ಅಹಂ ಅರಿಯದ ಹೆಮ್ಮೆಯ ಉಸ್ತಾದ್


"ಚೆರುಶ್ಶೇರಿ’ ಎಂಬ ಆ ಪುಟ್ಟ ಊರು ಇಂದು ಎಲ್ಲರ ಹೃದಯದಲ್ಲಿ ಚಿರಪ್ರತಿಷ್ಟೆಗೊಂಡಿದೆ. ಝೈನುದ್ದೀನ್ ಮುಸ್ಲಿಯಾರ್  ಎಂಬ ಝೈನುಲ್ ಉಲಮಾರೊಂದಿಗೆ ಥಳಕು ಹಾಕಿ ಕೊಂಡ ಕಾರಣಕ್ಕಾಗಿ ಇಂದು ಆ ಊರನ್ನೇ ಎಲ್ಲರೂ ಮೆಲುಕು ಹಾಕುವಂತಾಗಿದೆ.ಚೆರುಶ್ಶೇರಿ ಉಸ್ತಾದರೆಂಬ ದಿವ್ಯ ಚೇತನಕ್ಕೆ ಜನುಮ ಕೊಟ್ಟ ಕಾರಣಕ್ಕಾಗಿ ಜಗತ್ತಿನ ವಿವಿಧ ಭಾಗಗಳಿಂದ ಚೆನ್ನುಡಿಗಳ ಮಹಾ ಪೂರವೇ ಹರಿದು ಬರುತ್ತಿದೆ ಆ ಊರಿಗೆ.
ಹೌದು, ನಮ್ಮೆಲ್ಲರ ಹೆಮ್ಮೆಯಾಗಿದ್ದ ಹಮ್ಮು, ಬಿಮ್ಮಿಲ್ಲದ ಶೈಖುನಾ ಚೆರುಶ್ಶೇರಿ ಉಸ್ತಾದರು ನಮ್ಮಿಂದ ಅಗಲಿ ಅಲ್ಲಾಹನ ಲಿಖಾನೆಡಗೆ ನಡೆದೇ ಬಿಟ್ಟರು. ಆದರೆ, ಅವರು ನಮ್ಮಡೆಯಲ್ಲಿ ಜೀವಂತವಾಗಿಯೇ ಉಳಿಯಲಿದ್ದಾರೆ.ಮುಸ್ಲಿಂ ಜಗತ್ತಿನ ಅಮರ ಸಾಮ್ರಾಟ ಶೈಖುನಾ ಶಂಸುಲ್ ಉಲಮಾ ಇಂದಿನ ಜಮಾನದ ನವ ಪೀಳಿಗೆಯಲ್ಲೂ ಯಾವ ರೀತಿ ಪ್ರಸ್ತುತ ಗೊಂಡಿದ್ದಾರೋ ಅದೇ ತೆರನಾಗಿ ಅವರ ಉತ್ತರಾಧಿಕಾರಿಯಾಗಿ ಎರಡು ದಶಕಗಳ ಕಾರ್ಯ ನಿರ್ವಹಿಸಿದ ಚೆರುಶ್ಶೇರಿ ಉಸ್ತಾದರೂ ಜಗತ್ತಿಗೆ ಆದರ್ಶಪ್ರಾಯರಾಗಿರುತ್ತಾರೆ ಎಂಬುದು ನೆನಪಿಡಬೇಕಾದ ಅಂಶ!
*****
ಚೆರುಶ್ಶೇರಿ ಉಸ್ತಾದರ ವಿಯೋಗದಿಂದ ತೆರವಾದ ಸ್ಥಾನಕ್ಕೆ ಇದೀಗ ಖ್ಯಾತ  ವಿದ್ವಾಂಸರೂ ,  ಚಿಂತಕರೂ, ಬಹು ಭಾಷ ಸಾಹಿತಿಯೂ ಆಗಿರುವ ಶೈಖುನಾ ಪ್ರೊ ಆಲಿಕುಟ್ಟಿ ಉಸ್ತಾದ್ ಅವರನ್ನು ’ಸಮಸ್ತ’ ದ ಹಿರಿಯ ವಿದ್ವಾಂಸರು  ಆಯ್ಕೆಮಾಡಿದ್ದಾರೆ. ಪಟ್ಟಿಕ್ಕಾಡ್ ಜಾಮಿಆಃ ನೂರಿಯಾ ಪ್ರಾಂಶುಪಾಲರು, ಹಲವು ಸಂಘ-ಸಂಸ್ಥೆಗಳ ಮಾರ್ಗದರ್ಶಿಯೂ, ಹಲವು ಪತ್ರಿಕೆಗಳ ಸಂಪಾದಕರೂ ಆಗಿರುವ ಆಲಿಕುಟ್ಟಿ ಉಸ್ತಾದ್, ಉತ್ತಮ ಬರಹಗಾರರು, ಲೇಖಕರೂ ಹಾಗೂ ಸಮರ್ಥ ಸಂಘಟಕರೂ ಆಗಿದ್ದಾರೆ.
ಉಸ್ತಾದರ ನಾಯಕತ್ವದಡಿ ’ಸಮಸ್ತ’ದ ಸಂದೇಶ ಇನ್ನಷ್ಟು ಪ್ರದೇಶಗಳಿಗೆ ವ್ಯಾಪಿಸಿ ಎಲ್ಲೆಡೆ ಧಾರ್ಮಿಕ ಚೈತನ್ಯ ಪ್ರಸರಿಸಲಿ....
*****
ಕೇರಳದ ಆಲಪುಯದಲ್ಲಿ ಜರಗಿದ ’ಸಮಸ್ತ-೯೦’ರ ಐತಿಹಾಸಿಕ ಸಮ್ಮೇಳನವೇ ಆ ಸಂಘಟನೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ. ದೇಶದ ವಿವಿಧ ರಾಜ್ಯಗಳಿಂದ ’ಸಮಸ್ತ’ದ ಕರೆಗೆ ಓಗೊಟ್ಟು ಅದೆಷ್ಟೋ ಲಕ್ಷಾಂತರ ಲೆಕ್ಕದಲ್ಲಿ ಬಂದು ಸೇರಿದ ಸುನ್ನಿಗಳು ಸಾಕ್ಷಾತ್  ಹಾಲ್ಗಡಲನ್ನೇ ನಿರ್ಮಿಸಿ ಧನ್ಯರೆನಿಸಿ ಕೊಂಡರು. ಈ ’ಸಮಸ್ತ’ದ ಅಧೀನದಲ್ಲಿ ವಿದ್ಯಾರ್ಥಿ-ಯುವ ಜನರಲ್ಲಿ ಧಾರ್ಮಿಕ,ನೈತಿಕ ಪ್ರಜ್ಞೆ ಹಾಗೂ ಸೇವಾ ಮನೋಭಾವ ಮೂಡಿಸಿ ಅವರನ್ನು  ನಾಡಿನ ಸತ್ಪ್ರಜೆಗಳನ್ನಾಗಿ ರೂಪಿಸುವ ಸಂಘಟನೆಯಾಗಿದೆ ಎಸ್ಕೆಎಸ್ಸೆಸ್ಸೆಫ್. ಪಾಣಕ್ಕಾಡ್ ಸಾದಾತ್ ಗಳ ಸಾರಥ್ಯ ದಲ್ಲಿ ಕೇರಳದಲ್ಲಿ ಬಲಿಷ್ಟವಾಗಿರುವ ಈ ಎಸ್ಕೆಎಸ್ದೆಸ್ಸಫ್,  ನಮ್ಮ  ಕರ್ನಾಟಕದ ಕೆಲ ಜಿಲ್ಲೆಗಳಲ್ಲೂ ಸಕ್ರಿಯವಾಗಿದ್ದು  ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡಿದೆ.   ಇದೀಗ ರಾಜ್ಯದ್ಯಂತ ಸಂಘಟನೆಯನ್ನು ವಿಸ್ತರಿಸಿ ಬಲಿಷ್ಟವಾಗಿ ಕಟ್ಟುವ ಧ್ಯೇಯದೊಂದಿಗೆ ನೂತನ ರಾಜ್ಯ ಘಟಕ ಕೇಂದ್ರೀಯ ನಾಯಕರ ಉಪಸ್ಥಿತಿಯಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಹಾಗೆನೋಡಿದರೆ, ಈ ಹಿಂದೆ ಪಾಣಕ್ಕಾಡ್ ಸಾದಿಕಲಿ ಶಿಹಾಬ್ ತಂಙಳ್ ಕೇಂದ್ರೀಯ ಅಧ್ಯಕ್ಷರಾಗಿದ್ದಾಗ ಮರ್ಹೂಂ ಕೋಟ ಉಸ್ತಾದ್ ರವರ ಕಾಲದಲ್ಲಿ ರಾಜ್ಯ ಘಟಕ ರಚಿಸಿ ಹಲವು ಜನಪರ ಕಾರ್ಯಕ್ರಮಗಳನ್ನು ಸಂಘಟಿಸಿ ಗಮನ ಸೆಳೆದಿತ್ತು. ಆದರೆ ಇಂದಿನಂತೆ ಸಾಂಘಿಕ ವ್ಯವಸ್ಥೆ ಅಂದಿರದ ಕಾರಣ ಅಂದು ಅದು ಇಡೀ ರಾಜ್ಯ ವ್ಯಾಪಿ ತಲುಪಿರಲಿಲ್ಲವೇನೋ. ಆದರೆ ಇದೀಗ ವ್ಯವಸ್ಥಿತ ಸಾಂಘಿಕ ಶಿಸ್ತಿನೊಂದಿಗೆ ಉತ್ಸಾಹಿ ಯುವಕರನ್ನೊಳಗೊಂಡ ಪ್ರತಿಭಾವಂತ ತಂಡವನ್ನೇ ರಚಿಸಲಾಗಿದ್ದು ಈ ನೂತನ  ರಾಜ್ಯ ಘಟಕವು ರಾಜ್ಯವ್ಯಾಪಿ ಸಂಘಟನೆಯನ್ನು ವಿಸ್ತರಿಸಿ ಕೆಡುಕು ಮುಕ್ತ ಒಳಿತಿನ  ಸಮಾಜ ನಿರ್ಮಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸೋಣ.

No comments:

Post a Comment