೆಸಿದರೂ ಅದು ಖಂಡನೀಯವಾಗಿದೆ.
ದೇಶದ ಕೆಲವೆಡೆ ಅಲ್ಪಸಂಖ್ಯಾತರ ಮೇಲೆ ನಿರಂತರ ಆಕ್ರಮಣ, ದಬ್ಬಾಳಿಕೆಗಳು ನಡೆಯುತ್ತಿದ್ದು ಇದು ಖಂಡನೀಯವಾಗಿದೆ. ಒಬ್ಬ ವ್ಯಕ್ತಿ ಏನು ತಿನ್ನಬೇಕು, ಏನು ಮಾತನಾಡಬೇಕು, ಯಾವ ಧರ್ಮದಲ್ಲಿ ನಂಬಿಕೆ ಇರಿಸಬೇಕು ಎಂಬುದನ್ನು ತೀರ್ಮಾನಿಸುವ ಹಕ್ಕು ಬೇರೊಬ್ಬರಿಗಿಲ್ಲ. ಪ್ರತಿಯೊಬ್ಬರೂ ದೇಶದ ಜಾತ್ಯಾತೀತ ಸಂವಿಧಾನದ ಮೇಲೆ ನಂಬಿಕೆ ಇರಿಸಿ ಬಲಿಷ್ಠ ರಾಷ್ಟ್ರ ಕಟ್ಟುವಲ್ಲಿ ತೊಡಗಿಸಿಕೊಳ್ಳಬೇಕು.
ಜಗತ್ತು ಇರುಳಿನಿಂದ ಕೂಡಿದ್ದ ಅಂಧಾಕಾರದ ಯುಗದಲ್ಲಿ ಅಜ್ಞಾನದ ಕಂಬಳಿ ಹೊತ್ತು ಮಲಗಿದ್ದ ಸಮಾಜವೊಂದಕ್ಕೆ ಏಕ ದೈವ ವಿಶ್ವಾಸದ ಸುಜ್ಞಾನದ ಬೆಳಕಿನೊಂದಿಗೆ ಪುಣ್ಯ ರಸೂಲ್ (ಸ.ಅ) ಆಗಮನವಾಯಿತು.
ಜಾಗತಿಕ ಇತಿಹಾಸದಲ್ಲಿ ಅಜ್ಞಾನ, ಕಂದಾಚಾರದ ವಿರುದ್ಧ ನಡೆದ ಅತೀ ದೊಡ್ಡ ಕ್ರಾಂತಿಯನ್ನಾಗಿದೆ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ)ರವರು ಇಲ್ಲಿ ಮಾಡಿದ್ದು. ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಆ ಸುಜ್ಞಾನ ಕ್ರಾಂತಿಯ ಫಲವಾಗಿ ಹಾಗೂ ಅದೇ ಕ್ರಾಂತಿಯ ಮುಂದುವರಿಕೆಯಾಗಿ ವಿಶ್ವದಾದ್ಯಂತ ಇಸ್ಲಾಮಿನ ಪ್ರಕಾಶ  ಪ್ರಸರಿಸಕೊಂಡಿತು.
೧೯೨೬ ರಲ್ಲಿ ’ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ’ ’ಅಸ್ತಿತ್ವಕ್ಕೆ ಬಂದದ್ದು ಅದೇ ಇಸ್ಲಾಮಿನ ಮಹತ್ತರವಾದ ಮೌಲ್ಯಗಳನ್ನು ನೈಜ ರೂಪದಲ್ಲಿ  ಮುಂದಿನ ತಲೆಮಾರಿಗೆ ಪ್ರಚಾರ ಪಡಿಸಿ ಈ ಧರ್ಮ ಕ್ರಾಂತಿಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವುದು ಎಂಬ ಬಹುದೊಡ್ಡ ಹೊಣೆಗಾರಿಕೆಯೊಂದಿಗೆಯಾಗಿದೆ. ವಿದೇಶಿ ಶಕ್ತಿಗಳೊಂದಿಗೆ ದೇಶಕ್ಕಾಗಿ ದೀರ್ಘಕಾಲ ನಡೆಸಿದ ಹೋರಾಟದಿಂದಾಗಿ ಉಂಟಾದ ಆರ್ಥಿಕ, ಸಾಮಾಜಿಕ, ಹಿಂದುಳುವಿಕೆ ಹಾಗೂ ಮತ್ತಿತರ ಸಮಸ್ಯಗಳಿಂದ ದುರ್ಬಲವಾಗಿ ಜರ್ಝರಿತಕೊಂಡಿದ್ದ ಒಂದು ಸಮಾಜದಲ್ಲಾಗಿತ್ತು ’ಸಮಸ್ತ’ದ ಉಗಮ. ಅಷ್ಟೇ ಅಲ್ಲ, ಮೊದಲೇ ಜರ್ಝರಿತಗೊಂಡ ಈ ಸಮಾಜದಲ್ಲಿ ಆಶಯಾದರ್ಶದ ಭಿನ್ನತೆಗಳು ಮೊಳಕೆಯೊಡೆಯಲು ಶುರುವಿಟ್ಟ ಕಾಲಘಟ್ಟವೂ ಆಗಿತ್ತು ಅದು. ಅಂತಹ ಸಂದಿಗ್ಧ ಘಟ್ಟದಲ್ಲಾಗಿತ್ತು ಅಹ್ಲ್ ಸುನ್ನತಿ ವಲ್ ಜಮಾಅತಿನ ಆಶಯಾದರ್ಶವನ್ನು ಅದರ ಸಂಪೂರ್ಣ ಶುದ್ಧತೆಯೊಂದಿಗೆ ಎತ್ತಿ ಹಿಡಿದು ಸಂರಕ್ಷಿಸಿ, ಅಸಲು ರೂಪದಲ್ಲಿ ನಿರಂತರ ಪ್ರಚಾರ ಪಡಿಸುವ ಸಲುವಾಗಿ ’ಸಮಸ್ತ’ ರೂಪುಗೊಂಡಿದ್ದು ಮತ್ತು ಆ ಮಹತ್ತರ ಹೊಣೆಗಾರಿಕೆಯನ್ನು ನಿರಂತರ ಮುಂದುವರಿಸಿಕೊಂಡು ಬರುತ್ತಿದೆ ಕೂಡ.
ಇಂದು ಆರ್ಥಿಕವಾಗಿ ಸಮಾಜ ಮುಂದುವರಿಯುತ್ತಿದೆ ಆದರೆ ಧಾರ್ಮಿಕವಾಗಿ ಅಧಃಪತನದತ್ತ ಸಾಗುತ್ತಿದೆ, ಅಂದಿನ ಬಡತನಕ್ಕಿಂತ ಇಂದಿನ ಶ್ರೀಮಂತಿಕೆ ಅಪಯಕಾರಿಯಾಗಿ ಪರಿಣಮಿಸುತ್ತಿರುವುದು ದುರಂತ.
ಪ್ರತಿಯೊಬ್ಬರೂ ಪವಿತ್ರ ಧರ್ಮದ ಸುಂದರ ಸಂಸ್ಕಾರ, ಸಂಸ್ಕೃತಿ, ಮಾನವೀಯತೆಯನ್ನು ಮೈಗೂಡಿಸಿಕೊಂಡು ಆಚಾರ, ವಿಚಾರಗಳನ್ನು ಪಾಲಿಸಿಕೊಂಡು, ಉನ್ನತ ಮೌಲ್ಯಗಳನ್ನು ಸಂರಕ್ಷಿಸಬೇಕು.ಯಾವುದೇ ಸಮಾಜವು ಸ್ವತಃ  ಬದಲಾವಣೆ ಬಯಸದೆ ಬದಲಾಗದು ಎಂದು ಪವಿತ್ರ ಕುರ್ ಆನ್ ಹೇಳುತ್ತದೆ.
ಆದುನಿಕ ಮೀಡಿಯಗಳನ್ನು ಮನುಷ್ಯನ ಒಳಿತಿಗಾಗಿ ಬಳಸಿಕೊಳ್ಲಬೇಕೇ ವಿನಾ ದುರುಪಯೋಗ ಪಡಿಸಿಕೊಳ್ಳಬಾರದು.ಗೊತ್ತಿರಲಿ, ಸಂಸ್ಕಾರ ಶೂನ್ಯರಾದ ಯಾವುದೇ ಸಮಾಜಕ್ಕೆ ಭವಿಷ್ಯವಿಲ್ಲ.

ಸುನ್ನಿಗಳ ಚಿತ್ತ... ಆಲಪುಯದತ್ತ...

ಮತ್ತೊಂದು ಇತಿಹಾಸ ನಿರ್ಮಾಣವನ್ನು ಸುನ್ನೀ ಜನ ಕೋಟಿ ಎದುರು ನೋಡುತ್ತಿದೆ. ಪ್ರತಿಯೊಬ್ಬರೂ ಬದುಕಿನಲ್ಲಿ ಎಡವಿಬಿದ್ದು, ವಾಮ ಮಾರ್ಗ ಹಿಡಿಯದಂತೆ ಜತನದಿಂದ ಕಾಯ್ದುಕೊಂಡು,ಇಹ-ಪರ ಯಶಸ್ವಿಗೆ ಪೂರಕವಾದ ಸರಿ ದಾರಿ ತೋರಿ ನಮ್ಮ ಪರಿಸರದ ಮುಸ್ಲಿಂ ವಿಶ್ವಾಸಿಗಳನ್ನು ನಾಡಿನ ಪ್ರಜ್ಞಾವಂತ ಸತ್ಪ್ರಜೆಗಳಾಗಿ ರೂಪಿಸಿದ ಶ್ರೇಷ್ಠ ಉಲಮಾ ಸಂಘಟನೆಯಾದ ’ಸಮಸ್ತ’ದ 90ರ ಸಮಾರೋಪ ಸಮಾರಂಭಕ್ಕೆ ಕೇರಳದ ಆಲಪುಯ ಸಜ್ಜುಗೊಂಡಿದ್ದು ಶ್ವೇತ, ಶುಭ್ರ ವಸ್ತ್ರ ದಾರಿಗಳಿಂದ ಹಾಲ್ಗಡಲು ನಿರ್ಮಾಣವಾಗಲು ದಿನಗಣನೆ ಆರಂಭಗೊಂಡಿದ್ದು ಇಸ್ಲಾಮಿಕ್ ಸಾಂಘಿಕ ಕ್ಷೇತ್ರದಲ್ಲೊಂದು ಭವ್ಯ ಇತಿಹಾಸ ನಿರ್ಮಾಣವಾಗಲಿದೆ.
ಕೇರಳ ಬೌಗೋಳಿಕವಾಗಿ ಚಿಕ್ಕದಾದರೂ ದೇಶದಲ್ಲೇ ಗಮನ ಸೆಳೆದ ಸಾಕ್ಷರತಾ ರಾಜ್ಯವಿದು.ಕೋಮು ಸಾಮರಸ್ಯದಲ್ಲೂ ಈ ನಾರಿಕೇಳದ ನಾಡು ಮುಂದು. ಮುಸ್ಲಿಮರ ಮಟ್ಟಿಗೆ ಹೇಳುವುದಾದರೆ ಪವಿತ್ರ ಇಸ್ಲಾಮಿನ ಸಂದೇಶ ಪ್ರವಾದಿ (ಸಲ್ಲಲ್ಲಾಹು ಅಲೈವಸಲ್ಲಂ) ರವರ ಕಾಲದಲ್ಲಿಯೇ ಆ ರಾಜ್ಯಕ್ಕೆ ತಲುಪಿತ್ತು ಎಂಬುದು ಇತಿಹಾಸ .
ಆರಂಭ ಕಾಲದಲ್ಲಿ ಅರೇಬಿಯಾದಿಂದ ಬಂದ ಮಾಲಿಕ್‌ಬ್‌ನುದೀನಾರ್ (ರ) ಮತ್ತು ಅವರ ಅನುಚರರ ಮೂಲಕ ಇಸ್ಲಾಂ ಕೇರಳ ಹಾಗೂ ಕರ್ನಾಟಕದಂಥ ಪರಿಸರ ಪ್ರದೇಶಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಂಡಿತು. ಅವರ ನಂತರ ಅವರ ಶಿಷ್ಯಂದಿರು ಹಾಗೂ ಯಮಾನ್ ನಿಂದ ಬಂದ ಇನ್ನಿತರ ವಿದ್ವಾಂಸ-ಸಾದಾತ್ ಕುಟುಂಬಗಳ ಮೂಲಕ ಆ ಪ್ರಬೋಧನಾ ಹೊಣೆಗಾರಿಕೆ ಅಸಲು ರೂಪದಲ್ಲೇ ಪರಂಪರಾಗತ ಶುದ್ಧ ಆಶಯಾದರ್ಶಗಳೊಂದಿಗೆ ಸಾಗಿ ಬಂದು, ಕಡೆಗೆ ಕಾಲಿಕ ಅನಿವಾರ್ಯತೆ ಸಾಂಘಿಕ ರೂಪ ಅಗತ್ಯವಾಗಿ ಬಂದಾಗ ಆ ದಅವಾ ಕ್ಷೇತ್ರಕ್ಕೊಂದು ಸಂಘಟನೆಯ ರೂಪ ಕೊಟ್ಟು ವಿಶ್ವಾಸಿ ಆದರ್ಶದಲ್ಲಿ ಎಡವದಂತೆ ಕಾಯ್ದುಕೊಂಡು ಧರ್ಮ ಪ್ರಬೋಧನಾ ಕ್ಷೇತ್ರವನ್ನು ಸಕ್ರೀಯ ಗೊಳಿಸಿದ ಉಲಮಾಗಳ ಧಾರ್ಮಿಕ ಶುದ್ಧ ಆದರ್ಶದ ದಅವಾ ಚಳಿವಳಿ ರೂಪವೇ ಈ ’ಸಮಸ್ತ’ ಎಂಬ ಬಲಿಷ್ಠ ಉಲಮಾ ಸಂಘಟನೆಯಾಗಿದೆ.

ಇಂದು ಬೇರೆ ಕಡೆಗಳಿಗಿಂತ ಕೇರಳದ ಮುಸ್ಲಿಮರು ಎಲ್ಲಾ ಕ್ಷೇತ್ರಗಳಲ್ಲೂ ಒಂದಿಷ್ಟು ಪ್ರಗತಿ ಸಾಧಿಸದ್ದರೆ ’ಸಮಸ್ತ’ ಅಲ್ಲಿ ಉಂಟು ಮಾಡಿದ ಸಂಘಿಕ, ಸಾಮಾಜಿಕ, ಶೈಕ್ಷಣಿಕ ಜಾಗೃತಿಯೇ ಆಗಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಪ್ರಾಯಶಃ ಹಿಂದಿನಿಂದಲೂ ನಮ್ಮ ಪರಿಸರದ ಮುಸ್ಲಿಂ ವಿಶ್ವಾಸಿಗಳು ಧಾರ್ಮಿಕ ವಿಚಾರದಲ್ಲಿ ಹೆಚ್ಚಾಗಿ ಕೇರಳವನ್ನೇ ಅವಲಂಬಿಸುತ್ತಿರುವುದು ಇದೇ ಕಾರಣಕ್ಕೇ ಆಗಿದೆ.
ಹಾಗೆ ನೋಡಿದರೆ ಈ ಪರಿಸರದ ಹೆಚ್ಚಿನ ಧಾರ್ಮಿಕ ವಿದ್ವಾಂಸರು ಅಲ್ಲಿನ ಕಾಲೇಜುಗಳಲ್ಲಿ ಕಲಿತವರೇ ಆಗಿದ್ದಾರೆ. ನಮ್ಮ ಮದ್ರಸಗಳು ಅದೇ’ ಸಮಸ್ತ’ದ ಪಠ್ಯಕ್ರಮದಡಿ ನೋಂದಾವಣೆ ಯಲ್ಲಿರುದು, ಹೆಚ್ಚಿನ ಪುಣ್ಯತ್ಮರ ಝಿಯಾರತ್ ಕೇಂದ್ರಗಳು ಅಲ್ಲಿವೆ.... ಹೀಗೆ ಒಂದರ್ಥದಲ್ಲಿ ಕೇರಳ ನಮ್ಮ ಪಾಲಿಗೆ ಧಾರ್ಮಿಕವಾಗಿ ಹೆಬ್ಬಾಗಿಲು ಇದ್ದಂತೆ ಎಂದರೆ ಅತಿಶಯೋಕ್ತಿಯಲ್ಲ ಬಿಡಿ, ಈ ನಾರಿಕೇಳದ ನಾಡಿಗೆ ’ಸಮಸ್ತ’ ಸಮ್ಮೇಳನ, ಕಾಲೇಜುಗಳ ಘಟಿಕೋತ್ಸವಗಳೆಂದು ಇಲ್ಲಿನ ವಿಶ್ವಾಸಿಗಳ ದಂಡು ವರ್ಷಕ್ಕೊಮ್ಮೆಯಾದರೂ ಹೋಗುತ್ತಾರೆ. ಇದೀಗ ’ಸಮಸ್ತ’ದ ೯೦ರ ಸಮಾರೋಪ ಸಮ್ಮೇಳನ ಫೆಬ್ರವರಿ ೧೧ರಿಂದ ೧೪ ರ ವರೆಗೆ ಆಲಪುಯದಲ್ಲಿ ಐತಿಹಾಸಿಕವಾಗಿ ನಡೆಯಲಿದ್ದು, ಪುಣ್ಯ ಸ್ಫುರಿಸುವ ಆ ಶುಭ್ರ ಸಾಗರದಲ್ಲಿ ಸೇರಿಕೊಳ್ಳುವ ತೀರದ ಬಯಕೆ, ತುಂಬಿ ನಿಂತ ಕನವರಿಕೆ ಇಲ್ಲಿನ ವಿಶ್ವಸಿಗಳದ್ದು, ಆದ್ದರಿಂದಲೇ ಎಲ್ಲರ ಚಿತ್ತ ಆಲಪುಯದತ್ತ....ಸಾಗಿದೆ.
   ಬನ್ನಿ,ಆ ಅನುಗ್ರಹಿತ ಸಮ್ಮೇಳನದಲ್ಲಿ ನಾವು ಕೂಡ ಪಾಲ್ಗೊಂಡು ದನ್ಯರಾಗೋಣ.








2015 ಅಕ್ಟೋಬರ್ ತಿಂಗಳ ಅಲ್ ಅಹ್ಸನ್ ಮಾಸಿಕ


2015 ಸೆಪ್ಟಂಬರ್ ತಿಂಗಳ ಅಲ್ ಅಹ್ಸನ್ ಮಾಸಿಕ


2015 ಎಪ್ರಿಲ್ ತಿಂಗಳ ಅಲ್ ಅಹ್ಸನ್ ಮಾಸಿಕ


2015 ಮಾರ್ಚ್ ತಿಂಗಳ ಅಲ್ ಅಹ್ಸನ್ ಮಾಸಿಕ


2015 ಫೆಬ್ರವರಿ ತಿಂಗಳ ಅಲ್ ಅಹ್ಸನ್ ಮಾಸಿಕ


2014 ಜನವರಿ ತಿಂಗಳ ಅಲ್ ಅಹ್ಸನ್ ಮಾಸಿಕ


2014 ಫೆಬ್ರವರಿ ತಿಂಗಳ ಅಲ್ ಅಹ್ಸನ್ ಮಾಸಿಕ