ಹಾಲ್ಗಡಲಾಡ ಆಲಪ್ಪುಝ

ಲೇ: ಅನೀಸ್ ಕೌಸರಿ ವೀರಮಂಗಿಲ
ದಕ್ಷಿಣದ ವೆನಿಸ್ ಅದೊಂದು ದಿನಕ್ಕಾಗಿ ತನ್ನ ಸೌಂದರ್ಯವನ್ನೇ ಬದಲಾಯಿಸಿತ್ತು...!! ಹಸಿರ ಕೈರಳಿಯ ಮುಕುಟವೆಂದೇ ಖ್ಯಾತಿ ಪಡೆದ "ಕಾಯಲ್" ನ ನಾಡು ಆಲಪ್ಪುಯದ ಹಸಿರ ಬಣ್ಣವನ್ನು ಶ್ವೇತವರ್ಣವಾಗಿ ಮಾರ್ಪಟ್ಟಿತ್ತು.  ಈ ಸವಿಶೇಷತೆಯನ್ನು ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ  ಮಾತಿನಲ್ಲೇ ಹೇಳಬೇಕೆಂದರೆ  "ಆಲಪ್ಪುಯದ ಕಡಲ ಕಿನಾರೆಯಲ್ಲಿ ಇನ್ನೋದು ಕ್ಷೀರ ಸಾಗರ, ಸಾಗರದ ವಿಶಾಲತೆಯ ಮುಂದೆ ನಮ್ಮ ಕಣ್ಣು ಸೋಲುವಂತೆ ಈ ಶಿಸ್ತು ಬದ್ಧ ಜನ ಸಾಗರದ ಮತ್ತೊಂದು ತುದಿಯನ್ನು ನೋಡಲು ನನ್ನೆರಡು ನಯನಗಳು ಸಾಕಾಗುತ್ತಿಲ್ಲ”.
 ವಿದೇಶದಿಂದ ಬಂದಿದ್ದ ಪ್ರತಿನಿಧಿಗಳಂತೂ "ನಾವೀಗ ಅರಫದಲ್ಲಿದ್ದೇವೆಯೋ ಎಂದು ಭಾಸವಾಗುತ್ತಿದೆ’ ಎಂದಿದ್ದರು.
ಅಷ್ಟಕ್ಕೂ ಇಷ್ಟೆಲ್ಲಾ ವಿಶೇಷತೆಗಳಿಗೆ ಆಲಪ್ಪುಯ ಎಂಬ ಆ ಪ್ರದೇಶವು ಸಾಕ್ಷಿಯಾಗಿದ್ದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ೯೦ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭವಾಗಿತ್ತು.
ಫೆಬ್ರವರಿ ತಿಂಗಳ ೧೧ ತಾರಿಖಿನಿಂದ ನಾಲ್ಕು ದಿನಗಳ ಕಾಲ ಆಲಪ್ಪುಯದ ಇಎಂಎಸ್ ಸ್ಟೇಡಿಯಂನಲ್ಲಿ ಹಾಗೂ ಫೆ.೧೪ರಂದು ಅತೀ ವಿಶಾಲವಾದ ಕಡಲ ಕಿನಾರೆಯಲ್ಲಿ ನಡೆದ ಸಮಸ್ತ ಮಹಾ ಸಮ್ಮೇಳನದಲ್ಲಿ ಶ್ವೇತವಸ್ತ್ರದಾರಿಗಳ ದಂಡೇ ಹರಿದು ಬಂದಿದ್ದವು. ಸಮಸ್ತವೆಂಬ ಆಧ್ಯಾತ್ಮಿಕ ಸಂಘಟನೆಯ ಅಗ್ರಗಣ್ಯ ನೇತಾರರು, ಉಲಮಾಗಳು, ದೇಶ-ವಿದೇಶಗಳ ಪ್ರತಿನಿಧಿಗಳು, ರಾಜಕೀಯ ಮುಖಂಡರು, ದೀನೀಪ್ರೇಮಗಳಿಂದ ಆಲಪ್ಪುಯ ನಗರವು ಆ ಒಂದು ವಾರಗಳ ಕಾಲ ತುಂಬಿ ತುಳುಕುತ್ತಿದ್ದವು. ಅಲ್ಲಾಹನ ಇಷ್ಟದಾಸರ ಪಾದಸ್ಪರ್ಶದಿಂದ ಇಸ್ಲಾಮಿನ ಇತಿಹಾಸಕ್ಕೆ ಸಾಕ್ಷಿಯಾಗಿದ್ದ ಆ ಪುಣ್ಯ ನಗರದವು ಇನ್ನಷ್ಟು ಧನ್ಯಗೊಂಡವು.


 ಆತಿಥ್ಯ ಪ್ರೀಯರಿವರು ಆಲಪ್ಪುಯದವರು: 
ಶಾಂತಿ ಸಹನೆಯ ಪ್ರಕೃತಿ ಸುಂದರ ಪ್ರದೇಶವಾದ ಆಲಪ್ಪುಯ ಪಟ್ಟಣವು ನಾಲ್ಕು ದಿನಗಳ ಮಟ್ಟಿಗಂತೂ ಸಮಸ್ತದ ಕಾರ್ಯಕರ್ತರಿಗಾಗಿ ಮೀಸಲಿಟ್ಟಂತಿತ್ತು. ಸಮ್ಮೇಳನದ ಯಶಸ್ವಿಯಾಗಿ ಸರ್ವ ಧರ್ಮೀಯರೂ ನೀಡಿದ ಸಹಕಾರವಂತೂ ಪ್ರತಿಯೋರ್ವ ಅತಿಥಿಯನ್ನೂ ಆಶ್ಚರ್ಯಗೊಳಿಸಿತ್ತು. ಆಲಪ್ಪುಯ ತಲುಪಿದಾಗ ನನ್ನೊಂದಿಗಿದ್ದ ಮಿತ್ರನೊಂದಿಗೆ ಆ ಊರಿನವರ ಕುರಿತು ನಾನು ಮೊದಲು ಹೇಳಿದ್ದು, "ಇಲ್ಲಿಯವರು ಪ್ರವಾಸಿಗರನ್ನು ಲೂಟುವವರಲ್ಲ’ ಎಂದು. ಕಾರಣ ಅದು ನಮಗೆ ರೈಲ್ವೇ ಸ್ಟೇಶನಲ್ಲಿ ರಿಫ್ರೆಶ್ಮೆಂಟಿಗೆ ವಿಶ್ರಾಂತಿ ಕೋಣೆಗೆ ತಲುಪಿದಾಗಲೇ ಅರಿವಾಗಿತ್ತು.
ಆಲಪ್ಪುಯದ ಜನತೆ ಅತಿಥಿ ಪ್ರೀಯರೆಂಬುದನ್ನು ಕೇಳಿದ್ದೆವು. ಆದರೆ ಅದು ಆಟೋ ಬಾಡಿಗೆ ಕೂಡ ಪಡೆದುಕೊಳ್ಳದಷ್ಟು ಮಟ್ಟಿಗೆ ಎಂದು ನಮಗೆ ಗೊತ್ತಾದದ್ದು ಅಲ್ಲಿಗೆ ತಲುಪಿದ ನಂತರವಷ್ಟೇ ಆಗಿತ್ತು. ಆಲಪ್ಪುಯದ ಜನರು ಸಮಸ್ತದ ನೇತಾರರಿಗೆ ತಂಗಲು ಸ್ವಂತ ಮನೆಗಳ ಕೋಣೆಗಳನ್ನು ಬಿಟ್ಟುಕೊಟ್ಟು ಸಹಕರಿಸಿದ್ದರು... ಕ್ಯಾಂಪ್‌ಗೆ ಬಂದವರನ್ನು ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದ್ದರು... ಸಮ್ಮೇಳನಕ್ಕೆ ಆಗಮಿಸಿದ್ದ ಕಾರ್ಯಕರ್ತರ ಬಾಯಾರಿಕೆಯನ್ನು ನೀಗಿಸಲು ಅಲ್ಲಲ್ಲಿ ಪಾನಕದ ವ್ಯವಸ್ಥೆಯನ್ನು ಮಾಡಿದ್ದರು.... ಹೀಗೆ ಎಲ್ಲಾ ಹಂತಗಳಲ್ಲೂ ಸಮಸ್ತದ ಸಮ್ಮೇಳನಕ್ಕಾಗಿ ಆರ್ಥಿಕವಾಗಿಯೂ ದೈಹಿಕವಾಗಿಯೂ, ಮಾನಸಿಕವಾಗಿಯೂ ಸಹಕರಿಸಿದ್ದ ಆ ಊರಿನ ಜನರನ್ನು ಸಮಸ್ತವೆಂಬ ಮಹಾ ಪ್ರಸ್ತಾನಕ್ಕೆ ಎಂದಿಗೂ ಮರೆಯಲು ಸಾಧ್ಯವಿಲ್ಲ.
ಮತ್ತೊಂದು ವಿಶೇಷತೆಯೆಂದರೆ, ಸಮಸ್ತದ ಸಮ್ಮೇಳನಕ್ಕಾಗಿ ಆಲಪ್ಪುಯ ಇಡೀ ನಗರವೇ ಶೃಂಗಾರಗೊಂಡಿತ್ತು. ಸಮಸ್ತ ಮತ್ತು ಅದರ ಪೋಷಕ ಸಂಘಟನೆಗಳ ಧ್ವಜಗಳು ಎಲ್ಲೆಡೆ ಕಂಗೊಳಿಸುತ್ತಿದ್ದವು. ಜಾತಿ, ಧರ್ಮ, ಪಂಗಡ ಎಂಬ ಭೇದಭಾವವಿಲ್ಲದೆ, ಎಲ್ಲ ಸಂಘಟನೆಗಳು ಕೂಡ ಸಮ್ಮೇಳನಕ್ಕೆ ಶುಭಾಶಯ ಕೊರಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಲ್ಲಲ್ಲಿ ಅಳವಡಿಸಿದ್ದರು. ಅವುಗಳ ಪೈಕಿ ಸಮಸ್ತದ ಆದರ್ಶ ವಿರೋಧಿ ಸಂಘಟನೆಗಳು ಕೂಡ ಸಮ್ಮೇಳನಕ್ಕೆ ಶುಭ ಕೋರಿದ ಬ್ಯಾನರ್‌ಗಳು ಅಳವಡಿಸಿದಂತೂ ಸಮಸ್ತದ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿತ್ತು. ಅಷ್ಟೇ ಅಲ್ಲದೆ ನಗರದಲ್ಲಿ ಸಂಚರಿಸುವ ಪ್ರತಿಯೊಂದು ಆಟೋ, ಖಾಸಗೀ-ಸರಕಾರಿ ಸಾರಿಗೆ ಬಸ್, ಖಾಸಗೀ ವಾಹನಗಳಲ್ಲಿ ಸಮಸ್ತದ ಧ್ವಜವು ರಾರಾಜಿಸುತ್ತಿದ್ದವು. ಒಟ್ಟಿನಲ್ಲಿ ಹೇಳುವುದಾದರೆ, ಇಡೀ ಆಲಪ್ಪುಯವೇ ಸಮಸ್ತದ ಸಮ್ಮೇಳನಕ್ಕಾಗಿ ಸಮರ್ಪಿತಗೊಂಡಿದ್ದವು....!!!
 ಆದರ್ಶ ಮೆರೆದ ಕ್ಯಾಂಪ್:
ಸಮ್ಮೇಳನದ ಅಂಗವಾಗಿ ಇಲ್ಲಿನ ಇಎಂಎಸ್ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಅಧ್ಯಯನ ಶಿಬಿರವು ವಿದ್ಯಾದಾಹಿಗಳ ಮನ ತುಂಬಿಸಿದ್ದವು. ಸಮಾಜದ ಪ್ರಮುಖ ಸ್ತರಗಳನ್ನು ಸ್ಪರ್ಶಿಸುವ ರೀತಿಯಲ್ಲಿ ಅತ್ಯಂತ ಪರಿಣಿತ ಪ್ರತಿನಿಧಿಗಳಿಂದ ಕಾಲಿಕ ಹಾಗು ಪ್ರಸಕ್ತ ವಿಷಯಗಳ ಮೇಲೆ ನಡೆಸಿದ ಅಧ್ಯಯನ ಶಿಬಿರಕ್ಕೆ ನಿರೀಕ್ಷೆಗೂ ಮೀರಿದ ಶಿಬಿರಾರ್ಥಿಗಳು ವಿವಿಧ ರಾಜ್ಯಗಳಿಂದ ಹರಿದು ಬಂದದ್ದು ಈ ಸಮ್ಮೇಳನದ ವಿಶೇಷತೆಯಾಗಿತ್ತು. ೨೫ ಸಾವಿರ ಶಿಬಿರಾರ್ಥಿಗಳು ಎರಡೇ ದಿನದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು ಎಂಬುವುದೇ ಇದಕ್ಕೆ  ಸಾಕ್ಷಿ... ಪ್ರತಿಯೊಂದು ಸೆಷನ್‌ಗಳೂ ಸಮಯ ಬದ್ಧ ಮತ್ತು ವಿಷಯನಿಷ್ಠವಾಗಿತ್ತು.
"ನಮ್ಮ ಧರ್ಮ", "ನಮ್ಮ ಸಂಘಟನೆ", "ನಮ್ಮ ದೇಶ", "ನಮ್ಮ ಮೊಹಲ್ಲ್ಲಾ ಜಮಾಅತ್", "ನಮ್ಮ ಆದರ್ಶ" ಎಂಬಿತ್ಯಾದಿ ವಿಷಯಗಳ ಮೇಲೆ ನಾಲ್ಕು ದಿನಗಳ ಕಾಲ ವಿವಿಧ ಚರ್ಚಾ ಗೋಷ್ಠಿಗಳು, ಅಧಿವೇಶನಗಳು, ಅಧ್ಯಯನ ಶಿಬಿರಗಳು, ಆಧ್ಯಾತ್ಮಿಕ ಮಜ್ಲಿಸ್‌ಗಳು, ಮಜ್ಲಿಸ್ಸುನ್ನೂರ್, ಸೇರಿದಂತೆ ವಿವಿಧ ಕಾರ್ಯಕ್ರಮಗಳು ಶಿಬಿರಾರ್ಥಿಗಳಲ್ಲಿ ವಿಶೇಷ ಸಂಚಲನವನ್ನೇ ಮೂಡಿಸಿತ್ತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಬಹರೈನ್‌ನ ಚೀಫ್ ಜಸ್ಟೀಸ್, ಸಮಸ್ತದ ಕಾರ್ಯವೈಖರಿ ಮತ್ತು ಸಾಧನೆಯನ್ನು ಮನತುಂಬ ಕೊಂಡಾಡಿದ್ದರು. ಶೈಖುನಾ ಎಂ.ಟಿ ಅಬ್ದುಲ್ಲ ಮುಸ್ಲಿಯಾರ್, ಜಿಫ್ರಿ ಮುತ್ತುಕ್ಕೋಯ ತಂಙಳ್, ಡಾ. ಬಹಾವುದ್ದೀನ್ ನದ್ವಿ ಕೂರಿಯಾಡ್, ಶೈಖುನಾ ಬಾಪುಕುಟ್ಟಿ ಮುಸ್ಲಿಯಾರ್, ಶೈಖುನಾ ಆಲಿಕುಟ್ಟಿ ಮುಸ್ಲಿಯಾರ್, ಪಾನಕ್ಕಾಡ್ ಸೈಯದ್ ಸ್ವಾದಿಖಲಿ ಶಿಹಾಬ್ ತಂಙಳ್, ಅಬ್ಬಾಸಲಿ ಶಿಹಾಬ್ ತಂಙಳ್, ಹಮೀದಲೀ ಶಿಹಾಬ್ ತಂಙಳ್, ರಶೀದಲಿ ಶಿಹಾಬ್ ತಂಙಳ್,  ಅಬ್ದುಸ್ಸಮದ್ ಸಮದಾನಿ, ಅಹ್ಮದ್ ಕಬೀರ್ ಬಾಖವಿ, ನೌಶಾದ್ ಬಾಖವಿ, ಸಿಂಸಾರುಲ್ ಹಕ್ಕ್ ಹುದವಿ, ಅಬ್ದುಲ್ ಸಮದ್ ಪೂಕೋಟೂರ್, ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವ್, ಅಶ್ರಫ್ ಫೈಝಿ ಕಕ್ಕುಪ್ಪಡಿ, ಓನಂಪಳ್ಳಿ ಫೈಝಿ, ಸತ್ತಾರ್ ಪಂದಲ್ಲೂರು, ಬಶೀರ್ ಫೈಝಿ ದೇಶಮಂಗಲಂ, ನಾಸೀರ್ ಫೈಝಿ ಕೊಡತ್ತಾಯಿ ಸೇರಿದಂತೆ ವಿವಿಧ ಶಾಸಕರುಗಳು ಸಂಸದರು, ಸಚಿವರುಗಳು, ಜನಪ್ರತಿನಿಧಿಗಳು ಶಿಬಿರದಲ್ಲಿ ಪಾಲ್ಗೊಂಡು ವಿಷಯ ಮಂಡಿಸಿ ಶಿಬಿರಾರ್ಥಿಗಳಿಗೆ ಅರಿವಿನ ಧಾರೆಯೆರೆದಿದ್ದರು.
 ಸಾಮರಸ್ಯೆಕ್ಕೆ ಮಾದರಿಯಾದ ಆಲಪ್ಪುಯ: 
ಮುಸ್ಲಿಮೇತರ ಜನಸಂಖ್ಯೆ ಹೆಚ್ಚಾಗಿರುವ ಆಲಪ್ಪುಯದಲ್ಲಿ ಲಕ್ಷಾಂತರ ಮಂದಿ ಸೇರಿಯೂ ಕೂಡ ನಾಲ್ಕು ದಿನಗಳ ಕಾಲ ಸಮ್ಮೇಳನ ಕಾರಣದಿಂದಾಗಿ ಒಂದು ಸಣ್ಣ ಘರ್ಷಣೆಗಳಾಗಲೀ, ವಾಗ್ವಾದಗಳಾಗಲೀ ಸಂಭವಿಸಿಲ್ಲ ಎಂಬುದು ದೇಶದ ಧಾರ್ಮಿಕ ಸೌಹಾರ್ದತೆಯ ಪರಂಪರೆಗೆ ಜ್ವಲಂತ ಉದಾಹರಣೆಯಗಿತ್ತು. ಮುಸ್ಲಿಮೇತರ ಆಟೋ ಚಾಲಕರೂ ಕೂಡ ತಮ್ಮ ರಿಕ್ಷಾಗಳಲ್ಲಿ ಸಮಸ್ತದ ಪತಾಕೆಯನ್ನು ಕಟ್ಟಿಕೊಂಡು ಓಡಿಸುತ್ತಿದ್ದರು. ರಾತ್ರಿ ಕಾಲದಲ್ಲಿ ತಲುಪುವ ಕಾರ್ಯಕರ್ತರಿಗೆ ಉಚಿತ ಆಟೋ ಸೇವೆಯನ್ನು ಕೆಲವು ಆಟೋ ಚಾಲಕರು ನಡೆಸಿದ್ದು ಇಡೀ ದೇಶಕ್ಕೆ ಮಾದರಿಯಾಗಿತ್ತು.
ಸಮಾರೋಪ ದಿನದಂದು ನಮಾಝ್ ನಿರ್ವಹಿಸಲು ಸ್ಥಳಾವಕಾಶದ ಕೊರತೆ ಉಂಟಾದಾಗ ಹತ್ತಿರದಲ್ಲೇ ಇದ್ದ ಚರ್ಚ್‌ನ ಬಿಷಪ್ ಅವರ ಚರ್ಚಿನಲ್ಲಿ ಸ್ಥಳಾವಕಾಶ ಒದಗಿಸಿದ್ದು ಸಹಿಷ್ಣುತೆಗೆ ಪ್ರಾಯೋಗಿಕ ಮಾದರಿಯಾಗಿತ್ತು.
ಯಾಸೀನ್ ಪಾರಾಯಣ, ಭಕ್ತಿ ನಿರ್ಭರ ಪ್ರಾರ್ಥನೆಯೊಂದಿಗೆ  ಪ್ರಾರಂಭಗೊಂಡ ಸಮ್ಮೇಳನ:
ಸಮಸ್ತ ಸಮ್ಮೇಳನಕ್ಕೆ ವಿಶ್ವಾಸಿಗಳು ಹರಿದು ಬರುವುದು ಅಲ್ಲಿನ ಜನಸಾಗರವನ್ನು ವೀಕ್ಷಿಸಲೋ, ಅಥವಾ ಅತಿಥಿಗಳ ಭಾಷಣಗಳನ್ನು ಆಲಿಸಲೋ ಅಲ್ಲ. ಬದಲಾಗಿ ಅಲ್ಲಿ ಸೇರುವ ಲಕ್ಷಾಂತರ ಆಲಿಮರ, ಸಾದಾತುಗಳ ಪ್ರಾರ್ಥನೆಗಾಗಿ ಮಾತ್ರವಾಗಿದೆ. ಸಮಸ್ತದ ಆಲಿಂಗಳನ್ನು ಕಂಡು ಕಣ್ತುಂಬಿಸಿಕೊಂಡು ಅವರ ದುವಾಗೆ "ಆಮೀನ್” ಹೇಳುವ ಅಬಿಲಾಷೆಯೊಂದಿಗೆ..... ಹಾಗೆಯೇ ಮರಣ ಹೊಂದಿದ ವರ ಹೆಸರಲ್ಲಿ ಯಾಸೀನ್ ಓದಿ ಪ್ರಾರಂಭಿಸಿದ ವೇದಿಕೆಯಲ್ಲಿ ಶೈಖುನಾ ವಾವಾಡ್ ಉಸ್ತಾ ದರ ಸುದೀರ್ಘ ಭಕ್ತಿ ನಿರ್ಭರ ಪ್ರಾರ್ಥನೆಯೂ ಎಲ್ಲರ ಮನತುಂಬಿಸಿತ್ತು.

 ಶಿಸ್ತಿನ ಸಿಪಾಯಿಗಳಾದ ಸಮಸ್ತ ಸ್ನೇಹಿಗಳು:
ಸಮಾರೋಪದ ದಿನವಂತೂ ಇಡೀ ಪಟ್ಟಣವೇ ತುಂಬಿ ತುಳಿಕಿದ್ದರೂ ಕೂಡ ಸಾರ್ವಜನಿಕರಿಗೆ ಒಂದಿಷ್ಟೂ ತೊಂದರೆಯಾಗದಂತೆ ಶಿಸ್ತು ಕಾಪಾಡಿದ ಸಮಸ್ತ ಕಾರ್ಯಕರ್ತರ, ಎಸ್ಕೆಎಸ್ಸೆಸ್ಸೆಫ್‌ನ ವಿಖಾಯ ಹಾಗೂ ತ್ವಲಬಾದ ಸ್ವಯಂ ಸೇವಕರ ಸಮರ್ಪನಾ ಮನೋಭಾವವನ್ನು ಕಣ್ಣಾರೆ ಕಂಡಿದ್ದ ಕೇರಳದ  ಮುಖ್ಯಮಂತ್ರಿಗಳು, ಸಚಿವರುಗಳು, ಜನಪ್ರತಿನಿಧಿಗಳು ಹಾಗೂ ಆಲಪ್ಪುಯ ನಿವಾಸಿಗಳು ಆಶ್ಚರ್ಯಚಕಿತರಾಗಿದ್ದರು.
 ಆದರ್ಶ ಶುದ್ಧಿಗೆ ಬೆಂಬಲವಾದ ಜನಸಾಗರ:
ಅದೆಷ್ಟೋ ಲಕ್ಷ ಜನರು ಸೇರಲು ಸ್ಥಳಾವಕಾಶ ಇರುವ ನಗರಿ ಎಂದು ಆಲಪ್ಪುಯ ಮುನ್ಸಿಪಾಲಿಟಿ ಘೋಷಿಸಿದ್ದ ವಿಶಾಲ ಕಡಲ ಕಿನಾರೆಯು ಸಮಸ್ತಾಭಿಮಾನಿಗಳನ್ನು ತುಂಬಿಸಿಕೊಳ್ಳಲಾಗದೆ ಸಾಗರವೇ ಸೋಲೊಪ್ಪಿಕೊಂಡ ಆ ಕ್ಷಣವು ಭಾರತೀಯ ಮುಸ್ಲಿಮರ ಇತಿಹಾಸದಲ್ಲೇ ಒಂದು ಹೊಸ ಅಧ್ಯಾಯವವನ್ನು ಬರೆಯಿತು. ಈ ಜನಸಾಗರವನ್ನು  ಸಮಸ್ತಕ್ಕೆ ಮಾತ್ರ ನಿರ್ಮಿಸಲು ಸಾಧ್ಯ ಎಂದು ಕೇರಳದ ಮುಖ್ಯಮಂತ್ರಿ ಸೇರಿದಂತೆ ಹಲವಾರು ಗಣ್ಯ ಅತಿಥಿಗಳು ಎಲ್ಲರ ಮುಂದೆ ಸಾರಿ ಹೇಳಿದಾಗ,  ಸಮಸ್ತವನ್ನು ಬಲ್ಲವರು ಮಾತ್ರ,  "ಇದು ಆದರ್ಶ ಪರಿಶುದ್ಧತೆಗೆ ಸರ್ವಶಕ್ತನಾದ ಅಲ್ಲಾಹು ನೀಡಿದ ಅಂಗೀಕಾರ ಎಂದು ಭಾವಿಸಿ ಅಲ್ಲಾಹನನ್ನು ಸ್ತುತಿಸುತ್ತಿದ್ದರು.
 ಮೀಡಿಯಾ ಸೆಂಟರ್:
ಮಾಧ್ಯಮ ಮಿತ್ರರಿಗಾಗಿ ಸಮ್ಮೇಳನ ನಗರಿಯಲ್ಲಿ ಹಾಗೂ ಕ್ಯಾಂಪ್ ನಗರಿಯಲ್ಲಿ ಅಚ್ಚುಕಟ್ಟಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಕನ್ನಡ ಮಾಧ್ಯಮದ ಪ್ರತಿನಿಧಿಗಳಾಗಿ ನಾನು ಮತ್ತು ಯೂಸುಫ್ ಮುಂಡೋಲೆ ಮೂರು ದಿನಗಳ ಕಾಲ ದೇಶದ ವಿವಿಧ ಭಾಷೆಯ ಪತ್ರಿಕೆಗಳನ್ನು ಪ್ರತಿನಿಧಿಸುವ ಮಾಧ್ಯಮ ಮಿತ್ರರೊಂದಿಗೆ ಸೇರಿಕೊಂಡಿದ್ದೆವು. ಎಲ್ಲ ಮಾಧ್ಯಮದವರಿಗೂ ಬೇಕಾಗುವ ಅತ್ಯಾದುನಿಕ ಸವಲತ್ತುಗಳು, ಕೊಠಡಿಯನ್ನು ಮೀಸಲಿರಿಸಲಾಗಿತ್ತು. ಮಾಧ್ಯಮಗಳೂ ಕೂಡ ಕಾರ್ಯಕ್ರಮದ ಕ್ಷಣ ಕ್ಷಣದ ಮಾಹಿತಿಗಳನ್ನು ಪ್ರಸಾರ ಮಾಡುತ್ತಿದ್ದರು. ಸುಪ್ರಭಾತಂ, ಸೇರಿದಂತೆ ಮಳಯಾಲಂ, ಕನ್ನಡ, ಇಂಗ್ಲೀಷ್, ಉರ್ದು, ತಮಿಳು, ತೆಲುಗು ಭಾಷೆಗಳ ಪತ್ರಿಕೆಗಳಲ್ಲಿ ಸಮಸ್ತದ ಸಮ್ಮೇಳನದ ವರದಿಗಳು ದಿನಂಪ್ರತಿ ಪ್ರಕಟವಾಗುತ್ತಿದ್ದವು. ಕನ್ನಡದ ವಾರ್ತಾಭಾರತಿ ಪತ್ರಿಕೆಯು ಸಮಸ್ತದ ನಾಲ್ಕು ದಿನಗಳ ವರದಿಯನ್ನೂ ಪ್ರಕಟ ಮಾಡಿತ್ತಲ್ಲದೆ, ಸಮ್ಮೇಳನದ ನೇರಪ್ರಸಾರವನ್ನು ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿ ಸಮಸ್ತ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.
ಕೆಐಸಿಆರ್ ಲೈವ್, ದರ್ಶನ ಚಾನೆಲ್ ಕಾರ್ಯಕ್ರಮದ ಪ್ರತಿಯೊಂದು ಕ್ಷಣವನ್ನು ದೇಶವಿದೇಶದ ಮೂಲೆ ಮೂಲೆಯಲ್ಲಿರುವ ಸಮಸ್ತದ ಅಭಿಮಾನಿಗಳಿಗೂ ಕಾರ್ಯಕ್ರಮದ ವೀಕ್ಷಕರಿಗೂ ತಲುಪಿಸಿಕೊಡುತ್ತಿದ್ದರು.

No comments:

Post a Comment