ನನ್ನ ಮಗಳು


  • ಮೌಲಾನಾ ಯು.ಕೆ ಚೊಕ್ಕಬೆಟ್ಟು

ತವರಿಗೆ ಬಂದ ಮಗಳು ಮೊದ ಮೊದಲು ಮನಬಿಚ್ಚಿ ಉತ್ಸುಕತೆಯಿಂದ ಮಾತನಾ ಡುತ್ತಿದ್ದಳು ಇದೀಗ ಮಾತಿಗೆ ಏನೋ ತಡೆ ಇರುವಂತೆ ಭಾಸವಾಗುತ್ತದೆ. ಮನಸ್ಸಿನಲ್ಲೂ ಮಾತಿನಲ್ಲೂ ಏನನ್ನೋ ಅಡಗಿಸುವಂತಿದೆ.ಅಗೋಚರವಾದ ಏನೋ ನಿರ್ಲಕ್ಷ್ಯ ಭಾವ ಮನೆ ಮಾಡಿದಂತಿದೆ. ತಂದೆಯ ಮನಸ್ಸು ಚಿಂತೆಯ ಚಿತೆಯಲ್ಲಿ ನರಲಾಡ ತೊಡಗಿತು. ಹೆಣ್ಣುಮಕ್ಕಳು ಮನೆಯ ಐಶ್ವರ್ಯ, ಶುಭ, ಸಂಪತ್ತು ಅಂತೆಲ್ಲಾ ಹೇಳ್ತಾರೆ. ಹೌದು ಮನೆಯಲ್ಲಿ ಎಲ್ಲರಿಗೂ ಸುಪ್ರೀಂ ಅವಳೇ ಆಗಿದ್ದಳು.ಮನೆಮಂದಿಯ ಲವಲವಿಕೆಗೆ ಅವಳೇ ಕಾರಣಳಾಗಿದ್ದಳು. ಪ್ರತಿಯೊಂದನ್ನು ನೀಟಾಗಿ ನಿರ್ವಹಣೆ ಮಾಡುತ್ತಿದ್ದ ಕಾರಣ ಅವಳು ಮನೆಯನ್ನು ಸ್ವರ್ಗವಾಗಿ ಬದಲಿಸಿದ್ದಳು.ಅವಳ ಜಾಣ್ಮೆ ತಾಳ್ಮೆ, ಕೋಪ ತಾಪ, ನಲಿ ಕಲಿ ಎಲ್ಲವೂ ಅತ್ಯಾಕರ್ಷಕವಾಗಿತ್ತು. ಒಟ್ಡಿನಲ್ಲಿ ಮನೆ ತುಂಬಿದ ಮಗಳಾಗಿ ವಿಜ್ರಂಭಿಸುತ್ತಿದ್ದ ಕಾಲ ಒಮ್ಮೆಲೆ ತಂದೆಯ ಹೃದಯವನ್ನು ಹಿಡಿದೆಳೆದಂತಾಯಿತು.
ಮಗಳ ಮನದಲ್ಲಿ ಮಂದಹಾಸದ ನಗು ಕಾಣೆಯಾಗಿದೆ. ಉಬ್ಬಿ ಬರುವ ದುಃಖ ವನ್ನು ಅದುಮಿ ಹಿಡಿದ ಹಾಗೇ ಕಾಣುತ್ತಲಿದೆ. ತುಂಟಾಟ, ತಮಾಷೆ ಚೇಷ್ಟೆಗಳೆಲ್ಲಾ ಮಾಯ!

ಪ್ರಾಯ ತುಂಬಿದ ಮಗಳಿಗೆ ಮದುವೆ ಪ್ರಸ್ತಾಪ ಬಂದಾಗ ಮನೆಯಲ್ಲಿ ಸಂತಸ ಸಂಭ್ರಮ ಮುಗಿಲು ಮುಟ್ಟಿತ್ತು. ನಂತರ ಎಲ್ಲವೂ ಸುಸೂತ್ರವಾಗಿ ಸಾಗಿತು ಅಳಿಯ, ನೆಂಟರ ಆಗಮನ, ನಿರ್ಗಮನ ಎಲ್ಲಾ ಹೊಸ ಉಲ್ಲಾಸ ಹುರುಪು ಕುಟುಂಬದಲ್ಲೇ ಮೂಡಿಸಿತ್ತು.ಅದೀಗ ಎಲ್ಲವೂ ಕರಗಿ ಹೋಗುತ್ತಲಿದೆ. ಏನಮ್ಮಾ ಹೀಗೆ ಎಂದು ಕೇಳುವುದಾದರೂ ಹೇಗೆ?
ಒಂದು ವೇಳೆ ಅದು ಅವಳನ್ನು ಇನ್ನಷ್ಟು ನೋಯಿಸಬ ಹುದೇ? ಅಲ್ಲ ಸಮಸ್ಯೆ ತಿಳಿದು ಪರಿಹಾರ ಹುಡುಕಬಹುದೇ?
ಗಂಡನ ಮನೆ ಸುಖದ ಸೋಪಾನವಾಗಿರಲಿಲ್ಲ ಮಗಳಿಗೆ. ಮದುವೆಯ ಸಡಗರ ಮುಗಿಯೋ ತನಕ ಯಾವ ಸಮಸ್ಯೆಯೂ ಇರಲಿಲ್ಲ. ನಂತರ ಚಿಕ್ಕಪುಟ್ಟ ವೈಮನಸ್ಯ, ತರ್ಕ, ನಡೆದರೂ ಅದನ್ನು ಸಹಜವಾಗಿ ತೆಗೆದುಕೊಂಡರೂ ಬರುಬರುತ್ತಾ ಅದು ತಾರಕಕ್ಕೇರುವ ಲಕ್ಷಣಗಳು ಗೋಚರಿಸ ತೊಡಗತ್ತು.ಹಿಂದಿನ ರಹಸ್ಯ ಏನೆಂದು ಹುಡುಕಿದರೆ ಅದು ವರದಕ್ಷಿಣೆ ರೂಪದಲ್ಲಿ ಮನೆಯನ್ನೇ ಮಸಣವಾಗಿಸಿತ್ತು. ಒಂದೆರಡು ಸಲ ಒಂದಿಷ್ಡು ಹಣದ ಕಟ್ಟನ್ನು ಭರ್ತಿ ಮಾಡಿ ಕೊಟ್ಟರೂ ಅವರ ರಾಕ್ಷಸೀ ಮನಸ್ಸು ಸುಮ್ಮನಾಗುತ್ತಿರಲಿಲ್ಲ. ಪದೇಪದೇ ತಂದೆಯ ಜೊತೆ ಇದನ್ನು ಹೇಳುವ ವಿಕಾರ ಮನಸ್ಸು ಮಗಳದ್ದಲ್ಲ.ಆದ ಕಾರಣ ಮಗಳು ನೋವನ್ನೆಲ್ಲಾ ನುಂಗಿ ಮುಖದ ಕಾಂತಿಯನ್ನೇ ಕಳಕೊಂಡಿದ್ದಳು..
ಇದು ಮದುವೆಯೆಂಬ ಮಾಯೆಯ ಹಿಂದೆ ವರದಕ್ಷಿಣೆ ಎಂಬ ರಾಕ್ಷಸಿಯ ದುಷ್ಟ ಕೈಗಳಿಗೆ ಸಿಕ್ಕ ನಮ್ಮ ಹೆಣ್ಣು ಮಕ್ಕಳ ಸ್ಥಿತಿ. ಗಂಡು ಮಕ್ಕಳೇನೋ ತಂದೆ ಸೊತ್ತಲ್ಲಿ ಆರಾಮವಾಗಿರುತ್ತಾರೆ ಹೆಣ್ಣು ಮಕ್ಕಳು ನರಕ ಯಾತನೆ ಅನುಭವಿಸುತ್ತಿರುತ್ತಾರೆ. ಕೊನೆಗೆ ಎಲ್ಲಾ ಕಡೆಯಿಂದ ತಿರಸ್ಕಾರವನ್ನು ಕಂಡು ಕೊನೆಯ ನಿರ್ಧಾರಕ್ಕೂ ಮುಂದಾಗುತ್ತಾರೆ .
ಹೀಗೆಲ್ಲಾ ಚಿಂತಿಸುತ್ತಾ ಇರುವಾಗ ಅಹ್ಮದ್ ಅಲಿಯ ಮಾತು ತಂದೆಯ ಕಿವಿಗೆ ಅಪ್ಪಳಿಸುತ್ತಿತ್ತು ಮಗಳು ಏನನ್ನೋ ನನ್ನಿಂದ ಮರೆ ಮಾಚುತ್ತಿದ್ದಾಳೆ. ಏನದು ? ಅಂತ ಗೊತ್ತಾಗದಂತೆ ನಾನು ಹುಡುಕುತ್ತಿದ್ದೆ. ಒಮ್ಮೆ ಮಗಳು ಮಲಗಿರುವಾಗ ಪ್ರಶ್ನೆಗೆ ಉತ್ತರ ಸಿಕ್ಕಿತ್ತು .ಮಗಳ ಕೈ ತುಂಬಾ ಸುಟ್ಟ ಗಾಯಗಳು ನನ್ನನ್ನೇ ದುರುಗುಟ್ಟಿ ನೋಡುತ್ತಿತ್ತು. ತಂದೆಯು ನಿಂತಲ್ಲೇ ಕಲ್ಲಾಗಿ ಹೋದರು!
ಗಂಡನ ಮನೆಯಲ್ಲಿ ಆದ ಗಾಯ ಮನೆಗೆ ಬಂದಾಗ ಒಣಗಿ ಗುಣವಾಗಿ ಮರಳಿ ಹೋಗುತ್ತಾಳೆ ಮಗಳು! ಪುನಃ ಗಾಯ ಒಣಗಬೇಕಾದರೆ ಮನೆಗೇ ಬರಬೇಕು! ದೇಹದ ಗಾಯ ಗುಣವಾಗಬಹುದು ಮನಸ್ಸಿನ ಗಾಯ ವಾಸಿಯಾಗಹುದೇ? ಅಹ್ಮದ್ ಅಲಿಯ ಕೊನೆಯ ಮಾತು ನಾನು ತಡ ಮಾಡಿದೆ ಕೊನೆಯ ಸಲ ಮಗಳು ಬಂದಾಗ ಹೇಳಿದ್ದಳು. ಅಪ್ಪಾ ನಾನಿನ್ನು ಬರುವುದು ಲೇಟಾಗಬಹುದು. ಸುದ್ದಿ ಸಿಡಿಲಿನಂತೆ ಬಂದೆರಗಿತ್ತು ಹೋಗಿ ನೋಡಿದರೆ ಮಗಳ ದೇಹದಿಂದ ಪ್ರಾಣ ಹಕ್ಕಿ ಹಾರಿ ಹೋಗಿತ್ತು.
ದೇಹದಲ್ಲಿದ್ದ ಗಾಯಗಳು ಹಾಗೇ ಉಳಿದು ಕೊಂಡಿತ್ತು. ಪ್ರಿತಿಯ ಅಣ್ಣ ತಮ್ಮಂದಿರೆ ನಿಮ್ಮ ಮನೆಯಲ್ಲಿ ಹೀಗೆ ಒಂದು ಜೀವ ನರಕ ಅನುಭವಿಸುತ್ತಿದ್ದರೆ ಅಥವಾ ನಿಮ್ಮ ಅಕ್ಕ ತಂಗಿಯರು ಬೇರೆ ಕಡೆ ಸ್ಥಿತಿ ಯಲ್ಲಿದ್ದರೆ ತಡಮಾಡಬೇಡಿ.ಕಾರಣ ನಿಮ್ಮಿಂದ ಒಂದು ಜೀವ ಉಳಿಯಬಹುದು .
  • ಯಾವನೇ ಒಬ್ಬನನ್ನು ಬದುಕಿಸಿದರೆ ಅವನು ಜಗತ್ತಿನ ಎಲ್ಲರನ್ನೂ ಬದುಕಿಸಿದಂತೆ (ಕುರಾನ್)

No comments:

Post a Comment