ಅಷ್ಟಕ್ಕೂ ವಿವಾಹ ದುಬಾರಿಯಾ?

'ಕವರ್ ಸ್ಟೋರಿ' ಅಲ್ ಅಹ್ಸನ್ ಮಾಸಿಕ
 ಎಸ್.ಬಿ.ದಾರಿಮಿ ಪುತ್ತೂರು
...................................
     ಇಸ್ಲಾಂ ಧರ್ಮದಲ್ಲಿ ವಿವಾಹವೆಂಬುದು ಪವಿತ್ರವಾದ ಒಂದು ವ್ಯವಹಾರ. ಇದನ್ನು 'ಬಂದನ' ಎಂಬುದಾಗಿ ಬಿಂಬಿಸುವುತ್ತಿರುವುದರಲ್ಲೇ ನಮಗೆ ಎಡವಟ್ಟಾಗಿದೆ ನೋಡಿ, ಅಷ್ಟಕ್ಕೂ ಇಸ್ಲಾಂ ಪ್ರಸ್ತುತ ಪಡಿಸುತ್ತಿರುವ ವಿವಾಹದಲ್ಲಿ ವಧುವಿಗೆ ವರ ನೀಡಬೇಕಾದ 'ಮಹ್ರ್' ಒಂದು ಬಿಟ್ಟರೆ ಆರ್ಥಿಕ ವಿಷಯ ಅಲ್ಲಿ ಗೌಣ ಆಗಿರುತ್ತದೆ. ನಮ್ಮಡೆಯಲ್ಲಿಂದು ಚಲಾವಣೆಯಲ್ಲಿರುವ 'ಡೌರಿ' ಸಂಸ್ಕೃತಿಗೂ ಇಸ್ಲಾಂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ವಧುವಿಗೆ 'ಮಹ್ರ್' ಮತ್ತು ಕೆಲವು ತಿಂಗಳ ಮಟ್ಟಿನ ವಸ್ತ್ರ ಹಾಗೂ ದಿನವೊಂದರ ಖರ್ಚು ನೀಡಲು ಸಾಧ್ಯವಿ್ದ್ದವನು ವಿವಾಹವಾಗಬೇಕು.ಇಲ್ಲದಿದ್ದರೆ ಉಪವಾಸ ಆಚರಿಸಿ ತನ್ನ ಕಾಮದಾಸೆಯನ್ನು ತಣಿಸಿಕೊಳ್ಳಬೇಕೆಂದು ಇಸ್ಲಾಂ ಸ್ಪಷ್ಟವಾಗಿ ಹೇಳಿದೆ.ಸೌಂದರ್ಯ, ಕುಳ,ಆರ್ಥಿಕ,ಧಾರ್ಮಿಕ ವಿಷಯಗಳ ಆಧಾರದಲ್ಲಿ ಮದುವೆಯಾಗುವುದು ಸರ್ವೇಸಾಮಾನ್ಯ. ಆದರೆ ಮುಸ್ಲಿಮರು ಧಾರ್ಮಿಕ ಮೌಲ್ಯಗಳಿಗೆ ಒತ್ತು ಕೊಟ್ಟು ಮದುವೆಯಾಗ ಬೇಕೆಂದು ಪ್ರವಾದಿ (ಸಲ್ಲಲ್ಲಾಹು ಅಲೈವಸಲ್ಲಂ) ಆದೇಶಿಸಿರುವಾಗ ಅದನ್ನು ಪಾಲಿಸಬೇಕಾದುದು ಯಾರು?
 ಇನ್ನು ವಧುವಿಗೆ ಮಹ್ರ್ ಕೊಡಬೇಕೆಂದು ಪವಿತ್ರ ಕುರ್ ಆನ್ ನಲ್ಲಿ ಸ್ಪಷ್ಟಪಡಿಸುತ್ತಿರುವಾಗ ಅದನ್ನು ಮೀರಿ ವರನಿಗೂ ಮಹ್ರ್ ಕೂಡಲೇ ಬೇಕೆಂದು ಹಠ ಹಿಡಿಯುವುದು ಯಾವ ಇಸ್ಲಾಂ?  ಎಂದು ಇಲ್ಲಿ ಕೇಳಲೇ ಬೇಕಾಗುತ್ತದೆ.
      ಇಷ್ಟಕ್ಕೂ ಮದುವೆ 'ವ್ಯವಹಾರ ' ಎಂದ ಮೇಲೆ ಹೆಣ್ಣೆಂಬ ಮಾಲನ್ನು ಪಡೆಯುವವನು ಬೆಲೆ ಪಾವತಸಬೇಕೇ ಹೊರತು ಪೋಷಕರು 'ಮಾಲು' ನೀಡುವುದೊಂದಿಗೆ ಅದರ ಬೆಲೆಯನ್ನೂ ನೀಡಬೇಕೆಂಬುದು ಕಾಡು ನ್ಯಾಯ ಹಾಗೂ ಪ್ರಕೃತಿಗೆ ಎಸಗುವ ಘೋರ ಅಪರಾಧ ಎನ್ನುದೆ ವಿಧಿಯಿಲ್ಲ. ಇನ್ನು ಹೆಣ್ಣನ್ನು ಮದುವೆ ಮಾಡಿ ಕೊಡುವ ವೇಳೆ ಪೋಷಕರ ಹಾಗೂ ಜನ ಸಾಮಾನ್ಯ ರ ನಂಬಿಕೆ ಏನೆಂದರೆ ಈ ಹೆಣ್ಣಾದವಳನ್ನು ಕೊನೆ ತನಕ ಸಂರಕ್ಷಿಸಿಸ ಬೇಕಲ್ಲ , ವರನಾದವನು ಅದನ್ನು ಕೈಯೆತ್ತಿ ಕೊಳ್ಳವುದರಿಂದ ಇಲ್ಲಿ ಪುರುಷರು ಔದಾರ್ಯ ಮರೆಯುತ್ತಾರೆ. ಆದ ಕಾರಣ ಅವನು ಕೇಳಿದಷ್ಟು ಕೊಡದಿರಲಿಕ್ಕೆ ಸಾಧ್ಯನಾ? ಎಂಬ ಮಾನಸಿಕತೆಗೆ ಹೆಚ್ಚಿನವರು ಒಗ್ಗಿ ಹೋಗಿದ್ದಾರೆ.
     ಸತ್ಯ ಹೇಳಬೇಕಂದರೆ ವಿವಾಹವು 'ಬಂಧನ' ಎಂಬ ನಂಬಿಕೆಯಿಂದ ಇದು ಹುಟ್ಟಿಕೊಂಡಿದೆ . ಮದುವೆಯಾಗಿ ವರನ ಮನೆಗೆ ಬರುವ ಮಹಿಳೆ ದಿನ ಪೂರ್ತಿ ಪತಿ ಮನೆಯವರ ಸೇವೆ ಮಾಡುತ್ತಿದ್ದು, ಏನಿಲ್ಲವೆಂದರೂ ದಿನಕ್ಕೆ ರೂ 500 ಕ್ಕೆ ಸರಿದೂಗುವ ಕೆಲಸ ಕಾರ್ಯಗಳನ್ನು ಯಾವುದೇ ದೇ ವೇತನ ಪಡೆಯದೆ ನಿರ್ವಹಿಸುತ್ತಿರುವ ಮಹಿಳೆಗೆ ಪತಿ ಮಹಾಶಯ ಸಂಬಳ ಪಾವತಿಸುವ ಪರಿಪಾಠ ನಮ್ಮಲ್ಲಿದೆಯೇ?
      ತನ್ನ ಹಾಗೂ ಮಕ್ಕಳ ಸರ್ವ ಸೇವೆಯನ್ನು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಮಾಡಿ ಮುಗಿಸುತ್ತಾಳಾಲ್ಲ ಈ ಮಹಿಳೆ!  ಇಂತಹ ಸಹನೆಯ ಮೂರ್ತಿಯಾದ ಮಹಿಳೆಯರನ್ನು ತನ್ನ ಜೀವನ ಸಂಗಾತಿಯಾಗಿ ಆರಿಸುವಾಗ ತಾನೇ ಆದಷ್ಟು ಧನ ಕನಕಗಳನ್ನು ನೀಡಿ ತನ್ನ ಬಾಳಿಗೆ ಸೇರಿಸಬೇಕೆಂದು ಮಾನವೀಯತೆಯನ್ನು ಪ್ರತಿಪಾದಿಸುತ್ತಿರುವ ಇಸ್ಲಾಂ ಧರ್ಮ ಹೇಳುತ್ತಿರುವಾಗ ಈ ಆಶಯವನ್ನು ಬುಡಮೇಲುಗೊಳಿಸಿ ಇಸ್ಲಾಮಿನ ಪ್ರಮಾಣಗಳನ್ನು ದುರ್ವ್ಯಾಖ್ಯಾನ ಮಾಡಿ ವರದಕ್ಷಿಣೆ ಎಂಬ ಪೈಶಾಚಿಕ ಪದ್ಧತಿಯನ್ನು ಪೋಷಿಸುವವರು ನಿಜವಾಗಿಯೂ ಮಾಡುತ್ತಿರುವುದು ಇಸ್ಲಾಂ ಧರ್ಮಕ್ಕೆ ಅನ್ಯಾಯ ಎನ್ನದೆ ವಿಧಿಯಿಲ್ಲ.
     ಚಿನ್ನ ಮತ್ತು ಮಹಿಳೆ
       ಇತ್ತೀಚೆಗೆ ಏರುತ್ತಲೇ ಇರುವ ಚಿನ್ನದ ಬೆಲೆಯನ್ನು ಕೇಳಿ ತಮ್ಮ ಹೃದಯ ಮಿಡಿತದ ವೇಗವನ್ನು ಹೆಚ್ಚಿಸುತ್ತಿರುವ ಒಂದು ಜನಾಂಗ ಇದ್ದರೆ ಅದು ಮುಸ್ಲಿಮರು ! ಇಂದು ಮುಸ್ಲಿಂ ಮಹಿಳೆಯೆಂದರೆ ಚಿನ್ನದ ಪರ್ಯಾಯ ಎಂಬಂತೆ ಭಾಸವಾಗುತ್ತಿದೆ. ಚಿನ್ನಾಭರಣದ ಅಂಗಡಿಗಳಲ್ಲಿ ಚಿನ್ನ ಖರೀದಿಸಲು ಪರ್ದಾಧಾರಿಣಿಯರ ಪೈಪೋಟಿ ನೋಡಿ ಇಸ್ಲಾಮಿನ ಬಗ್ಗೆ ಅರಿವಿಲ್ಲದವರು ನಮಾಝನ್ನು ಮುಸ್ಲಿಮರಿಗೆ ಕಡ್ಡಾಯಗೊಳಿಸಿದಂತೆ ಮುಸ್ಲಿಂ ಮಹಿಳೆಯರು ಕಡ್ಡಾಯವಾಗಿ ಚಿನ್ನಾಭರಣವೂ ಧರಿಸಬೇಕೆಂಬ ನಿಯಮ ಇಸ್ಲಾಮಿನಲ್ಲಿದೆ ಎಂದು ತಪ್ಪು ತಿಳಿದುಕೊಳ್ಳಬಹುದು. ಸತ್ಯವೇನೆಂದರೆ ಚಿನ್ನಾಭರಣ ತೊಡುವುದು ಪುರುಷರಿಗೆ ಇಸ್ಲಾಂ ನಿಷಿದ್ಧಗೊಳಿಸಿದರೆ ಮಹಿಳೆಯರಿಗೆ ಅನುಮತಿ ನೀಡಿದೆಯಷ್ಟೆ!  ಅದು ಧರಿಸಿದರೆ ಯಾವುದೇ ಪುಣ್ಯ ದೊರಕುವುದಿಲ್ಲವೆಂದು ಮಾತ್ರವಲ್ಲ ಬಡವರನ್ನು ಹಂಗಿಸಲು ಹಾಗೂ ತನ್ನ ದರ್ಪ ತೋರಿಸಲು ಚಿನ್ನ ಧರಿಸಿದರೆ ಅದರಿಂದ ಪಾಪವನ್ನು ಕಟ್ಟಿಕೊಳ್ಳಬೇಕಾಗುತ್ತದೆ .
       ಇನ್ನು ವರದಕ್ಷಿಣೆ ವಿರುದ್ಧ ಹುಟ್ಟಿಕೊಂಡ ಜನ ಜಾಗೃತಿಯ ಪರಿಣಾಮ ವರನ ಕಡೆಯಿಂದ ವಾಡಿಕೆಯಲ್ಲಿದ್ದ ಹಣದ ಬೇಡಿಕೆ ಕಡಿಮೆಯಾಗಿದೆಯಾದರೂ ಅದರ ಬದಲು ಚಿನ್ನ ತೊಡಿಸಲು ಒತ್ತಡ ಹೇರುತ್ತಿರುವುದು 'ಹೋದೆಯಾ ಪಿಶಾಚಿ ಬಂದೆಯಾ ಗವಾಕ್ಷಿ' ಎನ್ನುವಂತಾಗಿದೆ.
    ಹಾಗೆನೋಡಿದರೆ ಈ ಬಗ್ಗೆ ಪುರುಷನ್ನು ದೂಷಿಸಿ ಫಲವಿಲ್ಲ, ಒಂದು ಹಂತದ ತನಕ ಇದಕ್ಕೆ ಮಹಿಳೆಯರೇ ಹೊಣೆಗಾರರು ಎಂದು ಹೇಳಲೇಬೇಕಾಗುತ್ತದೆ.
ತಾವು ಹುಟ್ಟಿದ್ದೇ ಚಿನ್ನ ಧರಿಸಲು ಎಂಬ ಮನೋಭಾವ ಮಹಿಳೆಯರಿಂದ ಯಾವಾಗ ದೂರವಾಗುತ್ತದೋ ಆ ತನಕ ಈ ಸಮಸ್ಯೆಗೆ ಪರಿಹಾರವಿಲ್ಲ. ಇಲ್ಲಿ ಮುಸ್ಲಿಂ ಮಹಿಳೆಯರು ಇತರ ಧರ್ಮೀಯ ಮಹಿಳೆಯರಿಂದ ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ. ತನ್ನ ಪೋಷಕರನ್ನು ಭಿಕ್ಷೆ ಬೇಡುವಂತೆ ಮಾಡಿ ತಮ್ಮ ಮನೆಯನ್ನೇ ಅಡವಿಟ್ಟು ತಾನು ಚಿನ್ನ ಧರಿಸಬೇಕೇ? ಎಂಬ ತೀರ್ಮಾನಿಸಬೇಕಾದದ್ದು ಮಹಿಳೆಯರೇ ಆಗಿದ್ದಾರೆ.
     ಒಟ್ಟಿನಲ್ಲಿ ವಿವಾಹಕ್ಕೆ ಸಂಬಂಧಿಸಿದಂತೆ ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸಬೇಕಾಗಿದೆ. ಈ ಬಗ್ಗೆ ಧಾರ್ಮಿಕ ಅಧ್ಯಯನಗಳು,ಚರ್ಚಾಗೋಷ್ಟಿಗಳು, ನಿರಂತರ ಆಂದೋಲನಗಳು ,ಜನಜಾಗೃತಿ ಚಳುವಳಿಗಳು ನಡೆಯಬೇಕು. ಉಲಮಾ -ಉಮಾರಾಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ಈ ಸಮಾಜವನ್ನು ಇಂದಿನ ಸುಸ್ಥಿತಿಯಿಂದ ಪಾರು ಮಾಡಬೇಕು. ಪೂರ್ವಿಕರ ಹಾದಿಯನ್ನು ಅವಲಂಬಿಸುವದರೊಂದಿಗೆ ನಾವು ನಮ್ಮ ಬದುಕಿನಲ್ಲಿ ಅಳವಡಿಸಿದ ಎಲ್ಲಾ ಅನಗತ್ಯ ರೂಢಿಗಳನ್ನು ನಿಲ್ಲಿಸಿ, ಕನಿಷ್ಟ ವೈವಾಹಿಕ ಕ್ಷೇತ್ರವಾದರೂ ಸಂಪೂರ್ಣ ಇಸ್ಲಾಮೀಕರಿಸಿದರೆ ನಾವಿಂದು ಅನುಭವಿಸುತ್ತಿರುವ ಯಾತನೆಗಳಿಂದ ಕೊಂಚಮಟ್ಟಿಗೆ ಸುಧಾರಿಸಿಕೊಳ್ಳಬಹುದು.ಹಾಗೆನೇ ವಯಸ್ಸು ಮೀರಿದ ಹೆಣ್ಮಕ್ಕಳು ಮನೆಯಲ್ಲಿ ಕುಳಿತು ರೋಧಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದು. ಏನಂತೀರಿ?
  ಇಸ್ಲಾಂ ದುಬಾರಿಯಾ?
       ಇಸ್ಲಾಂ ಧರ್ಮದ ಆಚಾರ-ವಿಚಾರಗಳು ದುಬಾರಿಯಾ? ಈ ಪ್ರಶ್ನೆ ಇಂದು ಜನರನ್ನು ಕಾಡಲು ಶುರುವಾಗಿದೆ.ಈ ಪ್ರಶ್ನೆಯ ಆರಂಭ ಸಮಾಜದ ವಿವಾಹದ ವೇದಿಕೆಯಿಂದ ಎಂಬುದು ವಿಪರ್ಯಾಸ.! ತನ್ನ ಮಗಳ,ಮಗನ ವಿವಾಹ ಕಾರ್ಯ ನೆರವೇರಿಸಲು ಪೋಷಕರು ಇಂದು ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯಗಳು,ದುಃಖ ದುಮ್ಮಾನಗಳು ಬೇನೆ ಬೇಗುದಿಗಳು ಇಂತಹ ಒಂದು ಪ್ರಶ್ನೆ ಉದ್ಭವಿಸಲು ಮುಖ್ಯ ಕಾರಣ ಎಂದು ಬೇರೆ ಹೇಳ ಬೇಕಾಗಿಲ್ಲ. ಜೀವನ ಪೂರ್ತಿ ದುಡಿದರೂ ಸರಿದೂಗಿಸಲು ಸಾಧ್ಯವಿಲ್ಲದ ಮೊತ್ತ ಒಂದು ವಿವಾಹಕ್ಕೆ ಖರ್ಚಾಗುತ್ತದೆ. ಇದರ ದುಷ್ಪರಿಣಾಮವೆಂಬಂತೆ ಸಮಾಜದಲ್ಲಿ ಇಸ್ಲಾಂ ಧರ್ಮ ವಿರೋಧಿಸಿದ ಅದೆಷ್ಟೋ ಅನಾಹುತಗಳು ನಡೆಯುತ್ತಿದೆ.ಬಡ್ಡಿ,ದರೋಡೆ,ಗಲಭೆ,ಕೊಲೆ,ವ್ಯಭಿಚಾರ, ನಾಪತ್ತೆ ಪ್ರಕರಣ,ದುಂದು ವೆಚ್ಚ,ನಿಷಿದ್ಧ ಸಂಪಾದನೆ,ಬ್ರೋಕರ್ ಗಳ ಹಾವಳಿ,ಶೈಕ್ಷಣಿಕ ಹಿನ್ನಡೆ,ಭ್ರೂಣ ಹತ್ಯೆ.... ಹೀಗೆ ಹಲವಾರು ಪಿಡುಗುಗಳು ಮೂಲ ವೈವಾಹಿಕ ವೇದಿಕೆಗಳೆಂದರೆ ಅತಿಶಯೋಕ್ತಿಯಾಗಲಾರದು.ಇದಕ್ಕೆಲ್ಲ ಧರ್ಮವನ್ನು ದೂಷಣೆ ಮಾಡುವಂತಿಲ್ಲ.ಏಕೆಂದರೆ ಇಸ್ಲಾಂ ಧರ್ಮದ ಆದೇಶಗಳಿಗೂ ನಮ್ಮಡೆಯಲ್ಲಿ ನಡೆಯುತ್ತಿರುವ ಇಂತಹ  ವಿವಾಹಗಳಿಗೂ ಯಾವುದೇ ಸಂಬಂಧವಿಲ್ಲ.
 ದುಬಾರಿ ಮದುವೆ ಸರಿಯೇ?
     ಮದುವೆ ಎಂದರೆ ಬೆಚ್ಚಿ ಬೀಳುವ ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಸ್ಲಿಮರಾದವರು ಅವರ ಸರ್ವೋನ್ನತ ಮಾದರಿ ನೇತಾರ ಹಝ್ರತ್ ಮುಹಮ್ಮದ್ (ಸಲ್ಲಲ್ಲಾಹು ಅಲೈವಸಲ್ಲಂ) ರವರ ವಿವಾಹದ ಬಗ್ಗೆ ಕೊಂಚ ಅವಲೋಕಿಸುವುದು ಮತ್ತು ಅದನ್ನು ತಮ್ಮ ವೈವಾಹಿಕ ಕಾರ್ಯದಲ್ಲಿ ಅಳವಡಿಸಿಕೊಳ್ಳವುದು ಸಮಸ್ಯೆಯ ನಿವಾರಣೆಯ ಹಾದಿಯಲ್ಲಿ ಅತಿದೊಡ್ಡ ಮೈಲಿಗಲ್ಲಾಗಬಹುದು.ಇಸ್ಲಾಂ ಎಂದರೆ ಕೇವಲ ಭಾಷಣ,ಬರಹ,ಸಂಘ,ಸಂಸ್ಥೆ, ಮಸೀದಿ,ಮದ್ರಸ ಹಾಗೂ ಕೆಲವು ಯಾಂತ್ರಿಕ ಆರಾಧನೆಗಳು ಎಂದೂ ತಪ್ಪು ತಿಳಿದುಕೊಂಡವರು ಎಷ್ಟು ಬೇಗ ಇಸ್ಲಾಂ ಧರ್ಮವನ್ನು ಸಮಗ್ರವಾಗಿ ಗ್ರಹಿಸಿ ಅದನ್ನು ಜಾರಿಗೊಳಿಸುತ್ತಾರೋ ಅಷ್ಟು ಬೇಗ ಸಮಾಜದ ಸಮಸ್ಯೆಗಳು ಪರಿಹಾರವಾಗುತ್ತದೆ. ಸಣ್ಣ ಪುಟ್ಟ ವಿಚಾರಗಳಿಗೆ ತಲೆಕೆಡಿಸಿಕೊಂಡು ವಾದ,ಪ್ರತಿವಾದ,ಟೀಕೆ,ಟಿಪ್ಪಣಿ, ಹೊ್ೈ ಕೈ ನಡೆಸುತ್ತಿರುವ ಸಮಾಜದ ದುರೀಣರೆನಿಸಿಕೊಂಡವರು ತಮ್ಮದೇ ಸಮಾಜದ ದುರವಸ್ಥೆಯನ್ನು ನೋಡಿ ಕಣ್ಣಿದ್ದು ಕುರುಡರಂತೆ ವರ್ತಿಸುವುದಕ್ಕೆ ಏನನ್ನಬೇಕು.?
     ಪ್ರವಾದಿಯವರ ವಿವಾಹ ಮಾದರಿ ಮುಸ್ಲಿಂ ಜನ ಸಮಾನ್ಯರಲ್ಲಿ ಎಷ್ಟು ಮಂದಿಗೆ ತಿಳಿದಿದೆ? ಸ್ವತಃ ಮಗಳ ವಿವಾಹವನ್ನು ಪ್ರವಾದಿಯವರು ಯಾವ ರೀತಿ ನೆರವೇರಿಸಿದರು? ಎಲ್ಲಾ ವಿಷಯಗಳಲ್ಲೂ ಪ್ರವಾದಿಯವರಲ್ಲಿ ನಿಮಗೆ ಮಾದರಿ ಇದೆಯೆಂದು ಕುರ್ ಆನ್ ಹೇಳುತ್ತಿರುವಾಗ ಪ್ರವಾದಿಯವರ ವಿವಾಹವನ್ನು ಇದರಿಂದ ಹೊರತುಪಡಿಸಲಾಗಿದೆಯೇ? ( ವಿವಿಧ ಉದ್ದೇಶಕ್ಕಾಗಿ ನಾಲ್ಕಕ್ಕಿಂತ ಹೆಚ್ಚು ಮದುವೆಯಾದದ್ದು ಪ್ರವಾದಿಯವರಿಗೆ ಮಾತ್ರ ಸೀಮಿತ ಎಂಬುದು ಬೇರೆ  ಮಾತು)
        ಪ್ರವಾದಿಯವರ ಅಷ್ಟೂ ವಿವಾಹಗಳಲ್ಲಿ ಅತಿಹೆಚ್ಚು ಸತ್ಕಾರ ಏರ್ಪಡಿಸಿದ್ದು ಝೈನಬ (ರ) ರವರನ್ನು ಬವರಿಸುವಾಗ ಮಾತ್ರ.ಆದರೆ ಆ ವಿವಾಹಕ್ಕೆ ಒಂದು ಮೇಕೆಯನ್ನು ದ್ಸಬಹ್ ಮಾಡಲಾಗಿತ್ತು ಎಂದು ಹದೀಸ್ ನಲ್ಲಿ ವರದಿಯಾಗಿದೆ.ಫಾತಿಮಾ( ರ) ರವರ ವಿವಾಹಕ್ಕೆ ಬರೀ ಖರ್ಜೂರದಿಂದ ಸತ್ಕರಿಸಲಾಗಿತ್ತು ಎಂದು ಪುರಾವಗಳಿಂದ ತಿಳಿದು ಬರುತ್ತದೆ.ಆದ್ದರಿಂದಲೇ ಪ್ರವಾದಿ, (ಸಲ್ಲಾಲ್ಲಾಹು ಅಲೈವಲ್ಲಂ) ಹೇಳಿದರು ಅತೀ ಕಡಿಮೆ ವೆಚ್ಚ ಭರಿಸಿದ ವಿವಾಹವು ಅತೀವ ಬರ್ಕತ್ತಿನಿಂದ ಕೂಡಿದೆ. ಎಂದು.

No comments:

Post a Comment