ಮಹಿಳೆಯರಿಗೆ ತಲುಪದ ಜನ ಜಾಗೃತಿ ಕಾರ್ಯಕ್ರಮಗಳು ಯಶಸ್ಸು ಕಾಣಲು ಸಾದ್ಯವಿಲ್ಲ


ಅಲ್ ಅಹ್ಸನ್ ಗೌರವ ಸಂಪಾದಕ ಎಸ್.ಬಿ.ಮುಹಮ್ಮದ್ ದಾರಿಮಿ ಯವರ ಜುಮ್ಮಾ ಭಾಷಣ
ವರದಿ - ಮುಹಮ್ಮದ್ ಇಲ್ಯಾಸ್

ಪುತ್ತೂರು: ಕೆಲ ವರ್ಷಗಳ ಹಿಂದೆ ನನ್ನ ಮಿತ್ರರಾಗಿದ್ದ ಮದ್ರಸ ಉಸ್ತಾದರೊಬ್ಬರು ವರದಕ್ಷಿಣೆ ರಹಿತವಾಗಿ ಬಡ ಯುವತಿಯೊಬ್ಬಳನ್ನು ಮದುವೆಯಾಗಿದ್ದರು
ಆರ್ಥಿಕವಾಗಿ ಕಷ್ಟದಲ್ಲಿದ್ದ ಅವರು ಸ್ವಾಭಿಮಾನಿಯಾಗಿದ್ದ ಕಾರಣ ಬೇರೆಯವರ ಮುಂದೆ ಕೈಚಾಚಿ ಮದುವೆ ಕಾರ್ಯ ಆಡಂಬರ ಮಾಡುವುದಿಲ್ಲ ಎಂದು ತೀರ್ಮಾನಿಸಿ ಸಾಲಸೋಲ ಮಾಡದೆ ಸರಳವಾಗಿ ಮಸೀದಿಯಲ್ಲಿ ಲಘು ಉಪಹಾರ ನೀಡಿ ಖಾಝಿಗಳ ಉಲಮಾಗಳ ನೂರಾರು ಹಿತೈಷಿ ಗಳ ಸಮ್ಮುಖದಲ್ಲಿ ನಿಖಾಮಾಡಿಕೊಂಡಿದ್ದರು ಅಂದುಅಲ್ಲಿ ಮಸೀದಿಯಲ್ಲಿ  ಸೇರಿದ್ದ  ಪುರುಷರೆಲ್ಲರೂ ಬಹಳ ಸಂಭ್ರಮ ಮತ್ತು ಖುಷಿ ಪಟ್ಟಿದ್ದರೂ
ಮದ್ರಸದಲ್ಲಿ ನೆರೆದಿದ್ದ ಮಹಿಳೆಯರು ಮಾತ್ರ ಮುಖಃ ಸಿಂಡರಿಸಿ ಸೂತಕದ ಮನೆಯವರಂತೆ ವರ್ತಿಸಿದ್ದರು
ಮಾತ್ರವಲ್ಲ ಅವರ ಪೈಕಿ ಹಿರಿಯ ಮಹಿಳೆಯೊಬ್ಬರು ಕೈಎತ್ತಿ ಪ್ರಾರ್ಥಿಸಿಯೇ ಬಿಟ್ಟರು

ಪಡಚೆ ರಬ್ಬೇ ಈ ಗದಿಕೆಟ್ಟೆ ಮಙಿಲ ನೆಬಿರೆ ಉಮ್ಮತಿಗ್ ಆರ್ಗುಂ ಎತ್ತ್ ಪಾಟಿರಂಡ
(ಇಂತಹ ಗತಿಗೇಡಿನ ಮದುವೆ ಪೈಗಂಬರ ರ ಅನುಯಾಯಿಗಳಿಗೆ ದಯಪಾಲಿಸಬೇಡ ರಬ್ಬೇ)
ಮುಸ್ಲಿಂ ಸಮಾಜದ ಮಹಿಳೆಯರ ಮನೋಸ್ಥಿತಿ ಹೇಗಿದೆ ಎಂಬುದರ ಒರೆಗಲ್ಲಾಗಿದೆ ಈ ಒಂದು ಉದಾಹರಣೆ
 ಇಂತಹ ಉದಾಹರಣೆಗಳು ಈ ಸಮಾಜದ ಉಲಮಾ ಉಮರಾ ಗಳಿಗೆ ಮತ್ತು ಸಮಾಜದ ಹಿತೈಷಿಗಳಿಗೆ  ಸಾಕಷ್ಟು ಕಲಿಯಬೇಕಾದ ಅಂಶಗಳನ್ನು ತೆರೆದಿಡುತ್ತದೆ ಎಂದು ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಯಸ್ ಬಿ ದಾರಿಮಿ ಜುಮಾ ಭಾಷಣದಲ್ಲಿ ಹೇಳಿದ್ದಾರೆ
 ವಿವಿಧ ಕ್ಷೇತ್ರಗಳಲ್ಲಿ ಮುಸ್ಲಿಮರೇ ಹೆಚ್ಚಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳಲ್ಲಿ ಹೆಚ್ಚಿನವು ನಾವೇ ಹುಟ್ಟು ಹಾಕಿದ ಸಮಸ್ಯೆಗಳಾಗಿವೆ
ಸಮಸ್ಯೆಗಳು ಉಲ್ಬಣಿಸಿ ಅದು ಇಡೀ ಸಮಾಜವನ್ನು ಕಾಡಲು ತೊಡಗಿದಾಗ ಅದರ ವಿರುದ್ಧ ಜನಾಂದೋಲನ ರೂಪುಗೊಳ್ಳುವುದು ಪ್ರಕೃತಿ ನಿಯಮವಾಗಿದೆ. ಇದೇ ತತ್ವ ಪ್ರಕಾರ ಮುಸ್ಲಿಂ ಸಮಾಜದಲ್ಲಿ ಕೆಲವೊಂದು ವಿಷಯಗಳಿಗೆ ಸಂಬಂಧಿಸಿದಂತೆ ಜನಜಾಗೃತಿ ರೂಪುಗೊಳ್ಳುತ್ತಿದ್ದು ಇಂತಹ ಜನಾಂದೋಲನಗಳು   ಮಹಿಳೆಯರ ಕಡೆಗೆ ತಲುಪದಿದ್ದರೆ ಅದು ಪರಿಣಾಮಕಾರಿಯಾಗಿ ಯಶಸ್ಸು ಕಾಣುವುದಿಲ್ಲ ಎಂದ ದಾರಿಮಿ  ಸಮಾಜದ ಅರ್ಧ ಭಾಗವಾಗಿರುವ ಮಹಿಳೆಯರನ್ನು ಕತ್ತಲೆಯಲ್ಲಿಟ್ಟು ಪುರುಷರು ಮಾತ್ರ ಸುಧಾರಿಸಿ ಕೊಂಡರೆ ಏನೂ ಪ್ರಯೋಜನ ಇಲ್ಲ ಎಂಬುವುದಕ್ಕೆ  ಮೇಲಿನ ಮಹಿಳೆಯ ದುಹಾ ದ ಉದಾಹರಣೆಯೇ ಸಾಕ್ಷಿ ಎಂದು ನುಡಿದರು
ಮಹಿಳೆಯರಿಗೆ ಧಾರ್ಮಿಕ ವಿದ್ಯೆ ನೀಡುವ ಮೂಲಕ ಧರ್ಮ  ಜಾಗೃತಿ ಮೂಡಿಸ ಬೇಕಾದ ಜರೂರತ್ತು ಇಂದು ಎದುರಾಗಿದ್ದು
ಮುಸ್ಲಿಂ ಮಹಿಳೆಯರನ್ನು ಲೌಕಿಕ ಡಿಗ್ರಿ ಕಲಿಸಿ ದುಡಿಯಲು ಕಲಿಸುವ ಬದಲು  ತಾಲೂಕು ಒಂದರಲ್ಲಿ ಕನಿಷ್ಟ ಮೂರು ವುಮನ್ಸ್ ಶರೀಹತ್ ಕಾಲೇಜಾದರೂ  ತರೆದು ಇಸ್ಲಾಂ ಧರ್ಮದ ನಿರಾಡಂಬರ ಜೀವನ ಶೈಲಿಯನ್ನು ಕಲಿಸ ಬೇಕಾದ ಅನಿವಾರ್ಯತೆ ಇದೆ
ಎಂದ ಖತೀಬರು ಪ್ರವಾದಿ ಸ ಅ ರ ಪ್ರೀತಿಯ ಪುತ್ರಿ ಯ ವಿವಾಹವನ್ನು ಕೇವಲ ಖರ್ಜೂರ ನೀಡಿ ನೆರವೇರಿಸಿದ್ದರೆಂಬ ಜ್ಞಾನ ಮೇಲಿನ ಆ ಮಹಿಳೆಗೆ ಇರುತ್ತಿದ್ದರೆ ಅಂತಹ ಪ್ರಾರ್ಥನೆ ಅವರಿಂದ ಉಂಟಾಗುತ್ತಿರಲಿಲ್ಲ ಎಂದು ದುಖಃ ವ್ಯಕ್ತಪಡಿಸಿದರು
 ಇಂದು ನಮ್ಮದೇ ಜಿಲ್ಲೆಯಲ್ಲಿ ಮೂವತ್ತು ವರ್ಷ ದಾಟಿದ  ನೂರಾರು ಮಹಿಳೆಯರು ಮದುವೆಯಾಗದೆ ಉಳಿದಿದ್ದರೆ ಅದಕ್ಕೆ ಗರಿಷ್ಟ ಮಹಿಳೆಯರೇ ಕಾರಣ ಎಂದು ವಿವರಿಸಿದ ದಾರಿಮಿ ಒಣ ಪ್ರತಿಷ್ಠೆ -ಅತಿಯಾಸೆ -ಆಡಂಬರ ಪ್ರಿಯತೆ -ಇತರರೊಂದಿಗೆ ತುಲನಾತ್ಮಕ ಭಾವನೆ -ಮುಂತಾದ ಕೆಟ್ಟ ಗುಣಗಳಿಂದ  ಮಹಿಳೆಯರು ಹೊರ ಬಂದರೆ ಮಾತ್ರ ಈ ಸಮಾಜಕ್ಕೆ ಉಳಿಗಾಲವಿದೆ  ಎಂದ ದಾರಿಮಿ ಈ ಬಗ್ಗೆ ಅನಾಸ್ಥೆ ತೋರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು  ಎಚ್ವರಿಸಿದರು
ಇಂದು ಎಲ್ಲಾ ಆಪೀಸು ಕಛೇರಿಗಲ್ಲಿ ಅಂಗಡಿ ಮುಗ್ಗಟ್ಟುಗಳಲ್ಲಿ ಮಹಿಳೆಯರೇ ಹೆಚ್ಚಾಗಿ  ದುಡಿಯುತ್ತಿದ್ದು ಪುರುಷರು ನಿರುದ್ಯೋಗಿಗಳಾಗಿ ಊರು ಸುತ್ತುತ್ತಿದ್ದಾರೆ
ಇದರಿಂದ ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ಕೌಟುಂಬಿಕವಾಗಿಯೂ ಸಮಸ್ಯೆಗಳು ತಲೆದೋರಲು ಆರಂಬಿಸಿದ್ದು ಮುಂದೆ ಇದು ಇನ್ನಷ್ಟು ಉಲ್ಬಣಿಸುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದ ಖತೀಬರು
ಅಂತಹ ತುರ್ತು ಸಂದರ್ಭದಲ್ಲಿ ಮಾತ್ರ ಮಹಿಳೆಯರು ದುಡಿಯಲು ಹೊರ ಹೋಗ ಬಹುದೇ ಹೊರತು ಆರ್ಥಿಕ ಸಮಸ್ಯೆ ಇಲ್ಲದಿದ್ದರೆ ಮಹಿಳೆಯರು ಮನೆಯಲ್ಲಿದ್ದು ಕೊಂಡು ತನ್ನ ಪರಿವಾರದ ಬಗ್ಗೆ ಕಾಳಜಿ ವಹಿಸಿ ಇಸ್ಲಾಮೀ ಜೀವನ ನಡೆಸುವುದರಲ್ಲಿ ಹೆಚ್ಚು ಗಮನಹರಿಸುವುದು ಅಗತ್ಯ ಇದರಿಂದ ಮನಶಾಂತಿ ಕೂಡಾ ಹೆಚ್ಚು  ಲಭಿಸುತ್ತದೆ ಎಂದು ನುಡಿದರು
ಪುರುಷರನ್ನೇ ಮನೆಯ ಯಜಮಾನನಾಗಿ ಅಂಗೀಕರಿಸಿ ಅವನ ಅಣತಿಂಯಂತೆ ಮನೆ ನಡೆಸಿದರೆ ಆ ಮನೆಯಲ್ಲಿ ಸಂತೃಪ್ತಿ ಇರುತ್ತದೆ
ಆದರೆ ಇಂದು ಹೆಚ್ಚಿನ ಕುಟುಂಬದಲ್ಲಿ ಯಜಮಾನನ ಮಾತು ನಡೆಯುವುದಿಲ್ಲ. ನಾಡಿನ ಆಗುಹೋಗುಗಳ ಬಗ್ಗೆ ಪ್ರಜ್ಞೆ ರೂಡಿಸಿ ಕೊಂಡು ಮನೆಗೆ ಬಂದ ಯಜಮಾನ ತನ್ನ ತಿಳುವಳಿಕೆಯ ಆದಾರದಲ್ಲಿ ಏನಾದರೂ ತೀರ್ಮಾಣಕ್ಕೆ ಬಂದರೆ ಅದಕ್ಕೆ ಅಡ್ಡಿಪಡಿಸುವ ಮಹಿಳೆಯರು ಮನೆಗೆ ಮತ್ತು ಕುಟುಂಬಕ್ಕೆ  ಅಪಾಯಕಾರಿಯಾಗಿದ್ದಾರೆ  ಎಂದು ಉದಾಹರಣೆ ಸಮೇತ ವಿವರಿಸಿದ ಉಸ್ತಾದರು
ಮಹಿಳೆಯರು ಈ ಸಮಾಜದ ಅರ್ಧ ಬಾಗವಾಗಿರುವುದರಿಂದ ಅವರನ್ನು ಪ್ರಬುದ್ದರನ್ನಾಗಿಸದಿದ್ದರೆ ಅದು ಒಟ್ಟಾರೆ ಸಮಾಜಕ್ಕೆ ಆತಂಕ ಸೃಷ್ಟಿಸುತ್ತದೆ ಎಂದರು

ಮಲಪ್ಪುರಂ ಜಿಲ್ಲೆಯ ಸಮಸ್ತದ ಮೇಲ್ನೋಟದಲ್ಲಿ ನಡೆಯುತ್ತಿರುವ ಮಹಿಳಾ ವಾಪೀ ಕಾಲೇಜಿನ ವಾರ್ಷಿಕ ಪ್ರಯುಕ್ತ ಮಹಿಳೆಯರಿಂದ ಮಹಿಳೆಯರಿಗಾಗಿ ಆಯೋಜಿಸಿದ ಮಹಿಳಾ ಸಮ್ಮೇಳನ ಈ ನಿಟ್ಟಿನಲ್ಲಿ ಮಾದರಿಯುಕ್ತವಾಗಿದೆ ಎಂದು ಪ್ರಶಂಸಿದರು

ಧರ್ಮ ಮತ್ತು ಆಡಳಿತ ಹಾಗೂ ಕಾನೂನು ಸ್ವಾರ್ಥ, ದ್ವೇಷ ಸಾಧನೆಗೆ ಬಳಕೆಯಾದರೆ ಪ್ರಳಯ ಸನ್ನಿಹಿತ!

ಕೋಳ ತೊಡಿಸ ಬೇಕಾದದ್ದು ಕಳ್ಳನಿಗೋ ಕಳ್ಳನನ್ನು ದೋಚುವವನಿಗೋ? ಮೌಲಾನಾ ಪ್ರಶ್ನೆ

ಅಲ್ ಅಹ್ಸನ್ ಪ್ರಧಾನ ಸಂಪಾದಕ ಮೌಲನಾ ಅಬ್ದುಲ್ ಅಝೀಝ್ ದಾರಿಮಿ ಯವರ ಜುಮ್ಮಾ ಭಾಷಣ
  
ಇಬ್ನು ಮಸ್ಊದ್ (ರ) ಹೇಳುತ್ತಾರೆ.
ನಬಿ (ಸ) ಕೇಳಿದರು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಅಲ್ಲಾಹನೊಂದಿಗೆ ಕರಾರನ್ನು ಮಾಡಲು ಅಸಾಧ್ಯವಾಗ ಬಹುದೇ?
ಸ್ವಹಾಬಿಗಳು ಪ್ರಶ್ನಿಸಿದರು. ಏನದು ? ನಬಿ (ಸ) ವಿವರಿಸುತ್ತಾರೆ,ಪ್ರತಿ ಬೆಳಗ್ಗೆ ಮತ್ತು ಸಂಜೆ ನೀವು  ಹೀಗೆ ಪ್ರಾರ್ಥಿಸಿ.
ಆಕಾಶ ಭೂಮಿಯನ್ನು ಸೃಷ್ಟಿಸಿದ,ರಹಸ್ಯ ಮತ್ತು ಬಯಲು ಅರಿಯುವ ಅಲ್ಲಾಹನೇ ಈ ಬದುಕಿನಲ್ಲಿ ನಾನು ನಿಮ್ಮೊಂದಿಗೆ ಕರಾರನ್ನು ಮಾಡುವೆನು,ಆರಾಧ್ಯದೈವ ನೀನು ಮಾತ್ರ.ನಿನಗೆ ಜೊತೆಗಾರನಿಲ್ಲ,ಮಹಮ್ಮದ್ ನಬಿ  (ಸ)ನಿನ್ನ ದಾಸನೂ ದೂತನೂ ಆಗಿರುತ್ತಾರೆ.ನನ್ನನ್ನು ನನ್ನ ದೇಹ ಇಚ್ಚೆಗೆ ನಿಕಟವಾಗಿಸಬೇಡ.ಹಾಗಾದರೆ ಒಳಿತಿನಿಂದ ನನ್ನನ್ನುದೂರ ಮಾಡುವೆ.ಕೆಡುಕಿನೆಡೆಗೆ ಹತ್ತಿರವಾಗಿಸುವಿ.ನಿನ್ನ ಅನುಗ್ರಹವನ್ನಲ್ಲದೇ ನಾನು ಬರವಸೆ ಇಟ್ಟಿಲ್ಲ.ಅಂತ್ಯ ದಿನದಲ್ಲಿ ನೀನು ನನಗೆ ನೀಡುವ ಕರಾರನ್ನು ದಯೆಪಾಲಿಸು.ನೀನು ಕರಾರಿಗೆ ತಪ್ಪುವವನಲ್ಲ.
ಹದೀಸು
ಪ್ರವಾದಿ ಮುಹಮ್ಮದ್ ಸ ರವರು ಕಲಿಸಿದ ಮಹೊನ್ನತ ಪ್ರಾರ್ಥನೆ ಇದಾಗಿದೆ.
ಈ ಪ್ರಾರ್ಥನೆಯ ಮೂಲಕ ಪ್ರವಾದಿ (ಸ)ಸಮುದಾಯಕ್ಕೆ ಅತ್ಯಮೂಲ್ಯವಾದ ಸಂದೇಶವನ್ನು ನೀಡಿದ್ದಾರೆ .ಪ್ರತಿ ದಿನ ಧರ್ಮಾಧಾರಿತವಾಗಿ ಬದುಕುತ್ತೇನೆಂಬ ಕರಾರನ್ನು ಅಲ್ಲಾಹನೊಂದಿಗೆ ಮಾಡಿ, ಸ್ವ ಇಚ್ಚೆಯ ಕಡೆ ವಾಲದಿರುವಂತೆ ಅನುಗ್ರಹಿಸು ಎಂದು ಪ್ರಾರ್ಥಿಸುವ ಮೂಲಕ ಪ್ರತಿಯೋರ್ವರಲ್ಲೂ ಧರ್ಮನಿಷ್ಟೆ ಜಾಗ್ರತಿ ಮೂಡಿಸುವ ಸಂಗತಿಯಾಗಿದೆ ಈ ಸಂದೇಶ.
ಸ್ವ ಇಚ್ಚೆಯ ಹಿಂದೆ ಬಿದ್ದರೆ ನ್ಯಾಯ ನೀತಿ ಪ್ರಾಮಾಣಿಕತೆಯಿಂದ ಬದುಕಲು  ಅಸಾಧ್ಯ ವೆನ್ನುವುದು ಈ ಪ್ರಾರ್ಥನೆಯ ಸಾರ.
ಪವಿತ್ರ ಕುರಾನ್ ಹೀಗೆನ್ನುತ್ತದೆ.
ಖಂಡಿತಾ ಮನಸ್ಸು ಕೆಡುಕನ್ನು ಹೆಚ್ಚಾಗಿ ಬಯಸುತ್ತದೆ.ಸೂರ ಯೂಸುಫ್ -53.
ಇಂದು ನಾವು ಕಾಣುತ್ತಿರುವ  ವೈಯಕ್ತಿಕ, ಕೌಟುಂಬಿಕ, ಸಾಮುದಾಯಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಜಾತಿ ,ಪಂಗಡ, ಸಾಂಸ್ಕೃತಿಕ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಂಘರ್ಷ,ಕಲಹ,ಹಗೆ,ದೊಂಬಿ ಅಸಹಿಷ್ಣುತೆ,ಅಸಹಕಾರ, ಅಸಮಧಾನ,ಎಲ್ಲದರ ಮೂಲ ಕಾರಣ ಒಂದೇ ಆಗಿದೆ. ಅದು ಸ್ವಾರ್ಥ ಮಾತ್ರ. ಧರ್ಮ ಪ್ರಜ್ಞೆ ಮಾತ್ರ ಅದಕ್ಕೆ ಪರಿಹಾರ.
ಅಧರ್ಮದ ವಿರುದ್ಧ ಧ್ವನಿ ಎತ್ತಬೇಕಾದವರೇ ಅಧರ್ಮ ಕಾರ್ಯವನ್ನು ಮಾಡಿದರೆ ಧರ್ಮ ಹೇಗೆ ಉಧ್ದಾರವಾಗೋದು?
ಕದ್ದು ತಂದ ಸಂಪತ್ತಿನಲ್ಲಿ ಕಾನೂನು ಪಾಲಕನೇ ಪಾಲು ಕೇಳಿದರೆ ಕಾನೂನನ್ನು ಕಾಪಾಡುವುದು ಯಾರು ?ಕಳಪೆ ಕಾಮಗಾರಿ ನಡೆಸುವಾತನಿಂದ ಹೆಚ್ಚುವರಿ ಕಮೀಷನ್ ಪಡೆವವನಿಂದ ಹೇಗೆ ಸಾರ್ವಜನಿಕ ಸೊತ್ತುಗಳನ್ಮು ಉಳಿಸಲು ಸಾಧ್ಯ?
ನ್ಯಾಯ ಕೊಡಬೇಕಾದವರು ನ್ಯಾಯದ ತಕ್ಕಡಿಯ ತಟ್ಟೆಯಲ್ಲಿ ಹಣದ ಗಂಟನ್ನು ತೂಗಿದರೆ ಹೇಗೆ ನ್ಯಾಯ ಸಿಗೋದು?
ಶಿಕ್ಷೆ ಕೊಡಬೇಕಾದ ಜೈಲುಗಳಲ್ಲಿ ಆತಿಥ್ಯ ಮರ್ಯಾದೆ ಸಿಗೋದಾದರೆ ಹೇಗೆ ತಪ್ಪಿತಸ್ಥ ರನ್ನು ಶಿಕ್ಷಿಸಲು ಸಾದ್ಯ?ಭ್ರಷ್ಟರನ್ನು ಮಟ್ಟ ಹಾಕಬೇಕಾದ ಅಧಿಕಾರಿಗಳು ಆಡಳಿತದ ಕೈಗೊಂಬೆಗಳಾದರೆ ಹೇಗೆ   ಭ್ರಷ್ಟಾಚಾರ ನಿಗ್ರಹ ಸಾಧ್ಯ?
ಆಡಳಿತ, ಕಾನೂನು,ಸುವ್ಯವಸ್ಥೆ, ಸುಭದ್ರತೆಗಳ ಕೇಂದ್ರಗಳು ಸ್ವಾರ್ಥ ಕ್ಕೆ ಬಲಿಯಾದರೆ ಅರಾಜಕತೆ ನಿರ್ಮಾಣವಾದಿತು.
ಕೋಳ ತೊಡಿಸಬೇಕಾದದ್ದು ಕಳ್ಳನಿಗೋ ಅಥವಾ ಕಳ್ಳನನ್ನು ದೋಚುವವನಿಗೋ?ಕಟಕಟೆಯಲ್ಲಿ ನಿಲ್ಲಬೇಕಾದದ್ದು ಆರೋಪಿಯೋ ಅಲ್ಲ ನ್ಯಾಯಾಧೀಶನೋ?ಯಾರೋ ಹೇಳಿದರು,
ಪಿಕ್ ಪಾಕೇಟ್ ಮಾಡಿ ಓಡುವವನನ್ನು ಬೆನ್ನಟ್ಟುವ ಸಾಮಾನ್ಯನಿಂದ ರಕ್ಷಿಸಿಕೊಳ್ಳಲು ಕಳ್ಳ ಸ್ಟೇಷನಿನ ಕಡೆಯೇ ಓಡ್ತಾನಂತೆ !
ಆಡಳಿತ ಮತ್ತು ಕಾನೂನಿನ ಯಂತ್ರ ಸ್ವಾರ್ಥ ಅಥವಾ ದ್ವೇಷ ಸಾಧನೆಗೆ ಬಲಿಯಾಗಬಾರದು.
ವ್ಯಕ್ತಿಗೆ ಹುಚ್ಚು ಹಿಡಿದರೆ ಸರಪಳಿಯಲ್ಲಿ ಹಾಕಬಹುದು ಸರಪಳಿಗೆ ಹುಚ್ಚುಹಿಡಿದರೆ ಏನು ಮಾಡಲು ಸಾಧ್ಯ? ಹುಳ ಹತ್ತದಿರಲು ಉಪ್ಪು ಹಾಕ್ತಾರೆ ಉಪ್ಪಿಗೆ ಹುಳ ಬಿದ್ದರೆ? ಗತಿಯೋ ಗತಿ!
ಅನ್ಯಾಯ, ಕೊಲೆ,ಅಫರಾದಗಳನ್ನು ವ್ಯಕ್ತಿ ಪ್ರಭಾವದ ಮೇಲೆ ನಿರ್ಣಯಿಸಲ್ಪಡುವುದು ಸಾಮಾಜಿಕ ದುರಂತವಾಗಿದೆ. ಶತ್ರುವಾದರೂ ಆತನೊಂದಿಗೆ ನ್ಯಾಯ ಪಾಲಿಸಬೇಕೆನ್ನುವದು ದೈವ ಆಜ್ಞೆಯಾಗಿದೆ.ಅದು ಅಲ್ಲಾಹನೊಂದಿಗಿನ ಕರಾರು ಕೂಡ.
ಒಬ್ಬ ವ್ಯಕ್ತಿ ಹಲವಾರು ಉತ್ತಮ ಕಾರ್ಯಗಳನ್ನು ಮಾಡುವವನೆಂಬ ಕಾರಣಕ್ಕೆ ಆತನ ಅಪರಾಧದ ಪ್ರಮಾಣ ಕಮ್ಮಿಯಾಗಲಾರದು.ಪ್ರತಿಷ್ಟಿತ ಕುಟುಂಬದ ಮಹಿಳೆಯು ಕಳ್ಳತನ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗುತ್ತಾಳೆ.ಆಗ ಅವಳ ಕುಟುಂಬದ ಮಂದಿ ನಬಿ ಯೊಂದಿಗೆ  ಮಾತನಾಡಿ ಶಿಕ್ಷೆಯಿಂದ ಪಾರು ಮಾಡಲು  ಮುಂದಾದಾಗ ನಬಿ (ಸ ) ಹೇಳಿದ ಮಾತು ನನ್ನ ಮಗಳು ಕದ್ದರೂ ಕೈ ಕಡಿವೆಎಂದಾಗಿತ್ತು.
ಭೌತಿಕತೆಯ ಪ್ರವಾಹವು ಧಾರ್ಮಿಕತೆಯನ್ನು ಕೊಚ್ಚಿಕೊಂಡು ಹೋದರೆ ಮತ್ತೆ ಉಳಿಯೋದು ಸ್ವಾರ್ಥ ಮಾತ್ರ.ಇದರಿಂದ ಹಲವು ಅನಿಷ್ಟಗಳನ್ನು ನಾವು ನೋಡಬೇಕಾಗುತ್ತದೆ.ಮೊನ್ನೆ ಕೇರಳದ ಒಂದು ಮಸೀದಿಯಲ್ಲಿ ತರ್ಕ ಜೋರಾಗಿ ಸ್ವವರ್ಗದವರಿಂದಲೇ ತಲವಾರು ಪ್ರಯೋಗ ನಡೆದಿದ್ದರೆ ಅಚ್ಚರಿ ಪಡಬೇಕಾಗಿಲ್ಲ.ಎಲ್ಲರೂ ಸ್ವಾರ್ಥ ಪೂಜಕರಾಗಿ ಬದಲಾಗುತ್ತಿದ್ದಾರೆ.
ಧರ್ಮ,ಆಡಳಿತ,ಕಾನೂನು ಸ್ವಾರ್ಥ ಮತ್ತು ದ್ವೇಷ ಸಾಧನೆಗೆ ಬಳಕೆಯಾದರೆ ಪ್ರಳಯ ನಿಶ್ಚಿತ.
ಕುರಾನ್ ಹೇಳುತ್ತದೆ.*
ಓ ಸತ್ಯವಿಶ್ವಾಸಿಗಳೇ ನೀವು ನ್ಯಾಯ ಪಾಲಿಸುವವರಾಗಿ. ಅಲ್ಲಾಹನ ಸಾಕ್ಷಿಗಳಾಗಿ.ಅದು ನಿಮ್ಮ ವಿರುದ್ಧ ವಾದರೂ ಸರಿ. ಅಥವಾ ಹೆತ್ತವರೋ ಹತ್ತಿರದ ಕುಟುಂಬಸ್ಥರೋ ಇರಲಿ.ಅವರು ಶ್ರೀಮಂತ ಇಲ್ಲವೇ ಬಡವನಿರಲಿ. ಅಲ್ಲಾಹನು ಅವರ ನಿಕಟವಾಗಿದ್ದಾನೆ.ನೀವು ಸ್ವ ಇಚ್ಛೆಯನ್ನು ಅನುಸರಿಸಬೇಡಿ.ನೀವು ನ್ಯಾಯವನ್ನು ತಿರಿಚಿದರೆ ಅಥವಾ ಹಿಂದೆ ಸರಿದರೆ ಅಲ್ಲಾಹನು ನೀವು ಮಾಡುವ ಕೆಲಸಗಳನ್ನು ಅರಿಯುವವನಾಗಿರುತ್ತಾನೆ. ಅನ್ನಿಸಾ : 135,

ಪ್ರತಿ ದಿನ ನಮ್ಮ ಕರಾರನ್ನು ಪಾಲಿಸೋಣ ನಿಸ್ವಾರ್ಥಿಗಳಾಗಿ ಬದುಕೋಣ.ಅಲ್ಲಾಹನು ಕರುಣಿಸಲಿ.ಆಮೀನ್.

ಅವಕಾಶವಾದಿ ಮತ್ತು ಜಾತಿ ರಾಜಕೀಯ ದೇಶವನ್ನು ಸೋಲಿಸಬಹುದು.


ಅಲ್ ಅಹ್ಸನ್ ಪ್ರಧಾನ ಸಂಪಾದಕ 
ಮೌಲನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಅವರ  ಜುಮ್ಮಾ ಭಾಷಣ

ಹಿಜರಿ ಐದನೆಯ ವರ್ಷ ಸ್ಥಾಪಿಸಲ್ಪಟ್ಟ  ಕೇರಳದ ಕೊಡುಂಗಲ್ಲೂರಿನ ಮಸೀದಿ ಪ್ರಥಮ ಮಸೀದಿಯಾಗಿದೆ.
ಆರನೇಯ ಶತಮಾನದಲ್ಲೇ ಅರಬರೊಂದಿಗೆ ಭಾರತದ ವ್ಯಾಪಾರ ಸಂಬಂಧ ವನ್ನು ಉಲ್ಲೇಖಿಸಲಾಗುತ್ತದೆ.
ಕಣ್ಣೂರಿನ ಪ್ರಥಮ ಮುಸ್ಲಿಂ ರಾಜ ಕುಟುಂಬ ಅರಕ್ಕಲ್ ರಾಜ ವಂಶವಾಗಿರುತ್ತದೆ.ಚೇರಮಾನ್ ಪೆರುಮಾಳ್ ರಾಜರ ಮಕ್ಕಾ  ಸಂದರ್ಶನ ಮತ್ತು ಇಸ್ಲಾಂ ಸ್ವೀಕಾರ ಹಾಗೇ ಮಾಲಿಕುದ್ದೀನಾರ್ ಕುಟುಂಬದ ಜೊತೆ ವೈವಾಹಿಕ ಸಂಬಂಧ ವನ್ನು ಒಂಬತ್ತನೇಯ ಶತಮಾನದಲ್ಲಿ ಜೀವಿಸಿದ್ದ ಖ್ಯಾತ ಚರಿತ್ರೆ ವಿದ್ವಾಂಸರಾದ ಶೈಖ್ ಅಲೀಯ್ಯಿ ತ್ತಿಬ್ರಿ (ರ) ವಿವರಿಸುತ್ತಾರೆ.
ಕಣ್ಣೂರು ಕೇಂದ್ರವಾಗಿ ಸ್ಥಾಪಿಸಲ್ಪಟ್ಟ ಅರಕ್ಕಲ್ ಅರಮನೆ ಗೋಡೆಗಳನ್ನು ಕೆಡವಿದಾಗ ಸಿಕ್ಕ ಲಿಖಿತಗಳು ಚೇರಮಾನ್ ರಾಜರು ಮಕ್ಕಾ ಯಾತ್ರೆ ಕೈಗೊಂಡದ್ದು,ತಾಜುದ್ದೀನ್ ಆಗಿ ಬದಲಾದ ಘಟನೆಯನ್ನು ವಿವರಿಸುತ್ತದೆ.ಅರಕ್ಕಲ್ ಅಲೀರಾಜ ತಾಯಿ ಶ್ರೀದೇವಿ ಚೇರಮಾನ್ ಪೆರುಮಾಳ್ ಸಹೋದರಿಯಾಗಿದ್ದರು.ಮಲಬಾರ್ ಲೈಬ್ರರಿಗಳಲ್ಲಿ ಈ ಸಂಬಂಧ ದಾಖಲೆಗಳಿವೆ.
ಇಸ್ಲಾಂ ಶತಮಾನಗಳ ಹಿಂದೆ ಭಾರತದಲ್ಲಿ ನೆಲೆಯಾದ ಧರ್ಮ.ಅದು ಇಲ್ಲಿಯ ದೇಶಿಯತೆಗೆ ಮಾರಕವಾಗಿರಲಿಲ್ಲ.
ನಂತರ ಮುಸ್ಲಿಂ ರಾಜರುಗಳು ಆಳ್ವಿಕೆ ಮಾಡಿದ್ದಾರೆ ಆ ಕಾಲದಲ್ಲೂ ದೇಶಕ್ಕೆ ಧಕ್ಕೆ ಇರಲಿಲ್ಲ.ಮೊದಲ ಸ್ವಾತಂತ್ರ್ಯ ಸಂಗ್ರಾಮ (ಸಿಪಾಯಿ ದಂಗೆ) ರುವಾರಿ ಮತ್ತು ಸಾರಥಿ ಮೊಗಲ್ ಸಾಮ್ರಾಜ್ಯದ ಕೊನೆಯ ದೊರೆ ಬಹಾದ್ದೂರ ಶಾ ಸಫರ್ ಆಗಿದ್ದರು.ದಕ್ಷಿಣ ಭಾರತವನ್ನು ನಲುವತ್ತು ವರ್ಷಗಳ ಕಾಲ ರಕ್ಷಿಸಿದ ಹೈದರಲಿ ,ಟಿಪ್ಪು ಸುಲ್ತಾನ್ ಆಡಳಿತ ಕಾಲವೂ ಮತ ಆಧಾರಿತವಾಗಿ ವಿಭಜನೆಯಾಗದೇ ದೇಶ ಉಳಿಯಿತು.ಈ ಸಂದರ್ಭಗಳಲ್ಲಿ ಮತ್ತು ನಂತರದ ವಿದೇಶಿ ವಿರುದ್ಧ ಹೋರಾಟದ ಕಾಲದಲ್ಲೂ ಮತೀಯ ಆಧಾರಿತ ಸಂಘರ್ಷಕ್ಕೆ ಅವಕಾಶವಿರಲಿಲ್ಲ.
ಯಾವಾಗ ರಾಜಕಾರಣವನ್ನು ಧರ್ಮಾಧಾರಿತವಾಗಿ ವಿಭಜಿಸಲು ಶುರುವಾಯಿತೋ ಅಂದಿನಿಂದ ಈ ದೇಶ ಸಂಕಷ್ಟ ಎದುರಿಸುತ್ತಿದೆ.
ಹಾಗೇ ಆಡಳಿತವನ್ನು ಸಂಖೆಯ ಲೆಕ್ಕದಲ್ಲಿ ಕಟ್ಟುವ ಅವಕಾಶವಾದ ರಾಜಕೀಯವೂ ದೇಶಕ್ಕೆ ಆತಂಕ ಒಡ್ಡಿದೆ.ಬಿಹಾರ ಇದಕ್ಕೆ ಉತ್ತಮ ಉದಾಹರಣೆ. ಪಟ್ಟ ಕಟ್ಟಲು ಮಹಾ ಘಟ್ ಬಂಧನ್ ಪಟ್ಟ ಉಳಿಸಲು ಕಟ್ ಬಂಧನ್? ತತ್ವವಿಲ್ಲ ಸಿದ್ದಾಂತ ವಿಲ್ಲ!
ಆದರೆ ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ಭಾರತೀಯ ರಿಗೆ ಎಸಗುವ ಅನ್ಯಾಯ.
73% ಶೇಕಡಾ  23% ಶೇಕಡವನ್ನು ತಿರಸ್ಕರಿಸುತ್ತದೆ .ಎರಡುವರ್ಷ ಆಡಳಿತ ಮಾಡಿ 29%ಶೇಕಡಾ 23%ಶೇಕಡಾ ಜೊತೆ ಸೇರುತ್ತದೆ! ಆದರೆ ಮತಹಾಕಿದ ಶೇಕಡಾ 73%  ಮಂದಿ ಈ ಆಡಳಿತವನ್ನು ವಿರೋದಿಸುತ್ತಾರೆ.ಇದು ಹೇಗೆ ಪ್ರಜಾ ತಂತ್ರ? ಇದು ಲೆಕ್ಕದ ತಂತ್ರ ಮಾತ್ರ.
ದೇಶದಲ್ಲಿ ನಡೆವ ಅನ್ಯಾಯ ಅಕ್ರಮ ದೌರ್ಜನ್ಯ ವನ್ನೆಲ್ಲಾ ಭಾರತೀಯರು ವಿರೋದಿಸುತ್ತಾರೆ ಅನ್ನುವುದು ಸತ್ಯ .ಅಖ್ಲಾಕ್ ಮತ್ತು ಜುನೈದ್ ಹತ್ಯೆ ಸಮಯ ಭುಗಿಲೆದ್ದ ಅಸಹಿಷ್ಣುತೆಯ ವಿರುದ್ಧ ಜನಾಂದೋಲನ ಇದಕ್ಕೆ ಸಾಕ್ಷಿ.
ಅದೇರೀತಿ ಅಮರನಾಥ ಯಾತ್ರಿಕರನ್ನು ಬಚಾವು ಮಾಡಿದ ಸಲೀಂ ಭಾರತೀಯತೆಗೆ ಹೊಸ ರೀತಿಯ ‍ಭಾವನೆಯನ್ನು ಮೂಡಿಸಿದ್ದಾರೆ.
ಇಂತಹಾ ಭಾವನೆಗಳನ್ನು ಅವಕಾಶವಾದಿ ರಾಜಕೀಯದ ಕುತಂತ್ರ ಸೋಲಿಸಲು ಸಾದ್ಯವಿದೆ.ಭಾರತವನ್ನು ಸೋಲಿಸಲು ಚೀನಾ ಪಾಕಿಗೆ ಅಸಾದ್ಯ ಆದರೆ ಅವಕಾಶವಾದಿ ರಾಜಕೀಯ ದೇಶಕ್ಕೆ ಅಪಾಯವಾಗಿದೆ.ಇಂದು ಪಶ್ಚಿಮೇಶ್ಯ ಬಿಕ್ಕಟ್ಟು ಇಂತಹಾ ಅವಕಾಶವಾದದಿಂದಲೇ ಪರಿಹಾರವಾಗದೇ ಉಳಿದಿದೆ.ಅಲ್ಲಿಯ ನಿಜವಾದ ದ್ರೋಹಿಗಳು ಪ್ಯಾಲಸ್ತೀನಿಯರಲ್ಲ !ಬದಲಿಗೆ ವಲಸಿಗರಾದ ಯಹೂದಿಗಳಾಗಿದ್ದಾರೆ.ಜನ್ಮ ಭೂಮಿಯಿಂದ ಹೊರದಬ್ಬಲ್ಪಟ್ಟ ಪ್ಯಾಲಸ್ತೀನರು ಸ್ವಂತ ನಾಡಿಗಾಗಿ ಹೋರಾಡುತ್ತಿದ್ದರೆ ಅವರನ್ನು ಭಯೋತ್ಪಾದಕರಾಗಿ ಚಿತ್ರೀಕರಿಸಲಾಗುತ್ತಿದೆ.1948 ಮೇ 15 ರಂದು ದಬ್ಬಾಳಿಕೆಯ ಮೂಲಕ ಭೂಮಿಯನ್ನು ಕಬಳಿಸಿದ ಇಸ್ರೇಲರ    ಗುಣಗಾಣ ಮಾಡಲಾಗುತ್ತಿದೆ.ಅವರ ಜೊತೆ ಸಂಬಂಧ ಸ್ಥಾಪಿಸಲಾಗುತ್ತಿದೆ.ನಿರಂತರವಾಗಿ ದೌರ್ಜನ್ಯಕ್ಕೊಳಗಾದ ,ಜನ್ಮಭೂಮಿಯಿಂದ ಹೊರದಬ್ಬಲ್ಪಟ್ಟ ಪ್ಯಾಲಸ್ತೀನ್ ಜನತೆ ನ್ಯಾಯಕ್ಕಾಗಿ ಹೋರಾಡುತ್ತಿದ್ದರೂ ಅವರಿಗೆ ನ್ಯಾಯ ಕೊಡಲು ವಿಶ್ವ ಸಂಸ್ಥೆ ಅಥವಾ ಜಗತ್ತಿನ ದೊಡ್ಡನ್ನ ಅಮೇರಿಕ ಮುಂದಾಗುತ್ತಿಲ್ಲ.ರೋಮನ್ನರಿಂದ ತುಳಿತಕ್ಕೊಳಗಾದ ಯಹೂದಿಗಳು ವಲಸೆಯಲ್ಲೇ ಜೀವನ ಸಾಗಿಸಿದರು.
ಒಂದನೆಯ ಮಾಹಾ ಯುದ್ದ ಬಳಿಕ ಬ್ರಿಟನ್ನಿನ ವಸಾಹತುಗೊಳಗಾದ ಪ್ಯಾಲಸ್ತೀನ್ ನಲ್ಲಿ ಯಹೂದಿಗಳ ವಲಸೆ ಜಾಸ್ತಿಯಾಗುತ್ತದೆ.ಹಿಟ್ಲರನ ಕ್ರೌರ್ಯದ ಕಾರಣ ಅದು ಇಮ್ಮಡಿಯಾಗುತ್ತದೆ.ಇದರಿಂದ
ತಲೆಕೆಡಿಸಿಕೊಂಡ ಬ್ರಿಟನ್ ಪ್ಯಾಲಸ್ತೀನ್ ಹೊಣೆಗಾರಿಕೆಯನ್ನು ವಿಶ್ವ ಸಂಸ್ಥೆಗೆ ಒಪ್ಪಿಸುತ್ತಾದೆ.ಪ್ಯಾಲಸ್ತೀನನ್ನು ತುಂಡು ಮಾಡಲೊಪ್ಪದ ಅರಬರು ಇಸ್ರೇಲ್ ರಾಷ್ಟ್ರದ ಉದಯವನ್ನು ವಿರೋಧಿಸುತ್ತಾರೆ.ಆದರೂ ಯಾರನ್ನೂ ಲೆಕ್ಕಿಸದೇ 1948  ಮೇ15 ರಂದು ಇಸ್ರೇಲ್ ರಾಷ್ಟ್ರದ ಘೋಷಣೆ ಯಾಗುತ್ತದೆ.ವೀರೋಧಿಸಿದ ಜೋರ್ಡಾನ್, ಸಿರಿಯಾ,ಈಜಿಪ್ಟು ಸೋಲನಿಭವಿಸುತ್ತದೆ.ನಂತರ ಉಳಿದದ್ದು ಗಾಝಾ ಮತ್ತು ಪಶ್ಚಿಮ ದಂಡೆ ಮಾತ್ರ.1964 ರಲ್ಲಿ ಅದನ್ನೂ ಕಳಕೊಳ್ಳಬೇಕಾಯಿತು.1974ರಲ್ಲಿ ಈಜಿಪ್ಟ್ ಸಂಧಾನ ಮೂಲಕ ಸಿನಾಯ್ ದ್ವೀಪವನ್ನು ಪಡೆದುಕೊಂಡಿತು.‌ಪ್ಯಾಲಸ್ತೀನರು ಜೋರ್ಡಾನ್ ,ಲೆಬನಾನ್ ಟ್ಯೂನೀಶಿಯಾ ದೇಶಗಳಲ್ಲಿ ಅಲೆದಾಡಬೇಕಾಗುತ್ತದೆ.ಆದರೆ ಯಾರಿಗೂ ಕನಿಕರವಾಗಲಿಲ್ಲ.ಈ ಕಾರಣದಿಂದಲೇ ಭಾರತ ಈ ತನಕ ಪ್ಯಾಲಸ್ತೀನರ ಪರವಾಗಿತ್ತು .ಗಾಂದೀಜಿಯೂ ನನ್ನ ಒಲವು ಪ್ಯಾಲಸ್ತೀನ್ ಪರ ಎಂದಿದ್ದರು.ಅವರು ಇತಿಹಾಸ ಕಲಿತ ಮುತ್ಸಧ್ಧಿ ಗಳಾಗಿದ್ದರು ಎನ್ನುವುದು ಉಲ್ಲೇಖನೀಯ. ನಂತರ
1993 ರಲ್ಲಿ ನಡೆದ ಅರಾಫತ್  ಒಪ್ಪಂದ ಪ್ಯಾಲಸ್ತೀನ್ ಜನತೆಗೆ ಒಂದಿಷ್ಟು ನ್ಯಾಯ ಕೊಟ್ಟಿತು.ಇದೀಗ ಪವಿತ್ರ ಅಕ್ಸಾ ಮಸೀದಿ ನಿರ್ಬಂಧ ಮತ್ತು ದೌರ್ಜನ್ಯ ಪ್ಯಾಲಸ್ತೀನರನ್ನು ಹೊರದಬ್ಬುವ ಹುನ್ನಾರವೇ  ಆಗಿದೆ .ಇಷ್ಡೆಲ್ಲಾ ರಕ್ತರಂಜಿತ ಅಧ್ಯಾಯ ಗಳ ನಿಜ ಸ್ವರೂಪ ಇದ್ದರೂ ವಿಶ್ವಸಂಸ್ಥೆ ಮತ್ತು ಅಮೇರಿಕ ಅವಕಾಶ ವಾದಿ ರಾಜಕಾರಣವನ್ನೇ ಮಾಡುತ್ತಲಿದೆ .
ಜಗತ್ತಿನಾದ್ಯಂತ ಮಸ್ಲಿಮರೇ ಅನ್ಯಾಯಕ್ಕೊಳಗಾದರೂ ಜಗತ್ತು ಮುಸ್ಲಿಮರಿಂದಲೇ ಭಯ ಆತಂಕ ಎದುರಿಸುತ್ತಿದೆ ಎಂದು ಬಿಂಬಿಸಲಾಗುತ್ತಿದೆ .ದೇಶದಲ್ಲಿ ಹಿಂದೆ  ರಾಜರುಗಳು ಮಾಡಿದರೆಂದ ಅನ್ಯಾಯ, ದೌರ್ಜನ್ಯದ ಸುಳ್ಳು ಚರಿತ್ರೆಯನ್ನು ವೈಭವೀಕರಿಸಿ  ಆ ಮೂಲಕ ಇಂದಿನ ಭಾರತೀಯ ಮುಸಲ್ಮಾನರನ್ನು ಟಾರ್ಗೇಟ್ ಮಡುವಂತೆ ಜನ್ಮಭೂಮಿಗಾಗಿ ಹೋರಾಡುವ ಪ್ಯಾಲಸ್ತೀನ್ ಹೋರಾಟಗಾರರೂ ಭಯೋತ್ಪಾದನೆಯ ಆರೋಪದ ಬಲಿಪಶು ಗಳಾಗುತ್ತಾರೆ.
ಅಲ್ಲಾಹನು ಹೇಳುತ್ತಾನೆ.
ಅವರು ಅಲ್ಲಾಹನ ಪ್ರಕಾಶವನ್ನು ಬಾಯಿಯಿಂದ ಊದಿ ಆರಿಸಲು ಪ್ರಯತ್ನಿಸುತ್ತಾರೆ.ಆದರೆ ಅಲ್ಲಾಹನು ಅವನ ಪ್ರಕಾಶವನ್ನು ಪೂರ್ತಿಮಾಡುತ್ತಾನೆ. (ಕುರಾನ್)

"ಪವಿತ್ರ ಕಾಬಾ ಶರೀಫಿಗೆ ರತ್ನಕಂಬಳಿ ಹಾಸುವುದಕ್ಕಿಂತ ಶ್ರೇಷ್ಠ ಹಸಿದ ಹೊಟ್ಡೆಗೆ ಹಿಟ್ಡು ತುಂಬುವುದಾಗಿದೆ."

ಭಾಷಣ ಮೌಲಾನಾ ಯು ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು"

ಅವರ ಸಂಪತ್ತಿನಲ್ಲಿ ಬೇಡುವವನಿಗೆ ಮತ್ತು  ತಡೆಯಲ್ಪಟ್ಟವನಿಗೆ ಒಂದು ಹಕ್ಕಿರುವುದು. ಕುರಾನ್
ಸೂರ ಅದ್ದಾರಿಯಾತ್:೧೯

ಮಂಗಳೂರಿನಿಂದ ಪುತ್ತೂರಿಗೆ ಹೋಗುವ ದಾರಿ ಮಾಣಿ ಹತ್ತಿರದ ಕೊಡಾಜೆಯ ಮನೆಯೊಂದಕ್ಕೆ ಗುರುವಾರದಂದು ಸಾವಿರಾರು ಮಂದಿ ಬೇಟಿ ನೀಡಿ ಕಣ್ಣೀರಿನೊಂದಿಗೆ  ಮರಳುತ್ತಿದ್ದರು. ಏನು ಕಾರಣ ಎಂದರೆ ಬರೀ ಸಿಂಪಲ್! ಆ ಮನೆಗೆ ಕಷ್ಟಗಳೊಂದಿಗೆ ಕಣ್ಣೀರಿನೊಂದಿಗೆ ಬಂದವರು ಹಿಂದಿರುಗುವಾಗ ಸಂತಸದಿಂದ ನಗುನಗುತ್ತಾ ಹೋಗುತ್ತಿದ್ದರು. ಯಾವುದೇ ಸಂದರ್ಭದಲ್ಲಿ ಅವರು ಅಹವಾಲು ಹೇಳಲು ಬಂದವರಿಗೆ ಬಾಗಿಲು ಮುಚ್ಚಲಿಲ್ಲ.ಯಾವದೇ ಒತ್ತಡದ ಸಮಯದಲ್ಲೂ ಯಾರೊಂದಿಗೂ ರೇಗಾಡಲಿಲ್ಲ.ಅವರೇ ಸುಲ್ತಾನ್ ಹಾಜಿ ಎಂದೇ ಪ್ರಸಿದ್ಧರಾದ ಕೊಡಾಜೆ ಹುಸೈನ್ ಹಾಜಿ.
ಇಂತಹಾ ಶ್ರೀಮಂತಿಕೆಯನ್ನು ಎಲ್ಲರೂ ಆಶಿಸಬೇಕಾಗಿದೆ.
ಕಾರಣ
ಅಲ್ಲಾಹನು ಹೇಳುತ್ತಾನೆ ಅವರ ಸೊತ್ತಿನಲ್ಲಿ ಬೇಡುವವರಿಗೂ ದರಿದ್ರರಿಗೂ ಒಂದು ಹಕ್ಕು ಇದೆ.
ಸಂಪತ್ತಿನಲ್ಲಿ ಒಂದಂಶವನ್ನು ಬಡ ನಿರ್ಗತಿಕರಿಗಾಗಿ ಮೀಸಲಿಡುವುದು
ಸ್ವರ್ಗ ಪ್ರವೇಶವನ್ನು ಕೊಡುವ ಕರ್ಮವಾಗಿರುತ್ತದೆ. ಇದರಿಂದಲೇ
ಇಸ್ಲಾಮಿನ ಸೌಂದರ್ಯ ವನ್ನು ಕಾಣಲು ಸಾಧ್ಯವಾಗುವುದು. ಅದಲ್ಲದೇ ಬರೀ ಭಕ್ತಿ ಆರಾಧನೆಯಿಂದ ಮಾತ್ರ ಧರ್ಮವನ್ನು ಮೇಳೈಸಲಾಗದು.
ಪ್ರವಾದಿ (ಸ) ರವರು ಹೇಳುತ್ತಾರೆ .ಅಲ್ಲಾಹನು ಕೆಲವು ಜನರನ್ನು ಸೃಷ್ಟಿಸಿದ್ದಾನೆ.ಜನರು ಸಂಕಷ್ಟದ ಸಮಯ ಅವರ ಬಳಿ ತೆರಳುತ್ತಾರೆ.ಅಲ್ಲಾಹನ ಶಿಕ್ಷೆಯಿಂದ ಅವರು ನಿರ್ಭೀತರಾಗಿರುತ್ತಾರೆ.
ಈ ರೀತಿಯ ಜನರನ್ನು ಜನ ಕೊಂಡಾಡುತ್ತಾರೆ.ಅಂತಹಾ ವ್ಯಕ್ತಿತ್ವ ಸುಲ್ತಾನ್ ಹಾಜಿ.
ಇನ್ನು ಶ್ರೀಮಂತಿಕೆಯಿರುವ ಎಲ್ಲಾ ಜನರ ಬಳಿ ಹೋಗುವುದಕ್ಕೇ ಎಷ್ಟೇ ಕಷ್ಟಇದ್ದರೂ  ಜನ ಇಷ್ಟ ಪಡುವುದಿಲ್ಲ .
ಇನ್ನೂ ಸಂಪತ್ತು ನಮ್ಮದಲ್ಲ.ನಾವು ಅದನ್ನು ವಿಲೇವಾರಿ ಮಾಡುವವರು ಮಾತ್ರ.
ನಾವು ಅವರಿಗೆ ನೀಡಿದ್ದರಿಂದ ಅವರು ದಾನವಾಗಿ ಖರ್ಚು ಮಾಡ್ತಾರೆ. ಕುರಾನ್
 ಯಾಕೆ ಯತೀಮನನ್ನು ಪರಿಗಣಿಸಲಿಲ್ಲ ?ಬಡವರನ್ನು ಉಣಿಸಲು ಯಾಕೆ ಪ್ರೇರೇಪಿಸಲಿಲ್ಲ.?ಉತ್ತರದಾಯಿ ಸೊತ್ತನ್ನು ಧಾರಾಳವಾಗಿ ತಿನ್ನುವಿರಿ, ಸಂಪತ್ತನ್ನು ತೀವ್ರವಾಗಿ ಪ್ರೀತಿಸುವಿರಿ
ಈ ಸತ್ಯ ಪ್ರಾಣವು ಗಂಟಲಿಗೆ ತಲುಪಿದಾಗ ತಿಳಿಯುವುದು ಕುರಾನ್.
ಅಲ್ಲಾಹನಿಗೆ ಸಾಲ ಕೊಡುವವರು ಯಾರು? ಕುರಾನ್
ಅಲ್ಲಾಹನ ದಾರಿಯಲ್ಲಿ ದಾನ ಮಾಡುವವರ ಉದಾಹರಣೆ ಯು ಒಂದು ದಾನ್ಯಕ್ಕೆ ಏಳುನೂರು ಕಾಳು ಬೆಳೆಯುವುದಾಗಿದೆ.(ಕುರಾನ್)
ರಸೂಲರು ಹೇಳುತ್ತಾರೆ,
 ನಿಮ್ಮಲ್ಲಿ ನನಗೆ ಹತ್ತಿರ ಕೈ ಉದ್ದವಿರುವವರಾಗಿರುತ್ತಾರೆ
ಆಯಿಷಾ ಬೀವಿ ಹೇಳುತ್ತಾರೆ ನಮ್ಮಲ್ಲಿ ಕೈ ಉದ್ದ ಝೈನಬಾ ‌ಆಗಿದ್ದರು.
ಅವರಂತೆ ದಾನ ಮಾಡುವ ,ಕುಟುಂಬ ಸೇರಿಸುವ,ಸಹಾಯ ಮಾಡುವ ಹೆಣ್ಣನ್ನು ನಾನು ನೋಡಿಲ್ಲ.ಅವರು ಕೈಯಿಂದ ಸಂಪಾದಿಸಿ ದಾನ ಮಾಡುತ್ತಿದ್ದರು.
ಹೀಗೆ ಧಾರಾಳ ದಾನ ಮಾಡುವ ಗುಣ ಅವರಲ್ಲಿತ್ತು.
ಜೀವಕಾರುಣ್ಯ ಕೆಲಸಗಳನ್ನು ಹಲವು ಸಂಘ ಸಂಸ್ಥೆಗಳು ಮಾಡುತ್ತಲಿದೆ.ಟ್ಯಾಲೆಂಟ್ ನಡೆಸುವ ನಂಡೆ ಪೆಂಙಲ್ ಕಾರ್ಯಕ್ರಮ ಶ್ಲಾಘನೀಯ.ಬರುವ ಶುಕ್ರವಾರ ಸಂಜೆ ಮದುವೆಯ ಜೋಡಿಗಳನ್ನು ಒಟ್ಟು ಮಾಡುವ ಮಹನೀಯರನ್ಮು ಸೇರಿಸಿ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ
ಅದನ್ನು ಬೆಂಬಲಿಸಿ ಎಂದು ಸಾಂದರ್ಭಿಕ ವಾಗಿ ಹೇಳಬಯಸುತ್ತೇನೆ.ಮದುವೆ ದಲ್ಲಾಳಿಗಳು ಖಂಡಿತ ಅತ್ಯುನ್ನತ ಕರ್ಮವನ್ನು ಮಾಡುತ್ತಿದ್ದಾರೆ.
ಹಿಂದಿನ ತಲೆಮಾರು ಮಸಲ್ಮಾನರು ಸೇವಾ ಮಾರ್ಗದಲ್ಲೇ ‌ನಿರತರಾಗುತ್ತಿದ್ದರು.
ಹಝ್ರತ್ ಹುಸೈನ್ (ರ )ರ ಸುಪುತ್ರ ಹಝ್ರತ್ ಝೈನುಲ್ ಆಬಿದೀನ್ ರನ್ನು ಮಯ್ಯಿತ್ತ್ ಸ್ನಾನ ಮಾಡಿಸುವಾಗ ಕುತ್ತಿಗೆ ಭಾಗದಲ್ಲಿ ಕಪ್ಪಾದ ಕಲೆಗಳಿದ್ದವು ಅದು ಬಡ ಮತ್ತು ವಿಧವೆಯರ ಮನೆಗೆ ವಸ್ತುಗಳನ್ನು ಹೊತ್ತು ಕೊಂಡು ಹೋದ ಗರುತುಗಳಾಗಿತ್ತು.ನಾವಾದರೆ ನಮಗೇ ಬೇರೆಯವರು ಹೊತ್ತು ತರಬೇಕೆಂದು ಬಯಸುವೆವು!
ಖಲೀಫಾ ಉಮರ್ (ರ)ಅಳುತ್ತಿರುವ ಮಗುವನ್ನು ಗಮನಿಸುತ್ತಾರೆ.ನಮಾಜಿಗೂ ಆ ಮಗುವಿನ ಅಳು ಕಿರಿಕಿರಿಯನ್ನು ಉಂಟು ಮಾಡುತ್ತದೆ.ಸಂಗತಿಯನ್ನು ತಿಳಿದಾಗ ಮೊಲೆಹಾಲನ್ನು ನಿಲ್ಲಿಸಲು ಒತ್ತಡ ಹೇರುವ ತಾಯಿಯ ಬಗ್ಗೆ ಅರಿತು ಕೊಳ್ಳುತ್ತಾರೆ. ಅಂದಿನಿಂದ  ಹಾಲುಣಿಸುವ ತಾಯಿಗಾಗಿ ವಿಶೇಷ ಪ್ಯಾಕೇಜ್ ನ್ನು ಸರಕಾರದ ವತಿಯಿಂದ ಘೋಷಿಸಿ ಆಜ್ಞೆ ಹೊರಡಿಸುತ್ತಾರೆ.ಮತ್ತು ಮಕ್ಕಳನ್ನು ಮೊಲೆಹಾಲು ಬಿಡಲು ಒತ್ತಡ ಮಾಡಬೇಡಿ ಎಂದು ಕರೆ ಕೊಡುತ್ತಾರೆ ಒಂದು ಮಗು ಅತ್ತರೂ ಅದಕ್ಕೆ ಪರಿಹಾರ ಕೊಡುವ ಸರಕಾರವಾಗಿತ್ತು ಖಲೀಫರದ್ದು.
ಒಮ್ಮೆ ಉಮರಿಬ್ನು ಅಬ್ದುಲ್ ಅಝೀಝ್ (ರ) ರ ಬಳಿ ಹಜ್ಜಾಜಿಗಳು ಕಾಬಾ ಶರೀಪಿಗೆ "ಕಿಸ್ವಾ" ಹೊದಿಸಲು ಅನುಮತಿ ಕೇಳುತ್ತಾರೆ‌.ಆಗ ಖಲೀಫಾ ಹೇಳಿದ್ದು,
ನೀವು  ಪವಿತ್ರ ಕಾಬಾ ಶರೀಪಿಗೆ ರತ್ನಕಂಬಳಿ ಹಾಸುವುದಕ್ಕಿಂತ ಹಸಿದಿರುವ ಹೊಟ್ಟೆಗೆ ಹಿಟ್ಟನ್ನು ತುಂಬಿ ಅದು ನನಗಿಷ್ಟ.
ಎಂದಾಗಿತ್ತು.
ಹಝ್ರತ್ ಅಲೀ ರ ಹೇಳುತ್ತಾರೆ ನಾಲ್ಕು ಬೊಗಸೆ ಅನ್ನ ಉಣಿಸುವುದು ಒಂದು ಕೊರಳನ್ನು ಜೀತ ಮುಕ್ತಿ ಮಾಡುವುದಕ್ಕಿಂತ ನನಗೆ ಇಷ್ಟವಾಗಿದೆ.
ಸ್ವಾಹಾಬಿಗಳಲ್ಲಿ ಹಲವರು ಬಡ ಮನೆಗಳಿಗೆ ತೆರಳಿ ನಮಗೆ ಏನಾದರೂ ಆವಶ್ಯಕತೆ ಇದೆಯಾ?
ಉಪ್ಪು,ಝೈತ್ ಎಣ್ಣೆ ಇದೆಯಾ? ಎಂದು ವಿಚಾರಿಸುತ್ತಿದ್ದರು.
ಇಬ್ನು  ಉಮರ್ (ರ )ಹೇಳುತ್ತಾರೆ "ಹಜ್ಜ್ ಬಳಿಕ ಪುನಃ ಹಜ್ಜ್ ಮಾಡುವುದಕ್ಕಿಂತ ತಿಂಗಳಿಗೊಮ್ಮೆ ಅಥವಾ ವಾರಕ್ಕೊಮ್ಮೆ ಬಡವರ ಮನೆಗಳನ್ನು ಸಂದರ್ಶಿಸುದನ್ನು ಬಯಸುವೆ."
ಇಂತಹಾ ಸಂಗತಿಗಳಿಗೆ ಉತ್ತಮ ಮಾದರಿ ಶ್ರೀಮಂತ ರಾದ ಸುಲ್ತಾನ್ ಹಾಜಿ ಯಂತೆ ಶ್ರೀಮಂತ ರು ಮಾದರಿಯಾಗಲಿ

ಜಿಲ್ಲೆಗೆ ಹಬ್ಬಿದ ಬೆಂಕಿಯನ್ನು ಬೆಳಕಾಗಿ ಪರಿವರ್ತಿಸೋಣ

ಭಾಷಣ ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಮನುಷ್ಯರ ಕೈಗಳ ಪ್ರವೃತ್ತಿ ಕಾರಣ ಕಡಲು ಮತ್ತು ತೀರಗಳೆರಡರಲ್ಲಿಯೂ ಕ್ಷೋಭೆ ಹರಡಿದೆ 
ಕುರಾನ್ ಅರ್ರೂಮ್ :೪೧

ಸಮಾಜದಲ್ಲಿ  ಶಾಂತಿ ನೆಮ್ಮದಿಗಾಗಿ ಎಲ್ಲರೂ ಶ್ರಮಿಸುವುದು ಅನಿವಾರ್ಯವಾಗಿದೆ, ಮತ್ತು ಅದು  ಜವಾಬ್ದಾರಿಯೂ ಆಗಬೇಕಾಗಿದೆ.ಆ ಮೂಲಕ ಜಿಲ್ಲೆಗೆ ಹಬ್ಬಿದ ಬೆಂಕಿಯನ್ನು ಬೆಳಕಾಗಿ ಪರಿವರ್ತಿಸೋಣ.
 ಸಾಮಾಜಿಕ ತಾಣ ಹಲವು ಕುತೂಹಲಕರ ಮತ್ತು ಸತ್ಯನ್ವೇಷನೆಗೆ ಟ್ವಿಸ್ಟನ್ನು ಒದಗಿಸುತ್ತದೆ ನಿಜ. ಆದರೆ
ಬೇಜವಾಬ್ದಾರಿ ಪೋಸ್ಟುಗಳಿಗೂ ಬರವಿಲ್ಲ.ಆದರೂ ಸುಳ್ಳರಿಗೆ ,ಬೆಂಕಿ,ಮತ್ತು ರಕ್ತ ಕಂಪನಿಯವರಿಗೆ,ಕಲ್ಲು ತೂರುವವರಿಗೆ ವಿರುಧ್ದ‌ವಾದ ಹಲವು ವೀಡಿಯೋ ಗಳನ್ನು ಅದು ನೀಡುತ್ತಿದೆ. ಆ ಮೂಲಕ ಸಮಾಜದ ಜನ ಪ್ರಬುದ್ದ ರಾಗುತ್ತಿದ್ದಾರೆ.
ಕೆಲವು ಚಾನಲುಗಳ ಬಿಗ್ ಬ್ರೇಕಿಂಗ್ ನ್ಯೂಸ್ ವರದಿ ಮಾಡಿ ಗಾಳಿ ಹೋದ ಬಲೂನು ತರ ಮುದುಡಿ ಹೋಗಿ ಸುಳ್ಳಿನ ವಾಹಕರಾಗಿ ಮುಜುಗರಕ್ಕೊಳಗಾಗುತ್ತಾರೆ.ಸಮಾಜದಿಂದಲೂ ಉಗಿಸಿಕೊಳ್ಳುತ್ತಾರೆ. ಇನ್ನಾದರೂ ಸಾಮಾಜಿಕ ಜವಾಬ್ದಾರಿ ತೋರದಿದ್ದರೆ  ಕೆಲವು ಚಾನಲ್ ಕಛೇರಿಗಳನ್ನು  ಗುಜರಿ ಗೋದಾಮು ಮಾಡಬೇಕಾದಿತು.
ನಾನು ನೋಡಿದ ಎರಡು ಸಾಮಾಜಿಕ ತಾಣದ ವೀಡಿಯೋಗಳು ಸಮಾಜದ ಕಣ್ಣು ತೆರೆಸುವಂತಿದೆ.ಒಂದನ್ನು ನೋಡಿ ಕಣ್ಣೀರು ಸುರಿಸಿದರೆ ಇನ್ನೊಂದನ್ನು ನೋಡಿ ಮೌಲ್ಯಗಳು ಇನ್ನೂ ಉಳಿದು ಕೊಂಡಿದೆ ಎಂದೆನಿಸಿತು.
ಮೊದಲು ತೃಪ್ತಿ ಯ ವಿಷಯಕ್ಕೆ ಬರೋಣ,ಮೂರು ಮಂದಿ ಹುಡುಗರು ಗುಡ್ಡಗಾಡು ಪ್ರದೇಶದದಲ್ಲಿ ಕುರಿ ಮೇಯಿಸುತ್ತಿದ್ದರು.ಎಲ್ಲಿಂದಲೋ ಅವರಿಗೆ ನರಳುವ ಕೂಗು ಕೇಳಿಸುತ್ತದೆ.ಸುತ್ತಲೂ ಹುಡುಕುತ್ತಾರೆ.ಕೊನೆಗೆ ಒಂದು ಕಿರಿದಾದ ಕೊಳವೆ ಬಾವಿ ತರದ ಗುಂಡಿಯಿಂದ ಆ ಶಬ್ದವು ಬರುವುದೆಂದು ಖಾತರಿ ಪಡಿಸುತ್ತಾರೆ.ಆದರೆ ಅವರ ಕೈ ಅದರೊಳಗೆ ತಲುಪುತ್ತಿಲ್ಲ.ಕಡೆಗೆ ಅವರೊಂದು ಉಪಾಯ ಮಾಡುತ್ತಾರೆ.ಸವಕಲಾಗಿರುವ ಒಬ್ಬನನ್ನು ತಲೆ ಕೆಲಗಾಗಿಸಿ ಇಬ್ಬರು ಎತ್ತಿ ಹಿಡಿದು ಗುಂಡಿಯೊಳಗೆ ಕಳುಹಿಸುತ್ತಾರೆ.ಒಂದೆರಡು ಸಲ ಹುಡುಗ ಉಸಿರುಗಟ್ಟಿ ಒದ್ದಾಡುತ್ತಾನೆ.ಆವಾಗ ಅವನನ್ನು ಮೇಲಕ್ಕೆತ್ತುತ್ತಾರೆ.ಆದರೂ ಛಲ ಬಿಡದೇ ಪ್ರಯತ್ನವನ್ನು ಮಾಡುತ್ತಾರೆ. ಬಹಳ ಶ್ರಮಪಟ್ಟು ಗುಂಡಿಯೊಳಗಿಂದ ಆಡಿನ ಮರಿಯನ್ನು ಎತ್ತಿ ತಂದು ಕುಣಿಯುತ್ತಾರೆ.ಇದನ್ನು ನೋಡಿದಾಗ ಓ ಅಲ್ಲಾಹನೇ ನೀನು ಕೆಲವರ ಹೃದಯವನ್ನು ಎಷ್ಡು ಚೆನ್ನಾಗಿಟ್ಡಿರುವಿ ಎಂದು ಆತನನ್ನು ಸ್ತುತಿಸಿದೆ.ಹಝ್ರತ್ ಪ್ರವಾದಿ (ಸ)ರ ಸಂದೇಶದ ಮಹತ್ವ ಇದರಿಂದ ಸ್ಪಷ್ಟವಾಗುತ್ತದೆ.
ಭೂಮಿಯಲ್ಲಿರುವ ಎಲ್ಲರೊಂದಿಗೆ ಕರುಣೆ ತೋರಿ ಆಗ  ಆಕಾಶದೊಡೆಯ ಅಲ್ಲಾಹನು ಕರುಣೆ ತೋರುತ್ತಾನೆ.ಹದೀಸು.
ಇನ್ನು ಅತ್ಯಂತ ಆಘಾತಕಾರಿಯಾದ ಸಂಗತಿಯಾಗಿತ್ತು ಇನ್ನೊಂದು ವೀಡಿಯೋ. ಒಂದು ರೂಮಿನೊಳಗೆ ನಾಯಿ ಮರಿಯನ್ನು ಕೂಡಿಸಿ ಹೆಣ್ಣುಹುಡುಗಿಯರು ನಾಲ್ಕೈದು ಮಂದಿ ಕಾಲಿನಿಂದ ಎತ್ತಿ ಬಿಸಾಕುತ್ತಿದ್ದರು. ಗೋಡೆಗೆ ಹೊಡೆದು,ಬಡಿದು ಸತಾಯಿಸುತ್ತಿದ್ದರು.ಕಡೆಗೆ ಆ ನಾಯಿ ಮರಿಯು ಏಳಲಾಗದೇ ಬಿದ್ದು ಕೊಂಡಾಗ ಒಂದು ಕಡೆಯಿಂದ ಒಬ್ಬಳು ನಾಯಿ ಮರಿಯನ್ನು ಒದ್ದು ಆ ಕಡೆ ಹೋಗ್ತಾಳೆ ಬೇರೆಯೊಬ್ಬಳು ಈ ಕಡೆ ಬರ್ತಾಳೆ.ಕಡೆಗೆ ನೆಲದ ಮೇಲೆ ಅಪ್ಪಚ್ಚಿಯಾಗಿ ರಕ್ತ ಕಾರಿ ಪ್ರಾಣ ಬಿಡುತ್ತದೆ.ಈ ಘಟನೆಯು ನನ್ನನ್ನು ಹೆಚ್ಚು ಘಾಸಿಗೊಳಿಸಿತು.ನೊಂದು  ಕಣ್ಣೀರಿಟ್ಟೆ. ಕೆಲ ದಿನ ಅದೇ ನನ್ನ ಮನಸ್ಸನ್ನು ಕೊರೆಯುತ್ತಿತ್ತು.ನಾನು ಆಗ ತಿಳಿದುಕೊಂಡದ್ದು ಹೆಣ್ಣುಮಕ್ಕಳಲ್ಲಿಯೂ ಇಂತಹ ಕ್ರೂರಿಗಳು ಇದ್ದಾರೆ ಎಂದು.ಹೆಣ್ಣಿನ ಮನಸ್ಸು ಮೃದು ಎಂದು ಮಾತ್ರ ತಿಳಿದಿದ್ದೆ .ಇಂತಹ ವಿಕೃತ ವಿಘ್ಣ ಸಂತೋಷಿಗಳು ಇರುತ್ತಾರೆಂದು ತಿಳಿದಿರಲಿಲ್ಲ.ನರರಾಕ್ಷಸ ರೂಪದಂತೆ ಅವರು ಕಾಣುತ್ತಿದ್ದರು.ಹಂದಿ ಕೂಟಕ್ಕಿಂತಲೂ ನೀಚವಾಗಿತ್ತು ಅವರ ವರ್ತನೆ.ಇಲ್ಲಿಯೂ ರಸೂಲರ (ಸ) ಸಂದೇಶ ಪ್ರಸ್ತುತವೆನಿಸಿತು.
ಬೆಕ್ಕನ್ನು ಕಟ್ಟಿಹಾಕಿ ಕೊಂದ ಹೆಂಗಸಿಗೆ ಅಲ್ಲಾಹನು ನರಕದ ಶಿಕ್ಷೆ ಕೊಟ್ಟನು.ಅವಳು ಅದಕ್ಕೆ ತಿನ್ನಿಸಲೂ ಕುಡಿಸಲೂ ಇಲ್ಲ.ಅದನ್ನುಅದರಷ್ಟಕ್ಕೆ ಭೂಮಿಯಲ್ಲರುವ ಪ್ರಾಣಿಗಳನ್ನು ತಿಂದು ಬದುಕಲೂ ಬಿಡಲಿಲ್ಲ.ಹಾಗೇ ಅದು ಸತ್ತು ಹೋಯಿತು.(ಹದೀಸು)
ಒಂದು ಪ್ರಾಣಿಗೂ ಅನ್ಯಾಯ ವಾಗಬಾರದೆನ್ನುವುದು ಧರ್ಮನೀತಿ.ಆದರೆ ಇಂದು ದುಷ್ಟ ಪ್ರವೃತ್ತಿ ಯೇ ಹೆಮ್ಮೆಯೆಂದು ಬೀಗುತ್ತಾರೆ ಕೆಲವರು.ರಕ್ತಹರಿಸುವ ಬೆಂಕಿ ಹಚ್ಚುವ ಸಂಗತಿಗಳೇ ವಿಜ್ರಂಬಿಸುತ್ತಿದೆ.ಅದೂ ಕರುನಾಡಿನ ಪಲ್ಲಕ್ಕಿ ಕನಸು ಕಾಣುವವರು.ಯಾರೇ ಆದರೂ ತಪ್ಪು ಮಾಡಿದವರನ್ನು ಒದ್ದು ಒಳಗೆ ಹಾಕಿ ಎಂದು ಹೇಳಬೇಕಾದವರು ಬಂಧನವಾದರೇ ಬೆಂಕಿ ಉರಿಯಬಹುದು? ಎನ್ನುತ್ತಾರೆ.
ಆಯುಧಗಳನ್ನು ಸಿದ್ದಪಡಿಸಿ ?ಎಂದು ಬಹಿರಂಗ ಹೇಳಿಕೆ ನೀಡುತ್ತಾರೆ.ಹಾಗಾದರೆ ಅಪರಾಧ ಮಾಡಿದವ ಪ್ರಭಾವಿಯಾದರೆ ಪಲ್ಲಕ್ಕಿ ? ಸಾಮಾನ್ಯನಾದರೆ ಜೈಲು ಗತಿಯಾ?ಏನಿದು ಶಿಸ್ತಿನ ಸಂಘಟನೆಯ ಧೋರಣೆ?ಕೋಳಿ ಕಾಲಿಗೆ ಕತ್ತಿ ಕಟ್ಟಿ ಅಂಕ ಮಾಡಿ ಗೆದ್ದರೆ ದುಡ್ಡು ಸೋತರೆ ಮಾಂಸ ತರ ಜನರ ಕೊರಳಿಗೆ ಮತಾಂಧತೆಯ ಕತ್ತಿ ಯನ್ನು ಕಟ್ಟಿ ಅಧಿಕಾರ ಕ್ಕಾಗಿ ಹವಣಿಸುವ ಮಂದಿಯನ್ನು ಕಂಡರೆ ಪಾಪ ಅನಿಸುತ್ತದೆ.ಬೌದ್ಧಿಕ ದಿವಾಳಿತನದ ದುರವಸ್ಥೆ.ಸ್ವಧರ್ಮಿಯನಿಂದ ಕೊಲೆಯಾದರೆ,ಅಥವಾ ಹಲ್ಲೆಗೊಳಗಾದರೆ ಕೇಳೋರಿಲ್ಲ!.ಬೇರೆ ಜಾತಿಯವನನ್ನು ಕೊಂದರೂ ಪರ್ವಾಗಿಲ್ಲ!ಸ್ವಧರ್ಮಿಯನಿಂದ ಅತ್ಯಾಚಾರ,ಪೀಡನೆಗೆ ಒಳಗಾದರೆ ಯಾರೂ ಸುಳಿಯೋದಿಲ್ಲ!
ದಿನನಿತ್ಯದ ಬದುಕಿನ ಹೋರಾಟದಲ್ಲಿ,ಕಷ್ಟ ಸುಖದಲ್ಲಿ ಎಲ್ಲಾ ಜಾತಿಯವರೂ ಅನ್ಯೋನ್ಯತೆ ಯಿಂದ ಸಹಕರಿಸಿ ಬದುಕುತ್ತಿದ್ದಾರೆ.ಅನ್ಯ ಮತದವರ ಉದ್ಯಮದಲ್ಲಿ ಎಲ್ಲರೂ ಶೇರಾಗುತ್ತಾರೆ.ಕಂಪನಿ ಫ್ಯಾಕ್ಟರಿ ಗಳಲ್ಲಿ ಜಾತಿ ಮಾತ್ರ ವರ್ಕೌಟಾಗೋದೇ ಇಲ್ಲ.ಅದು ಸಾದ್ಯವೂ ಅಲ್ಲ.ಅನೇಕ ಸಂದರ್ಭಗಳಲ್ಲಿ ಸಹಾಯಕ್ಕೆ ಬರುವವರು ಜಾತೀಯವರೇ ಅಲ್ಲ.
ಹೀಗೇ ಸಮಾಜ ಸಾಗುತ್ತಿರುವಾಗ ಸ್ವಾರ್ಥಿಗಳ ಕುತಂತ್ರಕ್ಕೆ ಬಲಿಯಾಗಿ ಸಾಮಾಜಿಕ ಸ್ವಾಸ್ಥ್ಯ ಕೆಡುತ್ತದೆ.ವಾಸ್ತವ ವಿರುಧ್ದ ಸುಳ್ಳುಗಳು ಹರಡಲಾರಂಬಿಸುತ್ತದೆ.ಕಲ್ಲು ಎಸೆದು ಗಲಭೆ ಯನ್ನು ಹೊತ್ತಿಉರಿಸೋದು ,ಪಾಕ್ ದ್ವಜ ಹಾರಿಸೋದು,ಸ್ಫೋಟ ನಡೆಸೋದು
ಪೂಜಾ ಮಂದಿರಗಳನ್ನು ಮಲಿನ ಮಾಡೋದು, ನಂತರ ಅದನ್ನು ಅನ್ಯರ ತಲೆ ಮೇಲೆ ಕಟ್ಟುವುದು.ಇದು ಸಮಾಜದ ಕೆಲ ದ್ರೋಹಿಗಳ ಕುತಂತ್ರವಾದರೂ ಅದರ ನಾಶವನ್ನು ಸಮಾಜ ಅನುಭವಿಸಬೇಕಾಗುತ್ತದೆ. ಇಷ್ಟಕ್ಕೂ ಜನ ಹಿಂಸೆಗೆ ಒಗ್ಗಿಕೊಳ್ಳಲು ಕಾರಣ ಅಧಾರ್ಮಿಕ ಸುಖಾಡಂಬರ ವ್ಯಾಮೋಹ ಮತ್ತು ಅಧಿಕಾರದ ಸ್ವಾರ್ಥ ಮಾತ್ರವಾಗಿರುತ್ತದೆ.
ಎಲ್ಲಾ ಮಕ್ಕಳು ಪ್ರಾಕೃತಿಕವಾಗಿ ಉತ್ತಮ ಗುಣದಲ್ಲೇ ಹುಟ್ಟುತ್ತಾರೆ ಆದರೆ ಅವರು ಅವರ ಹೆತ್ತವರು ನಿಮಿತ್ತ ಬದಲಾಗುತ್ತಾರೆಎನ್ನುವುದು ಹದೀಸಿನ ಸಾರವಾಗಿದೆ.
ಹುಡುಗಿಯೊಬ್ಬಳಿಗೆ ಬೊಂಬೆ ಆಟ ಎಂದರೆ ಪಂಚಪ್ರಾಣ.ಒಮ್ಮೆ ಅದರ ಕಾಲು ಮುರಿದು ಹೋಯಿತು.ಮುಂದೆ ಹುಡುಗಿ ಕೆಲಸ, ಅದಕ್ಕೆ ಗಮ್ಮು ಹಚ್ಚೋದು,ಟೇಪು ಕಟ್ಟೋದು.ಬಟ್ಟೆ ಸುತ್ತೋದು.ಇದನ್ನು ಕಂಡು ಕಂಡು ರೋಸಿ ಹೋದ ತಾಯಿ ಆ ಗೊಂಬೆಯನ್ನು ಎತ್ತಿ ಮಾರ್ಗದ ಆ ಕಡೆ‌ ಬಿಸಾಡುತ್ತಾಳೆ.ಇದನ್ನು ನೋಡಿ ಆ ಮಗಳು ಕೇಳಿದ್ದು ನನ್ನ ಕಾಲು ಮುರಿದರೆ ಇದೇ ತರ ಬಿಸಾಡುತ್ತಿಯಾ?
ಮಗಳ ಮನಸ್ಸನ್ನು ನೋಡಿ? ಮಕ್ಕಳ ಮನಸ್ಸಿನಲ್ಲಿ ದ್ವೇಷ,ಕ್ರೌರ್ಯ,ಹಗೆ ಇರೋದಿಲ್ಲ.ಅವರಲ್ಲಿ ಮತಾಂಧತೆ ಸುಳಿದಿರೋದಿಲ್ಲ.ಆ ಮಕ್ಕಳ ಮನಸ್ಸನ್ನು ಹಾಳುಗೆಡವದು ಮತಾಂಧತೆಯ ಕುರುಡುತನವಾಗಿದೆ.ಮಕ್ಕಳನ್ನು ಕ್ರೂರರಾಗಿಸುವುದು ಹೆಚ್ಚಾಗಿ ಸಂಘಟನೆಯ ಸ್ವಾರ್ಥ ವಾಗಿರುತ್ತದೆ.ಉದ್ರೇಕವನ್ನು ಹಸಿ ಸುಳ್ಳಿನ ಮೂಲಕ ಸಿದ್ದಪಡಿಸಲಾಗುತ್ತದೆ.ಮೊನ್ನೆ ಯುವ ನಾಯಕನೊಬ್ಬ ತನ್ನವರನ್ನು ಸಮರ್ಥಿಸಲು ಟಿಪ್ಪುಸುಲ್ತಾನರನ್ನು ಎಳೆದು ತಂದಿದ್ದ .ಸುಲ್ತಾನರಿಗೆ ಸೇವಕರು ದಿನಾಲು ಅವರು ಮಾಡಿದ ಮಾತಾಂತರ,ದೇವಸ್ತಾನ ದ್ವಂಸ,ಕೊಲೆ,ಬಗ್ಗೆ ವರದಿ ನೀಡಬೇಕಿತ್ತಂತೆ ? ಈ ಸುಳ್ಳನ್ನು ಕೇಳುವಾಗ ವ್ಯಕ್ತಿಯಲ್ಲಿರುವ ಅಸಹಿಷ್ಣುತೆಯನ್ನು ಅಳತೆ ಮಾಡಬಹುದಿತ್ತು.ನಾಡು,ನುಡಿ ಕಟ್ಟಿದ ಕೀರ್ತಿ ಶ್ರೇಷ್ಟ,ದೇಶಪ್ರೇಮಿ, ಮತ ಸಹಿಷ್ಣು ದೇವಸ್ತಾನ ಸಂರಕ್ಷಕನಾದ ಸುಲ್ತಾನ ಬಗ್ಗೆ ಕ್ಷುದ್ರ ಜೀವಿಗಳು ಬರೆದ ಅವಿವೇಕದ ಕಟ್ಟು ಕಥೆಯನ್ನು ಹೇಳುವಾಗ ಅಸಹ್ಯವೆನಿಸಿತ್ತು.ಇಂತಹ ಸಮಾಜ ಘಾತುಕ ಬೆಂಕಿ,ರಕ್ತ,ನಂಜು,ಸುಳ್ಳನ್ನು ಬಂಡವಾಳ ವಾಗಿಸಿದವರಿಗಿಂತ ಗುಡ್ಡೆಗಾಡಲ್ಲಿ ಗುಂಡಿಗೆ ಬಿದ್ದ ಆಡಿನ ಮರಿಯನ್ನು ರಕ್ಷಿಸಿದ ಕುರಿ ಕಾಯೋಮಂದಿ ವಾಸಿಯೆಂದು ಬಾವಿಸಿದರೆ ತಪ್ಪಿರಲಿಕ್ಕಿಲ್ಲ.

🎆 ವರದಿ ಅಲ್ ಅಹ್ಸನ್