ಸಮ್ಮೇಳನದಿಂದ ಸಾಮರಸ್ಯ

ಒಂದು ವೇಳೆ ನೀವು ಕೇರಳದ ಆಲಪುಯದಲ್ಲಿ ನಡೆದ ’ಸಮಸ್ತ- ೯೦’ ರ ಐತಿಹಾಸಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದರೆ  ನಿಮಗೂ ತಿಳಿದಿರಬಹುದು ಅಲ್ಲಿನ ವ್ಯವಸ್ಥೆ, ಶಿಸ್ತು, ಕೈಗೊಂಡ ನಿರ್ಣಯ, ಮಂಡಿಸಲಾದ ವಿಷಯ, ಮಾಡಿದ ಭಾಷಣ ಎಲ್ಲಕ್ಕೂ ಮಿಗಿಲಾಗಿ ನಾಡಿಗೆ ನಾಡೇ ಸಜ್ಜುಗೊಂಡ, ಸಂಭ್ರಮಿಸಿದ ರೀತಿ.....ಹೀಗೆ ಎಲ್ಲವೂ.....
ಅಷ್ಟಕ್ಕೂ ಅದೇನೂ ಒಂದು ಏರಿಯಾ ಅಥವಾ ಜಿಲ್ಲೆ ಅಷ್ಟೇಯಾಕೆ ಒಂದು ರಾಜ್ಯ ಕ್ಕೆ ಸೀಮಿತಗೊಂಡ ಸಮ್ಮೇಳನವಾಗಿರಲಿಲ್ಲ, ಅಲ್ಲಿ ಸೇರಿದ್ದು ಒಂದಿಷ್ಟು ಸಾವಿರ ಜನರೂ ಆಗಿರಲಿಲ್ಲ.  ಕಣ್ಣೆತ್ತದ ಮೈಲಿ ಗಟ್ಟಲೆ  ದೂರದಲ್ಲಿ ಹರಡಿ ನಿಂತ ಜನ  ಸಾಗರ. ಒಂದು ರಾಜ್ಯ ಬಿಡಿ, ದೇಶ- ವಿದೇಶಗಳಿಂದ ಬಂದು ಸೇರಿದ ಶ್ವೇತ, ಶುಭ್ರ ವಸ್ತ್ರ ದಾರಿ ಸುನ್ನೀಗಳ ಪಡೆ.... ಥೇಟು ಕಡಲತೀರದಲ್ಲೊಂದು ಹಾಲ್ಗಡಲು !
ನೆನಪು ಮಾಡಿಕೊಳ್ಳಿ, ಅಲ್ಲಿ ನಿಮ್ಮ ನಾಲ್ಕು ಭಾಗಕ್ಕೂ ಕಣ್ಣಾಯಿಸಿದ್ದರೆ  ಅಲ್ಲಿ ಇದ್ದದ್ದು ಒಂದೋ ಮಲಯಾಳಿ.ಅಥವಾ ಕನ್ನಡಿಗ,ಇಲ್ಲವೇ ಉರ್ದು ಭಾಷಿಗ,ಅದಲ್ಲದಿದ್ದರೆ ತಮಿಳು ಭಾಷಿಗ ಅದೂ ಅಲ್ಲದಿದ್ದರೆ ಇನ್ನ್ಯಾವುದೋ ರಾಜ್ಯದ ಇನ್ಯಾವುದೋ ಭಾಷಿಗ. ಆದರೆ ಅಲ್ಲಿ ಭಾಷೆಯ ತಕರಾರಿಲ್ಲ, ಇನ್ನ್ಯಾವುದೇ ಎಡವಟ್ಟಿಲ್ಲ, ಮೇಲು-ಕೀಳೆಂಬ ಭಾವನೆ ಇಲ್ಲವೇ ಇಲ್ಲ. ಅಲ್ಲಿ ಅದೆಷ್ಟೋ ದೊಡ್ಡ ಶ್ರೀಮಂತರಿದ್ದರು. ಉನ್ನತ ಹುದ್ದೆಯಲ್ಲಿದ್ದ ಗಣ್ಯರಿದ್ದರು.ಆದರೆ ಅಲ್ಲಿ ಎಲ್ಲರೂ ಸಮಾನರು. ಎಲ್ಲರೂ  ಮರಳಕಣಗಳ ಮೇಲೆ ಕುಳಿತು ಸಮ್ಮೇಳನದ ಆರಂಭದಿಂದ ಹಿಡಿದು ಕೊನೆಯ ವರೆಗೂ ಶಿಸ್ತಿನಿಂದ ವೀಕ್ಷಿಸಿ ದನ್ಯರಾದರು. ಎಲ್ಲರಿಗೂ ಅದೇನೋ ಒಂಥರಾ ಸಂಭ್ರಮ. ಇನ್ನಿಲ್ಲದ ಉತ್ಸಾಹ. ಆಧ್ಯಾತ್ಮಿಕ ಅನುಭೂತಿ, ಆದರ್ಶ ಶುದ್ಧಿಯಲ್ಲಿ ಗೆದ್ದವೆಂಬ ಮನೋತೃಪ್ತಿ, ಬದುಕು ದಾರಿ ತಪ್ಪಿಲ್ಲ ಎಂಬ ಸಮಾಧಾನ,  ಇಟ್ಟ ದಿಟ್ಟ ಹೆಜ್ಜೆ ನೆಟ್ಟಗಿದೆ ಎಂಬ ಹೆಮ್ಮೆ, ಸಾತ್ವಿಕರ, ಪುಣ್ಯತ್ಮರ ಹೆಜ್ಜೆ ಗುರುತಿನಲ್ಲಿ, ಅವರು ತೋರಿದ ಹಾದಿಯಲ್ಲಿ ಎಡವಟ್ಟಿಲ್ಲದೆ ಬಂಡೆಯಂತೆ ನಿಂತಿದ್ದೇವೆ ಎಂಬ ಸಂತಸ...
 ಅದೇಕಾರಣಕ್ಕೆ ಸಮ್ಮೇಳನ ಶಿಸ್ತು ಬದ್ಧವಾಯಿತು ಎಡವಟ್ಟಿಲ್ಲದೆ ಮಾದರಿ ಆಯಿತು.
  ಹಾಗೆ ನೋಡಿದರೆ ಅದು ಇಂದು ನಿನ್ನೆಯ ಕಥೆಯಲ್ಲ, ಬರೋಬ್ಬರಿ ಕಳೆದ ೯೦ ವರ್ಷಗಳಿಂದಲೂ ಅದು ನಡೆದು ಬಂದಿದೆ.ಅದೇ ಶಿಸ್ತಿನಲ್ಲಿ,ಅದೇ ಆಧ್ಯಾತ್ಮಿಕ ಸ್ಪರ್ಶದಲ್ಲಿ, ಸಾಮುದಾಯಿಕ ಸಂಭ್ರಮದಂತೆ, ನಾಡ ಹಬ್ಬದಂತೆ, ಸಾಮರಸ್ಯದ ಸಂದೇಶದೊಂದಿಗೆ, ಸ್ವಸ್ಥ ನಾಡು, ಸಮಾಜ ಕಟ್ಟುವ ಸಂದೇಶದೊಂದಿಗೆ, ವಿಶ್ವಾಸಿಯ ಇಹ-ಪರ ಯಶಸ್ಸಿನ ಬೋಧನೆಯೊಂದಿಗೆ, ಶುದ್ಧ ಆದರ್ಶ ಕಾಯುವ ಸಂಕಲ್ಪದೊಂದಿಗೆ.....
ಅದಕ್ಕೂ ಕಾರಣಗಳಿವೆ.   ಬಾರಿ ಸದ್ದು ಗದ್ದಲಗಳೊಂದಿಗೆ  ಜನುಮ ತಾಳಿ ಜನನಕ್ಕಿಂತ ಶೀಘ್ರದಲ್ಲೇ ಕಣ್ಮುಚ್ಚುವ ಸಂಘಟನೆಗಳು ಅದೆಷ್ಟೋ ನಾವು ಕಾಣುತ್ತಿದ್ದೇವೆ. ಬರೀ ವಾರ್ಷಿಕೋತ್ಸವಕ್ಕೆ ಸೀಮಿತಗೊಳ್ಳುವ ಸಂಘಟನೆಗಳಿಗೂ ಈ ಭೂಮಿ ಮೇಲೆ ಕೊರತೆ ಇಲ್ಲ. ಅದೇ ತೆರನಾಗಿ ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿರುವ ಸಂಘಟನೆಗಳೂ ಇವೆ. ಅಧಿಕಾರದ ಆಸೆಗಾಗಿ ಅಥವಾ ಇನ್ಯಾವುದೋ ಕಾರಣಕ್ಕೆ ಪರಸ್ಪರ ಜಗಳವಾಡಿಕೊಂಡು ಸುದ್ದಿಯಾಗುವ ಸಂಘಟನೆಗಳೂ ಕಡಿಮೆ ಅಲ್ಲ.ಆದರೆ ಇವಲ್ಲಕ್ಕಿಂತ ಡಿಫೆರೆಂಟಾಗಿ ಕಳೆದ ೯೦ ವರ್ಷಗಳಿಂದ ’ಸಮಸ್ತ’ ಇಲ್ಲಿ ಯಾವುದೇ ಅಪವಾದಗಳಿಗೆ ಗುರಿಯಾಗದೆ ಧರ್ಮ ಹಾಗೂ ಸಮಾಜಕ್ಕಾಗಿ ಮಹತ್ತರ ಕೊಡುಗೆಗಳನ್ನು ನೀಡಿ ಗಮನ ಸೆಳೆದಿದೆ.ಅದೇ ಕಾರಣಕ್ಕ ’ಸಮಸ್ತ’ದ ಸಮ್ಮೇಳನವೆಂದರೆ ಜನರಿಗೆ ಸಂಭ್ರಮ.
 ಇನ್ನೂ ಹೇಳಬೇಕೆಂದರೆ, ’ಸಮಸ್ತ’ ಸಂಘಟನೆ ಎಷ್ಟು ಶುದ್ಧವೋ ಅದರ ಸಾರಥಿಗಳು ಅಷ್ಟೇ ನಿಷ್ಕಳಂಕರಾದ ಸಾತ್ವೀಕರು. ಸ್ಥಾಪಕಾಧ್ಯಕ್ಷ ವರಕ್ಕಲ್ ಮುಲ್ಲಕೋಯ ತಂಙಳ್‌ರಿಂದ ಈಗಿನ ಅಧ್ಯಕ್ಷ ಶೈಖುನಾ ಕೋಯಕುಟ್ಟಿ ಉಸ್ತಾದ್‌ವರೆಗೂ, ಅದೇ ತೆರನಾಗಿ ಮೊನ್ನೆ ಅಗಲಿದ ಚೆರುಶ್ಶೇರಿ ಉಸ್ತಾದ್ ಇರಬಹುದು ಈಗ ಅವರ ಉತ್ತರಾಧಿಕಾರಿಯಾಗಿ ಬಂದ ಆಲಿ ಕುಟ್ಟಿ ಉಸ್ತಾದ್ ಇರಬಹುದು ಎಲ್ಲರೂ ಶುದ್ಧ ಹಸ್ತರೇ, ನಿಸ್ವಾರ್ಥ ಸಾತ್ವೀಕರೇ. ಅಂತಲೇ ಅಂಥ ಉಲಮಾಗಳು  ಕಟ್ಟಿ ಬೆಳೆಸಿದ ಹಾಗೆನೇ ನಮ್ಮ ಪರಿಸರಕ್ಕೆ, ನಮ್ಮ ಮನೆಯ ಜಗುಲಿಗೆ ಧರ್ಮದ ಸಂದೇಶ ತಂದು ಕೊಟ್ಟು ನಮ್ಮನ್ನು ಸತ್ಯದ ಹಾದಿಯಲ್ಲಿ ಧಾರ್ಮಿಕ, ಸಾಮಾಜಿಕ, ಹಾಗೂ ಶೈಕ್ಷಣಿಕವಾಗಿ ಪ್ರಜ್ಞಾವಂತರನ್ನಾಗಿಸಿ ನಮ್ಮ ಮನದ ಜಗುಲಿಯಲ್ಲಿ ಜಾಗ ಗಿಟ್ಟಿಸಿಕೊಂಡ ’ಸಮಸ್ತ’ದ ಸಮ್ಮೇಳನದಲ್ಲಿ ಭಾಗವಹಿಸುವುದೆಂದರೆ ಅದೊಂದು ಅಕ್ಷರಗಳ ಹಿಡಿತಕ್ಕೆ ಸಿಗದ, ಮಾತಿಗೆ ನಿಲುಕದ ಅಮೋಘ ಸಂಭ್ರಮವಾಗದೆ ಇರುತ್ತಾ ನೀವೇ ಹೇಳಿ?
ಅದಿರಲಿ, ಸಮ್ಮೇಳನದ ಬಗ್ಗೆ ಬರೆಯುವಾಗ ಇಲ್ಲಿ ಹೇಳಲೇಬೇಕಾದ ವಿಚಾರಗಳೆಂದರೆ ಆ ಸಮೇಳನಕ್ಕೆ ಇಡೀ ಕೇರಳವೇ ಸಜ್ಜುಗೊಂಡ ರೀತಿ ಅಲ್ಲಿ ಭಾಸವಾಗುತ್ತಿತ್ತು. ಜಾತಿ , ಧರ್ಮ, ಪಾರ್ಟಿ, ಪಂಗಡ  ಮೀರಿ ಅದೆಷ್ಟೋ ಜನ ಅದಕ್ಕೆ  ಶುಭ ಕೋರಿದ್ದರೆ ಅಲ್ಲಿನ ಬಹುತೇಕ ಎಲ್ಲಾ ಮೀಡಿಯಾಗಳು ಕೂಡ ಮುಖ ಪುಟದ ನಂ.೧ ಸಚಿತ್ರ ವರದಿ ಮಾಡಿ ಪ್ರಚಾರ ಕೊಟ್ಟದ್ದು ಸುಳ್ಳಲ್ಲ. ಇನ್ನು ಕೇರಳದ ಮುಖ್ಯ ಮಂತ್ರಿ ಸಹಿತ ಡಜನ್ ಸಚಿವರು, ಶಾಸಕರು ೪ ದಿನಗಳ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.ಅಷ್ಟೇಅಲ್ಲ ದೀರ್ಘಹೊತ್ತು ಕುಳಿತುಕೊಂಡು ಸಮ್ಮೇಳನದ ಧ್ಯೇಯ, ನಿರ್ಣಯಗಳನ್ನು ಕೇಳಿಸಿಕೊಂಡೇ ಹೋದರು.
ಹಾಗೆ ನೋಡಿದರೆ ಸಮ್ಮೇಳನದ ನಿರ್ಣಯ, ಒತ್ತಾಯಗಳು ಇಡೇರದೆ ಇರಲ್ಲ. ಯಾವತ್ತೂ ಅಲ್ಲಿ ’ಸಮಸ್ತ’ದ ನ್ಯಾಯಯುತ ಸಾಮುದಾಯಿಕ ಬೇಡಿಕೆಗಳಿಗೆ ಅಲ್ಲಿನ ಸರ್ಕಾರ ಕಿವಿಯಾಗದೆ ಇರಲ್ಲ. ಒಂದು ರೀತಿಯಲ್ಲಿ ’ಸಮಸ್ತ’ ಅಲ್ಲಿ ಮುಸ್ಲಿಮರ ಅಧಿಕೃತ ಧ್ವನಿಯಾಗಿ ಬಲಿಷ್ಟ ಒತ್ತಡ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಅದು ಎಷ್ಟರಮಟ್ಟಿಗೆ ಎಂದರೆ ’ಸಮಸ್ತ’ದ ಕರೆಗೆ ಹೋಗೊಡದಿದ್ದರೆ ಅಂಥವರನ್ನು ಜನರೂ ತಿರಷ್ಕರಿಸಿ ಬಿಡುತ್ತಾರೆ. ಆ ತೆರನಾದ ಸಾಂಘಿಕ ಶಕ್ತಿ ಅಲ್ಲಿನವರಿಗಿದೆ. ಅದೇ ನಮ್ಮ ವಿಷಯಕ್ಕೆ ಬರೋಣ. ನಾವೆಲ್ಲಿ ಒತ್ತಡ ಶಕ್ತಿಯಾಗಿದ್ದೇವೆ. ನಮ್ಮ ನಿರ್ಣಯ, ಬೇಡಿಕೆಗಳು ಎಷ್ಟು ಇಡೇರುತ್ತವೆ. ಸ್ವಲ್ಪ ಯೋಚಿಸಿನೋಡಿ ಯಾಕೆ ನಾವಿನ್ನೂ ಬಲಿಷ್ಟವಾಗಿ ಬೆಳದಿಲ್ಲ. ಅರ್ಹ ಸವಲತ್ತುಗಳನ್ನು ಒಗ್ಗಟ್ಟಿನಿಂದ ಕೇಳಿ ಪಡಕೊಳ್ಳಲು ನಾವು ಕಲಿತಿಲ್ಲ, ಯೋಚಿಸಬೆಕಾದ ವಿಚಾರವಲ್ಲವೇ ಅದು? ಅಷ್ಟೇ ಯಾಕೆ ನಾವು ಕರೆದರೆ ಎಷ್ಟು ಮಂದಿ ಮಂತ್ರಿ, ಶಾಸಕರು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಬರುತ್ತಾರೆ. ಇನ್ನು ಬಂದರೂ ನಮ್ಮ ನೋವು ಆಲಿಸಿಕೊಳ್ಳುವಷ್ಟು ಹೊತ್ತು ಕೂರುತ್ತಾರೆ.?
ಹಾಗೆನೋಡಿದರೆ ಅವರನ್ನು
ದೂರಿ ಫಲವಿಲ್ಲ, ಅವರಿಗಿಂತ ದೊಡ್ಡ ತುರ್ತು ನಮ್ಮವರಿಗೆ ಇರುತ್ತದೆ. ಅವರನ್ನು ಬಂದ ತಕ್ಷಣ ಒಂದಿಷ್ಟು ಭಾಷಣ ಮಾಡಿಸಿ ಕಳುಹಿಸಿ ಕೊಡುತ್ತೇವೆ.ಆದ್ದರಿಂದ ಅವರಿಗೆ ನಮ್ಮ ಭಾಷಣ, ಬೇಡಿಕೆಗಳು ಗೊತ್ತಾಗುವುದೇ ಇಲ್ಲ, ನೀವು ನಂಬಬೇಕು, ವೇದಿಕೆಯಲ್ಲಿ ದೊಡ್ಡ ಉಲಮಾ ಅಥವಾ ತಂಙಳ್ ಭಾಷಣ ನಡೆಸುತ್ತಿದ್ದರೂ ಕೆಲವರು ಬಂದು "ಶಾಸಕರಿಗೆ ಇಲ್ಲವೇ ಮಂತ್ರಿಗಳಿಗೆ ಅರ್ಜಂಟಿದೆ ಇವರಲ್ಲಿ ಭಾಷಣ ನಿಲ್ಲಿಸಲು ಹೇಳಿ ಅವರಿಗೆ ಕೊಡುವ’ ಎಂದು ವೇದಿಕೆಗೆ ಬಂದು ಆರ್ಡರ್ ಮಾಡುವವರಿಗೆ ಕಡಿಮೆ ಇಲ್ಲ. ಅಂಥ ಅಭ್ಯಾಸ ನಾವು ಕೈ ಬಿಡಬೇಕು, ನಾವು ಕೂಡ ನ್ಯಾಯಯುತವಾಗಿ ಒತ್ತಡ ಶಕ್ತಿಗಳಾಗಿ ರೂಪುಗೊಳ್ಳಬೇಕು. ನಮ್ಮ ಕೂಗು ಸಂಬಂಧ ಪಟ್ಟವರಿಗೆ ಕೇಳುವಂತಾಗಬೇಕು.ಅದಕ್ಕಾಗಿ ನಾವು ಸಾಂಘಿಕವಾಗಿ ಬಲಿಷ್ಟರಾಗಬೇಕು. ನಮ್ಮ ಕಾರ್ಯಕ್ರಮಗಳಲ್ಲಿ ಸಾಮುದಾಯಿಕ ಪ್ರಗತಿಯ ಅಜಂಡಾ ಹಾಕಿ ಕೊಳ್ಳಬೇಕು. ಆ ಮೂಲಕ ಬಲಿಷ್ಟ, ಸ್ವಸ್ಥ ನಾಡು ಮತ್ತು ಸಮಾಜ ಕಟ್ಟುವಂತಾಗಬೇಕು
ಗೊತ್ತಿರಲಿ, ನಮ್ಮ ನೋವು ಹಾಗೂ ಬೇಡಿಕೆಗಳನ್ನು ಕೇಳಿಸಿಕೊಳ್ಳುವಂಥ ಒಳ್ಳೆಯ ಜನಪ್ರತಿನಿಧಿಗಳೂ ಇಲ್ಲದಿಲ್ಲ.

No comments:

Post a Comment