ನಂಡೆ ಪೆಂಙಲ್(ನನ್ನ ತಂಗಿ) ಹೆಣ್ಣೇ ಕೇಳುವರಾರು ನಿನ್ನ ಗೋಳು

ಬೆಳಕು : ಅಲ್ ಅಹ್ಸನ್
ಮೌಲನಾ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು.
....................................................................


ಟ್ಯಾಲಂಟ್ ರಿಸರ್ಚ್ ಫೌಂಡೇಶನ್ ಒಂದು ಹೊಸ ವಿನೂತನ ಅಭಿಯಾನಕ್ಕೆ ಮುಂದಾಗಿತ್ತು. ಕಾರ್ಯಕ್ರಮದ ಉದ್ಘಾಟನೆಗೆ ನನ್ನನ್ನು ಕರೆಯಲಾಗಿತ್ತು.ಮೂವತ್ತು ದಾಟಿದ ಮದುವೆ ವಂಚಿತ ತಂಗಿಯರ ಅಹವಾಲನ್ನು ಸಮಾಜದ ಮುಂದೆ ತರೆದಿಡುವ ಸಾಹಸವಾಗಿತ್ತು ಅದು.ಸಮಾಜದಲ್ಲಿ ನಡೆಯುವ ಅದ್ದೂರಿ ಮದುವೆಯ ಭರಾಟೆ, ಗೌಜಿ ಗದ್ದಲದ ಮದ್ದ್ಯೆ ಅವಗಾಹನೆಗೆ ಒಳಗಾದ ರಕ್ತ ಕಣ್ಣೀರಿನ ಭಯಾನಕ ಕಥೆಗಳನ್ನು ಒಡಲಲ್ಲೇ ಇಟ್ಟು ಕರಗಿ ಹೋದ ಕುಸುಮಗಳ ಕಥೆ. ಕನಸುಗಳು ಕಮರಿ ಹೋದ ಬಯಕೆಗಳು ಬಾಡಿ ಹೋದ ಹೃದಯ ವಿದ್ರಾವಕ ಕದನ ಕುತೂಹಲದ ಘಟನೆಗಳು.ಇಲ್ಲಿ ಪಾತ್ರದಾರಿಗಳು ಬೇರೆ ಯಾರೂ ಅಲ್ಲ ನಮ್ಮದೇ ತಂಗಿಯರು.
ಟ್ಯಾಲಂಟಿನ ಸಕ್ರೀಯ ಕರ್ಯಕರ್ತರಾದ ಅಬ್ದುಲ್ ಹಮೀದ್ ಕಣ್ಣೂರ್ ಜೊತೆ ಎರಡು ಸುತ್ತು ನಡೆಯುತ್ತಾ ಕೆಲವು ಮನೆಗಳ ಬಾಗಿಲುಗಳನ್ನು ತಟ್ಟಿದೆವು.ಮೆಲ್ಲನೆ ಬಾಗಿಲು ತೆರೆದು ಕೊಂಡಾಗ ಕಂಡ ಮುಖಗಳು ಗಾಬರಿಯಿಂದಲೇ ನಮ್ಮನ್ನು ಬರಮಾಡಿಕೊಂಡಿತ್ತು.ಆದರೆ ಅಲ್ಲಿ ನಮ್ಮನ್ನು ಸತ್ಕರಿಸುವುದಕ್ಕಿಂತ ಅವರನ್ನೇ ಮರೆಮಾಚಿಕೊಳ್ಳುವ ಪ್ರಯತ್ನಕ್ಕೆ ಮುಂದಾಗುತ್ತಿದ್ದರು ಕಾರಣ ಅಷ್ಟೊಂದು ತಳಮಳ ಅವರ ವರ್ತನೆಯಲ್ಲಿತ್ತು.ಹೇಗೂ ಸುಧಾರಿಸಿಕೊಂಡು ಅವರೊಟ್ಟಿಗೆ ಕೆಲಕಾಲ ಕಳೆದೆವು. ಅವರು ಹೇಳುವ ಒಂದೊಂದು ಘಟನೆಗಳು ಬಾಣದಂತೆ ಹೃದಯ ವನ್ನು ಸೀಳುವಂತಿತ್ತು.
ಎರಡು ಮಕ್ಕಳನ್ನು ಬಾವಿಗೆಸೆಯಲು ಮುಂದಾದ ವ್ಯಕ್ತಿಯ ಅವಸ್ಥೆಯನ್ನು ಕೇಳಿದಾಗ ನಾನರಿಯದೇ ಕಣ್ಣೀರ ಹನಿಯು ಕೆನ್ನೆಯಿಂದ ಜಾರಿ ಉದುರುತ್ತಿತ್ತು.ಆ ಪಾಪಿಯ ಕೈಗಳಿಂದ ಮಕ್ಕಳನ್ನು ತಂದು ಸಾಕಿದ ಅಕ್ಕಳಿಗೆ ಕಷ್ಟವಾದದ್ದು ಮೊದಲ ಮಗಳ ಮದುವೆಯ ಕಾರ್ಯವಲ್ಲ, ಧಾರೆ ಎರೆದು ಕೊಡಬೇಕಾದ ಆ ಹುಡುಗಿಯ ತಂದೆಯನ್ನು ಮದುವೆ ಮಂಟಪಕ್ಕೆ ಕರೆ ತರುವುದು! ಆದರೂ ಆ ತಂದೆಯ ಡಿಮಾಂಡಿನಂತೆ ನಡೆದುಕೊಳ್ಳಲಾಯಿತು.ಮೊದಲ ಮದುವೆ ನಡೆಯಿತು. ಇದೀಗ ಎರಡನೆಯ ಮದುವೆ ತಯಾರಿಯಲ್ಲಿ ಸಿಕ್ಕಿದ ಪಾರ್ಟಿಯು ಕೊಟ್ಟ ಡಿಮಾಂಡು! ಮೂರು ಲಕ್ಷ. ರುಪಾಯಿಗಳು ಮತ್ತು ಹೆರಿಗೆ ಖರ್ಚಿಗೆ ಒಂದು ಲಕ್ಷ. ಅದು ಮಾತ್ರ ಹೆರಿಗೆ ಸಮಯ ಕೊಟ್ಟರೆ ಸಾಕು ಎಂಬ ಉದಾರತೆಯೂ ಇತ್ತು.
ಹೌದು ಮದುವೆ ಎಂಬುದು ಹಲವರಿಗೆ ಸಂಭ್ರಮ ಸಡಗರದ ಕಾರ್ಯವಾಗಿ ಉಳಿದಿರುವುದಿಲ್ಲ ಬದಲಾಗಿ, ಸಂಕಟ , ಅಪಮಾನ,ದೌರ್ಜನ್ಯ, ಸಾವು ನೋವು, ಕೆರೆ  ಬಾವಿ ,ಸೀಮೆಎಣ್ಣೆ, ಹಗ್ಗ.ಆಸಿಡ್ ,ಗ್ಯಾಸ್ ಸಿಲಿಂಡರಿನ ಕಥೆಯ ವ್ಯಥೆಯಾಗಿ ಮುಂದುವರಿಯುತ್ತಿದೆ.ಸಾಹಿತಿ ಅ.ರ.ಮಿತ್ರರು ಹೀಗೆ ವಿವರಿಸುತ್ತಾರೆ
ವರೋಪಚಾರದ ಸೂಟುಬೂಟುಗಳು
ಉಂಗುರ ಒಡವೆ ಎಲ್ಲಾ ವಸ್ತುಗಳು
ಒಂದನು ಬಿಡದಲೇ ಜೋಡಿಸಿಟ್ಟಿರುವೆ
ಬಸ್ಸಿನ ಲೆಕ್ಕವ ಪೂರ್ತಿ ಗೊಳಿಸಿರುವೆ
      ಬೇಕಾದುದು ಇನ್ನೇನಿದೆ ಹೇಳಿ
       ಹುಡುಗಿಯ ಸುಡಲು ಕೆರೋಸೀನ್ ಸ್ಟೋವೆ?
       ನೀರಲ್ಲಿ ಮುಳುಗಿಸೆ ಪ್ಲಾಸ್ಟಿಕ್ ಕಡಾಯೆ?
       ಎರಚಲು ಮುಖಕ್ಕೆ ಆಮ್ಲ ದ್ರವವೇ?
        ತ್ರಿಶಂಕು ತೋರಿಸೆ ನೇಣಿನ ಹಗ್ಗವೇ?
ಹೌದು ಪ್ರವಾದಿ ನಬಿ ಸುನ್ನತ್ತನ್ನು ಪಾಲಿಸುವ ಮುಸ್ಲಿಮರು ಮದುವೆಯ ವಿಚಾರದಲ್ಲಿ ನಡೆದುಕೊಂಡ ಮೃಗೀಯವರ್ತನೆಯ ಕೆಟ್ಟಪರಿಣಾಮಗಳು.
ಇಂತಹಾ ಕಾರಣಗಳಿಂದ ಮಕ್ಕಳಿರುವಾಗ ಒಣ ಕಡ್ಡಿಗಳಿಗೆ ಬಟ್ಟೆ ಸುತ್ತಿ ಮದುಮಗಳ ಕನಸು ಕಾಣುತ್ತಿದ್ದ,  ಕಿಟಕಿಗೆ ಸಾರಿಯ ತುಂಡನ್ನು ಕಟ್ಟಿ ಆಟದ ಬೊಂಬೆಯನ್ನಿಟ್ಟು ತೊಟ್ಟಿಲಲ್ಲಿ ಹಾಡುತ್ತಿದ್ದ ತಂಗಿಯರು ಅಮ್ಮ ಆಗುವ ಕನಸು ಕಾಣುತ್ತಾ ಕ್ರಮೇಣ ಕನಸು ಬಯಕೆಗಳನ್ನು ಕರಗಿಸಿ ಚಾಪೆಯಾಗಿಸಿ ಕರಗಿ ಕೊರಗಿ ದೇಹವೇ ಸುಕ್ಕುಗಟ್ಟಿ ರೋಗಿಗಳಾಗಿಯೋ ಬುದ್ಧಿ ಸ್ಥಿಮಿತ ಕಳಕೊಂಡವರಾಗಿಯೋ ಗೋಡೆಗಳ ಮಧ್ಧೆ ಬದುಕನ್ನೆ ಬಂದಿಸಿಟ್ಟರು ಇವರೇ ನಮ್ಮ ತಂಗಿಯರು.
ಮನೆಯಲ್ಲಿರುವ ಅಣ್ಣ ತಮ್ಮಂದಿರು ಸಾಕಷ್ಟು ಪ್ರಯತ್ಯ ಮಾಡಿ ಕೈ ಸೋತು ಕೊನೆಗೆ ಅವರೂ ಬಿಟ್ಟು ಬೇರೆ ಕಡೆ ವಾಸ ಬಯಸುತ್ತಾರೆ. ಕಾರಣ ಅವರಿಗೂ ಹೆಣ್ಮಕ್ಕಳಿದ್ದು ಅವರೂ ದೊಡ್ಡವರಾಗುತ್ತಿದ್ದರು.
ಕ್ರಮೇಣ ಬಳ್ಳಿ ಎಲ್ಲರನ್ನು ಸುತ್ತಿಕೊಳ್ಲುವ ಹಂತದಲ್ಲಿ ನೀರು ಮೂಗಿನ ನೇರ ಬಂದಾಗ ತಲೆ ಮೇಲೆ ಹೊತ್ತು ನಡೆದವರನ್ನು ಕಾಲಡಿಗೆ ಹಾಕಿ ಬದುಕುಳಿಯುವ ಪ್ರಯತ್ನದಂತೆ ಮುಂದುವರಿಯುತ್ತದೆ.
ಕಟ್ಟ ಕಡೆಗೆ ಮನೆಯಲ್ಲಿ ತಾಯಿ ಮತ್ತು ಮಗಳು!
ತಂದೆ ತೀರಿಕೊಂಡರು,ಸಹೋದರರು ಮನೆ ಬಿಟ್ಟರು.ತಾಯಿ ರೋಗಿಯಾದರು ಮದುವೆಯ ಆಲೋಚನೆ ಬಿಟ್ಟು ತಾಯಿ ಆರೈಕೆ ಮಾಡುತ್ತಲೇ ಒಂದು ದಿನ ತಾಯಿ ಮರಣದ ಬಾಗಿಲು ಬಡಿವಾಗ ಮನೆಯಲ್ಲಿ ಮಗಳು ಮಾತ್ರ.ಆ ತಾಯಿಯೊಂದಿಗೆ ಮಗಳು ಕೇಳುತ್ತಾಳೆ
ಅಮ್ಮ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸಮ್ಮನಿಲ್ಲಯೆ ನಿಲ್ಲಲಾರೆಯಾ
ಮಗಳು ಅಮ್ಮಗೆ ಹೇಳಲು
    ಮರಣ ಭಾಷೆಗೆ ತಪ್ಪಲಾರೆನು
     ಗೂಟ ಹಾಕಿ ಕೂರಲಾರೆನು
    ಇಷ್ಟರಿಂದಲೇ ಪೋಪೆನಲ್ಲಿಗೆ
     ಕಟ್ಟ ಕಡೆಗಿದು ಖಂಡಿತಾ
ಆರ ನೆಲೆಯಲಿ ಕೂರಲಮ್ಮಾ
ಆರ ಸೇರಿ ಬದುಕಲಮ್ಮಾ
ಆರ ಬಳಿಯಲು ಕಳೆಯಲಮ್ಮಾ
ಆರು ನನಗೇ ಹಿತವರು
     ಅಣ್ಣಗಳಿರಾ ತಮ್ಮಗಳಿರಾ
     ನಿಮ್ಮ ತಾಯೊಡ ಹುಟ್ಟುಗಳಿರಾ
     ನಿಮ್ಮತಂಗಿ ಎಂದು ಕಾಣಿರಿ
      ತಬ್ಬಲಿಯ ಈ ಮಗಳನು
ಮುಂದೆ ಬಂದರೆ ಹಾಯಿವರಮ್ಮ
ಹಿಂದೆ ಬಂದರೆ ಒದೆವರಮ್ಮಾ
ನಿನ್ನ ಬಳಗೇ ಕರೆದು ಕೊಳುವೆಯ
ತಬ್ಬಲಿಯ ಈ ಮಗಳನು
ನಂಡೆ ಪೆಂಙಲ್ ಅಭಿಯಾನಕ್ಕೆ ಸಮರ್ಪಣೆ

No comments:

Post a Comment