ಉಗ್ರವಾದ, ಭಯೋತ್ಪಾಧನೆ ಇಸ್ಲಾಮಿಗೆ ಅನ್ಯ: ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್

’ಸಮಸ್ತ 90’ ಪಾಣಕ್ಕಾಡ್ ತಂಙಳ್‌ರ ಉದ್ಘಾಟನಾ ಭಾಷಣದ ಸಂಕ್ಷಿಪ್ತ ರೂಪ.
ನಮ್ಮ ಪರಿಸರದಲ್ಲಿ ಧರ್ಮ ಪ್ರಜ್ಞೆ, ಶೈಕ್ಷಣಿಕ ಜಾಗ್ರತಿಯ ಮೂಲಕ ಉತ್ತಮ ಸಮಾಜವನ್ನು ಕಟ್ಟಿ ಶ್ರೇಷ್ಟ ಸಮಾಜವಾಗಿ ಗುರುತಿಸುವಂತೆ ಮಾಡಿದ, ಕೇರಳದಲ್ಲಿ ಜನುಮ ತಾಳಿದ ’ಸಮಸ್ತ’ ಸಂಘಟನೆ ಇಂದು ದೇಶದ ವಿವಿಧ ಕಡೆ, ಕಡಲು ದಾಟಿ ವಿದೇಶ ರಾಷ್ಟ್ರಗಳಿಗೂ ವಿಸ್ತರಿಸಿಕೊಂಡು ಬಲಿಷ್ಟವಾಗಿ ಬೆಳೆದು ನಿಂತಿದೆ.
’ಆದರ್ಶ ಪರಿಶುದ್ಧತೆಯ ತೊಂಬತ್ತು ವರ್ಷ’ ಎಂಬ ಧ್ಯೇಯ ವಾಕ್ಯದೊಂದಿಗೆ ’ಸಮಸ್ತ’ ಅದರ ದೀರ್ಘ ಪರಂಪರೆ ಹಾಗೂ ಅಭಿಮಾನದ ಇತಿಹಾಸವನ್ನು ನೆನಪಿಸುತ್ತಾ ಪ್ರಚಾರ ಕಾರ್ಯವನ್ನು ಇನ್ನಷ್ಟು ಬಲಪಡಿಸುವ ಸುಸಂದರ್ಭವಿದು.
ಸಂದೇಶ ಪ್ರಚಾರದ ಹಾದಿಯಲ್ಲಿ  ಕೇರಳವನ್ನು ದಾಟಿ ಬಂದು ಆದರ್ಶ ಕ್ಷೇತ್ರದಲ್ಲಿ ಒಗ್ಗೂಡಿ ಇಲ್ಲಿ ಬಂದು ಸೇರಿದ ಈ ಮಹಾ ಜನ ಸಾಗರ, ಉಲಮಾ- ಉಮರಾಗಳು ಎಂದೆಂದಿಗೂ ಆ ಆದರ್ಶ ಸಂರಕ್ಷಣೆಯ ಪ್ರತಿಜ್ಞೆ ಮಾಡಬೇಕಿದೆ.
’ಸಮಸ್ತ’ದ ಸಂದೇಶ ಅಥವಾ ಪವಿತ್ರ ದೀನುಲ್ ಇಸ್ಲಾಮಿನ ತಿರುಳಾದ ಅಹ್ಲ್ ಸುನ್ನತ್ ವಲ್ ಜಮಾಹತ್ ನ ಸಂದೇಶವನ್ನು ಗ್ರಾಮ, ಗ್ರಾಮಗಳಿಗೆ ತಲುಪಿಸುವುದು ನಮ್ಮ ಇಹಪರ ಯಶಸ್ವಿಗೆ ಕಾರಣವಾಗುವ ಸತ್ಕರ್ಮವಾಗಿದೆ ಅಲ್ಲಾಹನು ಸ್ವೀಕರಿಸಲಿ.
ಇದು ಪ್ರವಾದಿ (ಸ.ಅ.)ರವರ ಜನುಮ ದಿನ ಕೊಂಡಾಡುವ ತಿಂಗಳಾಗಿದ್ದು, ಅವರ ಸತ್ಯ ಶಾಂತಿ, ಪ್ರೀತಿಯ ಸಂದೇಶವನ್ನು ಎಲ್ಲೆಡೆ ಪ್ರಚಾರ ಪಡಿಸಬೇಕು. ಐಸಿಸ್‌ನಂತಹ ಮನುಷ್ಯ ವಿರೋಧಿ ಸಂಘಟನೆಗಳಿಗೆ ಇಸ್ಲಾಮಿನಲ್ಲಿ ಸ್ಥಾನವಿಲ್ಲ, ಉಗ್ರವಾದ, ಭಯೋತ್ಪಾದನೆಗಳು ಇಸ್ಲಾಮಿಗೆ ವಿರುದ್ಧವಾಗಿದೆ. ಶಾಂತಿ, ಪ್ರೀತಿ, ಮಾನವೀಯತೆಯೇ ಇಸ್ಲಾಮಿನ ಮೂಲವಾಗಿದೆ.
ದೇಶದ ಜಾತ್ಯಾತೀತ ಪರಂಪರೆಯನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದ್ದು, ಸಹಿಷ್ಣುತೆಗೆ ಭಂಗ ತರುವ ಕೋಮುವಾದ, ಉಗ್ರವಾದಗಳನ್ನು ಯಾರೇ ನಡೆಸಿದರೂ ಅದು ಖಂಡನೀಯವಾಗಿದೆ.
ದೇಶದ ಕೆಲವೆಡೆ ಅಲ್ಪಸಂಖ್ಯಾತರ ಮೇಲೆ ನಿರಂತರ ಆಕ್ರಮಣ, ದಬ್ಬಾಳಿಕೆಗಳು ನಡೆಯುತ್ತಿದ್ದು ಇದು ಖಂಡನೀಯವಾಗಿದೆ. ಒಬ್ಬ ವ್ಯಕ್ತಿ ಏನು ತಿನ್ನಬೇಕು, ಏನು ಮಾತನಾಡಬೇಕು, ಯಾವ ಧರ್ಮದಲ್ಲಿ ನಂಬಿಕೆ ಇರಿಸಬೇಕು ಎಂಬುದನ್ನು ತೀರ್ಮಾನಿಸುವ ಹಕ್ಕು ಬೇರೊಬ್ಬರಿಗಿಲ್ಲ. ಪ್ರತಿಯೊಬ್ಬರೂ ದೇಶದ ಜಾತ್ಯಾತೀತ ಸಂವಿಧಾನದ ಮೇಲೆ ನಂಬಿಕೆ ಇರಿಸಿ ಬಲಿಷ್ಠ ರಾಷ್ಟ್ರ ಕಟ್ಟುವಲ್ಲಿ ತೊಡಗಿಸಿಕೊಳ್ಳಬೇಕು.
ಜಗತ್ತು ಇರುಳಿನಿಂದ ಕೂಡಿದ್ದ ಅಂಧಾಕಾರದ ಯುಗದಲ್ಲಿ ಅಜ್ಞಾನದ ಕಂಬಳಿ ಹೊತ್ತು ಮಲಗಿದ್ದ ಸಮಾಜವೊಂದಕ್ಕೆ ಏಕ ದೈವ ವಿಶ್ವಾಸದ ಸುಜ್ಞಾನದ ಬೆಳಕಿನೊಂದಿಗೆ ಪುಣ್ಯ ರಸೂಲ್ (ಸ.ಅ) ಆಗಮನವಾಯಿತು.
ಜಾಗತಿಕ ಇತಿಹಾಸದಲ್ಲಿ ಅಜ್ಞಾನ, ಕಂದಾಚಾರದ ವಿರುದ್ಧ ನಡೆದ ಅತೀ ದೊಡ್ಡ ಕ್ರಾಂತಿಯನ್ನಾಗಿದೆ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ)ರವರು ಇಲ್ಲಿ ಮಾಡಿದ್ದು. ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಆ ಸುಜ್ಞಾನ ಕ್ರಾಂತಿಯ ಫಲವಾಗಿ ಹಾಗೂ ಅದೇ ಕ್ರಾಂತಿಯ ಮುಂದುವರಿಕೆಯಾಗಿ ವಿಶ್ವದಾದ್ಯಂತ ಇಸ್ಲಾಮಿನ ಪ್ರಕಾಶ  ಪ್ರಸರಿಸಕೊಂಡಿತು.
೧೯೨೬ ರಲ್ಲಿ ’ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ’ ’ಅಸ್ತಿತ್ವಕ್ಕೆ ಬಂದದ್ದು ಅದೇ ಇಸ್ಲಾಮಿನ ಮಹತ್ತರವಾದ ಮೌಲ್ಯಗಳನ್ನು ನೈಜ ರೂಪದಲ್ಲಿ  ಮುಂದಿನ ತಲೆಮಾರಿಗೆ ಪ್ರಚಾರ ಪಡಿಸಿ ಈ ಧರ್ಮ ಕ್ರಾಂತಿಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವುದು ಎಂಬ ಬಹುದೊಡ್ಡ ಹೊಣೆಗಾರಿಕೆಯೊಂದಿಗೆಯಾಗಿದೆ. ವಿದೇಶಿ ಶಕ್ತಿಗಳೊಂದಿಗೆ ದೇಶಕ್ಕಾಗಿ ದೀರ್ಘಕಾಲ ನಡೆಸಿದ ಹೋರಾಟದಿಂದಾಗಿ ಉಂಟಾದ ಆರ್ಥಿಕ, ಸಾಮಾಜಿಕ, ಹಿಂದುಳುವಿಕೆ ಹಾಗೂ ಮತ್ತಿತರ ಸಮಸ್ಯಗಳಿಂದ ದುರ್ಬಲವಾಗಿ ಜರ್ಝರಿತಕೊಂಡಿದ್ದ ಒಂದು ಸಮಾಜದಲ್ಲಾಗಿತ್ತು ’ಸಮಸ್ತ’ದ ಉಗಮ. ಅಷ್ಟೇ ಅಲ್ಲ, ಮೊದಲೇ ಜರ್ಝರಿತಗೊಂಡ ಈ ಸಮಾಜದಲ್ಲಿ ಆಶಯಾದರ್ಶದ ಭಿನ್ನತೆಗಳು ಮೊಳಕೆಯೊಡೆಯಲು ಶುರುವಿಟ್ಟ ಕಾಲಘಟ್ಟವೂ ಆಗಿತ್ತು ಅದು. ಅಂತಹ ಸಂದಿಗ್ಧ ಘಟ್ಟದಲ್ಲಾಗಿತ್ತು ಅಹ್ಲ್ ಸುನ್ನತಿ ವಲ್ ಜಮಾಅತಿನ ಆಶಯಾದರ್ಶವನ್ನು ಅದರ ಸಂಪೂರ್ಣ ಶುದ್ಧತೆಯೊಂದಿಗೆ ಎತ್ತಿ ಹಿಡಿದು ಸಂರಕ್ಷಿಸಿ, ಅಸಲು ರೂಪದಲ್ಲಿ ನಿರಂತರ ಪ್ರಚಾರ ಪಡಿಸುವ ಸಲುವಾಗಿ ’ಸಮಸ್ತ’ ರೂಪುಗೊಂಡಿದ್ದು ಮತ್ತು ಆ ಮಹತ್ತರ ಹೊಣೆಗಾರಿಕೆಯನ್ನು ನಿರಂತರ ಮುಂದುವರಿಸಿಕೊಂಡು ಬರುತ್ತಿದೆ ಕೂಡ.
ಇಂದು ಆರ್ಥಿಕವಾಗಿ ಸಮಾಜ ಮುಂದುವರಿಯುತ್ತಿದೆ ಆದರೆ ಧಾರ್ಮಿಕವಾಗಿ ಅಧಃಪತನದತ್ತ ಸಾಗುತ್ತಿದೆ, ಅಂದಿನ ಬಡತನಕ್ಕಿಂತ ಇಂದಿನ ಶ್ರೀಮಂತಿಕೆ ಅಪಯಕಾರಿಯಾಗಿ ಪರಿಣಮಿಸುತ್ತಿರುವುದು ದುರಂತ.
ಪ್ರತಿಯೊಬ್ಬರೂ ಪವಿತ್ರ ಧರ್ಮದ ಸುಂದರ ಸಂಸ್ಕಾರ, ಸಂಸ್ಕೃತಿ, ಮಾನವೀಯತೆಯನ್ನು ಮೈಗೂಡಿಸಿಕೊಂಡು ಆಚಾರ, ವಿಚಾರಗಳನ್ನು ಪಾಲಿಸಿಕೊಂಡು, ಉನ್ನತ ಮೌಲ್ಯಗಳನ್ನು ಸಂರಕ್ಷಿಸಬೇಕು.ಯಾವುದೇ ಸಮಾಜವು ಸ್ವತಃ  ಬದಲಾವಣೆ ಬಯಸದೆ ಬದಲಾಗದು ಎಂದು ಪವಿತ್ರ ಕುರ್ ಆನ್ ಹೇಳುತ್ತದೆ.
ಆದುನಿಕ ಮೀಡಿಯಗಳನ್ನು ಮನುಷ್ಯನ ಒಳಿತಿಗಾಗಿ ಬಳಸಿಕೊಳ್ಲಬೇಕೇ ವಿನಾ ದುರುಪಯೋಗ ಪಡಿಸಿಕೊಳ್ಳಬಾರದು.ಗೊತ್ತಿರಲಿ, ಸಂಸ್ಕಾರ ಶೂನ್ಯರಾದ ಯಾವುದೇ ಸಮಾಜಕ್ಕೆ ಭವಿಷ್ಯವಿಲ್ಲ.

No comments:

Post a Comment