ನೈತಿಕ ಪ್ರೀತಿ ನಿರಂತರವಾಗಿರಲಿ


ಅದೇನೋ ಒಂಥರಾ ರೋಮಾಂಚನವೇ !
ಈ ಬದುಕಿನ ಪಯಣದಲ್ಲಿ ಎಡತಾಕುವ ಕೆಲವೊಂದು ವ್ಯಕ್ತಿಗಳ ಸಂಪರ್ಕ, ಒಡನಾಟ, ಗೆಳತನವಿದೆಯಲ್ಲ ಅದು ಬದುಕಿನೊಳು ಭದ್ರವಾಗಿ ಹೊಕ್ಕು ಬಿಟ್ಟು ಮನದಾಳ ಎಂದೆಂದೂ ಮೆಲುಕುವಂತೆ ಮಾಡಿಬಿಡುತ್ತದೆ.ಅದರಲ್ಲೂ ಗೆಳೆತನದ ಬೆಸುಗೆಯಲ್ಲಿ ಪ್ರೀತಿಯ ಭವ್ಯ ಬಾಂಧವ್ಯ ಕಟ್ಟಿಕೊಂಡು ಮನ ಪಟಲದಲ್ಲಿ ಏನೇ ಒಂಥರಾ ಸೆಳೆತ, ಮಿಡಿತ-ತುಡಿತಗಳು ಸೇರಿಕೊಂಡರೆ ಅದರ ರೋಮಾಂಚನವೇ ಬೇರೆ.
   ಹಾಗೆ ನೋಡಿದರೆ ಪ್ರೀತಿ ಎಂಬ ಪದಕ್ಕೆ ಅದೇನೋ ವಿಚಿತ್ರ ಮೋಡಿ ಇದೆ. ನೈತಿಕತೆಯ ಬೇಲಿ ದಾಟಿದ ಪ್ರೀತಿ, ಪ್ರಣಯದ ಕಥೆ ಪಕ್ಕಕ್ಕಿಡಿ. ನಿಷ್ಕಳಂಕ, ನಿರ್ಮಲ ಸ್ನೇಹ ಇದೆಯಲ್ಲಾ, ಅದು ಬದುಕಿನೊಳು ಬೆಸೆದುಕೊಂಡು ಗೆಳತನ ಎಂಬ ಸುಂದರ ಅಂಗಿ ತೊಡಿಸಿ ಬಾಳಿನುದ್ದಕ್ಕೂ ಜೊತೆ ಸೇರಿಸಿ ಎದುರಾಗುವ ಎಲ್ಲಾ ಸಿಹಿ -ಕಹಿ, ಅಳು -ನಗುವಿನಲ್ಲಿ ಭಾಗಿಯಾಗಿ ಬಿಟ್ಟರೆ ತಳುಕು-ಮೆಳುಕಿನ ಆ ಅಟ್ರಾಕ್ಷನ್ ಬರಹಕ್ಕೆ ನಿಲುಕದ್ದು.

ಅಷ್ಟಕ್ಕೂ ಈ ಪ್ರೀತಿಗಿಂತ ಕೀರ್ತಿ ಬೇರೊಂದಕ್ಕೆ ಈ ಭೂಮಿ ಮೇಲೆ ಇಲ್ಲವೇನೋ!  ವಿಶ್ವಾಸಿಯ ಮಟ್ಟಿಗೆ ಎಲ್ಲದಕ್ಕೂ ಮಿಗಿಲಾಗಿ ಪ್ರೀತಿಸಬೇಕಾದದ್ದು ಪ್ರವಾದಿ (ಸಲ್ಲಲ್ಲಾಹು ಅಲೈವಸಲ್ಲಂ) ರವರನ್ನು. ಇಲ್ಲಿ ಪ್ರೀತಿಯ ಮೀನಿಂಗು ಪ್ರವಾದಿ ’ಚರ್ಯ’ಯ ಅಳವಡಿಕೆಯೂ ಆಗಿದೆ. ನೋಡಿ, ಆ ಮಾದರಿ ಬದುಕಿನ ಅನುಕರಣೆ ಎಂಬ ಪ್ರೀತಿಯ ಧ್ಯೇಯ ಬದುಕನ್ನು ಬೆಳಗಿಸಿ ಬಿಡುತ್ತದೆ. ಇನ್ನು ಅದೇ ಪ್ರವಾದಿಯವರು ಜಗತ್ತನ್ನು ಗೆದ್ದದ್ದು ಎಲ್ಲಾ ತೆರನಾದ ಕೋಪ, ತಾಪ, ಸಿಡುಕು, ದುಡುಕು, ಸೆಡವುಳಿಗೆಲ್ಲ ಅಂಕುಶ ಹಾಕಿ ಶುದ್ಧವಾಗಿ ಜನರನ್ನು ಪ್ರೀತಿಸಿ ನಿಷ್ಕಲ್ಮಶ ಸಲುಗೆಯ ಬೆಸುಗೆಯಲ್ಲಿ ಕಟ್ಟಿದ್ದರಿಂದಲೇ ಆಗಿತ್ತು ನಮ್ಮ ಭಾರತದಲ್ಲಿ ಅಂದು ಇಸ್ಲಾಂ ಪ್ರಚುರ ಪಡೆದದ್ದು, ಜನ ಧರ್ಮವನ್ನು ಅಪ್ಪಿಕೊಂಡದ್ದು ಇಸ್ಲಾಮಿನ ತಾರತಮ್ಯವಿಲ್ಲದ ಪರಸ್ಪರ ಮಾನವೀಯ ಪ್ರೀತಿಯಿಂದಲೇ ಆಗಿತ್ತು.
ಪ್ರೀತಿಯಲ್ಲಿ ವೆರೈಟಿಗಳಿವೆ. ಎಲ್ಲಾ ತೆರನಾದ ನೋವು, ಸಂಕಟ, ಖಾಲಿತನಗಳೆಲ್ಲವೂ ಗಂಟುಮೂಟೆ ಕಟ್ಟಿ ಬದುಕಿನಲ್ಲಿ ಕನಸು ಶುರುವಿಟ್ಟು ಬಾಳನ್ನು ಚಂದಗೊಳಿಸುವ ಈ ಪ್ರೀತಿ ಮಕ್ಕಳಿಗೆ ಅಪ್ಪ-ಅಮ್ಮನ ಮಮತೆಯನ್ನು, ಜನುಮ ಕೊಟ್ಟು ಸಾಕಿ, ಸಲಹಿದವರೊಂದಿಗಿನ ಮಕ್ಕಳ ಸ್ನೇಹವನ್ನು, ಕಲಿಸಿ ಕೊಟ್ಟು ತಿದ್ದಿ, ತೀಡಿ ಗುರಿ ತೋರಿಸಿದ ಗುರುವಿನ ಗೌರವವನ್ನು, ಒಡಹುಟ್ಟಿದ ಸಹೋದರ-ಸಹೋದರಿಯರ ಅಕ್ಕರೆ, ಹಿರಿಯರ ಆಶೀರ್ವಾದ, ಹಾರೈಕೆ, ಗೆಳೆಯ -ಗೆಳತಿಯರ ಸ್ನೇಹದ ಮಿಳಿತ, ತುಡಿತ, ಪತಿ-ಪತ್ನಿಯ ಬಾಹುಬಂಧನ, ಸರಸ, ಸಮರಸ ಹೀಗೆ ಎಲ್ಲವನ್ನೂ ನೀಟಾಗಿ ಕಟ್ಟಿ ಕೊಡುವ ಭಾವನಾತ್ಮಕ ಪ್ರಕ್ರಿಯೆಯೇ ಈ ಪ್ರೀತಿ.
ಈ ಪ್ರೀತಿಯಿಂದ ಕ್ರಾಂತಿ ಸೃಷ್ಟಿ  ಮಾಡಬಹುದು. ಶತ್ರುವನ್ನೂ ಗೆಲ್ಲಬಹುದು. ಪ್ರವಾದಿ (ಸಲ್ಲಲ್ಲಾಹು ಅಲೈವಸಲ್ಲಂ) ಹೇಳುತ್ತಾರೆ ’ಪರಸ್ಪರ ಪ್ರೀತಿ ಹೆಚ್ಚಲು ಸಲಾಂ ವ್ಯಾಪಿಸಿಕೊಳ್ಳಿ’ ವಿಶ್ವಾಸಿಗಳು ಪರಸ್ಪರ ಸಲಾಂ ಮೂಲಕ ಮಾತುಕತೆ, ಸಂಪರ್ಕಗಳನ್ನು ಇಟ್ಟುಕೊಂಡಾಗ ಪರಸ್ಪರ ಪ್ರೀತಿ, ನಂಬುಗೆ ದ್ವಿಗುಣಗೊಳ್ಳುತ್ತದೆ.ಅದೇ ತೆರನಾಗಿ ದೇಶಬಾಂಧವರೊಂದಿಗೆ ಪ್ರೀತಿಯ ಒಡನಾಟ ಇಟ್ಟುಕೊಂಡಾಗ ಗಲಭೆ ಮುಕ್ತ ಶಾಂತಿಯುತ, ಸ್ವಸ್ಥ ಸಮಾಜ ಸುಂದರ ನಾಡು ಕಟ್ಟಲು ಸಾಧ್ಯವಾಗುತ್ತದೆ.ಅದೇ ಪ್ರೀತಿ ಬರಿದಾದಾಗ ಅಶಾಂತಿ, ಹಿಂಸೆಗಳು ಉಂಟಾಗುತ್ತದೆ. ಅದು ವಿಶ್ವಾಸಿಗೆ ಭೂಷಣವಲ್ಲ, ಮಾನವೀಯತೆ, ಪ್ರೀತಿ, ಸಾಮರಸ್ಯವೇ ಧರ್ಮದ ತಿರುಳು. ಇದು ಪ್ರತಿಯೊಬ್ಬರೂ ತಿಳಿದಿರಬೇಕು.
ಇನ್ನು ಈ ಪ್ರೀತಿಯಿಂದ ಉಳ್ಳವರಿಗೆ ಮೊಗೆದು ಕೊಡುವ ಮನಸ್ಥಿತಿ ಬರುತ್ತದೆ. ಆಗ ಹಸಿದವನ ಹೊಟ್ಟೆಯೂ ತುಂಬುತ್ತದೆ. ಇನಿಯನ ಖಾತರದಲ್ಲಿ ಕಣ್ಣೀರಿಡುವ ಬಡ ಹೆಣ್ಮಗುವಿನ ಕಂಗಳಲ್ಲೂ ಬೆಳಕು ಮೂಡುತ್ತದೆ. ಒಡೆದ ಕುಟುಂಬವೂ ಒಂದಾಗುತ್ತದೆ. ಪತಿ-ಪತ್ನಿಯ ಅದ್ಯಾವ ವಿರಸವೂ ಗಂಟುಮೂಟೆ ಕಟ್ಟುತ್ತದೆ. ನಾಡು,ಸಮಾಜವನ್ನು ಬಲಿಷ್ಠವಾಗಿಸಿ ಬಿಡುತ್ತದೆ.ಆದ್ದರಿಂದಲೇ ಅಂಥದ್ದೊಂದು ಪ್ರೀತಿ, ಇತರಿಗಾಗಿ ತುಡಿಯುವ ಮನಸ್ಸು ನಮಗೆ ಇರಲೇಬೇಕು.ಅದಕ್ಕೇ ಪ್ರವಾದಿ (ಸಲ್ಲಲ್ಲಾಹು ಅಲೈವಸಲ್ಲಂ) ’ನಿನ್ನ ನಿರ್ಮಲ ನಗುವಿಗೂ ಪುಣ್ಯವಿದೆ’ ಎಂದು ಹೇಳಿದ್ದು.
ತಂದೆ, ತಾಯಿಯ ಪ್ರೀತಿ  ಮಗುವನ್ನು ಮುದ್ದಿಸಿ, ಲಾಲಿಸಿ ಬೆಳಸುತ್ತದೆ. ಗುರುವಿನ ಪ್ರೀತಿ ಗುರಿ ಮುಟ್ಟಿಸುತ್ತದೆ. ಪತ್ನಿಯು ಪ್ರೀತಿ ಸಾಧಕನಾಗಿ ಮಾರ್ಪಡಿಸುತ್ತದೆ. ಮಕ್ಕಳ ಪ್ರೀತಿ ನೆಮ್ಮದಿ ಮೂಡಿಸುತ್ತದೆ.ಗೆಳೆಯನ ಪ್ರೀತಿ ಧೈರ್ಯ ತುಂಬುತ್ತದೆ. ಹೀಗೆ ಈ ಭೂಮಿ ಮೇಲಿರುವ ಪ್ರೀತಿ ಎಂಬ ಮಾಯೆ ಸದ್ದಿಲ್ಲದೆ ಅದ್ಭುತ ಕ್ರಾಂತಿಯನ್ನು ಉಂಟುಮಾಡುತ್ತದೆ.
ಇಷ್ಟಕ್ಕೂ ಈ ಪ್ರೀತಿ ಎಂಬ ಕುತೂಹಲದ ಕುದಿ ಕುಡಾಯಿಸುವ, ಕೊರಳು ಉಬ್ಬಿಸುವ ತುಡಿತ ಇದೆಯಲ್ಲ, ಅದು ಎಲ್ಲೆ ಮೀರಿ ನೈತಿಕತೆಯ ಬೇಲಿ ಹಾರಿ ಹಳಿ ತಪ್ಪಿಸುವ ಬದಲು ಬದುಕಿನ ಮಗ್ಗಲು ಬದಲಿಸಿ ವಾಮ ಮಾರ್ಗವನ್ನು ಹಿಡಿತದಂತೆ ಕೈ ಹಿಡಿದು ಸರಿ ದಾರಿಗೆ ಕರೆ ತರಲು ಹಾದಿಯಾಗಬೇಕು.ಆಗ ಪ್ರೀತಿಗೂ ಮೌಲ್ಯವಿರುತ್ತದೆ, ಪುಣ್ಯ ಸಿಗುತ್ತದೆ. ಗೊತ್ತಿರಲಿ, ಬದುಕು ಬದಲಿಸುವ ಸಲುಗೆಯ  ಬೆಸುಗೆ ಅದೆಷ್ಟೋ. !
ಆದರೆ ಮನದಾಳದಲ್ಲಿ ಚಿಮ್ಮುವ ಈ ಪ್ರೀತಿ ಎಂಬ ನಿರಂತರ ಒರತೆಯನ್ನೇ ಬರಿದಾಗಿಸಿ ಜಗಳಕ್ಕಿಳಿಯುತ್ತೇವೆಯಲ್ಲ, ನಾವೆಂಥ ಮನುಷ್ಯರು? ನಶ್ವರ ಬದುಕಿನ ಈ ದುನಿಯಾದಲ್ಲಿ ನಾವು ಜಗಳ ಕಾಯಲು ಇರುವವರಾ? ಸಾಧನೆ, ಶೋಧನೆ, ಆರಾಧನೆ, ಕರ್ತವ್ಯ ನಿರ್ವಹಣೆಯಲ್ಲಿ ತೊಡಗಬೇಕಾದವರಿಗೆ ಎಲ್ಲಿದೆ ಜಗಳಕ್ಕೆ ಟೈಮು? ಕಾಡು ಹರಟೆ,ಯಾರದೋ ಗೀಬತ್ತು, ಕುರಿಪಾತು, ನಿಂದನೆ, ಮನ ನೋಯಿಸುವಿಕೆ, ಜಗಳ ಕಾಯುವಿಕೆ, ದ್ವೇಷ ಕಟ್ಟುವಿಕೆಗೆಲ್ಲ ತೆಗೆದುಕೊಳ್ಳುವ ಬದುಕಿನ ಅಮೂಲ್ಯ ಟೈಮನ್ನು ಈ ಹೃಸ್ವ ಬದುಕು ಬೆಳಗಿಸುವುದಕ್ಕೆ ವಿನಿಯೋಗಿಸಿದರೆ, ಸಾಧನೆ-ಶೋಧನೆಯ ಮೂಲಕ ಒಂದಿಷ್ಟು  ಸಂಪಾದಿಸಿಕೊಂಡರೆ ಬದುಕೆಷ್ಟು ಸುಂದರ? ಯಾರದೋ ವೈರದಲ್ಲಿ ಕುದಿಯುವ ಮನಸು ಅದೆಷ್ಟು ಕಾಲ ಭಾರ ಹೊತ್ತು ದಣಿಯ ಬೇಕು?
ಅಷ್ಟಕ್ಕೂ ನಾನು ಯಾರೊಂದಿಗೂ ಕೋಪಿಸಿಲ್ಲ, ಜಗಳವಾಡಿಲ್ಲ ಎಲ್ಲರನ್ನೂ ಪ್ರೀತಿಸಿದ್ದೇನೆ ಎಂದು ಹೇಳಲ್ಲ. ಬದುಕಿನ ಹಾದಿಯಲ್ಲಿ ಎಡವಿ ಕೋಪಿಸಿಕೊಂಡಿರಬಹುದು. ಆದರೆ ನನ್ನ ಕೋಪ-ತಾಪ, ಜಗಳ ಕಾಯುವಿಕೆಗೇನು ಹೆಚ್ಚಿನ ಬಾಳಿಕೆ ಇರಲಿಲ್ಲ. ಎಷ್ಟು ವೇಗದಲ್ಲಿ ಕೋಪಿಸಿಕೊಂಡನೋ ಅಷ್ಟೇ ಶರವೇಗದಲ್ಲಿ ಎಲ್ಲಾ ಮರೆತು ಒಗ್ಗೂಡಿದ್ದೂ ಇದೆ.ಹಾಗಂದು ಅಂಥದ್ದು ಬರೋಬ್ನರಿ ಏನೂ ನಡೆದಿಲ್ಲ ಎಂದು ಹೇಳುವಷ್ಟು ಧೈರ್ಯವೂ ಇದೆ.
ನಿಮಗೂ ಗೊತ್ತು, ಜಗಳ, ಕೋಪ, ವೈರದಲ್ಲಿ ಕಳೆದು ಹೋಗುವಷ್ಟು ಈ ಬದುಕು ಸಿಲ್ಲಿಯಲ್ಲ. ಮೌಲ್ಯವೇರಿದ ಟೈಮನ್ನು ಕೇವಲ ಹಗೆತನಕ್ಕೆ ಮೀಸಲಿಡಬಾರದು. ಪ್ರೀತಿಯ ಬೆಸುಗೆಯಲ್ಲಿ ಬದುಕು ಸಾರ್ಥಕ್ಯ ಕಾಣಿವಂತಾಗಬೇಕು. ಏಕೆಂದರೆ ನಾವು ಪ್ರೀತಿ, ಕರುಣೆಯ ಕಡಲಾದ ಪ್ರವಾದಿಯವರ ಅನುಯಾಯಿಗಳು.
ನೆನಪಿಸಿಕೊಳ್ಳಿ, ರೋಗ  ಪೀಡಿತ ನಾಯಿಯನ್ನು ಊರವರು ತಿನ್ನಲು ಕೊಡದೆ ಹೊಡೆದೋಡಿಸಿದಾಗ ಅದನ್ನು ಕರೆತಂದು ಅನ್ನ, ನೀರು, ಮದ್ದು ಎಲ್ಲವನ್ನೂ ಕೊಟ್ಟು ಶುಶ್ರೂಷೆ ನಡೆಸಿದ ಶೈಖ್ ಅಹ್ಮದುಲ್ ಕಬೀರ್ ರಿಫಾಯಿ(ರ) ರವರ ಪ್ರೀತಿ, ಕರುಣೆ ಎಲ್ಲಿ ? ನಾವೆಲ್ಲಿ ? ಯೋಚಿಸಿ ಬೇಡವೇ?
ಅಂದ ಹಾಗೆ, ಶೈಖ್ ರಿಫಾಯಿ (ರ) ರವರನ್ನು ವಿಶೇಷವಾಗಿ ಸ್ಮರಿಸುವ ತಿಂಗಳು ಕೂಡ ಇದುವೆ.

-ಕೆ.ಎಂ.ಎ. ಕೊಡುಂಗಾಯಿ

No comments:

Post a Comment