ಹಾಲ್ಗಡಲಾಡ ಆಲಪ್ಪುಝ

ಲೇ: ಅನೀಸ್ ಕೌಸರಿ ವೀರಮಂಗಿಲ
ದಕ್ಷಿಣದ ವೆನಿಸ್ ಅದೊಂದು ದಿನಕ್ಕಾಗಿ ತನ್ನ ಸೌಂದರ್ಯವನ್ನೇ ಬದಲಾಯಿಸಿತ್ತು...!! ಹಸಿರ ಕೈರಳಿಯ ಮುಕುಟವೆಂದೇ ಖ್ಯಾತಿ ಪಡೆದ "ಕಾಯಲ್" ನ ನಾಡು ಆಲಪ್ಪುಯದ ಹಸಿರ ಬಣ್ಣವನ್ನು ಶ್ವೇತವರ್ಣವಾಗಿ ಮಾರ್ಪಟ್ಟಿತ್ತು.  ಈ ಸವಿಶೇಷತೆಯನ್ನು ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ  ಮಾತಿನಲ್ಲೇ ಹೇಳಬೇಕೆಂದರೆ  "ಆಲಪ್ಪುಯದ ಕಡಲ ಕಿನಾರೆಯಲ್ಲಿ ಇನ್ನೋದು ಕ್ಷೀರ ಸಾಗರ, ಸಾಗರದ ವಿಶಾಲತೆಯ ಮುಂದೆ ನಮ್ಮ ಕಣ್ಣು ಸೋಲುವಂತೆ ಈ ಶಿಸ್ತು ಬದ್ಧ ಜನ ಸಾಗರದ ಮತ್ತೊಂದು ತುದಿಯನ್ನು ನೋಡಲು ನನ್ನೆರಡು ನಯನಗಳು ಸಾಕಾಗುತ್ತಿಲ್ಲ”.
 ವಿದೇಶದಿಂದ ಬಂದಿದ್ದ ಪ್ರತಿನಿಧಿಗಳಂತೂ "ನಾವೀಗ ಅರಫದಲ್ಲಿದ್ದೇವೆಯೋ ಎಂದು ಭಾಸವಾಗುತ್ತಿದೆ’ ಎಂದಿದ್ದರು.
ಅಷ್ಟಕ್ಕೂ ಇಷ್ಟೆಲ್ಲಾ ವಿಶೇಷತೆಗಳಿಗೆ ಆಲಪ್ಪುಯ ಎಂಬ ಆ ಪ್ರದೇಶವು ಸಾಕ್ಷಿಯಾಗಿದ್ದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ೯೦ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭವಾಗಿತ್ತು.
ಫೆಬ್ರವರಿ ತಿಂಗಳ ೧೧ ತಾರಿಖಿನಿಂದ ನಾಲ್ಕು ದಿನಗಳ ಕಾಲ ಆಲಪ್ಪುಯದ ಇಎಂಎಸ್ ಸ್ಟೇಡಿಯಂನಲ್ಲಿ ಹಾಗೂ ಫೆ.೧೪ರಂದು ಅತೀ ವಿಶಾಲವಾದ ಕಡಲ ಕಿನಾರೆಯಲ್ಲಿ ನಡೆದ ಸಮಸ್ತ ಮಹಾ ಸಮ್ಮೇಳನದಲ್ಲಿ ಶ್ವೇತವಸ್ತ್ರದಾರಿಗಳ ದಂಡೇ ಹರಿದು ಬಂದಿದ್ದವು. ಸಮಸ್ತವೆಂಬ ಆಧ್ಯಾತ್ಮಿಕ ಸಂಘಟನೆಯ ಅಗ್ರಗಣ್ಯ ನೇತಾರರು, ಉಲಮಾಗಳು, ದೇಶ-ವಿದೇಶಗಳ ಪ್ರತಿನಿಧಿಗಳು, ರಾಜಕೀಯ ಮುಖಂಡರು, ದೀನೀಪ್ರೇಮಗಳಿಂದ ಆಲಪ್ಪುಯ ನಗರವು ಆ ಒಂದು ವಾರಗಳ ಕಾಲ ತುಂಬಿ ತುಳುಕುತ್ತಿದ್ದವು. ಅಲ್ಲಾಹನ ಇಷ್ಟದಾಸರ ಪಾದಸ್ಪರ್ಶದಿಂದ ಇಸ್ಲಾಮಿನ ಇತಿಹಾಸಕ್ಕೆ ಸಾಕ್ಷಿಯಾಗಿದ್ದ ಆ ಪುಣ್ಯ ನಗರದವು ಇನ್ನಷ್ಟು ಧನ್ಯಗೊಂಡವು.

ಸಮ್ಮೇಳನದಿಂದ ಸಾಮರಸ್ಯ

ಒಂದು ವೇಳೆ ನೀವು ಕೇರಳದ ಆಲಪುಯದಲ್ಲಿ ನಡೆದ ’ಸಮಸ್ತ- ೯೦’ ರ ಐತಿಹಾಸಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದರೆ  ನಿಮಗೂ ತಿಳಿದಿರಬಹುದು ಅಲ್ಲಿನ ವ್ಯವಸ್ಥೆ, ಶಿಸ್ತು, ಕೈಗೊಂಡ ನಿರ್ಣಯ, ಮಂಡಿಸಲಾದ ವಿಷಯ, ಮಾಡಿದ ಭಾಷಣ ಎಲ್ಲಕ್ಕೂ ಮಿಗಿಲಾಗಿ ನಾಡಿಗೆ ನಾಡೇ ಸಜ್ಜುಗೊಂಡ, ಸಂಭ್ರಮಿಸಿದ ರೀತಿ.....ಹೀಗೆ ಎಲ್ಲವೂ.....
ಅಷ್ಟಕ್ಕೂ ಅದೇನೂ ಒಂದು ಏರಿಯಾ ಅಥವಾ ಜಿಲ್ಲೆ ಅಷ್ಟೇಯಾಕೆ ಒಂದು ರಾಜ್ಯ ಕ್ಕೆ ಸೀಮಿತಗೊಂಡ ಸಮ್ಮೇಳನವಾಗಿರಲಿಲ್ಲ, ಅಲ್ಲಿ ಸೇರಿದ್ದು ಒಂದಿಷ್ಟು ಸಾವಿರ ಜನರೂ ಆಗಿರಲಿಲ್ಲ.  ಕಣ್ಣೆತ್ತದ ಮೈಲಿ ಗಟ್ಟಲೆ  ದೂರದಲ್ಲಿ ಹರಡಿ ನಿಂತ ಜನ  ಸಾಗರ. ಒಂದು ರಾಜ್ಯ ಬಿಡಿ, ದೇಶ- ವಿದೇಶಗಳಿಂದ ಬಂದು ಸೇರಿದ ಶ್ವೇತ, ಶುಭ್ರ ವಸ್ತ್ರ ದಾರಿ ಸುನ್ನೀಗಳ ಪಡೆ.... ಥೇಟು ಕಡಲತೀರದಲ್ಲೊಂದು ಹಾಲ್ಗಡಲು !
ನೆನಪು ಮಾಡಿಕೊಳ್ಳಿ, ಅಲ್ಲಿ ನಿಮ್ಮ ನಾಲ್ಕು ಭಾಗಕ್ಕೂ ಕಣ್ಣಾಯಿಸಿದ್ದರೆ  ಅಲ್ಲಿ ಇದ್ದದ್ದು ಒಂದೋ ಮಲಯಾಳಿ.ಅಥವಾ ಕನ್ನಡಿಗ,ಇಲ್ಲವೇ ಉರ್ದು ಭಾಷಿಗ,ಅದಲ್ಲದಿದ್ದರೆ ತಮಿಳು ಭಾಷಿಗ ಅದೂ ಅಲ್ಲದಿದ್ದರೆ ಇನ್ನ್ಯಾವುದೋ ರಾಜ್ಯದ ಇನ್ಯಾವುದೋ ಭಾಷಿಗ. ಆದರೆ ಅಲ್ಲಿ ಭಾಷೆಯ ತಕರಾರಿಲ್ಲ, ಇನ್ನ್ಯಾವುದೇ ಎಡವಟ್ಟಿಲ್ಲ, ಮೇಲು-ಕೀಳೆಂಬ ಭಾವನೆ ಇಲ್ಲವೇ ಇಲ್ಲ. ಅಲ್ಲಿ ಅದೆಷ್ಟೋ ದೊಡ್ಡ ಶ್ರೀಮಂತರಿದ್ದರು. ಉನ್ನತ ಹುದ್ದೆಯಲ್ಲಿದ್ದ ಗಣ್ಯರಿದ್ದರು.ಆದರೆ ಅಲ್ಲಿ ಎಲ್ಲರೂ ಸಮಾನರು. ಎಲ್ಲರೂ  ಮರಳಕಣಗಳ ಮೇಲೆ ಕುಳಿತು ಸಮ್ಮೇಳನದ ಆರಂಭದಿಂದ ಹಿಡಿದು ಕೊನೆಯ ವರೆಗೂ ಶಿಸ್ತಿನಿಂದ ವೀಕ್ಷಿಸಿ ದನ್ಯರಾದರು. ಎಲ್ಲರಿಗೂ ಅದೇನೋ ಒಂಥರಾ ಸಂಭ್ರಮ. ಇನ್ನಿಲ್ಲದ ಉತ್ಸಾಹ. ಆಧ್ಯಾತ್ಮಿಕ ಅನುಭೂತಿ, ಆದರ್ಶ ಶುದ್ಧಿಯಲ್ಲಿ ಗೆದ್ದವೆಂಬ ಮನೋತೃಪ್ತಿ, ಬದುಕು ದಾರಿ ತಪ್ಪಿಲ್ಲ ಎಂಬ ಸಮಾಧಾನ,  ಇಟ್ಟ ದಿಟ್ಟ ಹೆಜ್ಜೆ ನೆಟ್ಟಗಿದೆ ಎಂಬ ಹೆಮ್ಮೆ, ಸಾತ್ವಿಕರ, ಪುಣ್ಯತ್ಮರ ಹೆಜ್ಜೆ ಗುರುತಿನಲ್ಲಿ, ಅವರು ತೋರಿದ ಹಾದಿಯಲ್ಲಿ ಎಡವಟ್ಟಿಲ್ಲದೆ ಬಂಡೆಯಂತೆ ನಿಂತಿದ್ದೇವೆ ಎಂಬ ಸಂತಸ...
 ಅದೇಕಾರಣಕ್ಕೆ ಸಮ್ಮೇಳನ ಶಿಸ್ತು ಬದ್ಧವಾಯಿತು ಎಡವಟ್ಟಿಲ್ಲದೆ ಮಾದರಿ ಆಯಿತು.

ನೆನಪು ಬಾಕಿ ಇಟ್ಟು ಹೋದ ಶೈಖುನಾ

ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಹಸನುಲ್ ಬಸ್ವರಿ (ರ) ಹೇಳುತ್ತಾರೆ.
 ಒಬ್ಬ ಸತ್ಯ ವಿಶ್ವಾಸಿಗೆ ನಾಯಿಯಲ್ಲಿರುವ ಹತ್ತು ಗುಣಗಳು ಅನಿವಾರ್ಯ ಎಂದು. ಅದರಲ್ಲೊಂದು, ಸದಾ ಹಸಿದವನಾಗಿರುವುದು ಇದು (ಸ್ವಾಲಿಹ್)  ಉತ್ತಮರ ಗುಣವಾಗುತ್ತದೆ ಎರಡು, ಸ್ಥಿರವಾದ ಜಾಗವನ್ನು ಆಯ್ಕೆ ಮಾಡದಿರುವುದು. ಇದು ( ಮುತವಕ್ಕಿಲ್)  ಸರ್ವವನ್ನೂ ಅಲ್ಲಾಹನ ಮೇಲೆ ಭಾರ ಅರ್ಪಿಸುವವರ ಲಕ್ಷಣ. ಮೂರು, ರಾತ್ರಿಯಲ್ಲಿ ಕೆಲಹೊತ್ತು ಮಾತ್ರ ನಿದ್ದೆ ಮಾಡುವವರು. ಇದು (ಮುಹಿಬ್ಬ್) ದೇವ ಪ್ರೀಯರ ಸ್ವಭಾವ ಗುಣವಾಗಿದೆ. ನಾಲ್ಕು, ( ಮೀರಾಸ್) ಇದು ಉತ್ತರ ದಾಹಿತ್ವ ಇಲ್ಲದಿರುವುದು. ಇದು ತ್ಯಾಗಿಗಳ ನಡೆಯಾಗಿದೆ.ಐದು, ಎಷ್ಟೇ ದೂರಮಾಡಿದರೂ ಸ್ನೇಹಿತನನ್ನು ಕಳದು ಕೊಳ್ಳದಿರುವುದು. ಇದು ( ಮುರೀದ್)ಪರಮ ಭಕ್ತನ ಗುಣ. ಆರು, ಅತ್ಯಂತ ಕೆಳ ಸ್ಥಾನವನ್ನು ತೃಪ್ತಿಯಿಂದ ಸ್ವೀಕರಿಸುವುದು.ಇದು ವಿನಯವಂತರ ಶೀಲ. ಏಳು , ಒಂದು ಜಾಗ ಸರಿ ಹೋಗದಿದ್ದರೆ ಬೇರೆ ಕಡೆಗೆ ತೆರಳುವುದು ಇದು ತೃಪ್ತ ಜನರ ಸ್ವಭಾವ. ಎಂಟು, ಹೊಡೆದು ಅಟ್ಟಿದರೂ ನಂತರ ಒಂದು ತುಂಡು ರೊಟ್ಟಿ ತೋರಿಸಿದಾಗ ಎಲ್ಲಾ ಮರೆತು  ಹಿಂತಿರುಗುವುದು. ಇದು ಭಯ ಇರುವವರ ನಡವಳಿಕೆ.  ಒಂಬತ್ತು  ಊಟಕ್ಕೆ ಬಂದರೆ ದೂರದಲ್ಲಿ ಕೂರುವುದು.ಇದು ಬಡವರ ಸ್ವಭಾವ. ಹತ್ತು,  ಬೇಸತ್ತು ಹೋದರೆ ತಿರುಗಿ ನೋಡದೆ ಇರುವುದು. ಇದು ಕಾವಲುಗಾರರ ಗುಣವಾಗಿರುತ್ತದೆ.
ತತ್ವಗಳು, ಗುಣಪಾಠಗಳು ಜಗತ್ತಿನಲ್ಲಿರುವ ಎಲ್ಲಾ ವಸ್ತುವಿನಲ್ಲಿರುತ್ತದೆ. ಆದರೆ ನಾವು ತಿಳಿದೋ ತಿಳಿಯದೆಯೋ ಅವುಗಳನ್ನೆಲ್ಲ ಕಡೆಗಣಿಸುವುದುಂಟು. ಸತ್ವವಿಲ್ಲದ ಯಾವುದೇ ವಸ್ತುವನ್ನು ಅಲ್ಲಾಹನು ಸೃಷ್ಟಿ ಮಾಡಿಯೇ ಇಲ್ಲ. ಉತ್ತಮರು, ಯೋಗ್ಯಯರು, ಮಹಾನುಭಾವರು, ಪ್ರತಿಯೊಂದರಲ್ಲೂ ಅಲ್ಲಾಹನ ದೃಷ್ಟಾಂತವನ್ನು ಕಾಣುತ್ತಾರೆ. ಸತ್ಯವನ್ನು ಕಾಣಲು ಎಲ್ಲಾ ವಸ್ತುವಿನಲ್ಲೂ ಆಧಾರಗಳಿವೆ. ಅದು ಮಾನವ ಬದುಕಿನ ವಿಜಯಕ್ಕೆ ಹೇತುವಾಗುತ್ತದೆ.

ಅಹಂ ಅರಿಯದ ಹೆಮ್ಮೆಯ ಉಸ್ತಾದ್


"ಚೆರುಶ್ಶೇರಿ’ ಎಂಬ ಆ ಪುಟ್ಟ ಊರು ಇಂದು ಎಲ್ಲರ ಹೃದಯದಲ್ಲಿ ಚಿರಪ್ರತಿಷ್ಟೆಗೊಂಡಿದೆ. ಝೈನುದ್ದೀನ್ ಮುಸ್ಲಿಯಾರ್  ಎಂಬ ಝೈನುಲ್ ಉಲಮಾರೊಂದಿಗೆ ಥಳಕು ಹಾಕಿ ಕೊಂಡ ಕಾರಣಕ್ಕಾಗಿ ಇಂದು ಆ ಊರನ್ನೇ ಎಲ್ಲರೂ ಮೆಲುಕು ಹಾಕುವಂತಾಗಿದೆ.ಚೆರುಶ್ಶೇರಿ ಉಸ್ತಾದರೆಂಬ ದಿವ್ಯ ಚೇತನಕ್ಕೆ ಜನುಮ ಕೊಟ್ಟ ಕಾರಣಕ್ಕಾಗಿ ಜಗತ್ತಿನ ವಿವಿಧ ಭಾಗಗಳಿಂದ ಚೆನ್ನುಡಿಗಳ ಮಹಾ ಪೂರವೇ ಹರಿದು ಬರುತ್ತಿದೆ ಆ ಊರಿಗೆ.
ಹೌದು, ನಮ್ಮೆಲ್ಲರ ಹೆಮ್ಮೆಯಾಗಿದ್ದ ಹಮ್ಮು, ಬಿಮ್ಮಿಲ್ಲದ ಶೈಖುನಾ ಚೆರುಶ್ಶೇರಿ ಉಸ್ತಾದರು ನಮ್ಮಿಂದ ಅಗಲಿ ಅಲ್ಲಾಹನ ಲಿಖಾನೆಡಗೆ ನಡೆದೇ ಬಿಟ್ಟರು. ಆದರೆ, ಅವರು ನಮ್ಮಡೆಯಲ್ಲಿ ಜೀವಂತವಾಗಿಯೇ ಉಳಿಯಲಿದ್ದಾರೆ.ಮುಸ್ಲಿಂ ಜಗತ್ತಿನ ಅಮರ ಸಾಮ್ರಾಟ ಶೈಖುನಾ ಶಂಸುಲ್ ಉಲಮಾ ಇಂದಿನ ಜಮಾನದ ನವ ಪೀಳಿಗೆಯಲ್ಲೂ ಯಾವ ರೀತಿ ಪ್ರಸ್ತುತ ಗೊಂಡಿದ್ದಾರೋ ಅದೇ ತೆರನಾಗಿ ಅವರ ಉತ್ತರಾಧಿಕಾರಿಯಾಗಿ ಎರಡು ದಶಕಗಳ ಕಾರ್ಯ ನಿರ್ವಹಿಸಿದ ಚೆರುಶ್ಶೇರಿ ಉಸ್ತಾದರೂ ಜಗತ್ತಿಗೆ ಆದರ್ಶಪ್ರಾಯರಾಗಿರುತ್ತಾರೆ ಎಂಬುದು ನೆನಪಿಡಬೇಕಾದ ಅಂಶ!
*****
ಚೆರುಶ್ಶೇರಿ ಉಸ್ತಾದರ ವಿಯೋಗದಿಂದ ತೆರವಾದ ಸ್ಥಾನಕ್ಕೆ ಇದೀಗ ಖ್ಯಾತ  ವಿದ್ವಾಂಸರೂ ,  ಚಿಂತಕರೂ, ಬಹು ಭಾಷ ಸಾಹಿತಿಯೂ ಆಗಿರುವ ಶೈಖುನಾ ಪ್ರೊ ಆಲಿಕುಟ್ಟಿ ಉಸ್ತಾದ್ ಅವರನ್ನು ’ಸಮಸ್ತ’ ದ ಹಿರಿಯ ವಿದ್ವಾಂಸರು  ಆಯ್ಕೆಮಾಡಿದ್ದಾರೆ. ಪಟ್ಟಿಕ್ಕಾಡ್ ಜಾಮಿಆಃ ನೂರಿಯಾ ಪ್ರಾಂಶುಪಾಲರು, ಹಲವು ಸಂಘ-ಸಂಸ್ಥೆಗಳ ಮಾರ್ಗದರ್ಶಿಯೂ, ಹಲವು ಪತ್ರಿಕೆಗಳ ಸಂಪಾದಕರೂ ಆಗಿರುವ ಆಲಿಕುಟ್ಟಿ ಉಸ್ತಾದ್, ಉತ್ತಮ ಬರಹಗಾರರು, ಲೇಖಕರೂ ಹಾಗೂ ಸಮರ್ಥ ಸಂಘಟಕರೂ ಆಗಿದ್ದಾರೆ.
ಉಸ್ತಾದರ ನಾಯಕತ್ವದಡಿ ’ಸಮಸ್ತ’ದ ಸಂದೇಶ ಇನ್ನಷ್ಟು ಪ್ರದೇಶಗಳಿಗೆ ವ್ಯಾಪಿಸಿ ಎಲ್ಲೆಡೆ ಧಾರ್ಮಿಕ ಚೈತನ್ಯ ಪ್ರಸರಿಸಲಿ....
*****
ಕೇರಳದ ಆಲಪುಯದಲ್ಲಿ ಜರಗಿದ ’ಸಮಸ್ತ-೯೦’ರ ಐತಿಹಾಸಿಕ ಸಮ್ಮೇಳನವೇ ಆ ಸಂಘಟನೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ. ದೇಶದ ವಿವಿಧ ರಾಜ್ಯಗಳಿಂದ ’ಸಮಸ್ತ’ದ ಕರೆಗೆ ಓಗೊಟ್ಟು ಅದೆಷ್ಟೋ ಲಕ್ಷಾಂತರ ಲೆಕ್ಕದಲ್ಲಿ ಬಂದು ಸೇರಿದ ಸುನ್ನಿಗಳು ಸಾಕ್ಷಾತ್  ಹಾಲ್ಗಡಲನ್ನೇ ನಿರ್ಮಿಸಿ ಧನ್ಯರೆನಿಸಿ ಕೊಂಡರು. ಈ ’ಸಮಸ್ತ’ದ ಅಧೀನದಲ್ಲಿ ವಿದ್ಯಾರ್ಥಿ-ಯುವ ಜನರಲ್ಲಿ ಧಾರ್ಮಿಕ,ನೈತಿಕ ಪ್ರಜ್ಞೆ ಹಾಗೂ ಸೇವಾ ಮನೋಭಾವ ಮೂಡಿಸಿ ಅವರನ್ನು  ನಾಡಿನ ಸತ್ಪ್ರಜೆಗಳನ್ನಾಗಿ ರೂಪಿಸುವ ಸಂಘಟನೆಯಾಗಿದೆ ಎಸ್ಕೆಎಸ್ಸೆಸ್ಸೆಫ್. ಪಾಣಕ್ಕಾಡ್ ಸಾದಾತ್ ಗಳ ಸಾರಥ್ಯ ದಲ್ಲಿ ಕೇರಳದಲ್ಲಿ ಬಲಿಷ್ಟವಾಗಿರುವ ಈ ಎಸ್ಕೆಎಸ್ದೆಸ್ಸಫ್,  ನಮ್ಮ  ಕರ್ನಾಟಕದ ಕೆಲ ಜಿಲ್ಲೆಗಳಲ್ಲೂ ಸಕ್ರಿಯವಾಗಿದ್ದು  ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡಿದೆ.   ಇದೀಗ ರಾಜ್ಯದ್ಯಂತ ಸಂಘಟನೆಯನ್ನು ವಿಸ್ತರಿಸಿ ಬಲಿಷ್ಟವಾಗಿ ಕಟ್ಟುವ ಧ್ಯೇಯದೊಂದಿಗೆ ನೂತನ ರಾಜ್ಯ ಘಟಕ ಕೇಂದ್ರೀಯ ನಾಯಕರ ಉಪಸ್ಥಿತಿಯಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಹಾಗೆನೋಡಿದರೆ, ಈ ಹಿಂದೆ ಪಾಣಕ್ಕಾಡ್ ಸಾದಿಕಲಿ ಶಿಹಾಬ್ ತಂಙಳ್ ಕೇಂದ್ರೀಯ ಅಧ್ಯಕ್ಷರಾಗಿದ್ದಾಗ ಮರ್ಹೂಂ ಕೋಟ ಉಸ್ತಾದ್ ರವರ ಕಾಲದಲ್ಲಿ ರಾಜ್ಯ ಘಟಕ ರಚಿಸಿ ಹಲವು ಜನಪರ ಕಾರ್ಯಕ್ರಮಗಳನ್ನು ಸಂಘಟಿಸಿ ಗಮನ ಸೆಳೆದಿತ್ತು. ಆದರೆ ಇಂದಿನಂತೆ ಸಾಂಘಿಕ ವ್ಯವಸ್ಥೆ ಅಂದಿರದ ಕಾರಣ ಅಂದು ಅದು ಇಡೀ ರಾಜ್ಯ ವ್ಯಾಪಿ ತಲುಪಿರಲಿಲ್ಲವೇನೋ. ಆದರೆ ಇದೀಗ ವ್ಯವಸ್ಥಿತ ಸಾಂಘಿಕ ಶಿಸ್ತಿನೊಂದಿಗೆ ಉತ್ಸಾಹಿ ಯುವಕರನ್ನೊಳಗೊಂಡ ಪ್ರತಿಭಾವಂತ ತಂಡವನ್ನೇ ರಚಿಸಲಾಗಿದ್ದು ಈ ನೂತನ  ರಾಜ್ಯ ಘಟಕವು ರಾಜ್ಯವ್ಯಾಪಿ ಸಂಘಟನೆಯನ್ನು ವಿಸ್ತರಿಸಿ ಕೆಡುಕು ಮುಕ್ತ ಒಳಿತಿನ  ಸಮಾಜ ನಿರ್ಮಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸೋಣ.

ಚೆರುಶ್ಶೇರಿ ಉಸ್ತಾದರ ವಿದಾಯ ಭಾಷಣದ ಮುಖ್ಯಾಂಶಗಳು

ಮಂಗಳೂರಿನಲ್ಲಿ  ನಡೆದ ಸಮಸ್ತ-೯೦ ಉದ್ಘಾಟನಾ ಸಮಾರಂಭದಲ್ಲಿ ತನ್ನ ವಿದಾಯ ಭಾಷಣ ಮಾಡಿದ ಶೈಖುನಾ ಚೆರುಶ್ಶೇರಿ ಉಸ್ತಾದ್


  •  (ಪ್ರವಾದಿ ಸ.ಅ.ರವರ ಹಜ್ಜತುಲ್ ವಿದಾಹ್ ಭಾಷಣವನ್ನು ಉಲ್ಲೇಖಿಸುತ್ತಾ...) ನನಗೂ ಹೇಳಲಿಕ್ಕಿರುವುದು, ಎಲ್ಲರೂ ಅಲ್ಲಾಹನ ಭಯಭಕ್ತಿ(ತಖ್ವಾ)ಯಿಂದ ಬದುಕಬೇಕು.
  •  ಪ್ರವಾದಿ ಸ.ಅ.ರವರ ಸುನ್ನತನ್ನು ಸುರಕ್ಷಿತವಾಗಿ ಕಾಪಾಡುವುದಕ್ಕಾಗಿಯೇ ವರಕ್ಕಲ್ ಮುಲ್ಲಕೋಯ ತಂಙಳರಿಂದ ಹಿಡಿದು ಕಳೆದು ಹೋದ ಸಮಸ್ತದ ಎಲ್ಲಾ ಮಹಾನುಭಾವರು ಶ್ರಮಪಟ್ಟಿರುವುದು... ಅವರು ತೋರಿಸಿಕೊಟ್ಟ ಹಾದಿಯಲ್ಲೇ ಸಾಗಿ ನಾವೂ ಕೂಡ ಸುನ್ನತ್ ಜಮಾಅತ್ತನ್ನು ಇನ್ನಷ್ಟು ಭದ್ರಪಡಿಸಲು ಪರಿಶ್ರಮಿಸಬೇಕಿದೆ.
  •  ಒಂದು ವೇಲೆ ನಮ್ಮ ಪೂರ್ವಿಕರು ಸಮಸ್ತವೆಂಬ ಆಧ್ಯಾತ್ಮಿಕ ಸಂಘಟನೆಯನ್ನು ಸ್ಥಾಪಿಸದೇ ಹೋಗಿದ್ದರೆ ಇಂದು ನಾವು ಒಳಿತು ಯಾವುದು? ಕೆಡುಕು ಯಾವುದು? ಎಂದು ತಿಳಿಯದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.
  •  ಸುನ್ನತ್ ಜಮಾಅತ್ ಮತ್ತು ಸತ್ಕರ್ಮಗಳು ಸಂರಕ್ಷಿಸುವುದೇ ಸಮಸ್ತದ ಉದ್ದೇಶ.

ದೀನಿಗಾಗಿ ಜೀವ ತೆತ್ತ ಶೈಖ್ ಜೀಲಾನಿ

ಔಲಿಯಾಗಳ ಅಧಿಪತಿಯಾಗಿ, ಪವಾಡ ಪುರುಷರಾಗಿ, ಧಾರ್ಮಿಕ ಚೈತನ್ಯತೆಯ ಪುನರುದ್ಧಾರಕರಾಗಿ ಇತಿಹಾಸ ನಿರ್ಮಿಸಿದ ಶೈಖ್ ಮುಹ್ಯದ್ಧೀನ್ ಅಬ್ದುಲ್ ಖಾದರ್ ಜೀಲಾನಿ(ರ)ರವರನ್ನು ವಿಶ್ವ ಮುಸ್ಲಿಮರು ಸ್ಮರಿಸುವ, ಅವರ ವಫಾತ್ ಆದ ದಿನ ರಬಿವುಲ್ ಆಖಿರ್ ತಿಂಗಳ ಹನ್ನೊಂದು ಮತ್ತೊಮ್ಮೆ ಬಂದು ನಿಂತಿದೆ.
ಹಿಜಿರಿ ೪೭೦ ರಂಝಾನ್ ತಿಂಗಳಲ್ಲಿ ಅರೇಬಿಯಾದ ಇರಾಕಿನ ಜಿಲಾನಿ ಎಂಬಲ್ಲಿ ಜನಿಸಿದ ಶೈಖ್‌ರವರ ಕೌಟಂಬಿಕ ಹಿನ್ನಲೆಯೇ ಅತ್ಯಂತ ಶ್ರೇಷ್ಠವಾದದ್ದು. ತಂದೆ ಧರ್ಮ ಭಕ್ತರಾದ ಅಬೂ ಸ್ವಾಲಿಹ್‌ರವರ ಕುಂಟುಂಬ ಪರಂಪರೆ ಪ್ರವಾದಿ(ಸಲ್ಲಲ್ಲಾಹು ಅಲೈವಸಲ್ಲಂ)ರವರ ಪೌತ್ರ್ರ ಹಸನ್(ರ)ರವರಿಗೆ ನಿಕಟವಾಗಿ ಸೇರುತ್ತದೆ. ಇನ್ನು ಅವರ ಮಾತೆ ಫಾತಿಮಾರ ಪರಂಪರೆ ಪ್ರವಾದಿಯ ಮತ್ತೊರ್ವ ಪೌತ್ರ ಹುಸೈನ್(ರ)ರವರಿಗೆ ಸೇರುತ್ತದೆ. ಕರೆಕ್ಟಾಗಿ ಹೇಳಬೇಕೆಂದರೆ ಪ್ರವಾದಿಯ ವಂಶ ಪರಂಪರೆಯ ಹತ್ತನೇ ಪುತ್ರ ಇವರ ತಂದೆಯಾದರೆ ಹದಿನೈದನೇ ಪುತ್ರಿಯಾಗಿದ್ದಾರೆ ಇವರ ಮಾತೆ.ಪವಿತ್ರ ಶ್ರೇಷ್ಠ ದಂಪತಿಗಳ ಪುತ್ರನಾಗಿ ಜನ್ಮತಾಳಿದ ಶೈಖ್ ಜೀಲಾನಿಯವರ ಜನನ ಒಂದು ರಂಝಾನ್ ತಿಂಗಳ ಮೊದಲ ದಿನವಾಗಿತ್ತು. ಜನಿಸಿದ ದಿನದಿಂದ ರಂಝಾನ್ ಮುಗಿಯುವವರೆಗೂ ಆ ಹಸುಗೂಸು ಹಗಲು ಸಮಯದಲ್ಲಿ ತಾಯಿಯ ಮೊಲೆಹಾಲು ಮುಟ್ಟಲಿಲ್ಲ.
ಅಂದರೆ ಮಗುವಾಗಿದ್ದಾಗಲೇ ಉಪವಾಸ ಆಚರಿಸಿದ ಅದ್ಬುತ ಶಿಶುವಾಗಿತ್ತು.

ಜಗತ್ತನ್ನೇ ಬದಲಾಯಿಸಿದ ಮುಸ್ಲಿಂ ಸಂಶೋಧನೆಗಳು

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನವು ನಾಗಾಲೋಟದಲ್ಲಿ ಮುನ್ನುಗುತ್ತಿರುವಾಗ ಈ ಎಲ್ಲಾ ಬದಲಾವಣೆಗಳಲ್ಲಿ ಮುಸ್ಲಿಂ ಜಗತ್ತಿನ ಪಾಲುದಾರಿಕೆಯು ಬಹಳ ಪ್ರಮುಖ ಪಾತ್ರವಹಿಸಿದೆ ಎಂಬುವುದನ್ನು ಈ ಜಗತ್ತಿನ ಬಹುತೇಕ ಜನರು ತಿಳಿಯದೇ ಹೋಗಿದ್ದಾರೆ.
ಉದ್ದೇಶಪೂರ್ವಕವೋ, ಅಚಾತುರ‍್ಯದಿಂದಲೋ ಇಸ್ಲಾಮಿನ ಇತಿಹಾಸ ಪುಟಗಳಿಂದ ಮರೆಯಾಗಿ ಹೋಗಿರುವ ಕೆಲವೊಂದು ಮುಸ್ಲಿಂ ಸಂಶೋಧನೆಗಳು ಬೆಳಕಿಗೆ ತರುವ ಪ್ರಯತ್ನ ಇದಾಗಿದೆ. ನಾವು ಪ್ರತಿ ನಿತ್ಯ ಸೇವಿಸುವ ಕಾಫಿಯಿಂದ ಹಿಡಿದು, ಲಕ್ಷಾಂತರ ಜನರಿಗೆ ಅತ್ಯುನ್ನತ ಅವಿದಾಭ್ಯಾಸವನ್ನು ಧಾರೆ ಎರೆಯುವ ವಿಶ್ವವಿದ್ಯಾನಿಲಯವೆಂಬ ಶೈಕ್ಷಣಿಕ ವ್ಯವಸ್ಥೆಯವರೆಗೂ ಜಗತ್ತಿನ ಬದಲಾವಣೆಯಲ್ಲಿ  ಪ್ರಮುಖ ಪಾತ್ರವಹಿಸಿದ ವಿವಿಧ ರಂಗಗಳಲ್ಲಿ ಅರಬ್ಬನ್ನರ ಸಾಧನೆಯು ಪ್ರಶಂಸನೀಯವಾಗಿದೆ. ಅವುಗಳ ಕುರಿತ ವಿವರ ಇಲ್ಲಿದೆ....

ಮಧುರ ದಾಂಪತ್ಯದ ಮೊದಲ ರಾತ್ರಿ

ಹತ್ತು ಹಲವು ಕನಸುಗಳನ್ನು ಹೊತ್ತುಕೊಂಡು, ಬದುಕಿನ ಅತ್ಯಂತ ಸಂತಸದ ಕ್ಷಣಕ್ಕೆ ಕಾಲಿರಿಸುವ ಶುಭ ಮುಹೂರ್ತವಾಗಿರುತ್ತದೆ ಪ್ರತಿಯೊಬ್ಬ ದಂಪತಿಗಳ ಸಾಲಿನ ಮೊದಲ ರಾತ್ರಿ. ಸಂಭ್ರಮ, ಸುಖ, ಸಮೃದ್ಧಿ ಸಮಾಲೋಚನೆಗಳ ಸಂಘರ್ಷ ಹೀಗೆ ವಿಭಿನ್ನ ಮುಖಗಳ ದಿಗ್ದರ್ಶನವೇ ಈ ವೈವಾಹಿಕ ಬದುಕಿನ ಫಸ್ಟ್ ನೈಟ್.
ಒಳಿತಿನಿಂದ ಕೂಡಿದ ಯಾವುದೇ ಕಾರ‍್ಯಗಳ ಪ್ರಾರಂಭವು ಅಲ್ಲಾಹನ ಸ್ಮರಣೆಯೊಂದಿಗೆ ಆಗಿರುವುದು ಮುಸ್ಲಿಂ ವಿಶ್ವಾಸಿಯ ಮಟ್ಟಿಗೆ ಅತ್ಯವಶ್ಯಕ. ಪ್ರಾರ್ಥನೆ, ಉದ್ದೇಶ ಸಾಪಲ್ಯದ ನಮಾಝ್ ಮೊದಲಾದವುಗಳು ಈ ಶುಭಕ್ಷಣದಲ್ಲಿ ನಡೆಸುವುದು ವೈವಾಹಿಕ ಬದುಕು ಪೂರ್ತಿ ಸುಖ ಸಮೃದ್ಧಿ, ಸಂತಸ, ಐಶ್ವರ್ಯ ಉಂಟುಮಾಡುವುದು.
ದಾಂಪತ್ಯ ಸಂಬಂಧ ಎಲ್ಲ ತೆರನಾದ ಭಿನ್ನತೆ, ಎಡರು ತೊಡರು, ಅಲುಗುಗಳಿಂದ ಮುಕ್ತವಾಗಿ ಯಾವುದೇ ಅಡೆತಡೆಗಳಿಲ್ಲದೆ ಬದುಕಿನ ಸಂಧ್ಯಾ ಕಾಲದ ವರೆಗೂ ಸುಖ, ಸೌಹಾರ್ದತೆಯೊಂದಿಗೆ ಹೆಚ್ಚು ಸುದೃಢವಾಗಿ ಭದ್ರವಾಗಿ ಸುಸೂತ್ರವಾಗಿ ಬರಕತ್ತು ನಿಹಮತ್ತುಗಳಿಂದ ಮುಂದುವರಿಯಲು ಸೃಷ್ಟಿಕರ್ತನಲ್ಲಿ ನಿಸ್ವಾರ್ಥ ಪ್ರಾರ್ಥನೆ ನಡೆಸಬೇಕು ಇಮಾಂ ಮಾಲಿಕ್(ರ) ರವರು ತಮ್ಮ ‘ಮುವತ್ತ್ತ’ ಎಂಬ ಗ್ರಂಥದಲ್ಲಿ ಈ ಬಗ್ಗೆ ವಿವರವಾಗಿ ಹೇಳಿದ್ದಾರೆ “ಅಲ್ಲಾಹನೇ ನನ್ನ ಸಂಗಾತಿಯಿಂದ ನನಗೂ ನನ್ನಿಂದ ನನ್ನ ಕುಟುಂಬಕ್ಕೂ ಬರಕತ್ತು ವರ್ಷಿಸು” ಎಂದು ಪ್ರಾರ್ಥಿಸಬೇಕು (ಬಿಗ್‌ಯಾ ೨೪೭)

ಆಧುನಿಕ ಮೀಡಿಯಾ ದುರ್ಬಳಕೆಯಾಗದಿರಲಿ


ಇಂದಿನ ದುನಿಯಾದಲ್ಲಿ ಎಂಥ ಮನಸ್ಥತಿಯ ಜನರಿದ್ದಾರೆ ನೋಡಿ, ಆಧುನಿಕ ತಾಂತ್ರಿಕ ಸೌಲಭ್ಯಗಳು ಹೆಚ್ಚಾದಂತೆ ಪ್ರಬುದ್ಧರಾಗಬೇಕಾದ ಮನುಜ ಮಾತ್ರ ತನ್ನ ಮನುಷ್ಯತ್ವವನ್ನೇ ಕಳಕೊಳ್ಳುವ ಮಟ್ಟಿಗೆ ಇಳಿದು ಬಿಟ್ಟಿದ್ದಾನೆ ಎಂದರೆ ಅದೆಂಥ ವ್ಯಂಗ್ಯ ಹೇಳಿ?
   ಆಧುನಿಕ ಜಗತ್ತಿನಲ್ಲಿ ಮನುಷ್ಯನ ಬದುಕಿನ ಭಾಗವಾಗಿ ಬಿಟ್ಟಿರುವ ಅಂತರ್ಜಾಲ ಸೌಲಭ್ಯ ಇದೆಯಲ್ಲ, ಅದನ್ನೇ ಮನುಷ್ಯ ತನ್ನ ಕೀಲು ಮಟ್ಟದ ತೆವಲು ತೀರಿಸವ ಕಿರಿಕ್ಕು ತಾಣವಾಗಿ ಉಪಯೋಗಿಸಿ ಆ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಮಟ್ಟಕ್ಕೆ ಇಳಿದು ಬಿಟ್ಟಿದ್ದಾನೆ.
ನಮ್ಮೆಡೆಯಲ್ಲಿ ಕೆಲವು ಜೀವಿಗಳಿವೆ. ಅವರ ಕೆಲಸವೇನೆಂದರೆ ಯಾರಿಗಾದರು ಕರೆ ಮಾಡುವುದು ಮತ್ತು ಅದನ್ನು ರೆಕಾರ್ಡ್ ಮಾಡಿ ಸಾಮಾಜಿಕ ತಾಣಗಳಲ್ಲಿ ಹಂಚುವುದು.  ಇದು ವಂಚನೆಯಲ್ಲವೇ? ಲಜ್ಜೆಗೆಟ್ಟ ಕೆಲಸ ಮಾಡಿ ಹೀರೋ ಆಗಲು ಹೊರಟ  ಪರಾಕ್ರಮಿಗಳೇ (ಡಿಂಗ) ನೀವು ಮಾಡುತ್ತಿರುವುದು ಹಸಿ ಮುನಾಫಿಕ್‌ಗಳ ಕೆಲಸವಾಗಿದೆ.

ನೈತಿಕ ಪ್ರೀತಿ ನಿರಂತರವಾಗಿರಲಿ


ಅದೇನೋ ಒಂಥರಾ ರೋಮಾಂಚನವೇ !
ಈ ಬದುಕಿನ ಪಯಣದಲ್ಲಿ ಎಡತಾಕುವ ಕೆಲವೊಂದು ವ್ಯಕ್ತಿಗಳ ಸಂಪರ್ಕ, ಒಡನಾಟ, ಗೆಳತನವಿದೆಯಲ್ಲ ಅದು ಬದುಕಿನೊಳು ಭದ್ರವಾಗಿ ಹೊಕ್ಕು ಬಿಟ್ಟು ಮನದಾಳ ಎಂದೆಂದೂ ಮೆಲುಕುವಂತೆ ಮಾಡಿಬಿಡುತ್ತದೆ.ಅದರಲ್ಲೂ ಗೆಳೆತನದ ಬೆಸುಗೆಯಲ್ಲಿ ಪ್ರೀತಿಯ ಭವ್ಯ ಬಾಂಧವ್ಯ ಕಟ್ಟಿಕೊಂಡು ಮನ ಪಟಲದಲ್ಲಿ ಏನೇ ಒಂಥರಾ ಸೆಳೆತ, ಮಿಡಿತ-ತುಡಿತಗಳು ಸೇರಿಕೊಂಡರೆ ಅದರ ರೋಮಾಂಚನವೇ ಬೇರೆ.
   ಹಾಗೆ ನೋಡಿದರೆ ಪ್ರೀತಿ ಎಂಬ ಪದಕ್ಕೆ ಅದೇನೋ ವಿಚಿತ್ರ ಮೋಡಿ ಇದೆ. ನೈತಿಕತೆಯ ಬೇಲಿ ದಾಟಿದ ಪ್ರೀತಿ, ಪ್ರಣಯದ ಕಥೆ ಪಕ್ಕಕ್ಕಿಡಿ. ನಿಷ್ಕಳಂಕ, ನಿರ್ಮಲ ಸ್ನೇಹ ಇದೆಯಲ್ಲಾ, ಅದು ಬದುಕಿನೊಳು ಬೆಸೆದುಕೊಂಡು ಗೆಳತನ ಎಂಬ ಸುಂದರ ಅಂಗಿ ತೊಡಿಸಿ ಬಾಳಿನುದ್ದಕ್ಕೂ ಜೊತೆ ಸೇರಿಸಿ ಎದುರಾಗುವ ಎಲ್ಲಾ ಸಿಹಿ -ಕಹಿ, ಅಳು -ನಗುವಿನಲ್ಲಿ ಭಾಗಿಯಾಗಿ ಬಿಟ್ಟರೆ ತಳುಕು-ಮೆಳುಕಿನ ಆ ಅಟ್ರಾಕ್ಷನ್ ಬರಹಕ್ಕೆ ನಿಲುಕದ್ದು.

ಮನ ತಣಿಸಿದ ಮಾನವ ಸರಪಳಿ

ದೇಶದ ಗಣರಾಜ್ಯೋತ್ಸವದ ಅಂಗವಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧಿಕೃತ ವಿದ್ಯಾ ಸಂಘಟನೆಯಾದ ಎಸ್ಕೆಎಸ್ಸೆಸ್ಸೆಫ್ ’ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಳೆದ ಒಂಬತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಮಾನವ ಸರಪಳಿ ಕಾರ್ಯಕ್ರಮವು ಈ ಬಾರಿಯು  ದ.ಕ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿಯ ವತಿಯಿಂದ  ಮಿತ್ತಬೈಲಿನಲ್ಲಿ ಬಹಳ ಅದ್ದೂರಿಯಿಂದ ನಡೆಯಿತು.
ಕರ್ನಾಟಕದ ಅಗ್ರಗಣ್ಯ ಉಲಮಾಗಳು, ಜನಪ್ರತಿನಿಧಿಗಳು ಸಮಾಜಿಕ ನೇತಾರರು, ವಿದ್ತಯಾರ್ಥಿಗಳು ಸೇರಿದಂತೆ ಸಾವಿರಾರು ಜನರ ಸಮಕ್ಷಮದಲ್ಲಿ ನಡೆದ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮವು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ, ರಾಜ್ಯ ಅರಣ್ಯ ಸಚಿವರೂ ಆಗಿರುವ
ಶ್ರೀ.ಬಿ ರಮಾನಾಥ ರೈ ಮಾತನಾಡಿ, ’ಮಾನವ ಸರಪಳಿಯು ಇಡೀ ದೇಶಕ್ಕೆ ಮಾದರಿ ಕಾರ್ಯಕ್ರಮವಾಗಿದ್ದು, ದಾರಿತಪ್ಪುತ್ತಿರುವ ಯುವ ಜನತೆಯಲ್ಲಿ ದೇಶಪ್ರೇಮ ತುಂಬುವಲ್ಲಿ ಯಶಸ್ವಿಯಾಗಿದೆ. ಅಲ್ಪಸಂಖ್ಯಾತರ ಕೋಮುವಾದವು ಅವರ ಸಮುದಾಯಕ್ಕೆ ಕೇಡಾದರೆ ಬಹುಸಂಖ್ಯಾತರ ಕೋಮುವಾದ ಇಡೀ ದೇಶಕ್ಕೆ ಅಪಾಯವಾಗಿದೆ ಎಂದು ಅಭಿಪ್ರಯಾಪಟ್ಟರು..

ಉಗ್ರವಾದ, ಭಯೋತ್ಪಾಧನೆ ಇಸ್ಲಾಮಿಗೆ ಅನ್ಯ: ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್

’ಸಮಸ್ತ 90’ ಪಾಣಕ್ಕಾಡ್ ತಂಙಳ್‌ರ ಉದ್ಘಾಟನಾ ಭಾಷಣದ ಸಂಕ್ಷಿಪ್ತ ರೂಪ.
ನಮ್ಮ ಪರಿಸರದಲ್ಲಿ ಧರ್ಮ ಪ್ರಜ್ಞೆ, ಶೈಕ್ಷಣಿಕ ಜಾಗ್ರತಿಯ ಮೂಲಕ ಉತ್ತಮ ಸಮಾಜವನ್ನು ಕಟ್ಟಿ ಶ್ರೇಷ್ಟ ಸಮಾಜವಾಗಿ ಗುರುತಿಸುವಂತೆ ಮಾಡಿದ, ಕೇರಳದಲ್ಲಿ ಜನುಮ ತಾಳಿದ ’ಸಮಸ್ತ’ ಸಂಘಟನೆ ಇಂದು ದೇಶದ ವಿವಿಧ ಕಡೆ, ಕಡಲು ದಾಟಿ ವಿದೇಶ ರಾಷ್ಟ್ರಗಳಿಗೂ ವಿಸ್ತರಿಸಿಕೊಂಡು ಬಲಿಷ್ಟವಾಗಿ ಬೆಳೆದು ನಿಂತಿದೆ.
’ಆದರ್ಶ ಪರಿಶುದ್ಧತೆಯ ತೊಂಬತ್ತು ವರ್ಷ’ ಎಂಬ ಧ್ಯೇಯ ವಾಕ್ಯದೊಂದಿಗೆ ’ಸಮಸ್ತ’ ಅದರ ದೀರ್ಘ ಪರಂಪರೆ ಹಾಗೂ ಅಭಿಮಾನದ ಇತಿಹಾಸವನ್ನು ನೆನಪಿಸುತ್ತಾ ಪ್ರಚಾರ ಕಾರ್ಯವನ್ನು ಇನ್ನಷ್ಟು ಬಲಪಡಿಸುವ ಸುಸಂದರ್ಭವಿದು.
ಸಂದೇಶ ಪ್ರಚಾರದ ಹಾದಿಯಲ್ಲಿ  ಕೇರಳವನ್ನು ದಾಟಿ ಬಂದು ಆದರ್ಶ ಕ್ಷೇತ್ರದಲ್ಲಿ ಒಗ್ಗೂಡಿ ಇಲ್ಲಿ ಬಂದು ಸೇರಿದ ಈ ಮಹಾ ಜನ ಸಾಗರ, ಉಲಮಾ- ಉಮರಾಗಳು ಎಂದೆಂದಿಗೂ ಆ ಆದರ್ಶ ಸಂರಕ್ಷಣೆಯ ಪ್ರತಿಜ್ಞೆ ಮಾಡಬೇಕಿದೆ.
’ಸಮಸ್ತ’ದ ಸಂದೇಶ ಅಥವಾ ಪವಿತ್ರ ದೀನುಲ್ ಇಸ್ಲಾಮಿನ ತಿರುಳಾದ ಅಹ್ಲ್ ಸುನ್ನತ್ ವಲ್ ಜಮಾಹತ್ ನ ಸಂದೇಶವನ್ನು ಗ್ರಾಮ, ಗ್ರಾಮಗಳಿಗೆ ತಲುಪಿಸುವುದು ನಮ್ಮ ಇಹಪರ ಯಶಸ್ವಿಗೆ ಕಾರಣವಾಗುವ ಸತ್ಕರ್ಮವಾಗಿದೆ ಅಲ್ಲಾಹನು ಸ್ವೀಕರಿಸಲಿ.
ಇದು ಪ್ರವಾದಿ (ಸ.ಅ.)ರವರ ಜನುಮ ದಿನ ಕೊಂಡಾಡುವ ತಿಂಗಳಾಗಿದ್ದು, ಅವರ ಸತ್ಯ ಶಾಂತಿ, ಪ್ರೀತಿಯ ಸಂದೇಶವನ್ನು ಎಲ್ಲೆಡೆ ಪ್ರಚಾರ ಪಡಿಸಬೇಕು. ಐಸಿಸ್‌ನಂತಹ ಮನುಷ್ಯ ವಿರೋಧಿ ಸಂಘಟನೆಗಳಿಗೆ ಇಸ್ಲಾಮಿನಲ್ಲಿ ಸ್ಥಾನವಿಲ್ಲ, ಉಗ್ರವಾದ, ಭಯೋತ್ಪಾದನೆಗಳು ಇಸ್ಲಾಮಿಗೆ ವಿರುದ್ಧವಾಗಿದೆ. ಶಾಂತಿ, ಪ್ರೀತಿ, ಮಾನವೀಯತೆಯೇ ಇಸ್ಲಾಮಿನ ಮೂಲವಾಗಿದೆ.
ದೇಶದ ಜಾತ್ಯಾತೀತ ಪರಂಪರೆಯನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದ್ದು, ಸಹಿಷ್ಣುತೆಗೆ ಭಂಗ ತರುವ ಕೋಮುವಾದ, ಉಗ್ರವಾದಗಳನ್ನು ಯಾರೇ ನಡೆಸಿದರೂ ಅದು ಖಂಡನೀಯವಾಗಿದೆ.
ದೇಶದ ಕೆಲವೆಡೆ ಅಲ್ಪಸಂಖ್ಯಾತರ ಮೇಲೆ ನಿರಂತರ ಆಕ್ರಮಣ, ದಬ್ಬಾಳಿಕೆಗಳು ನಡೆಯುತ್ತಿದ್ದು ಇದು ಖಂಡನೀಯವಾಗಿದೆ. ಒಬ್ಬ ವ್ಯಕ್ತಿ ಏನು ತಿನ್ನಬೇಕು, ಏನು ಮಾತನಾಡಬೇಕು, ಯಾವ ಧರ್ಮದಲ್ಲಿ ನಂಬಿಕೆ ಇರಿಸಬೇಕು ಎಂಬುದನ್ನು ತೀರ್ಮಾನಿಸುವ ಹಕ್ಕು ಬೇರೊಬ್ಬರಿಗಿಲ್ಲ. ಪ್ರತಿಯೊಬ್ಬರೂ ದೇಶದ ಜಾತ್ಯಾತೀತ ಸಂವಿಧಾನದ ಮೇಲೆ ನಂಬಿಕೆ ಇರಿಸಿ ಬಲಿಷ್ಠ ರಾಷ್ಟ್ರ ಕಟ್ಟುವಲ್ಲಿ ತೊಡಗಿಸಿಕೊಳ್ಳಬೇಕು.
ಜಗತ್ತು ಇರುಳಿನಿಂದ ಕೂಡಿದ್ದ ಅಂಧಾಕಾರದ ಯುಗದಲ್ಲಿ ಅಜ್ಞಾನದ ಕಂಬಳಿ ಹೊತ್ತು ಮಲಗಿದ್ದ ಸಮಾಜವೊಂದಕ್ಕೆ ಏಕ ದೈವ ವಿಶ್ವಾಸದ ಸುಜ್ಞಾನದ ಬೆಳಕಿನೊಂದಿಗೆ ಪುಣ್ಯ ರಸೂಲ್ (ಸ.ಅ) ಆಗಮನವಾಯಿತು.
ಜಾಗತಿಕ ಇತಿಹಾಸದಲ್ಲಿ ಅಜ್ಞಾನ, ಕಂದಾಚಾರದ ವಿರುದ್ಧ ನಡೆದ ಅತೀ ದೊಡ್ಡ ಕ್ರಾಂತಿಯನ್ನಾಗಿದೆ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ)ರವರು ಇಲ್ಲಿ ಮಾಡಿದ್ದು. ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಆ ಸುಜ್ಞಾನ ಕ್ರಾಂತಿಯ ಫಲವಾಗಿ ಹಾಗೂ ಅದೇ ಕ್ರಾಂತಿಯ ಮುಂದುವರಿಕೆಯಾಗಿ ವಿಶ್ವದಾದ್ಯಂತ ಇಸ್ಲಾಮಿನ ಪ್ರಕಾಶ  ಪ್ರಸರಿಸಕೊಂಡಿತು.
೧೯೨೬ ರಲ್ಲಿ ’ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ’ ’ಅಸ್ತಿತ್ವಕ್ಕೆ ಬಂದದ್ದು ಅದೇ ಇಸ್ಲಾಮಿನ ಮಹತ್ತರವಾದ ಮೌಲ್ಯಗಳನ್ನು ನೈಜ ರೂಪದಲ್ಲಿ  ಮುಂದಿನ ತಲೆಮಾರಿಗೆ ಪ್ರಚಾರ ಪಡಿಸಿ ಈ ಧರ್ಮ ಕ್ರಾಂತಿಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವುದು ಎಂಬ ಬಹುದೊಡ್ಡ ಹೊಣೆಗಾರಿಕೆಯೊಂದಿಗೆಯಾಗಿದೆ. ವಿದೇಶಿ ಶಕ್ತಿಗಳೊಂದಿಗೆ ದೇಶಕ್ಕಾಗಿ ದೀರ್ಘಕಾಲ ನಡೆಸಿದ ಹೋರಾಟದಿಂದಾಗಿ ಉಂಟಾದ ಆರ್ಥಿಕ, ಸಾಮಾಜಿಕ, ಹಿಂದುಳುವಿಕೆ ಹಾಗೂ ಮತ್ತಿತರ ಸಮಸ್ಯಗಳಿಂದ ದುರ್ಬಲವಾಗಿ ಜರ್ಝರಿತಕೊಂಡಿದ್ದ ಒಂದು ಸಮಾಜದಲ್ಲಾಗಿತ್ತು ’ಸಮಸ್ತ’ದ ಉಗಮ. ಅಷ್ಟೇ ಅಲ್ಲ, ಮೊದಲೇ ಜರ್ಝರಿತಗೊಂಡ ಈ ಸಮಾಜದಲ್ಲಿ ಆಶಯಾದರ್ಶದ ಭಿನ್ನತೆಗಳು ಮೊಳಕೆಯೊಡೆಯಲು ಶುರುವಿಟ್ಟ ಕಾಲಘಟ್ಟವೂ ಆಗಿತ್ತು ಅದು. ಅಂತಹ ಸಂದಿಗ್ಧ ಘಟ್ಟದಲ್ಲಾಗಿತ್ತು ಅಹ್ಲ್ ಸುನ್ನತಿ ವಲ್ ಜಮಾಅತಿನ ಆಶಯಾದರ್ಶವನ್ನು ಅದರ ಸಂಪೂರ್ಣ ಶುದ್ಧತೆಯೊಂದಿಗೆ ಎತ್ತಿ ಹಿಡಿದು ಸಂರಕ್ಷಿಸಿ, ಅಸಲು ರೂಪದಲ್ಲಿ ನಿರಂತರ ಪ್ರಚಾರ ಪಡಿಸುವ ಸಲುವಾಗಿ ’ಸಮಸ್ತ’ ರೂಪುಗೊಂಡಿದ್ದು ಮತ್ತು ಆ ಮಹತ್ತರ ಹೊಣೆಗಾರಿಕೆಯನ್ನು ನಿರಂತರ ಮುಂದುವರಿಸಿಕೊಂಡು ಬರುತ್ತಿದೆ ಕೂಡ.
ಇಂದು ಆರ್ಥಿಕವಾಗಿ ಸಮಾಜ ಮುಂದುವರಿಯುತ್ತಿದೆ ಆದರೆ ಧಾರ್ಮಿಕವಾಗಿ ಅಧಃಪತನದತ್ತ ಸಾಗುತ್ತಿದೆ, ಅಂದಿನ ಬಡತನಕ್ಕಿಂತ ಇಂದಿನ ಶ್ರೀಮಂತಿಕೆ ಅಪಯಕಾರಿಯಾಗಿ ಪರಿಣಮಿಸುತ್ತಿರುವುದು ದುರಂತ.
ಪ್ರತಿಯೊಬ್ಬರೂ ಪವಿತ್ರ ಧರ್ಮದ ಸುಂದರ ಸಂಸ್ಕಾರ, ಸಂಸ್ಕೃತಿ, ಮಾನವೀಯತೆಯನ್ನು ಮೈಗೂಡಿಸಿಕೊಂಡು ಆಚಾರ, ವಿಚಾರಗಳನ್ನು ಪಾಲಿಸಿಕೊಂಡು, ಉನ್ನತ ಮೌಲ್ಯಗಳನ್ನು ಸಂರಕ್ಷಿಸಬೇಕು.ಯಾವುದೇ ಸಮಾಜವು ಸ್ವತಃ  ಬದಲಾವಣೆ ಬಯಸದೆ ಬದಲಾಗದು ಎಂದು ಪವಿತ್ರ ಕುರ್ ಆನ್ ಹೇಳುತ್ತದೆ.
ಆದುನಿಕ ಮೀಡಿಯಗಳನ್ನು ಮನುಷ್ಯನ ಒಳಿತಿಗಾಗಿ ಬಳಸಿಕೊಳ್ಲಬೇಕೇ ವಿನಾ ದುರುಪಯೋಗ ಪಡಿಸಿಕೊಳ್ಳಬಾರದು.ಗೊತ್ತಿರಲಿ, ಸಂಸ್ಕಾರ ಶೂನ್ಯರಾದ ಯಾವುದೇ ಸಮಾಜಕ್ಕೆ ಭವಿಷ್ಯವಿಲ್ಲ.

ಸುನ್ನಿಗಳ ಚಿತ್ತ... ಆಲಪುಯದತ್ತ...

ಮತ್ತೊಂದು ಇತಿಹಾಸ ನಿರ್ಮಾಣವನ್ನು ಸುನ್ನೀ ಜನ ಕೋಟಿ ಎದುರು ನೋಡುತ್ತಿದೆ. ಪ್ರತಿಯೊಬ್ಬರೂ ಬದುಕಿನಲ್ಲಿ ಎಡವಿಬಿದ್ದು, ವಾಮ ಮಾರ್ಗ ಹಿಡಿಯದಂತೆ ಜತನದಿಂದ ಕಾಯ್ದುಕೊಂಡು,ಇಹ-ಪರ ಯಶಸ್ವಿಗೆ ಪೂರಕವಾದ ಸರಿ ದಾರಿ ತೋರಿ ನಮ್ಮ ಪರಿಸರದ ಮುಸ್ಲಿಂ ವಿಶ್ವಾಸಿಗಳನ್ನು ನಾಡಿನ ಪ್ರಜ್ಞಾವಂತ ಸತ್ಪ್ರಜೆಗಳಾಗಿ ರೂಪಿಸಿದ ಶ್ರೇಷ್ಠ ಉಲಮಾ ಸಂಘಟನೆಯಾದ ’ಸಮಸ್ತ’ದ 90ರ ಸಮಾರೋಪ ಸಮಾರಂಭಕ್ಕೆ ಕೇರಳದ ಆಲಪುಯ ಸಜ್ಜುಗೊಂಡಿದ್ದು ಶ್ವೇತ, ಶುಭ್ರ ವಸ್ತ್ರ ದಾರಿಗಳಿಂದ ಹಾಲ್ಗಡಲು ನಿರ್ಮಾಣವಾಗಲು ದಿನಗಣನೆ ಆರಂಭಗೊಂಡಿದ್ದು ಇಸ್ಲಾಮಿಕ್ ಸಾಂಘಿಕ ಕ್ಷೇತ್ರದಲ್ಲೊಂದು ಭವ್ಯ ಇತಿಹಾಸ ನಿರ್ಮಾಣವಾಗಲಿದೆ.
ಕೇರಳ ಬೌಗೋಳಿಕವಾಗಿ ಚಿಕ್ಕದಾದರೂ ದೇಶದಲ್ಲೇ ಗಮನ ಸೆಳೆದ ಸಾಕ್ಷರತಾ ರಾಜ್ಯವಿದು.ಕೋಮು ಸಾಮರಸ್ಯದಲ್ಲೂ ಈ ನಾರಿಕೇಳದ ನಾಡು ಮುಂದು. ಮುಸ್ಲಿಮರ ಮಟ್ಟಿಗೆ ಹೇಳುವುದಾದರೆ ಪವಿತ್ರ ಇಸ್ಲಾಮಿನ ಸಂದೇಶ ಪ್ರವಾದಿ (ಸಲ್ಲಲ್ಲಾಹು ಅಲೈವಸಲ್ಲಂ) ರವರ ಕಾಲದಲ್ಲಿಯೇ ಆ ರಾಜ್ಯಕ್ಕೆ ತಲುಪಿತ್ತು ಎಂಬುದು ಇತಿಹಾಸ .
ಆರಂಭ ಕಾಲದಲ್ಲಿ ಅರೇಬಿಯಾದಿಂದ ಬಂದ ಮಾಲಿಕ್‌ಬ್‌ನುದೀನಾರ್ (ರ) ಮತ್ತು ಅವರ ಅನುಚರರ ಮೂಲಕ ಇಸ್ಲಾಂ ಕೇರಳ ಹಾಗೂ ಕರ್ನಾಟಕದಂಥ ಪರಿಸರ ಪ್ರದೇಶಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಂಡಿತು. ಅವರ ನಂತರ ಅವರ ಶಿಷ್ಯಂದಿರು ಹಾಗೂ ಯಮಾನ್ ನಿಂದ ಬಂದ ಇನ್ನಿತರ ವಿದ್ವಾಂಸ-ಸಾದಾತ್ ಕುಟುಂಬಗಳ ಮೂಲಕ ಆ ಪ್ರಬೋಧನಾ ಹೊಣೆಗಾರಿಕೆ ಅಸಲು ರೂಪದಲ್ಲೇ ಪರಂಪರಾಗತ ಶುದ್ಧ ಆಶಯಾದರ್ಶಗಳೊಂದಿಗೆ ಸಾಗಿ ಬಂದು, ಕಡೆಗೆ ಕಾಲಿಕ ಅನಿವಾರ್ಯತೆ ಸಾಂಘಿಕ ರೂಪ ಅಗತ್ಯವಾಗಿ ಬಂದಾಗ ಆ ದಅವಾ ಕ್ಷೇತ್ರಕ್ಕೊಂದು ಸಂಘಟನೆಯ ರೂಪ ಕೊಟ್ಟು ವಿಶ್ವಾಸಿ ಆದರ್ಶದಲ್ಲಿ ಎಡವದಂತೆ ಕಾಯ್ದುಕೊಂಡು ಧರ್ಮ ಪ್ರಬೋಧನಾ ಕ್ಷೇತ್ರವನ್ನು ಸಕ್ರೀಯ ಗೊಳಿಸಿದ ಉಲಮಾಗಳ ಧಾರ್ಮಿಕ ಶುದ್ಧ ಆದರ್ಶದ ದಅವಾ ಚಳಿವಳಿ ರೂಪವೇ ಈ ’ಸಮಸ್ತ’ ಎಂಬ ಬಲಿಷ್ಠ ಉಲಮಾ ಸಂಘಟನೆಯಾಗಿದೆ.

ಇಂದು ಬೇರೆ ಕಡೆಗಳಿಗಿಂತ ಕೇರಳದ ಮುಸ್ಲಿಮರು ಎಲ್ಲಾ ಕ್ಷೇತ್ರಗಳಲ್ಲೂ ಒಂದಿಷ್ಟು ಪ್ರಗತಿ ಸಾಧಿಸದ್ದರೆ ’ಸಮಸ್ತ’ ಅಲ್ಲಿ ಉಂಟು ಮಾಡಿದ ಸಂಘಿಕ, ಸಾಮಾಜಿಕ, ಶೈಕ್ಷಣಿಕ ಜಾಗೃತಿಯೇ ಆಗಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಪ್ರಾಯಶಃ ಹಿಂದಿನಿಂದಲೂ ನಮ್ಮ ಪರಿಸರದ ಮುಸ್ಲಿಂ ವಿಶ್ವಾಸಿಗಳು ಧಾರ್ಮಿಕ ವಿಚಾರದಲ್ಲಿ ಹೆಚ್ಚಾಗಿ ಕೇರಳವನ್ನೇ ಅವಲಂಬಿಸುತ್ತಿರುವುದು ಇದೇ ಕಾರಣಕ್ಕೇ ಆಗಿದೆ.
ಹಾಗೆ ನೋಡಿದರೆ ಈ ಪರಿಸರದ ಹೆಚ್ಚಿನ ಧಾರ್ಮಿಕ ವಿದ್ವಾಂಸರು ಅಲ್ಲಿನ ಕಾಲೇಜುಗಳಲ್ಲಿ ಕಲಿತವರೇ ಆಗಿದ್ದಾರೆ. ನಮ್ಮ ಮದ್ರಸಗಳು ಅದೇ’ ಸಮಸ್ತ’ದ ಪಠ್ಯಕ್ರಮದಡಿ ನೋಂದಾವಣೆ ಯಲ್ಲಿರುದು, ಹೆಚ್ಚಿನ ಪುಣ್ಯತ್ಮರ ಝಿಯಾರತ್ ಕೇಂದ್ರಗಳು ಅಲ್ಲಿವೆ.... ಹೀಗೆ ಒಂದರ್ಥದಲ್ಲಿ ಕೇರಳ ನಮ್ಮ ಪಾಲಿಗೆ ಧಾರ್ಮಿಕವಾಗಿ ಹೆಬ್ಬಾಗಿಲು ಇದ್ದಂತೆ ಎಂದರೆ ಅತಿಶಯೋಕ್ತಿಯಲ್ಲ ಬಿಡಿ, ಈ ನಾರಿಕೇಳದ ನಾಡಿಗೆ ’ಸಮಸ್ತ’ ಸಮ್ಮೇಳನ, ಕಾಲೇಜುಗಳ ಘಟಿಕೋತ್ಸವಗಳೆಂದು ಇಲ್ಲಿನ ವಿಶ್ವಾಸಿಗಳ ದಂಡು ವರ್ಷಕ್ಕೊಮ್ಮೆಯಾದರೂ ಹೋಗುತ್ತಾರೆ. ಇದೀಗ ’ಸಮಸ್ತ’ದ ೯೦ರ ಸಮಾರೋಪ ಸಮ್ಮೇಳನ ಫೆಬ್ರವರಿ ೧೧ರಿಂದ ೧೪ ರ ವರೆಗೆ ಆಲಪುಯದಲ್ಲಿ ಐತಿಹಾಸಿಕವಾಗಿ ನಡೆಯಲಿದ್ದು, ಪುಣ್ಯ ಸ್ಫುರಿಸುವ ಆ ಶುಭ್ರ ಸಾಗರದಲ್ಲಿ ಸೇರಿಕೊಳ್ಳುವ ತೀರದ ಬಯಕೆ, ತುಂಬಿ ನಿಂತ ಕನವರಿಕೆ ಇಲ್ಲಿನ ವಿಶ್ವಸಿಗಳದ್ದು, ಆದ್ದರಿಂದಲೇ ಎಲ್ಲರ ಚಿತ್ತ ಆಲಪುಯದತ್ತ....ಸಾಗಿದೆ.
   ಬನ್ನಿ,ಆ ಅನುಗ್ರಹಿತ ಸಮ್ಮೇಳನದಲ್ಲಿ ನಾವು ಕೂಡ ಪಾಲ್ಗೊಂಡು ದನ್ಯರಾಗೋಣ.








2015 ಅಕ್ಟೋಬರ್ ತಿಂಗಳ ಅಲ್ ಅಹ್ಸನ್ ಮಾಸಿಕ


2015 ಸೆಪ್ಟಂಬರ್ ತಿಂಗಳ ಅಲ್ ಅಹ್ಸನ್ ಮಾಸಿಕ


2015 ಎಪ್ರಿಲ್ ತಿಂಗಳ ಅಲ್ ಅಹ್ಸನ್ ಮಾಸಿಕ


2015 ಮಾರ್ಚ್ ತಿಂಗಳ ಅಲ್ ಅಹ್ಸನ್ ಮಾಸಿಕ


2015 ಫೆಬ್ರವರಿ ತಿಂಗಳ ಅಲ್ ಅಹ್ಸನ್ ಮಾಸಿಕ


2014 ಜನವರಿ ತಿಂಗಳ ಅಲ್ ಅಹ್ಸನ್ ಮಾಸಿಕ


2014 ಫೆಬ್ರವರಿ ತಿಂಗಳ ಅಲ್ ಅಹ್ಸನ್ ಮಾಸಿಕ