ಕಣ್ಣೀರಿನ ಕಥೆ ಹೇಳುತ್ತಿದ್ದಾಳೆ 'ನಂಡೆ ಪೆಂಙಳ್'

'ಮನದ ಮಾತು' ಅಲ್ ಅಹ್ಸನ್ ಮಾಸಿಕ
  ಕೆ.ಎಂ.ಎ.ಕೊಡುಂಗಾಯಿ
..........................................

 ಕಣ್ಣೀರಿನ ಕಥೆ ಹೇಳುತ್ತಿದ್ದಾಳೆ 'ನಂಡೆ ಪೆಂಙಳ್'

     'ನಂಡೆ ಪೆಂಙಳ್ '
     ಆ ಹೆಸರಲ್ಲೇ ಅದೇನೋ ಪ್ರೀತಿ,
ಮಮತೆ ,ಕರುಣೆ ಎಲ್ಲವೂ ಇದೆ.ಜೊತೆಗೆ ಪಾಲನೆ, ರಕ್ಷಣೆಯ ಭರವಸಯೂ ಇದೆ. ಹೀಗೆ ಎಲ್ಲವೂ ಅಡಕವಾಗಿರುವ 'ನಂಡೆ ಪೆಂಙಳ್ ' ಅಥವಾ 'ನನ್ನ ಸಹೋದರಿ'ಎಂಬ ಸ್ಪೆಷಲ್ ಅಟ್ರೆಕ್ಷನ್, ಕರುಳಬಳ್ಳಿಯ ಸಂಬಂಧವನ್ನು ನೆನಪು ಮಾಡಿಕೊಟ್ಟು ಸಹೋದರತೆಯ ಸಂಬಂಧವನ್ನು ಭದ್ರವಾಗಿ ಕಟ್ಟುತ್ತದೆ.
     ಪ್ರತಿಯೊಬ್ಬರಿಗೂ ತಂಗಿಯೆಂದರೆ ವರ್ಣನೆಗೆ ನಿಲುಕದ ಸಂಪತ್ತು.ಎಳೆಯದರಲ್ಲಿ ತಂಗಿಯ ಆಟ,ತಂಗಿಯ ಓಟ,ತಂಗಿಯೊಂದಿಗೆ ಊಟ, ತಂಗಿ ನೀರುಣಿಸುವ  ಹೂದೋಟ,ಹೂ ಅರಳಿದಾಗ ಪಿಳಿ ಪಿಳಿ ಕಣ್ ಬಿಟ್ಟ ಅವಳ ನೋಟ,ಮುಂದೆ ಕಲಿಕೆಗೆ ಶುರುವಿಟ್ಟ ಚೂಟಿಯಾದ ಅವಳ ಪಾಠ,ಅದೇ ಹಾದಿಯಲ್ಲಿ ಮಾಡುವ ಸಾಧನೆ,ಶೋಧನೆ ,ಇನ್ನು ವಿವಾಹ ಪ್ರಾಯಕ್ಕೆ ಬಂದಾಗ ಮದುವೆ ಮಾಡಿಕೊಟ್ಟು ಗಂಡನ ಮನೆಗೆ ಕಳುಹಿಸಿ ಕೊಡುವಾಗ ತಂದೆ ತಾಯಿಯ ಜೊತೆಗೆ ಅಣ್ಣನ ಕಣ್ಣಂಚಿನಲ್ಲೂ ಜಿನುಗುವ ಕಣ್ಣೀರು,ವಿದಾಯದ ವೇದನೆ,ವಿರಹದ ಖಾಲಿತನ ,ಮುಂದೆ ಗಂಡನೊಂದಿಗೆ ತವರಿಗೆ ಬರುವಾಗ ಆಗುವ ಸಂತೋಷ,ನನಗಾಗಿ,ನನ್ನ ಮದುವೆಗಾಗಿ ತಂದೆ ತಾಯಿಯೊಂದಿಗೆ ಕೈ ಜೋಡಿಸಿ ದುಡಿದ ಅಣ್ಣ,ನನ್ನನ್ನು 'ತಂಗಿ ಪಾರಿವಾಳ'ದ ರೀತಿ ಮುದ್ದಿನಿಂದ ಲಾಲಿಸಿ ಬೆಳೆಸಿದ ಅಣ್ಣ ಎಂಬ ಪ್ರೀತಿ ,ಗೌರವದೊಂದಿಗೆ ಅವಳು ನೋಡುವ ಪರಿ,ಮುಂದೆ ಮಕ್ಕಳಾದಾಗ 'ಇಕೋ ನಿನ್ನ ಮಾವ' ಎಂದು ಮಕ್ಕಳಲ್ಲಿ ಹೇಳಿಕೊಟ್ಟು ಮಕ್ಕಳಲ್ಲೂ ಪ್ರೀತಿ, ಗೌರವ ತುಂಬಿ ಬಿಡುವ 'ನಂಡೆ ಪೆಂಙಳ್' ಅಥವಾ 'ನನ್ನ ಸಹೋದರಿ' ಅಣ್ಣನ ಪಾಲಿಗೆ ಉತ್ಸಾಹದ ಚಿಲುಮೆ,ಬದುಕಿನೊಳು ಪೂರ್ತಿಯಾಗಿ ಬೆಸೆದು ಕೊಳ್ಳುವ ಪ್ರೀತಿ,ಮಮತೆಯ ಸಲುಗೆಯ ರಕ್ತ ಸಂಬಂಧ.....
    ವಾಹ್, ಆ ಕರುಳ ಬಳ್ಳಿಯ ಪ್ರೀತಿಯ ಸಂಬಂಧ ಎಣಿಕೆಗೆ ಸಿಗದು,ಬರಹ ಅಥವಾ ಮಾತಿನ ವರ್ಣನೆಗೂ ನಿಲುಕದು. ಆ ತೆರನಾದ ಶಕ್ತಿ ಆ ಒಡ ಹುಟ್ಟಿದ ಸಂಬಂಧದಲ್ಲಿ ಇದೆ.ಅದೇ ಕಾರಣಕ್ಕೆ ಪ್ರತಿಯೊಬ್ಬ ಅಣ್ಣ ,ತಂಗಿಯ ಏಳಿಗೆಯನ್ನು ಬಯಸುತ್ತಾನೆ, ಅವಳ ಮದುವೆ,ಅವಳ ದಾಂಪತ್ಯ ವೆಲ್ಲವೂ ಮಂಗಳಕರವಾಗಿ ನಡೆಯ ಬೇಕೆಂಬ ಕನಸು ತಂದೆ ತಾಯಿಯಷ್ಟೇ ಅಣ್ಣನಿಗೂ ಇರುತ್ತದೆ, ಅದು ಇರಬೇಕು ಕೂಡ.ಅಂತಹ ಬಿಟ್ಟಿರಲಾರದ ಪ್ರೀತಿಯ,ಒಳಿತಿನ ಸೌಹಾರ್ಧತೆಯ ಕೌಟುಂಬಿಕ ಸಂಬಂಧ ಇರಬೇಕೆಂದು ಪವಿತ್ರ ಧರ್ಮವೂ ಕಲಿಸಿಕೊಡುತ್ತದೆ.
       ಒಟ್ಟಿನಲ್ಲಿ ತಂಗಿಯ ಮದುವೆ, ಅಣ್ಣನ ಮದುವೆಯೆಂದರೆ ಪರಸ್ಪರ ಹೇಳಿತೀರದ ಸಂಭ್ರಮ,ಉತ್ಸಾಹ ಎಲ್ಲವೂ ಆಗಿರುತ್ತದೆ .ಆದರೆ ಅಂತಹ ಸಂಭ್ರಮ, ಸಂತಸವನ್ನು ಅನುಭವಿಸುವ ಸೌಭಾಗ್ಯ ದೊರೆಯದ ಅದೆಷ್ಟು ತಂಗಿಯಂದಿರು ಈ ಸಮಾಜದಲ್ಲಿ ಇದ್ದಾರೆ ಗೊತ್ತಾ, ನಮ್ಮ ಮನೆ ಮಗಳು ಮದುವೆ ಮಾಡಿಕೊಂಡು ಗಂಡನ ಕೈ ಹಿಡಿದು ಸಂತೋಷದಿಂದ ಸಾಗುವಾಗ ಆ ಜೋಡಿಯ ಸಂಭ್ರಮೋಲ್ಲಸದ ನಡೆಯನ್ನು ಪಕ್ಕದ ಮನೆಯೊಳಗಿನಿಂದ ಕಿಟಕಿಯ ಮೂಲಕ ಇಣುಕಿ ನೋಡಿ 'ಅವಳಿಗಿಂತ ವಯಸ್ಸಿನಲ್ಲಿ ಹಿರಿಯವಳಾದ ನನಗೆ ಬಡತನದ ಕಾರಣದಿಂದ ಅಂತಹ ದಾಂಪತ್ಯದ ಭಾಗ್ಯ ದೊರೆಯಲಿಲ್ಲ'ವೆಂದು ನೊಂದುಕೊಂಡು ಮನದಾಳದ  ಬಯಕೆಗಳನ್ನು ಅದುಮಿಟ್ಟು ಕಣ್ಣಂಚಿನಲ್ಲಿ ನೀರು ತುಂಬಿಸಿಕೊಂಡು ಮೌನ ರೋದನ ನಡೆಸುವ  ಮೂವತ್ತರ ಹರೆಯ ಮೀರಿದ ನಮ್ಮದೇ ಸಮುದಾಯದ ಸಹೋದರಿಯರು ಎಷ್ಟಿಲ್ಲ ,ಆ ಬಗ್ಗೆ ನಾವು ಯೋಚಿಸಿದ್ದು ಇದೆಯಾ? ಆ ಹೆಂಗಳೆಯರ ಕಮರಿದ ಕನಸು,ಕರಟಿದ ಬಯಕೆಗಳ ಕಣ್ಣೀರಿನ ಕಥೆ ಏನಾದರೂ ನಮಗೆ ಗೊತ್ತಿದೆಯಾ?
    .ಇಲ್ಲಿ ಕೇಳಿ, ಸಮಾಜ ಸೇವಾ ಸಂಘಟನೆ ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್ ನಡೆಸಿದ ಸಮೀಕ್ಷೆ ಹಾಗೂ ' ನಂಡೆ ಪೆಂಙಳ್ ' (ನನ್ನ ತಂಗಿ) ಎಂಬ ಹೆಸರಿನಲ್ಲಿ ದ.ಕ.ಜಿಲ್ಲೆಯಾದ್ಯಂತ ನಡೆಸಿದ ಅಭಿಯಾನವು ಇಡೀ ಸಮಾಜದ ಕಣ್ಣೀರ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಸಮಾಜದ ಮುಂದೆ ತೆರೆದಿಟ್ಟಿದೆ. ' ನಂಡೆ ಪೆಂಙಳ್ ' ತನ್ನ ಕರುಣಾಜನಕ ಕಥೆಯನ್ನು ಅನಾವರಣ ಗೊಳಿಸಿದ್ದಾಳೆ !
        ಮದುವೆ,ಹಾಗೂ ಕುಟುಂಬ ಕಟ್ಟುವ ಕನಸು,ಬಯಕೆಗಳು ಇಲ್ಲದವರು ಯಾರಿದ್ದಾರೆ ಹೇಳಿ, ಅಂತದರಲ್ಲಿ ವಯಸ್ಸು ಮೂವತ್ತು ದಾಟಿದ ಸಾವಿರಕ್ಕೂ ಮಿಕ್ಕಿದ ಹೆಣ್ಮಕ್ಕಳು ನಮ್ಮ ಜಿಲ್ಲೆಯಲ್ಲಿದ್ಧಾರೆ ಎಂದರೆ ಏನೂ ತಮಾಷೆನಾ? ಅದೂ ಮುಸ್ಲಿಮರಲ್ಲಿ ಅತೀ ಹೆಚ್ಚು ಶ್ರೀಮಂತರು ಹಾಗೂ ಸುಶಿಕ್ಷಿತರು ಇರುವ ಈ ಜಿಲ್ಲೆಯ ಸಮುದಾಯದ ದುರಂತ ಕಥೆ ಹೀಗಾದರೆ ಅದಕ್ಕಿಂತ ದೊಡ್ಡ ನಾಚಿಕೆ ಬೇರೆನಿದೆ ಹೇಳಿ? ಅಷ್ಟಕ್ಕೂ ನಮ್ಮಲ್ಲಿ ನಡೆಯುವ ಅದ್ದೂರಿ ಮದುವೆ, ಪಾರ್ಟಿಗಳಿಗೇನು ಕಡಿಮೆ ಇದೆ? ಸಂಘ, ಸಂಸ್ಥೆಗಳ ವಾರ್ಷಿಕೋತ್ಸವ,ಮತ್ತಿತರ ಕಾರ್ಯಕ್ರಮಗಳಿಗೆ ನಾವು ಮಾಡುವ ಖರ್ಚಿಗಳೆಷ್ಟು? ಯಾವುದರಲ್ಲಿ ಇಲ್ಲಿ ನಮ್ಮವರ ಆಡಂಭರಕ್ಕೆ ಕಡಿಮೆಯಿದೆ ಹೇಳಿ?
         ಆದರೂ ಯಾಕೆ ಕಾದು ಕಾದು ಮದುವೆಯ ಕನಸನ್ನೇ ಕೈಬಿಟ್ಟು, ಬಯಕೆಗಳಿಗೆ ವಿದಾಯ ಹೇಳಿ ನಮ್ಮ ಹೆಣ್ಮಕ್ಕಳು ಕಣ್ಣೀರಲ್ಲಿ ಕಳೆದು ಖಿನ್ನತೆಗೊಳಗಾಗ ಬೇಕಾದ ದುರಂತ ಪರಿಸ್ಥಿತಿ ಬಂತು? ಮಕ್ಕಳ ಬಗ್ಗೆ ಚಿಂತಿಸಿ,ಚಿಂತಿಸಿ ಕೊರಗಿ ಕೊರಗಿ ಕಣ್ಮುಚ್ಚ ಬೇಕಾದ ಪರಿಸ್ಥಿತಿ ಹೆಣ್ಣು ಹೆತ್ತವರಿಗೆ ಯಾಕೆ ಬಂತು?
      ಇದೇನು ಸಿಲ್ಲಿ ಎಂದು ಕೊಂಡಿರಾ,  ಆಲೋಚಿಸ ಬೇಕಾದ ವಿಚಾರ ವಲ್ಲವೇ ಇದು?
      ಯಾಕೆ ಸಮಾಜ ಆಲೋಚಿಸುತ್ತಿಲ್ಲ,  ಸಮಾಜಕ್ಕೆ ನೆರವಾಗುವ ಧ್ಯೇಯದೊಂದಿಗೆ ಹುಟ್ಟಿಕೊಳ್ಳುವ ಸಂಘ,ಸಂಸ್ಥೆಗಳಾಗಲಿ, ತಳಮಟ್ಟದಲ್ಲಿ ಸಮಾಜದ ಪ್ರಗತಿಗಾಗಿಯೇ ಕಟ್ಟಿಕೊಳ್ಳುವ ಮೊಹಲ್ಲಾ- ಜಮಾಅತ್ ಸಮಿತಿಗಳೇಕೆ ತಮ್ಮ ಧ್ಯೇಯವನ್ನು ಮರೆತು ಕೇವಲ ಕಾಟಾಚಾರದ ಸೇವೆಗೆ ಸೀಮಿತಗೊಳ್ಳತ್ತದೆ? ಅದೇ ನಮ್ಮಲ್ಲಿ  ಆ ಸಂಘ -ಸಂಸ್ಥೆಗಳ,ಜಮಾಅತ್ ಗಳ ಅಧಿಕಾರ ಗಿಟ್ಟಿಸಿಕೊಳ್ಳಲು ಎಷ್ಟು ಪೈಪೋಟಿ ನಡೆಯುತ್ತಿಲ್ಲ, ಥೇಟು ರಾಜಕೀಯದಂತೆ ಚುನಾವಣೆ ನಡೆಯುವ ಹಾಗೂ ಮತ ಯಾಚನೆ ನಡೆಸುವ, ಅಷ್ಟೇ ಅಲ್ಲ,ಆ ಹೆಸರಲ್ಲಿ ಜಂಗಿ ಕುಸ್ತಿ ನಡೆಯುವ ಪರಿಸ್ಥಿತಿ ನಮ್ಮ ಕೆಲವೊಂದು ಮೊಹಲ್ಲಾ, ಸಂಘ-ಸಂಸ್ಥೆಗಳಲ್ಲಿ ಇಂದು ಸಾಮಾನ್ಯವಾಗಿ ಬಿಟ್ಟಿಲ್ಲವೇ, ಆದರೂ ಯಾಕೆ ಸಮಾಜವನ್ನು ಮೇಲೆತ್ತುವುದರ ಬಗ್ಗೆ ಯೋಚಿಸುತ್ತಿಲ್ಲ, , 'ಉತ್ತಮ ಸಮಾಜ' ಎಂದು ಪವಿತ್ರ ಕುರ್ ಆನಿನಿಂದ ಕರೆಸಿಕೊಂಡ ನಾವು ಯಾಕೆ ಸರ್ವ ಕ್ಷೇತ್ರಗಳಲ್ಲೂ ಹಿನ್ನಡೆ ಅನುಭವಿಸುತ್ತಿದ್ದೇವೆ, ದೂರದ ಎಲ್ಲೋ ಸಮಾಜಕ್ಕೆ ಅನ್ಯಾಯವಾದಾಗ ಗಂಟೆಗಟ್ಟಲೆ ಆ ಬಗ್ಗೆ ಮಾತನಾಡುವ, ಕಣ್ಣೀರಿಡುವ ನಮಗೆ ಯಾಕೆ ನಮ್ಮದೇ ಮೊಹಲ್ಲಾದಲ್ಲಿ ಬಡತನದಿಂದ ದಿನದ ಖರ್ಚು ಹಾಗೂ ರೋಗ ಚಿಕಿತ್ಸೆಗಳಿಗೂ ಗತಿಯಿಲ್ಲದೆ ಕಂಗಾಲಾಗಿರುವ ಕುಟುಂಬಗಳ ಬಗ್ಗೆ, ಹಾಗೂ ಕಣ್ಣೀರಿಡುವ ಹೆಣ್ಮಕ್ಕಳ ಬಗ್ಗೆ ಯೋಚಿಸುತ್ತಿಲ್ಲ,? ಅತ್ತ ಹತ್ತೊಂಬತ್ತು ಶೇಖಡಾ ಮುಸ್ಲಿಮರಿರುವ ಅದರಲ್ಲೂ ಬರೋಬ್ಬರಿ ನೂರಕ್ಕೂ ಮಿಕ್ಕಿದ ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಾಗಿರುವ ನಲ್ವತ್ತರಷ್ಟು ಕ್ಷೇತ್ರಗಳಲ್ಲಂತೂ ಸ್ವತಃ  ಅಭ್ಯರ್ಥಿಗಳನ್ನು ಮುಲಾಜಿಲ್ಲದೆ ಆಯ್ಕೆ ಮಾಡಬಲ್ಲ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಅರವತ್ತಕ್ಕೂ ಮಿಕ್ಕಿದ ಶಾಸಕರನ್ನು ಹೊಂದಿದ್ದ ಮುಸ್ಲಿಮರು ಇಂದು ಬರಿ ಇಪ್ಪತ್ತು ಚಿಲ್ಲರೆಗೆ ಬಂದು ಬಿಟ್ಟಿದ್ದರೆ ಅದು ಅಲ್ಲಿನ ಮುಸ್ಲಿಮರ ಒಗ್ಗಟ್ಟಿನ ಕೊರತೆ ಎಂದು ವಿಶ್ಲೇಷಣೆ ನಡೆಸುವ ನಾವೇನು ಒಗ್ಗಟ್ಟಿನಲ್ಲಿ ಮಾದರಿಯಾಗಿದ್ದೇವೆ ಅಂದು ಕೊಂಡಿರಾ? ನಾಳೆ ನಮ್ಮಲ್ಲಿ ಚುನಾವಣೆ ನಡೆದರೂ ನಮ್ಮ ಪರಿಸ್ಥಿತಿ ಅದಕ್ಕಿಂತ ಭಿನ್ನವಲ್ಲ,! ಅಷ್ಟೊಂದು ಭಿನ್ನಮತ,ಒಳ ಜಗಳ ನಮ್ಮಲ್ಲಿ ಇಲ್ಲವೇ? ಇಲ್ಲ ವೆನ್ನಲು ಯಾರಿಗೆ ಸಾಧ್ಯವಿದೆ ಹೇಳಿ? ಏನಿಲ್ಲವೆಂದರೂ ಮೊಹಲ್ಲಾ ಜಮಾಅತ್ ಗಳ,ಸಂಘ-ಸಂಸ್ಥೆಗಳ  ಅಧಿಕಾರ,ಪ್ರತಿಷ್ಟೆಗಳಿಗಾದರೂ ಜಗಳವಾಡಿ ಸುದ್ದಿಯಾಗುತ್ತೇವೆ. ಅದೇ ಪುಟ್ಟ ಕೇರಳಕ್ಕೆ ಬಂದರೆ ಅಲ್ಲಿನ ಹೆಚ್ಚಿನ ಮುಸ್ಲಿಮರು ಹಿಂದಿನ ಕಾಲದಿಂದಲೇ ಧಾರ್ಮಿಕವಾಗಿ 'ಸಮಸ್ತ'ದ ಅಧೀನದಲ್ಲಿ ಒಗ್ಗೂಡಿದರೆ ರಾಜಕೀಯವಾಗಿ ಪಾಣಕ್ಕಾಡ್ ಸಾದಾತ್ ಗಳ ಸಮರ್ಥ ನಾಯಕತ್ವದಡಿ ಒಗ್ಗೂಡಿದರ ಫಲವಾಗಿ ಇಂದು ದೇಶದಲ್ಲೇ ಇತರ ಕಡೆಗಳಿಗಿಂತ ಅವರು  ಒಂದಿಷ್ಟು ಅಭಿವೃದ್ಧಿ ಪಥದಲ್ಲಿ ಇದ್ದಾರೆ ಎಂದರೆ ತಪ್ಪಲ್ಲ.
      ಅದಿರಲಿ, ಕಾಲದ ಗೋಡೆ ಬರಹ ಅರ್ಥಮಾಡಿ ಕೊಂಡಾದರೂ ಸಮಾಜದ ಏಳಿಗೆಗಾಗಿ ಭಿನ್ನತೆ ಮರೆತು ಒಗ್ಗೂಡುವುದು ಅನಿವಾರ್ಯ, ಇದು ಎಲ್ಲರಿಗೂ ಅರ್ಥವಾದರೆ ಒಳ್ಳಯದು. ಈ ಒಗ್ಗಟ್ಟು,ಹಾಗೂ ಸಾಮುದಾಯಿಕ ಕಾಳಜಿಗಳಿಂದಲೇ ಸಮಾಜವನ್ನು ಮೇಲೆತ್ತಲು ಸಾಧ್ಯ. ಆಗ ಬಡತನ ಮುಕ್ತ ಸಮಾಜ ಕಟ್ಟಬಹುದು, ವರದಕ್ಷಿಣೆ ರಹಿತ ಸಮಾಜ ರೂಪಿಸ ಬಹುದು,ಮದುವೆಯ ಹರೆಯ ಮೀರಿ ಹೆಣ್ಮಕ್ಕಳು ಮನೆಯಲ್ಲಿ ಉಳಿಯುವುದನ್ನು ತಪ್ಪಿಸಬಹುದು,ಕೆಡುಕು ಮುಕ್ತ ಮಾದರಿ ಮೊಹಲ್ಲಾ ಕಟ್ಟಬಹುದು. ಸ್ವಸ್ಥ ನಾಡು, ಸ್ವಸ್ಥ ಸಮಾಜ ರೂಪಿಸ ಬಹುದು.
       ಅಂದಹಾಗೆ ಇದೀಗ ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್ ನವರು ಮೂವತ್ತು ದಾಟಿಯೂ ಇನಿಯನ ಮುಖ ಕಾಣದೆ ಕಣ್ಣೀರಲ್ಲಿ ಕಳೆಯುತ್ತಿರುವ ಹೆಣ್ಮಕ್ಕಳ ಸಮೀಕ್ಷೆಯಲ್ಲಿ ತೊಡಗಿದ್ದಾರಲ್ಲ,ಆ ಅಭಿಯಾನದಲ್ಲಿ ಪ್ರತಿ ಯೊಬ್ಬರೂ ಕೈಜೋಡಿಸಬೇಕಿದೆ.ಈಗಾಗಲೇ ಹಲವಾರು ಜಮಾಅತ್ ಗಳಿಗೆ ತೆರಳಿ ಜಮಾಅತ್ ಸಮಿತಿಗಳ ಸಹಕಾರದೊಂದಿಗೆ ಈ ಅಭಿಯಾನದಲ್ಲಿ ಟ್ಯಾಲೆಂಟ್ ನ ತಂಡ ಕಾರ್ಯ ಪ್ರವರ್ತವಾಗಿದೆ. ಈಗಾಗಲೇ ಸಮಾಜದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಿ ಹತ್ತು ಹಲವು ಸಮಾಜ ಸೇವೆಯಿಂದ ಮನೆಮಾತಾಗಿರುವ ಸಮಾಜದ ಹಿತ ಚಿಂತಕ ರವೂಫ್ ಪುತ್ತಿಗೆ ಸ್ಥಾಪಕ ಅಧ್ಯಕ್ಷರಾಗಿರುವ ಮಾದರಿ ಸಂಘಟನೆ ಟಿ.ಆರ್ .ಎಫ್., ರಪೀಕ್ ಮಾಸ್ಟರ್,ರಿಯಾಝ್ ಕಣ್ಣೂರ್, ಹಮೀದ್ ಕಣ್ಣೂರ್, ಮುಹಮ್ಮದ್ ಯು.ಬಿ. ಹೀಗೆ... ಸಮಾಜ ಸೇವೆಯನ್ನೇ ಬದುಕಾಗಿಸಿಕೊಂಡ ಹಲವಾರು ಕಾರ್ಯಕರ್ತರಿಂದ ಸಮಾಜ ಹೆಮ್ಮೆ ಪಡುವ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು,ಇದೀಗ ''ನಂಡೆ ಪೆಂಙಳ್' ಎಂಬ ಅಭಿಯಾನ ನಡೆಸುತ್ತಿದೆ. ಇಷ್ಟಕ್ಕೂ ಕೇವಲ ಕಾಟಚಾರದ ಅಭಿಯಾನಕ್ಕಷ್ಟೇ ಸೀಮಿತ ಗೊಳ್ಳದೆ, ಆ ಮೂಲಕ ಬಡ ಹೆಣ್ಮಕ್ಕಳ ಮದುವೆ ಮಾಡಿಸಿಕೊಡುವ,ಕಮರಿದ ಕನಸಿಗೆ ಕಾವು ಕೊಡುವ,ಬತ್ತಿದ ಬಯಕೆಗಳಿಗೆ ಜೀವ ತುಂಬುವ ಪುಣ್ಯಕಾರ್ಯಕ್ಕೆ ಸಮಾಜದ ಹಲವಾರು ಒಳ್ಳೆಯ ಮನಸ್ಸಿನ ಶ್ರೀಮಂತರನ್ನು ಹಾಗೂ ಸಮಾಜ ಸೇವಾ ಸಂಘಟನೆಗಳನ್ನು ಸೇರಿಸಿಕೊಂಡು ಕಾರ್ಯಪ್ರವರ್ತವಾಗಿದೆ.ಈಗಾಗಲೇ ಹಲವರೊಂದಿಗೆ ಸೇರಿಕೊಂಡು ಬಹಳಷ್ಟು ಸಾಮೂಹಿಕ ವಿವಾಹ ಸಂಘಟಿಸಿರುವ ನೌಶಾದ್ ಹಾಜಿ ನೇತೃತ್ವದಲ್ಲಿ 'ನಂಡೆ ಪೆಂಙಳ್' ಎಂಬ ಹೆಸರಿನ ಸ್ವಾಗತ ಸಮಿತಿಯೂ ರಚಿಸಲಾಗಿದ್ದು, ಈ ಎಲ್ಲರು ಸೇರಿಕೊಂಡು ನಡೆಸುವ ಈ 'ನಂಡೆ ಪೆಂಙಳ್' (ನನ್ನ ಸಹೋದರಿ) ಎಂಬ ಈ ಅಭಿಯಾನದಲ್ಲಿ ನಾವು ಕೂಡ ಕೈ ಜೋಡಿಸೋಣ. ನಮ್ಮ ಮೊಹಲ್ಲಾ-ಜಮಾಅತ್ ಗಳಲ್ಲೂ ಆ ಬಗ್ಗೆ ಪ್ರಚಾರ,ಚರ್ಚೆಗಳು ನಡೆಯಲಿ ಆ ಮೂಲಕ ಸಮಾಜದಲ್ಲಿ ಅದೊಂದು ಕ್ರಾಂತಿಯಾಗಲಿ... ಇಲ್ಲದಿದ್ದರೆ ಮುಂದಕ್ಕೂ ಮದುವೆಯ ಪ್ರಾಯ ದಾಟಿದ ಸಹೋದರಿಯರು ಮನೆಯ ಮೂಲೆಯಲ್ಲಿ ಕುಳಿತು ಕಣ್ಣೀರಿಟ್ಟು ರೋಧಿಸುವಳು..ಆ ರೋದನ,ಆ ಕಣ್ಣೀರು ಇಡೀ ಸಮಾಜಕ್ಕೆ ದುರಂತ ಹಾಗೂ  ಶಾಪವಲ್ಲದೆ ಮತ್ತೇನು?
  ಅದಕ್ಕಿಂತ ಮೊದಲು ಜಾಗೃತರಾಗೋಣ.

No comments:

Post a Comment