ದೀನಿಗಾಗಿ ಜೀವ ತೆತ್ತ ಶೈಖ್ ಜೀಲಾನಿ

ಔಲಿಯಾಗಳ ಅಧಿಪತಿಯಾಗಿ, ಪವಾಡ ಪುರುಷರಾಗಿ, ಧಾರ್ಮಿಕ ಚೈತನ್ಯತೆಯ ಪುನರುದ್ಧಾರಕರಾಗಿ ಇತಿಹಾಸ ನಿರ್ಮಿಸಿದ ಶೈಖ್ ಮುಹ್ಯದ್ಧೀನ್ ಅಬ್ದುಲ್ ಖಾದರ್ ಜೀಲಾನಿ(ರ)ರವರನ್ನು ವಿಶ್ವ ಮುಸ್ಲಿಮರು ಸ್ಮರಿಸುವ, ಅವರ ವಫಾತ್ ಆದ ದಿನ ರಬಿವುಲ್ ಆಖಿರ್ ತಿಂಗಳ ಹನ್ನೊಂದು ಮತ್ತೊಮ್ಮೆ ಬಂದು ನಿಂತಿದೆ.
ಹಿಜಿರಿ ೪೭೦ ರಂಝಾನ್ ತಿಂಗಳಲ್ಲಿ ಅರೇಬಿಯಾದ ಇರಾಕಿನ ಜಿಲಾನಿ ಎಂಬಲ್ಲಿ ಜನಿಸಿದ ಶೈಖ್‌ರವರ ಕೌಟಂಬಿಕ ಹಿನ್ನಲೆಯೇ ಅತ್ಯಂತ ಶ್ರೇಷ್ಠವಾದದ್ದು. ತಂದೆ ಧರ್ಮ ಭಕ್ತರಾದ ಅಬೂ ಸ್ವಾಲಿಹ್‌ರವರ ಕುಂಟುಂಬ ಪರಂಪರೆ ಪ್ರವಾದಿ(ಸಲ್ಲಲ್ಲಾಹು ಅಲೈವಸಲ್ಲಂ)ರವರ ಪೌತ್ರ್ರ ಹಸನ್(ರ)ರವರಿಗೆ ನಿಕಟವಾಗಿ ಸೇರುತ್ತದೆ. ಇನ್ನು ಅವರ ಮಾತೆ ಫಾತಿಮಾರ ಪರಂಪರೆ ಪ್ರವಾದಿಯ ಮತ್ತೊರ್ವ ಪೌತ್ರ ಹುಸೈನ್(ರ)ರವರಿಗೆ ಸೇರುತ್ತದೆ. ಕರೆಕ್ಟಾಗಿ ಹೇಳಬೇಕೆಂದರೆ ಪ್ರವಾದಿಯ ವಂಶ ಪರಂಪರೆಯ ಹತ್ತನೇ ಪುತ್ರ ಇವರ ತಂದೆಯಾದರೆ ಹದಿನೈದನೇ ಪುತ್ರಿಯಾಗಿದ್ದಾರೆ ಇವರ ಮಾತೆ.ಪವಿತ್ರ ಶ್ರೇಷ್ಠ ದಂಪತಿಗಳ ಪುತ್ರನಾಗಿ ಜನ್ಮತಾಳಿದ ಶೈಖ್ ಜೀಲಾನಿಯವರ ಜನನ ಒಂದು ರಂಝಾನ್ ತಿಂಗಳ ಮೊದಲ ದಿನವಾಗಿತ್ತು. ಜನಿಸಿದ ದಿನದಿಂದ ರಂಝಾನ್ ಮುಗಿಯುವವರೆಗೂ ಆ ಹಸುಗೂಸು ಹಗಲು ಸಮಯದಲ್ಲಿ ತಾಯಿಯ ಮೊಲೆಹಾಲು ಮುಟ್ಟಲಿಲ್ಲ.
ಅಂದರೆ ಮಗುವಾಗಿದ್ದಾಗಲೇ ಉಪವಾಸ ಆಚರಿಸಿದ ಅದ್ಬುತ ಶಿಶುವಾಗಿತ್ತು.

ಮಗುವಾಗಿದ್ದಾಗಲೇ ತಂದೆ ಇಹಲೋಕ ತ್ಯಜಿಸಿದ ಕಾರಣ ಮಾತೆಯ ಪಾಲನೆಯಲ್ಲಿ ಮಗು ಬೆಳೆಯಿತು. ಜ್ಞಾನದ ಮೊದಲ ಅಕ್ಷರಗಳನ್ನು ಮಾತೆಯಿಂದಲೇ ಪಡೆದ ಮಗು, ಎಳೆಯ ಪ್ರಾಯದಲ್ಲೇ ಶಿಸ್ತು, ವಿನಯ, ಉತ್ತಮ ಗುಣ ನಡತೆಯನ್ನು ಮೈ ಗೂಡಿಸಿಕೊಂಡಿತ್ತು, ಮಕ್ಕಳಾಟದಲ್ಲಿ ಉಂಟಾಗುವ ಯಾವುದೇ ಹಟ, ಉಪಟಳ ಮಗುವಿನಲ್ಲಿ ಕಂಡುಬರಲಿಲ್ಲ. ಅಷ್ಟೇ ಅಲ್ಲ. ಅಪರಿಮಿತ ಭಕ್ತಿಭಾವದಲ್ಲಿ ಮಿಂದಿದ್ದ ಮಗುವಿಗೆ ವಿಶೇಷ ಬುದ್ಧಿಯನ್ನು ಅಲ್ಲಾಹನು ಕರುಣಿಸಿದ್ದ. ಪಾಠಶಾಲೆಯಲ್ಲಿ ಇತರ ಮಕ್ಕಳು ಒಂದುವಾರ ಕಲಿಯುವ ಪಾಠವನ್ನು ತಾನು ಒಂದೇ ದಿನದಲ್ಲಿ ಕಲಿಯುತ್ತಿದ್ದೆ ಎಂದು ಅವರೇ ಹೇಳುತ್ತಿದ್ದರು. ಊರಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ದೂರದ ಬಾಗ್ದಾದ್‌ನಲ್ಲಿ ಉನ್ನತ ಶಿಕ್ಷಣ ಪಡೆದರು. ಆ ಕಾಲದಲ್ಲಿ ಬಗ್ದಾದ್ ಶೈಕ್ಷಣಿಕ ಕೇಂದ್ರವಾಗಿ ಪ್ರಸಿದ್ದಿ ಪಡೆದಿತ್ತು. ಅಲ್ಲಿ ಶೈಖ್ ಅಬೂಯಸೀದುಲ್ ಮುಬಾರಕ್, ಅಬೂಲ್ ಹಸನ್ ಮುಹಮ್ಮದ್ ಹಾಬಿಲಿ ಮೊದಲಾದ ಅನೇಕ ವಿದ್ವಾಂಸರ ಬಳಿ ಶೈಖ್‌ರವರು ಉನ್ನತ ಶಿಕ್ಷಣ ಪಡೆದರು. ಆ ಪೈಕಿ ಅಹ್ಮದ್(ರ) ಅಲ್ಲದೆ ಅಬೂ ಯಹ್‌ಕೂಬ್ ಯೂಸೂಫ್ ಬನೂ ಅಯ್ಯೂಬಿಲ್ ಹಮದಾನಿ ಇವರಿಂದ ಆಧ್ಯಾತ್ಮಿಕ ದೀಕ್ಷೆ ಪಡೆದು ಮೈ ಮನ ಹಾಗೂ ಬದುಕನ್ನು ಇಲಾಹಿ ಚಿಂತನೆಯಲ್ಲಿ ಪಾವನಗೊಳಿಸಿ ದನ್ಯರಾದರು. ಪಿತ್ರಾರ್ಜಿತವಾಗಿ ದೊರೆತ ಚಿನ್ನದ ನಾಣ್ಯಗಳಿಂದ ನಲ್ವತ್ತನ್ನು ಮಗನಿಗೆ ಕೊಟ್ಟಾಗಿತ್ತು ಆ ಮಾತೆ ಮಗನನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸಿ ಕೊಟ್ಟದ್ದು. ಕಲಿಕೆಗೆ ಕಳುಹಿಸಿ ಬೀಳ್ಕೊಟ್ಟ ಮಾತೆ ಕೊನೆಯದ್ದಾಗಿ ಹೇಳಿದ್ದ ಮಾತು "ಪ್ರೀಯ ಮಗನೇ ನೀನು ಯಾವ ಪರಿಸ್ಥಿಯಲ್ಲೂ ಸತ್ಯವನ್ನೇ ನುಡಿ”
ಶೈಖ್ ಜೀಲಾನಿಯವರು ಮಾತೆಯ ಈ ಉಪದೇಶವನ್ನು ಬದುಕು ಪೂರ್ತಿ ಅಳವಡಿಸಿಕೊಂಡರು. ಅಂದು ಕಲಿಕೆಗೆ ಹೋಗುವ ಮದ್ಯೆ ಎದುರಾದ ಡಕಾಯಿತರು ತನ್ನ ಬಳಿ ಏನಿದೆ? ಎಂದು ಪ್ರಶ್ನಿಸಿದಾಗ ತನ್ನ ಬಳಿ ೪೦ ಚಿನ್ನದ ನಾಣ್ಯಗಳಿವೆ ಎಂದು ಸತ್ಯವನ್ನೇ ನುಡಿದ ಬಾಲಕನ ಮಾತಿಗೆ ಅಚ್ಚರಿಗೊಂಡ ಡಕಾಯಿತರ ಗುಂಪು ಮನ ಪರಿವರ್ತನೆಗೊಂಡು ಸತ್ಯವಂತರಾಗಿ ಬಾಳಲು ಕಾರಣವಾಯಿತು. ಇದು ಬಾಲಕನಿರುವಾಗಲೇ ಶೈಖ್ ಜೀಲಾನಿ ಬದುಕಿನಲ್ಲುಂಟಾದ ಅದ್ಬುತ ಘಟನೆಯಾಗಿದೆ.
ಹೀಗೆ ಅಪಾರ ಜ್ಞಾನ ಕರಗತ ಮಾಡಿಕೊಂಡು ಸತ್ಯವಂತರಾಗಿ ಬಾಳಿ, ಅಧ್ಯಾತ್ಮಿಕವಾಗಿ ಮೇಲೇರುತ್ತಾ ಅಲ್ಲಾಹನ ಇಷ್ಟದಾಸರ ಸಾಲಿಗೆ ಸೇರಿದ ಶೈಖ್ ಜೀಲಾನಿ ಬರಬರುತ್ತಾ ಔಲಿಯಾಗಳ ಅಧಿಪತಿಯಾಗಿ ಮೆರೆದರು. ಆದರೆ ತಾವು ಅದೆಷ್ಟು ಮೇಲೇ ರಿದರೂ ಅಹಂ, ಅಹಂಕಾರ ಎಳ್ಳಷ್ಟು ತಮ್ಮನ್ನು ಸ್ಪರ್ಶಿಸದಂತೆ ಜಾಗರೂಕರಾದ ಶೈಖ್ ವಿನಯ, ಸಜ್ಜನಿಕೆ, ಸರಳತೆಗೆ ಮತ್ತೊಂದು ಹೆಸರಾಗಿದ್ದರು.
ಆಧ್ಯಾತ್ಮಿಕ ಪುರುಷರ ಸುಲ್ತಾನರಾಗಿ ವಿರಾಜಿಸಿದ ಶೈಖ್‌ರವರು ನೊಂದವರ, ಬಡವರ, ಅನಾಥರ ಆಶಾಕಿರಣರೂ ಆಗಿದ್ದು, ತಮಗೆ ಸಿಕ್ಕಿದ ವಸ್ತುಗಳೆಲ್ಲವನ್ನು ಬಡ, ದುರ್ಬಲರಿಗೆ ದಾನ ಮಾಡುತ್ತಿದ್ದರು. ಅದೇ ತೆರನಾಗಿ ಜನರಿಗೆ ಸದ್ದರ್ಮದ ಒಳಿತಿನ ಸಂದೇಶ ನೀಡಿ ಅದ್ಭುತ ಕ್ರಾಂತಿಗೂ ಕಾರಣರಾದರು. ಪ್ರಚಂಡ ಪ್ರಭಾಷಣಗಾರರಾಗಿದ್ದ ಶೈಖ್ ಜೀಲಾನಿಯ ಭಾಷಣಕ್ಕೆ ಜನ ಕಿಕ್ಕಿರಿದು ತುಂಬುತ್ತಿತ್ತು. ಕೆಲವೊಮ್ಮೆ ೭೦ ಸಾವಿರಕ್ಕೂ ಮಿಕ್ಕಿದ ಶೋತೃಗಳು ಆ ಕಾಲದಲ್ಲೇ ಸೇರುತಿದ್ದರು ಎಂದು ಇತಿಹಾಸ ತಿಳಿಸುತ್ತದೆ. ಅವರ ಭಾಷಣ ಕೇಳಿ ಧರ್ಮ ಸ್ವೀಕರಿಸಿದ ಜನರು ಅದೆಷ್ಟೋ. ಅದೇ ತೆರನಾಗಿ ರಾಜರುಗಳು ಅವರ ಆಜ್ಞೆ ಪಾಲಕರಾಗಿ ಬದಲಾಗಿ ಬಿಟ್ಟರು.
ಹೀಗೆ ಔಲಿಯಾಗಳ ಚಕ್ರವರ್ತಿ, ಧರ್ಮಕ್ಕೆ ಚೈತನ್ಯ ತುಂಬಿದ ರೂವಾರಿ ತ್ವರೀಖತ್ತಿನ ನಾಯಕ, ಆಧ್ಯಾತ್ಮಿಕ ಚಿಂತನೆಯ ಪ್ರಕಾಶ ಗೋಪುರ ಶೈಖ್ ಅಬ್ದುಲ್ ಖಾದಿರ್ ಜೀಲಾನಿ ಅವರು ತಮ್ಮ ೯೧ನೇ ವಯಸ್ಸಿನಲ್ಲಿ ಅದೊಂದು ರಬೀವುಲ್ ಆಖಿರ್ ತಿಂಗಳ ಹನ್ನೊಂದರಂದು ಇಹಲೋಕ ತ್ಯಜಿಸಿದರು.
ಬಾಗ್ದಾದ್ ಪಟ್ಟಣದ ಖಾಬ್ ಶೈಖ್‌ನಲ್ಲಿರುವ ಜೀಲಾನಿ ಮಸೀದಿಯಲ್ಲಿ ಆ ಪುಣ್ಯ ಪುರುಷ ಇಂದು ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.

No comments:

Post a Comment