ಹಾಲ್ಗಡಲಾಡ ಆಲಪ್ಪುಝ

ಲೇ: ಅನೀಸ್ ಕೌಸರಿ ವೀರಮಂಗಿಲ
ದಕ್ಷಿಣದ ವೆನಿಸ್ ಅದೊಂದು ದಿನಕ್ಕಾಗಿ ತನ್ನ ಸೌಂದರ್ಯವನ್ನೇ ಬದಲಾಯಿಸಿತ್ತು...!! ಹಸಿರ ಕೈರಳಿಯ ಮುಕುಟವೆಂದೇ ಖ್ಯಾತಿ ಪಡೆದ "ಕಾಯಲ್" ನ ನಾಡು ಆಲಪ್ಪುಯದ ಹಸಿರ ಬಣ್ಣವನ್ನು ಶ್ವೇತವರ್ಣವಾಗಿ ಮಾರ್ಪಟ್ಟಿತ್ತು.  ಈ ಸವಿಶೇಷತೆಯನ್ನು ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ  ಮಾತಿನಲ್ಲೇ ಹೇಳಬೇಕೆಂದರೆ  "ಆಲಪ್ಪುಯದ ಕಡಲ ಕಿನಾರೆಯಲ್ಲಿ ಇನ್ನೋದು ಕ್ಷೀರ ಸಾಗರ, ಸಾಗರದ ವಿಶಾಲತೆಯ ಮುಂದೆ ನಮ್ಮ ಕಣ್ಣು ಸೋಲುವಂತೆ ಈ ಶಿಸ್ತು ಬದ್ಧ ಜನ ಸಾಗರದ ಮತ್ತೊಂದು ತುದಿಯನ್ನು ನೋಡಲು ನನ್ನೆರಡು ನಯನಗಳು ಸಾಕಾಗುತ್ತಿಲ್ಲ”.
 ವಿದೇಶದಿಂದ ಬಂದಿದ್ದ ಪ್ರತಿನಿಧಿಗಳಂತೂ "ನಾವೀಗ ಅರಫದಲ್ಲಿದ್ದೇವೆಯೋ ಎಂದು ಭಾಸವಾಗುತ್ತಿದೆ’ ಎಂದಿದ್ದರು.
ಅಷ್ಟಕ್ಕೂ ಇಷ್ಟೆಲ್ಲಾ ವಿಶೇಷತೆಗಳಿಗೆ ಆಲಪ್ಪುಯ ಎಂಬ ಆ ಪ್ರದೇಶವು ಸಾಕ್ಷಿಯಾಗಿದ್ದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ೯೦ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭವಾಗಿತ್ತು.
ಫೆಬ್ರವರಿ ತಿಂಗಳ ೧೧ ತಾರಿಖಿನಿಂದ ನಾಲ್ಕು ದಿನಗಳ ಕಾಲ ಆಲಪ್ಪುಯದ ಇಎಂಎಸ್ ಸ್ಟೇಡಿಯಂನಲ್ಲಿ ಹಾಗೂ ಫೆ.೧೪ರಂದು ಅತೀ ವಿಶಾಲವಾದ ಕಡಲ ಕಿನಾರೆಯಲ್ಲಿ ನಡೆದ ಸಮಸ್ತ ಮಹಾ ಸಮ್ಮೇಳನದಲ್ಲಿ ಶ್ವೇತವಸ್ತ್ರದಾರಿಗಳ ದಂಡೇ ಹರಿದು ಬಂದಿದ್ದವು. ಸಮಸ್ತವೆಂಬ ಆಧ್ಯಾತ್ಮಿಕ ಸಂಘಟನೆಯ ಅಗ್ರಗಣ್ಯ ನೇತಾರರು, ಉಲಮಾಗಳು, ದೇಶ-ವಿದೇಶಗಳ ಪ್ರತಿನಿಧಿಗಳು, ರಾಜಕೀಯ ಮುಖಂಡರು, ದೀನೀಪ್ರೇಮಗಳಿಂದ ಆಲಪ್ಪುಯ ನಗರವು ಆ ಒಂದು ವಾರಗಳ ಕಾಲ ತುಂಬಿ ತುಳುಕುತ್ತಿದ್ದವು. ಅಲ್ಲಾಹನ ಇಷ್ಟದಾಸರ ಪಾದಸ್ಪರ್ಶದಿಂದ ಇಸ್ಲಾಮಿನ ಇತಿಹಾಸಕ್ಕೆ ಸಾಕ್ಷಿಯಾಗಿದ್ದ ಆ ಪುಣ್ಯ ನಗರದವು ಇನ್ನಷ್ಟು ಧನ್ಯಗೊಂಡವು.

ಸಮ್ಮೇಳನದಿಂದ ಸಾಮರಸ್ಯ

ಒಂದು ವೇಳೆ ನೀವು ಕೇರಳದ ಆಲಪುಯದಲ್ಲಿ ನಡೆದ ’ಸಮಸ್ತ- ೯೦’ ರ ಐತಿಹಾಸಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದರೆ  ನಿಮಗೂ ತಿಳಿದಿರಬಹುದು ಅಲ್ಲಿನ ವ್ಯವಸ್ಥೆ, ಶಿಸ್ತು, ಕೈಗೊಂಡ ನಿರ್ಣಯ, ಮಂಡಿಸಲಾದ ವಿಷಯ, ಮಾಡಿದ ಭಾಷಣ ಎಲ್ಲಕ್ಕೂ ಮಿಗಿಲಾಗಿ ನಾಡಿಗೆ ನಾಡೇ ಸಜ್ಜುಗೊಂಡ, ಸಂಭ್ರಮಿಸಿದ ರೀತಿ.....ಹೀಗೆ ಎಲ್ಲವೂ.....
ಅಷ್ಟಕ್ಕೂ ಅದೇನೂ ಒಂದು ಏರಿಯಾ ಅಥವಾ ಜಿಲ್ಲೆ ಅಷ್ಟೇಯಾಕೆ ಒಂದು ರಾಜ್ಯ ಕ್ಕೆ ಸೀಮಿತಗೊಂಡ ಸಮ್ಮೇಳನವಾಗಿರಲಿಲ್ಲ, ಅಲ್ಲಿ ಸೇರಿದ್ದು ಒಂದಿಷ್ಟು ಸಾವಿರ ಜನರೂ ಆಗಿರಲಿಲ್ಲ.  ಕಣ್ಣೆತ್ತದ ಮೈಲಿ ಗಟ್ಟಲೆ  ದೂರದಲ್ಲಿ ಹರಡಿ ನಿಂತ ಜನ  ಸಾಗರ. ಒಂದು ರಾಜ್ಯ ಬಿಡಿ, ದೇಶ- ವಿದೇಶಗಳಿಂದ ಬಂದು ಸೇರಿದ ಶ್ವೇತ, ಶುಭ್ರ ವಸ್ತ್ರ ದಾರಿ ಸುನ್ನೀಗಳ ಪಡೆ.... ಥೇಟು ಕಡಲತೀರದಲ್ಲೊಂದು ಹಾಲ್ಗಡಲು !
ನೆನಪು ಮಾಡಿಕೊಳ್ಳಿ, ಅಲ್ಲಿ ನಿಮ್ಮ ನಾಲ್ಕು ಭಾಗಕ್ಕೂ ಕಣ್ಣಾಯಿಸಿದ್ದರೆ  ಅಲ್ಲಿ ಇದ್ದದ್ದು ಒಂದೋ ಮಲಯಾಳಿ.ಅಥವಾ ಕನ್ನಡಿಗ,ಇಲ್ಲವೇ ಉರ್ದು ಭಾಷಿಗ,ಅದಲ್ಲದಿದ್ದರೆ ತಮಿಳು ಭಾಷಿಗ ಅದೂ ಅಲ್ಲದಿದ್ದರೆ ಇನ್ನ್ಯಾವುದೋ ರಾಜ್ಯದ ಇನ್ಯಾವುದೋ ಭಾಷಿಗ. ಆದರೆ ಅಲ್ಲಿ ಭಾಷೆಯ ತಕರಾರಿಲ್ಲ, ಇನ್ನ್ಯಾವುದೇ ಎಡವಟ್ಟಿಲ್ಲ, ಮೇಲು-ಕೀಳೆಂಬ ಭಾವನೆ ಇಲ್ಲವೇ ಇಲ್ಲ. ಅಲ್ಲಿ ಅದೆಷ್ಟೋ ದೊಡ್ಡ ಶ್ರೀಮಂತರಿದ್ದರು. ಉನ್ನತ ಹುದ್ದೆಯಲ್ಲಿದ್ದ ಗಣ್ಯರಿದ್ದರು.ಆದರೆ ಅಲ್ಲಿ ಎಲ್ಲರೂ ಸಮಾನರು. ಎಲ್ಲರೂ  ಮರಳಕಣಗಳ ಮೇಲೆ ಕುಳಿತು ಸಮ್ಮೇಳನದ ಆರಂಭದಿಂದ ಹಿಡಿದು ಕೊನೆಯ ವರೆಗೂ ಶಿಸ್ತಿನಿಂದ ವೀಕ್ಷಿಸಿ ದನ್ಯರಾದರು. ಎಲ್ಲರಿಗೂ ಅದೇನೋ ಒಂಥರಾ ಸಂಭ್ರಮ. ಇನ್ನಿಲ್ಲದ ಉತ್ಸಾಹ. ಆಧ್ಯಾತ್ಮಿಕ ಅನುಭೂತಿ, ಆದರ್ಶ ಶುದ್ಧಿಯಲ್ಲಿ ಗೆದ್ದವೆಂಬ ಮನೋತೃಪ್ತಿ, ಬದುಕು ದಾರಿ ತಪ್ಪಿಲ್ಲ ಎಂಬ ಸಮಾಧಾನ,  ಇಟ್ಟ ದಿಟ್ಟ ಹೆಜ್ಜೆ ನೆಟ್ಟಗಿದೆ ಎಂಬ ಹೆಮ್ಮೆ, ಸಾತ್ವಿಕರ, ಪುಣ್ಯತ್ಮರ ಹೆಜ್ಜೆ ಗುರುತಿನಲ್ಲಿ, ಅವರು ತೋರಿದ ಹಾದಿಯಲ್ಲಿ ಎಡವಟ್ಟಿಲ್ಲದೆ ಬಂಡೆಯಂತೆ ನಿಂತಿದ್ದೇವೆ ಎಂಬ ಸಂತಸ...
 ಅದೇಕಾರಣಕ್ಕೆ ಸಮ್ಮೇಳನ ಶಿಸ್ತು ಬದ್ಧವಾಯಿತು ಎಡವಟ್ಟಿಲ್ಲದೆ ಮಾದರಿ ಆಯಿತು.

ನೆನಪು ಬಾಕಿ ಇಟ್ಟು ಹೋದ ಶೈಖುನಾ

ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಹಸನುಲ್ ಬಸ್ವರಿ (ರ) ಹೇಳುತ್ತಾರೆ.
 ಒಬ್ಬ ಸತ್ಯ ವಿಶ್ವಾಸಿಗೆ ನಾಯಿಯಲ್ಲಿರುವ ಹತ್ತು ಗುಣಗಳು ಅನಿವಾರ್ಯ ಎಂದು. ಅದರಲ್ಲೊಂದು, ಸದಾ ಹಸಿದವನಾಗಿರುವುದು ಇದು (ಸ್ವಾಲಿಹ್)  ಉತ್ತಮರ ಗುಣವಾಗುತ್ತದೆ ಎರಡು, ಸ್ಥಿರವಾದ ಜಾಗವನ್ನು ಆಯ್ಕೆ ಮಾಡದಿರುವುದು. ಇದು ( ಮುತವಕ್ಕಿಲ್)  ಸರ್ವವನ್ನೂ ಅಲ್ಲಾಹನ ಮೇಲೆ ಭಾರ ಅರ್ಪಿಸುವವರ ಲಕ್ಷಣ. ಮೂರು, ರಾತ್ರಿಯಲ್ಲಿ ಕೆಲಹೊತ್ತು ಮಾತ್ರ ನಿದ್ದೆ ಮಾಡುವವರು. ಇದು (ಮುಹಿಬ್ಬ್) ದೇವ ಪ್ರೀಯರ ಸ್ವಭಾವ ಗುಣವಾಗಿದೆ. ನಾಲ್ಕು, ( ಮೀರಾಸ್) ಇದು ಉತ್ತರ ದಾಹಿತ್ವ ಇಲ್ಲದಿರುವುದು. ಇದು ತ್ಯಾಗಿಗಳ ನಡೆಯಾಗಿದೆ.ಐದು, ಎಷ್ಟೇ ದೂರಮಾಡಿದರೂ ಸ್ನೇಹಿತನನ್ನು ಕಳದು ಕೊಳ್ಳದಿರುವುದು. ಇದು ( ಮುರೀದ್)ಪರಮ ಭಕ್ತನ ಗುಣ. ಆರು, ಅತ್ಯಂತ ಕೆಳ ಸ್ಥಾನವನ್ನು ತೃಪ್ತಿಯಿಂದ ಸ್ವೀಕರಿಸುವುದು.ಇದು ವಿನಯವಂತರ ಶೀಲ. ಏಳು , ಒಂದು ಜಾಗ ಸರಿ ಹೋಗದಿದ್ದರೆ ಬೇರೆ ಕಡೆಗೆ ತೆರಳುವುದು ಇದು ತೃಪ್ತ ಜನರ ಸ್ವಭಾವ. ಎಂಟು, ಹೊಡೆದು ಅಟ್ಟಿದರೂ ನಂತರ ಒಂದು ತುಂಡು ರೊಟ್ಟಿ ತೋರಿಸಿದಾಗ ಎಲ್ಲಾ ಮರೆತು  ಹಿಂತಿರುಗುವುದು. ಇದು ಭಯ ಇರುವವರ ನಡವಳಿಕೆ.  ಒಂಬತ್ತು  ಊಟಕ್ಕೆ ಬಂದರೆ ದೂರದಲ್ಲಿ ಕೂರುವುದು.ಇದು ಬಡವರ ಸ್ವಭಾವ. ಹತ್ತು,  ಬೇಸತ್ತು ಹೋದರೆ ತಿರುಗಿ ನೋಡದೆ ಇರುವುದು. ಇದು ಕಾವಲುಗಾರರ ಗುಣವಾಗಿರುತ್ತದೆ.
ತತ್ವಗಳು, ಗುಣಪಾಠಗಳು ಜಗತ್ತಿನಲ್ಲಿರುವ ಎಲ್ಲಾ ವಸ್ತುವಿನಲ್ಲಿರುತ್ತದೆ. ಆದರೆ ನಾವು ತಿಳಿದೋ ತಿಳಿಯದೆಯೋ ಅವುಗಳನ್ನೆಲ್ಲ ಕಡೆಗಣಿಸುವುದುಂಟು. ಸತ್ವವಿಲ್ಲದ ಯಾವುದೇ ವಸ್ತುವನ್ನು ಅಲ್ಲಾಹನು ಸೃಷ್ಟಿ ಮಾಡಿಯೇ ಇಲ್ಲ. ಉತ್ತಮರು, ಯೋಗ್ಯಯರು, ಮಹಾನುಭಾವರು, ಪ್ರತಿಯೊಂದರಲ್ಲೂ ಅಲ್ಲಾಹನ ದೃಷ್ಟಾಂತವನ್ನು ಕಾಣುತ್ತಾರೆ. ಸತ್ಯವನ್ನು ಕಾಣಲು ಎಲ್ಲಾ ವಸ್ತುವಿನಲ್ಲೂ ಆಧಾರಗಳಿವೆ. ಅದು ಮಾನವ ಬದುಕಿನ ವಿಜಯಕ್ಕೆ ಹೇತುವಾಗುತ್ತದೆ.

ಅಹಂ ಅರಿಯದ ಹೆಮ್ಮೆಯ ಉಸ್ತಾದ್


"ಚೆರುಶ್ಶೇರಿ’ ಎಂಬ ಆ ಪುಟ್ಟ ಊರು ಇಂದು ಎಲ್ಲರ ಹೃದಯದಲ್ಲಿ ಚಿರಪ್ರತಿಷ್ಟೆಗೊಂಡಿದೆ. ಝೈನುದ್ದೀನ್ ಮುಸ್ಲಿಯಾರ್  ಎಂಬ ಝೈನುಲ್ ಉಲಮಾರೊಂದಿಗೆ ಥಳಕು ಹಾಕಿ ಕೊಂಡ ಕಾರಣಕ್ಕಾಗಿ ಇಂದು ಆ ಊರನ್ನೇ ಎಲ್ಲರೂ ಮೆಲುಕು ಹಾಕುವಂತಾಗಿದೆ.ಚೆರುಶ್ಶೇರಿ ಉಸ್ತಾದರೆಂಬ ದಿವ್ಯ ಚೇತನಕ್ಕೆ ಜನುಮ ಕೊಟ್ಟ ಕಾರಣಕ್ಕಾಗಿ ಜಗತ್ತಿನ ವಿವಿಧ ಭಾಗಗಳಿಂದ ಚೆನ್ನುಡಿಗಳ ಮಹಾ ಪೂರವೇ ಹರಿದು ಬರುತ್ತಿದೆ ಆ ಊರಿಗೆ.
ಹೌದು, ನಮ್ಮೆಲ್ಲರ ಹೆಮ್ಮೆಯಾಗಿದ್ದ ಹಮ್ಮು, ಬಿಮ್ಮಿಲ್ಲದ ಶೈಖುನಾ ಚೆರುಶ್ಶೇರಿ ಉಸ್ತಾದರು ನಮ್ಮಿಂದ ಅಗಲಿ ಅಲ್ಲಾಹನ ಲಿಖಾನೆಡಗೆ ನಡೆದೇ ಬಿಟ್ಟರು. ಆದರೆ, ಅವರು ನಮ್ಮಡೆಯಲ್ಲಿ ಜೀವಂತವಾಗಿಯೇ ಉಳಿಯಲಿದ್ದಾರೆ.ಮುಸ್ಲಿಂ ಜಗತ್ತಿನ ಅಮರ ಸಾಮ್ರಾಟ ಶೈಖುನಾ ಶಂಸುಲ್ ಉಲಮಾ ಇಂದಿನ ಜಮಾನದ ನವ ಪೀಳಿಗೆಯಲ್ಲೂ ಯಾವ ರೀತಿ ಪ್ರಸ್ತುತ ಗೊಂಡಿದ್ದಾರೋ ಅದೇ ತೆರನಾಗಿ ಅವರ ಉತ್ತರಾಧಿಕಾರಿಯಾಗಿ ಎರಡು ದಶಕಗಳ ಕಾರ್ಯ ನಿರ್ವಹಿಸಿದ ಚೆರುಶ್ಶೇರಿ ಉಸ್ತಾದರೂ ಜಗತ್ತಿಗೆ ಆದರ್ಶಪ್ರಾಯರಾಗಿರುತ್ತಾರೆ ಎಂಬುದು ನೆನಪಿಡಬೇಕಾದ ಅಂಶ!
*****
ಚೆರುಶ್ಶೇರಿ ಉಸ್ತಾದರ ವಿಯೋಗದಿಂದ ತೆರವಾದ ಸ್ಥಾನಕ್ಕೆ ಇದೀಗ ಖ್ಯಾತ  ವಿದ್ವಾಂಸರೂ ,  ಚಿಂತಕರೂ, ಬಹು ಭಾಷ ಸಾಹಿತಿಯೂ ಆಗಿರುವ ಶೈಖುನಾ ಪ್ರೊ ಆಲಿಕುಟ್ಟಿ ಉಸ್ತಾದ್ ಅವರನ್ನು ’ಸಮಸ್ತ’ ದ ಹಿರಿಯ ವಿದ್ವಾಂಸರು  ಆಯ್ಕೆಮಾಡಿದ್ದಾರೆ. ಪಟ್ಟಿಕ್ಕಾಡ್ ಜಾಮಿಆಃ ನೂರಿಯಾ ಪ್ರಾಂಶುಪಾಲರು, ಹಲವು ಸಂಘ-ಸಂಸ್ಥೆಗಳ ಮಾರ್ಗದರ್ಶಿಯೂ, ಹಲವು ಪತ್ರಿಕೆಗಳ ಸಂಪಾದಕರೂ ಆಗಿರುವ ಆಲಿಕುಟ್ಟಿ ಉಸ್ತಾದ್, ಉತ್ತಮ ಬರಹಗಾರರು, ಲೇಖಕರೂ ಹಾಗೂ ಸಮರ್ಥ ಸಂಘಟಕರೂ ಆಗಿದ್ದಾರೆ.
ಉಸ್ತಾದರ ನಾಯಕತ್ವದಡಿ ’ಸಮಸ್ತ’ದ ಸಂದೇಶ ಇನ್ನಷ್ಟು ಪ್ರದೇಶಗಳಿಗೆ ವ್ಯಾಪಿಸಿ ಎಲ್ಲೆಡೆ ಧಾರ್ಮಿಕ ಚೈತನ್ಯ ಪ್ರಸರಿಸಲಿ....
*****
ಕೇರಳದ ಆಲಪುಯದಲ್ಲಿ ಜರಗಿದ ’ಸಮಸ್ತ-೯೦’ರ ಐತಿಹಾಸಿಕ ಸಮ್ಮೇಳನವೇ ಆ ಸಂಘಟನೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ. ದೇಶದ ವಿವಿಧ ರಾಜ್ಯಗಳಿಂದ ’ಸಮಸ್ತ’ದ ಕರೆಗೆ ಓಗೊಟ್ಟು ಅದೆಷ್ಟೋ ಲಕ್ಷಾಂತರ ಲೆಕ್ಕದಲ್ಲಿ ಬಂದು ಸೇರಿದ ಸುನ್ನಿಗಳು ಸಾಕ್ಷಾತ್  ಹಾಲ್ಗಡಲನ್ನೇ ನಿರ್ಮಿಸಿ ಧನ್ಯರೆನಿಸಿ ಕೊಂಡರು. ಈ ’ಸಮಸ್ತ’ದ ಅಧೀನದಲ್ಲಿ ವಿದ್ಯಾರ್ಥಿ-ಯುವ ಜನರಲ್ಲಿ ಧಾರ್ಮಿಕ,ನೈತಿಕ ಪ್ರಜ್ಞೆ ಹಾಗೂ ಸೇವಾ ಮನೋಭಾವ ಮೂಡಿಸಿ ಅವರನ್ನು  ನಾಡಿನ ಸತ್ಪ್ರಜೆಗಳನ್ನಾಗಿ ರೂಪಿಸುವ ಸಂಘಟನೆಯಾಗಿದೆ ಎಸ್ಕೆಎಸ್ಸೆಸ್ಸೆಫ್. ಪಾಣಕ್ಕಾಡ್ ಸಾದಾತ್ ಗಳ ಸಾರಥ್ಯ ದಲ್ಲಿ ಕೇರಳದಲ್ಲಿ ಬಲಿಷ್ಟವಾಗಿರುವ ಈ ಎಸ್ಕೆಎಸ್ದೆಸ್ಸಫ್,  ನಮ್ಮ  ಕರ್ನಾಟಕದ ಕೆಲ ಜಿಲ್ಲೆಗಳಲ್ಲೂ ಸಕ್ರಿಯವಾಗಿದ್ದು  ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡಿದೆ.   ಇದೀಗ ರಾಜ್ಯದ್ಯಂತ ಸಂಘಟನೆಯನ್ನು ವಿಸ್ತರಿಸಿ ಬಲಿಷ್ಟವಾಗಿ ಕಟ್ಟುವ ಧ್ಯೇಯದೊಂದಿಗೆ ನೂತನ ರಾಜ್ಯ ಘಟಕ ಕೇಂದ್ರೀಯ ನಾಯಕರ ಉಪಸ್ಥಿತಿಯಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಹಾಗೆನೋಡಿದರೆ, ಈ ಹಿಂದೆ ಪಾಣಕ್ಕಾಡ್ ಸಾದಿಕಲಿ ಶಿಹಾಬ್ ತಂಙಳ್ ಕೇಂದ್ರೀಯ ಅಧ್ಯಕ್ಷರಾಗಿದ್ದಾಗ ಮರ್ಹೂಂ ಕೋಟ ಉಸ್ತಾದ್ ರವರ ಕಾಲದಲ್ಲಿ ರಾಜ್ಯ ಘಟಕ ರಚಿಸಿ ಹಲವು ಜನಪರ ಕಾರ್ಯಕ್ರಮಗಳನ್ನು ಸಂಘಟಿಸಿ ಗಮನ ಸೆಳೆದಿತ್ತು. ಆದರೆ ಇಂದಿನಂತೆ ಸಾಂಘಿಕ ವ್ಯವಸ್ಥೆ ಅಂದಿರದ ಕಾರಣ ಅಂದು ಅದು ಇಡೀ ರಾಜ್ಯ ವ್ಯಾಪಿ ತಲುಪಿರಲಿಲ್ಲವೇನೋ. ಆದರೆ ಇದೀಗ ವ್ಯವಸ್ಥಿತ ಸಾಂಘಿಕ ಶಿಸ್ತಿನೊಂದಿಗೆ ಉತ್ಸಾಹಿ ಯುವಕರನ್ನೊಳಗೊಂಡ ಪ್ರತಿಭಾವಂತ ತಂಡವನ್ನೇ ರಚಿಸಲಾಗಿದ್ದು ಈ ನೂತನ  ರಾಜ್ಯ ಘಟಕವು ರಾಜ್ಯವ್ಯಾಪಿ ಸಂಘಟನೆಯನ್ನು ವಿಸ್ತರಿಸಿ ಕೆಡುಕು ಮುಕ್ತ ಒಳಿತಿನ  ಸಮಾಜ ನಿರ್ಮಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸೋಣ.

ಚೆರುಶ್ಶೇರಿ ಉಸ್ತಾದರ ವಿದಾಯ ಭಾಷಣದ ಮುಖ್ಯಾಂಶಗಳು

ಮಂಗಳೂರಿನಲ್ಲಿ  ನಡೆದ ಸಮಸ್ತ-೯೦ ಉದ್ಘಾಟನಾ ಸಮಾರಂಭದಲ್ಲಿ ತನ್ನ ವಿದಾಯ ಭಾಷಣ ಮಾಡಿದ ಶೈಖುನಾ ಚೆರುಶ್ಶೇರಿ ಉಸ್ತಾದ್


  •  (ಪ್ರವಾದಿ ಸ.ಅ.ರವರ ಹಜ್ಜತುಲ್ ವಿದಾಹ್ ಭಾಷಣವನ್ನು ಉಲ್ಲೇಖಿಸುತ್ತಾ...) ನನಗೂ ಹೇಳಲಿಕ್ಕಿರುವುದು, ಎಲ್ಲರೂ ಅಲ್ಲಾಹನ ಭಯಭಕ್ತಿ(ತಖ್ವಾ)ಯಿಂದ ಬದುಕಬೇಕು.
  •  ಪ್ರವಾದಿ ಸ.ಅ.ರವರ ಸುನ್ನತನ್ನು ಸುರಕ್ಷಿತವಾಗಿ ಕಾಪಾಡುವುದಕ್ಕಾಗಿಯೇ ವರಕ್ಕಲ್ ಮುಲ್ಲಕೋಯ ತಂಙಳರಿಂದ ಹಿಡಿದು ಕಳೆದು ಹೋದ ಸಮಸ್ತದ ಎಲ್ಲಾ ಮಹಾನುಭಾವರು ಶ್ರಮಪಟ್ಟಿರುವುದು... ಅವರು ತೋರಿಸಿಕೊಟ್ಟ ಹಾದಿಯಲ್ಲೇ ಸಾಗಿ ನಾವೂ ಕೂಡ ಸುನ್ನತ್ ಜಮಾಅತ್ತನ್ನು ಇನ್ನಷ್ಟು ಭದ್ರಪಡಿಸಲು ಪರಿಶ್ರಮಿಸಬೇಕಿದೆ.
  •  ಒಂದು ವೇಲೆ ನಮ್ಮ ಪೂರ್ವಿಕರು ಸಮಸ್ತವೆಂಬ ಆಧ್ಯಾತ್ಮಿಕ ಸಂಘಟನೆಯನ್ನು ಸ್ಥಾಪಿಸದೇ ಹೋಗಿದ್ದರೆ ಇಂದು ನಾವು ಒಳಿತು ಯಾವುದು? ಕೆಡುಕು ಯಾವುದು? ಎಂದು ತಿಳಿಯದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.
  •  ಸುನ್ನತ್ ಜಮಾಅತ್ ಮತ್ತು ಸತ್ಕರ್ಮಗಳು ಸಂರಕ್ಷಿಸುವುದೇ ಸಮಸ್ತದ ಉದ್ದೇಶ.