ನೆನಪು ಬಾಕಿ ಇಟ್ಟು ಹೋದ ಶೈಖುನಾ

ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಹಸನುಲ್ ಬಸ್ವರಿ (ರ) ಹೇಳುತ್ತಾರೆ.
 ಒಬ್ಬ ಸತ್ಯ ವಿಶ್ವಾಸಿಗೆ ನಾಯಿಯಲ್ಲಿರುವ ಹತ್ತು ಗುಣಗಳು ಅನಿವಾರ್ಯ ಎಂದು. ಅದರಲ್ಲೊಂದು, ಸದಾ ಹಸಿದವನಾಗಿರುವುದು ಇದು (ಸ್ವಾಲಿಹ್)  ಉತ್ತಮರ ಗುಣವಾಗುತ್ತದೆ ಎರಡು, ಸ್ಥಿರವಾದ ಜಾಗವನ್ನು ಆಯ್ಕೆ ಮಾಡದಿರುವುದು. ಇದು ( ಮುತವಕ್ಕಿಲ್)  ಸರ್ವವನ್ನೂ ಅಲ್ಲಾಹನ ಮೇಲೆ ಭಾರ ಅರ್ಪಿಸುವವರ ಲಕ್ಷಣ. ಮೂರು, ರಾತ್ರಿಯಲ್ಲಿ ಕೆಲಹೊತ್ತು ಮಾತ್ರ ನಿದ್ದೆ ಮಾಡುವವರು. ಇದು (ಮುಹಿಬ್ಬ್) ದೇವ ಪ್ರೀಯರ ಸ್ವಭಾವ ಗುಣವಾಗಿದೆ. ನಾಲ್ಕು, ( ಮೀರಾಸ್) ಇದು ಉತ್ತರ ದಾಹಿತ್ವ ಇಲ್ಲದಿರುವುದು. ಇದು ತ್ಯಾಗಿಗಳ ನಡೆಯಾಗಿದೆ.ಐದು, ಎಷ್ಟೇ ದೂರಮಾಡಿದರೂ ಸ್ನೇಹಿತನನ್ನು ಕಳದು ಕೊಳ್ಳದಿರುವುದು. ಇದು ( ಮುರೀದ್)ಪರಮ ಭಕ್ತನ ಗುಣ. ಆರು, ಅತ್ಯಂತ ಕೆಳ ಸ್ಥಾನವನ್ನು ತೃಪ್ತಿಯಿಂದ ಸ್ವೀಕರಿಸುವುದು.ಇದು ವಿನಯವಂತರ ಶೀಲ. ಏಳು , ಒಂದು ಜಾಗ ಸರಿ ಹೋಗದಿದ್ದರೆ ಬೇರೆ ಕಡೆಗೆ ತೆರಳುವುದು ಇದು ತೃಪ್ತ ಜನರ ಸ್ವಭಾವ. ಎಂಟು, ಹೊಡೆದು ಅಟ್ಟಿದರೂ ನಂತರ ಒಂದು ತುಂಡು ರೊಟ್ಟಿ ತೋರಿಸಿದಾಗ ಎಲ್ಲಾ ಮರೆತು  ಹಿಂತಿರುಗುವುದು. ಇದು ಭಯ ಇರುವವರ ನಡವಳಿಕೆ.  ಒಂಬತ್ತು  ಊಟಕ್ಕೆ ಬಂದರೆ ದೂರದಲ್ಲಿ ಕೂರುವುದು.ಇದು ಬಡವರ ಸ್ವಭಾವ. ಹತ್ತು,  ಬೇಸತ್ತು ಹೋದರೆ ತಿರುಗಿ ನೋಡದೆ ಇರುವುದು. ಇದು ಕಾವಲುಗಾರರ ಗುಣವಾಗಿರುತ್ತದೆ.
ತತ್ವಗಳು, ಗುಣಪಾಠಗಳು ಜಗತ್ತಿನಲ್ಲಿರುವ ಎಲ್ಲಾ ವಸ್ತುವಿನಲ್ಲಿರುತ್ತದೆ. ಆದರೆ ನಾವು ತಿಳಿದೋ ತಿಳಿಯದೆಯೋ ಅವುಗಳನ್ನೆಲ್ಲ ಕಡೆಗಣಿಸುವುದುಂಟು. ಸತ್ವವಿಲ್ಲದ ಯಾವುದೇ ವಸ್ತುವನ್ನು ಅಲ್ಲಾಹನು ಸೃಷ್ಟಿ ಮಾಡಿಯೇ ಇಲ್ಲ. ಉತ್ತಮರು, ಯೋಗ್ಯಯರು, ಮಹಾನುಭಾವರು, ಪ್ರತಿಯೊಂದರಲ್ಲೂ ಅಲ್ಲಾಹನ ದೃಷ್ಟಾಂತವನ್ನು ಕಾಣುತ್ತಾರೆ. ಸತ್ಯವನ್ನು ಕಾಣಲು ಎಲ್ಲಾ ವಸ್ತುವಿನಲ್ಲೂ ಆಧಾರಗಳಿವೆ. ಅದು ಮಾನವ ಬದುಕಿನ ವಿಜಯಕ್ಕೆ ಹೇತುವಾಗುತ್ತದೆ.

ವಿಶೇಷವೇನೆಂದರೆ ಝೈನುಲ್ ಉಲಮಾರವರ ವಿಯೋಗವು ನಿಜಾರ್ಥದಲ್ಲಿ ನಮ್ಮನ್ನು ಅನಾಥರನ್ನಾಗಿಸಿದೆ. ಜಗತ್ತಿನ ಎಲ್ಲಾ ಸ್ಥಾನ ಮಾನಕ್ಕಿಂತ ಹಿರಿಮೆಯ ಸ್ಥಾನವಾಗಿದೆ ’ಸಮಸ್ತ’ ಎಂಬ ಪರಮ ಸಾತ್ವಿಕರು ಕಟ್ಟಿದ ಸಂಘಟನೆಯ ಸಾರಥ್ಯ ವಹಿಸುವುದು. ಅದೂ ಕೂಡ ವಿಶ್ವೋತ್ತರ ವಿದ್ವಾಂಸರಾದ ಶಂಸುಲ್ ಉಲಮಾ (ಖ) ಕುಳಿತ ಸಿಂಹಾಸನದಲ್ಲಿ ಕೂರುವುದೆಂದರೆ ಅದು ಸಾಮಾನ್ಯ ಸಂಗತಿಯಲ್ಲ. ಕಳೆದ ಇಪ್ಪತ್ತು ವರ್ಷಗಳ ಕಾಲ ಆ ವಿದ್ವತ್ ಸೂರ್ಯನ ಅಭಾವವು ನಮ್ಮನ್ನು ಬಾಧಿಸದಂತೆ ಜನ ಕೋಟಿ ಸುನ್ನಿಗಳನ್ನು ಮುನ್ನಡೆಸಿದ ಅಮರ ಚೇತನ ಝೈನುಲ್ ಉಲಮಾ ಶೈಖುನಾ ಚೆರುಶೇರಿ ಉಸ್ತಾದರು. ಅರಿವಿನ ಭಂಡಾರವೇ ಅಪಾರವಿದ್ದರೂ ವಿನಯತೆಗೆ ಭಂಗವಿಲ್ಲದ ವ್ಯಕ್ತಿತ್ವ. ಭಕ್ತಿ ಸಾಗರದಲ್ಲಿ ತನ್ನನ್ನೇ ತಾನು ಮರೆತ ರೀತಿಯಲ್ಲಿ ಬದುಕಿದ ಮಹಾ ಪ್ರತಿಭೆ. ಸ್ವಾರ್ಥ, ಅಸೂಯೆ, ಅಹಂ, ಅಧಿಕಾರ ಮೋಹ ಆಡಂಬರಗಳೆಲ್ಲವೂ ಅವರ ಜೀವನದ ಯಾವುದೇ ಭಾಗವನ್ನು ಸ್ಪರ್ಶಿಸಲೇ ಇಲ್ಲ. ನಡೆದು ಬಂದ ದಾರಿ ಹೆಜ್ಜೆ ಗುರುತುಗಳಾಗಿ ಜನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವುದಾಗಿದೆ. ಪ್ರಾಮಾಣಿಕತೆ, ಸತ್ಯ ಸಂಧತೆ, ಪರಿಶಿದ್ಧತೆ, ಅವರ ಬದುಕಿನ ಬಂಡವಾಳ. ನಿಷ್ಕಳಂಕ ಮೇರು ವ್ಯಕ್ತಿತ್ವ ಅವರದ್ದು. ಬದುಕಿನ ಪ್ರತಿಕ್ಷಣವನ್ನು ಪ್ರತಿಫಲ ಯೋಗ್ಯವಾಗಿಸುವ ಕಲೆಯು ಅವರಲ್ಲಿತ್ತು.

ಅವರನ್ನು ಹೆಚ್ಚು ಹತ್ತಿರದಿಂದ ಅರಿತುಕೊಳ್ಳಲು ನನಗೆ ಸಿಕ್ಕಿದ ಸುವರ್ಣವಕಾಶವಾಗಿತ್ತು ನಂದಿ ದಾರುಸ್ಸಲಾಂ ನಲ್ಲಿ ಆಯೋಜಿಸಿದ ಉಸ್ತಾದರ ಅಮೂಲ್ಯ ಕ್ಲಾಸು.. ತ್ವರೀಕತ್ ನ ಅತ್ಯಮೂಲ್ಯವಾದ ವಿಚಾರಧಾರೆಯನ್ನು ಮಂಡಿಸಿದ ಶೈಖುನಾರವರು, ಹಸನುಲ್ ಬಸ್ವರಿ (ರ) ರವರು ವಿವರಿಸಿದ ನಾಯಿಯ ಹತ್ತು ಗುಣಗಳನ್ನು ವಿವರಿಸಿದ್ದು ಇಂದಿಗೂ ನನ್ನ ಹೃದಯದಲ್ಲಿ ಅಳಿಯದೆ ಉಳಿದು ಕೊಂಡಿದೆ. ಅಂದಿನ ಕ್ಲಾಸು ನನ್ನಲ್ಲಿ ಉಂಟು ಮಾಡಿದ ಪರಿಣಾಮ ಚಿಕ್ಕದ್ದಲ್ಲ. ನನ್ನ ಜೀವನದ ಪ್ರತಿ ಒಂದು ಭಾಗದಲ್ಲೂ ಅಂತಹ ಗುಣಗಳನ್ನು ಅಳವಡಿಸಲು ಪ್ರಯತ್ನ ಪಟ್ಟದ್ದುಂಟು.
ಅಂದಿನ ಆ ಕ್ಲಾಸು ತುಂಬಾ ವಿದ್ಯಾರ್ಥಿಗಳಿಂದ ಕೂಡಿತ್ತು.ಎಲ್ಲರೂ ತದೇಕಚಿತ್ತದಿಂದ ಉಸ್ತಾದರ ಮಾತನ್ನು ಆಲಿಸುತ್ತಿದ್ದರು ಹದವಾಗಿ ಬೀಸುವ ಮಂದ ಮಾರುತದಂತೆ ಭಾಸವಾಗುತ್ತಿತ್ತು. ಶೈಖುನಾ ಉಸ್ತಾದರ ವಿವರಣೆ ಮಿತವಾದ ಮೃದುವಾದ ಶೈಲಿ ಆಕರ್ಷಣಿಯವಾಗಿತ್ತು ನನ್ನ ಬದುಕಿನ ಅವರ್ಣನೀಯ ಕ್ಷಣ ವಾಗಿ ಅದನ್ನು  ಇಂದಿಗೂ ನೆನಪಲ್ಲಿ ಉಳಿಸಿಕೊಂಡಿದ್ದೇನೆ. ಸಾರ್ಥಕ್ಯಕ್ಕೆ ಅದು ಮಾತ್ರ ಸಾಕಾಗಿತ್ತು. ಉಸ್ತಾದರ ಕ್ಲಾಸು ಮುಗಿದ ಬಳಿಕ ಎಲ್ಲರೂ ಳುಹರ್ ನಮಾಝ್ ಗೆ ಮಸ್ಜಿದ್ ಗೆ ತೆರಳಿದರು. ನಾನು ಸ್ವಲ್ಪ ತಡವಾಗಿ ಮಸ್ಜಿದ್ ಸೇರಿಕೊಂಡೆ. ನನ್ನ ಕಣ್ಣುಗಳನ್ನೇ ನಾನು ನಂಬಲಿಲ್ಲ.
ಕ್ಲಾಸಿನ ಹಾಲಿನಲ್ಲಿ ಕ್ಲಾಸ್ ನಡೆಸಿಕೊಟ್ಟ ಶೈಖುನಾ ಉಸ್ತಾದರು , ಮಸೀದಿಯಲ್ಲಿ ಜನ ತುಂಬಿದ್ದರಿಂದ ಹೌಳಿನ ಬಳಿ ಹಾಸಲ್ಪಟ್ಟ ಮ್ಯಾಟಿನ ಮೇಲೆ ತಮ್ಮ ಹೆಗಲಲ್ಲಿದ್ದ ಹಸಿರು ಶಾಲನ್ನು ಹಾಕಿ ಅದರ ಮೇಲೆ ನಮಾಝ್‌ಗೆ ನಿಂತಿದ್ದರು. !
" ಎರಡು ಹನಿಗಳು ಎರಡು ಗುರುತುಗಳು ಅಲ್ಲಾಹನಿಗೆ ಹೆಚ್ಚು ಇಷ್ಟ.ಗುರುತಿಗಳಲ್ಲಿ ಒಂದು ಅಲ್ಲಾಹನ ದಾರಿಯಲ್ಲಿ ಮೂಡಿಸಿದ ಗುರುತಾಗಿದೆ.(ಹದೀಸ್)

No comments:

Post a Comment