ಜಿಲ್ಲೆಗೆ ಹಬ್ಬಿದ ಬೆಂಕಿಯನ್ನು ಬೆಳಕಾಗಿ ಪರಿವರ್ತಿಸೋಣ

ಭಾಷಣ ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಮನುಷ್ಯರ ಕೈಗಳ ಪ್ರವೃತ್ತಿ ಕಾರಣ ಕಡಲು ಮತ್ತು ತೀರಗಳೆರಡರಲ್ಲಿಯೂ ಕ್ಷೋಭೆ ಹರಡಿದೆ 
ಕುರಾನ್ ಅರ್ರೂಮ್ :೪೧

ಸಮಾಜದಲ್ಲಿ  ಶಾಂತಿ ನೆಮ್ಮದಿಗಾಗಿ ಎಲ್ಲರೂ ಶ್ರಮಿಸುವುದು ಅನಿವಾರ್ಯವಾಗಿದೆ, ಮತ್ತು ಅದು  ಜವಾಬ್ದಾರಿಯೂ ಆಗಬೇಕಾಗಿದೆ.ಆ ಮೂಲಕ ಜಿಲ್ಲೆಗೆ ಹಬ್ಬಿದ ಬೆಂಕಿಯನ್ನು ಬೆಳಕಾಗಿ ಪರಿವರ್ತಿಸೋಣ.
 ಸಾಮಾಜಿಕ ತಾಣ ಹಲವು ಕುತೂಹಲಕರ ಮತ್ತು ಸತ್ಯನ್ವೇಷನೆಗೆ ಟ್ವಿಸ್ಟನ್ನು ಒದಗಿಸುತ್ತದೆ ನಿಜ. ಆದರೆ
ಬೇಜವಾಬ್ದಾರಿ ಪೋಸ್ಟುಗಳಿಗೂ ಬರವಿಲ್ಲ.ಆದರೂ ಸುಳ್ಳರಿಗೆ ,ಬೆಂಕಿ,ಮತ್ತು ರಕ್ತ ಕಂಪನಿಯವರಿಗೆ,ಕಲ್ಲು ತೂರುವವರಿಗೆ ವಿರುಧ್ದ‌ವಾದ ಹಲವು ವೀಡಿಯೋ ಗಳನ್ನು ಅದು ನೀಡುತ್ತಿದೆ. ಆ ಮೂಲಕ ಸಮಾಜದ ಜನ ಪ್ರಬುದ್ದ ರಾಗುತ್ತಿದ್ದಾರೆ.
ಕೆಲವು ಚಾನಲುಗಳ ಬಿಗ್ ಬ್ರೇಕಿಂಗ್ ನ್ಯೂಸ್ ವರದಿ ಮಾಡಿ ಗಾಳಿ ಹೋದ ಬಲೂನು ತರ ಮುದುಡಿ ಹೋಗಿ ಸುಳ್ಳಿನ ವಾಹಕರಾಗಿ ಮುಜುಗರಕ್ಕೊಳಗಾಗುತ್ತಾರೆ.ಸಮಾಜದಿಂದಲೂ ಉಗಿಸಿಕೊಳ್ಳುತ್ತಾರೆ. ಇನ್ನಾದರೂ ಸಾಮಾಜಿಕ ಜವಾಬ್ದಾರಿ ತೋರದಿದ್ದರೆ  ಕೆಲವು ಚಾನಲ್ ಕಛೇರಿಗಳನ್ನು  ಗುಜರಿ ಗೋದಾಮು ಮಾಡಬೇಕಾದಿತು.
ನಾನು ನೋಡಿದ ಎರಡು ಸಾಮಾಜಿಕ ತಾಣದ ವೀಡಿಯೋಗಳು ಸಮಾಜದ ಕಣ್ಣು ತೆರೆಸುವಂತಿದೆ.ಒಂದನ್ನು ನೋಡಿ ಕಣ್ಣೀರು ಸುರಿಸಿದರೆ ಇನ್ನೊಂದನ್ನು ನೋಡಿ ಮೌಲ್ಯಗಳು ಇನ್ನೂ ಉಳಿದು ಕೊಂಡಿದೆ ಎಂದೆನಿಸಿತು.
ಮೊದಲು ತೃಪ್ತಿ ಯ ವಿಷಯಕ್ಕೆ ಬರೋಣ,ಮೂರು ಮಂದಿ ಹುಡುಗರು ಗುಡ್ಡಗಾಡು ಪ್ರದೇಶದದಲ್ಲಿ ಕುರಿ ಮೇಯಿಸುತ್ತಿದ್ದರು.ಎಲ್ಲಿಂದಲೋ ಅವರಿಗೆ ನರಳುವ ಕೂಗು ಕೇಳಿಸುತ್ತದೆ.ಸುತ್ತಲೂ ಹುಡುಕುತ್ತಾರೆ.ಕೊನೆಗೆ ಒಂದು ಕಿರಿದಾದ ಕೊಳವೆ ಬಾವಿ ತರದ ಗುಂಡಿಯಿಂದ ಆ ಶಬ್ದವು ಬರುವುದೆಂದು ಖಾತರಿ ಪಡಿಸುತ್ತಾರೆ.ಆದರೆ ಅವರ ಕೈ ಅದರೊಳಗೆ ತಲುಪುತ್ತಿಲ್ಲ.ಕಡೆಗೆ ಅವರೊಂದು ಉಪಾಯ ಮಾಡುತ್ತಾರೆ.ಸವಕಲಾಗಿರುವ ಒಬ್ಬನನ್ನು ತಲೆ ಕೆಲಗಾಗಿಸಿ ಇಬ್ಬರು ಎತ್ತಿ ಹಿಡಿದು ಗುಂಡಿಯೊಳಗೆ ಕಳುಹಿಸುತ್ತಾರೆ.ಒಂದೆರಡು ಸಲ ಹುಡುಗ ಉಸಿರುಗಟ್ಟಿ ಒದ್ದಾಡುತ್ತಾನೆ.ಆವಾಗ ಅವನನ್ನು ಮೇಲಕ್ಕೆತ್ತುತ್ತಾರೆ.ಆದರೂ ಛಲ ಬಿಡದೇ ಪ್ರಯತ್ನವನ್ನು ಮಾಡುತ್ತಾರೆ. ಬಹಳ ಶ್ರಮಪಟ್ಟು ಗುಂಡಿಯೊಳಗಿಂದ ಆಡಿನ ಮರಿಯನ್ನು ಎತ್ತಿ ತಂದು ಕುಣಿಯುತ್ತಾರೆ.ಇದನ್ನು ನೋಡಿದಾಗ ಓ ಅಲ್ಲಾಹನೇ ನೀನು ಕೆಲವರ ಹೃದಯವನ್ನು ಎಷ್ಡು ಚೆನ್ನಾಗಿಟ್ಡಿರುವಿ ಎಂದು ಆತನನ್ನು ಸ್ತುತಿಸಿದೆ.ಹಝ್ರತ್ ಪ್ರವಾದಿ (ಸ)ರ ಸಂದೇಶದ ಮಹತ್ವ ಇದರಿಂದ ಸ್ಪಷ್ಟವಾಗುತ್ತದೆ.
ಭೂಮಿಯಲ್ಲಿರುವ ಎಲ್ಲರೊಂದಿಗೆ ಕರುಣೆ ತೋರಿ ಆಗ  ಆಕಾಶದೊಡೆಯ ಅಲ್ಲಾಹನು ಕರುಣೆ ತೋರುತ್ತಾನೆ.ಹದೀಸು.
ಇನ್ನು ಅತ್ಯಂತ ಆಘಾತಕಾರಿಯಾದ ಸಂಗತಿಯಾಗಿತ್ತು ಇನ್ನೊಂದು ವೀಡಿಯೋ. ಒಂದು ರೂಮಿನೊಳಗೆ ನಾಯಿ ಮರಿಯನ್ನು ಕೂಡಿಸಿ ಹೆಣ್ಣುಹುಡುಗಿಯರು ನಾಲ್ಕೈದು ಮಂದಿ ಕಾಲಿನಿಂದ ಎತ್ತಿ ಬಿಸಾಕುತ್ತಿದ್ದರು. ಗೋಡೆಗೆ ಹೊಡೆದು,ಬಡಿದು ಸತಾಯಿಸುತ್ತಿದ್ದರು.ಕಡೆಗೆ ಆ ನಾಯಿ ಮರಿಯು ಏಳಲಾಗದೇ ಬಿದ್ದು ಕೊಂಡಾಗ ಒಂದು ಕಡೆಯಿಂದ ಒಬ್ಬಳು ನಾಯಿ ಮರಿಯನ್ನು ಒದ್ದು ಆ ಕಡೆ ಹೋಗ್ತಾಳೆ ಬೇರೆಯೊಬ್ಬಳು ಈ ಕಡೆ ಬರ್ತಾಳೆ.ಕಡೆಗೆ ನೆಲದ ಮೇಲೆ ಅಪ್ಪಚ್ಚಿಯಾಗಿ ರಕ್ತ ಕಾರಿ ಪ್ರಾಣ ಬಿಡುತ್ತದೆ.ಈ ಘಟನೆಯು ನನ್ನನ್ನು ಹೆಚ್ಚು ಘಾಸಿಗೊಳಿಸಿತು.ನೊಂದು  ಕಣ್ಣೀರಿಟ್ಟೆ. ಕೆಲ ದಿನ ಅದೇ ನನ್ನ ಮನಸ್ಸನ್ನು ಕೊರೆಯುತ್ತಿತ್ತು.ನಾನು ಆಗ ತಿಳಿದುಕೊಂಡದ್ದು ಹೆಣ್ಣುಮಕ್ಕಳಲ್ಲಿಯೂ ಇಂತಹ ಕ್ರೂರಿಗಳು ಇದ್ದಾರೆ ಎಂದು.ಹೆಣ್ಣಿನ ಮನಸ್ಸು ಮೃದು ಎಂದು ಮಾತ್ರ ತಿಳಿದಿದ್ದೆ .ಇಂತಹ ವಿಕೃತ ವಿಘ್ಣ ಸಂತೋಷಿಗಳು ಇರುತ್ತಾರೆಂದು ತಿಳಿದಿರಲಿಲ್ಲ.ನರರಾಕ್ಷಸ ರೂಪದಂತೆ ಅವರು ಕಾಣುತ್ತಿದ್ದರು.ಹಂದಿ ಕೂಟಕ್ಕಿಂತಲೂ ನೀಚವಾಗಿತ್ತು ಅವರ ವರ್ತನೆ.ಇಲ್ಲಿಯೂ ರಸೂಲರ (ಸ) ಸಂದೇಶ ಪ್ರಸ್ತುತವೆನಿಸಿತು.
ಬೆಕ್ಕನ್ನು ಕಟ್ಟಿಹಾಕಿ ಕೊಂದ ಹೆಂಗಸಿಗೆ ಅಲ್ಲಾಹನು ನರಕದ ಶಿಕ್ಷೆ ಕೊಟ್ಟನು.ಅವಳು ಅದಕ್ಕೆ ತಿನ್ನಿಸಲೂ ಕುಡಿಸಲೂ ಇಲ್ಲ.ಅದನ್ನುಅದರಷ್ಟಕ್ಕೆ ಭೂಮಿಯಲ್ಲರುವ ಪ್ರಾಣಿಗಳನ್ನು ತಿಂದು ಬದುಕಲೂ ಬಿಡಲಿಲ್ಲ.ಹಾಗೇ ಅದು ಸತ್ತು ಹೋಯಿತು.(ಹದೀಸು)
ಒಂದು ಪ್ರಾಣಿಗೂ ಅನ್ಯಾಯ ವಾಗಬಾರದೆನ್ನುವುದು ಧರ್ಮನೀತಿ.ಆದರೆ ಇಂದು ದುಷ್ಟ ಪ್ರವೃತ್ತಿ ಯೇ ಹೆಮ್ಮೆಯೆಂದು ಬೀಗುತ್ತಾರೆ ಕೆಲವರು.ರಕ್ತಹರಿಸುವ ಬೆಂಕಿ ಹಚ್ಚುವ ಸಂಗತಿಗಳೇ ವಿಜ್ರಂಬಿಸುತ್ತಿದೆ.ಅದೂ ಕರುನಾಡಿನ ಪಲ್ಲಕ್ಕಿ ಕನಸು ಕಾಣುವವರು.ಯಾರೇ ಆದರೂ ತಪ್ಪು ಮಾಡಿದವರನ್ನು ಒದ್ದು ಒಳಗೆ ಹಾಕಿ ಎಂದು ಹೇಳಬೇಕಾದವರು ಬಂಧನವಾದರೇ ಬೆಂಕಿ ಉರಿಯಬಹುದು? ಎನ್ನುತ್ತಾರೆ.
ಆಯುಧಗಳನ್ನು ಸಿದ್ದಪಡಿಸಿ ?ಎಂದು ಬಹಿರಂಗ ಹೇಳಿಕೆ ನೀಡುತ್ತಾರೆ.ಹಾಗಾದರೆ ಅಪರಾಧ ಮಾಡಿದವ ಪ್ರಭಾವಿಯಾದರೆ ಪಲ್ಲಕ್ಕಿ ? ಸಾಮಾನ್ಯನಾದರೆ ಜೈಲು ಗತಿಯಾ?ಏನಿದು ಶಿಸ್ತಿನ ಸಂಘಟನೆಯ ಧೋರಣೆ?ಕೋಳಿ ಕಾಲಿಗೆ ಕತ್ತಿ ಕಟ್ಟಿ ಅಂಕ ಮಾಡಿ ಗೆದ್ದರೆ ದುಡ್ಡು ಸೋತರೆ ಮಾಂಸ ತರ ಜನರ ಕೊರಳಿಗೆ ಮತಾಂಧತೆಯ ಕತ್ತಿ ಯನ್ನು ಕಟ್ಟಿ ಅಧಿಕಾರ ಕ್ಕಾಗಿ ಹವಣಿಸುವ ಮಂದಿಯನ್ನು ಕಂಡರೆ ಪಾಪ ಅನಿಸುತ್ತದೆ.ಬೌದ್ಧಿಕ ದಿವಾಳಿತನದ ದುರವಸ್ಥೆ.ಸ್ವಧರ್ಮಿಯನಿಂದ ಕೊಲೆಯಾದರೆ,ಅಥವಾ ಹಲ್ಲೆಗೊಳಗಾದರೆ ಕೇಳೋರಿಲ್ಲ!.ಬೇರೆ ಜಾತಿಯವನನ್ನು ಕೊಂದರೂ ಪರ್ವಾಗಿಲ್ಲ!ಸ್ವಧರ್ಮಿಯನಿಂದ ಅತ್ಯಾಚಾರ,ಪೀಡನೆಗೆ ಒಳಗಾದರೆ ಯಾರೂ ಸುಳಿಯೋದಿಲ್ಲ!
ದಿನನಿತ್ಯದ ಬದುಕಿನ ಹೋರಾಟದಲ್ಲಿ,ಕಷ್ಟ ಸುಖದಲ್ಲಿ ಎಲ್ಲಾ ಜಾತಿಯವರೂ ಅನ್ಯೋನ್ಯತೆ ಯಿಂದ ಸಹಕರಿಸಿ ಬದುಕುತ್ತಿದ್ದಾರೆ.ಅನ್ಯ ಮತದವರ ಉದ್ಯಮದಲ್ಲಿ ಎಲ್ಲರೂ ಶೇರಾಗುತ್ತಾರೆ.ಕಂಪನಿ ಫ್ಯಾಕ್ಟರಿ ಗಳಲ್ಲಿ ಜಾತಿ ಮಾತ್ರ ವರ್ಕೌಟಾಗೋದೇ ಇಲ್ಲ.ಅದು ಸಾದ್ಯವೂ ಅಲ್ಲ.ಅನೇಕ ಸಂದರ್ಭಗಳಲ್ಲಿ ಸಹಾಯಕ್ಕೆ ಬರುವವರು ಜಾತೀಯವರೇ ಅಲ್ಲ.
ಹೀಗೇ ಸಮಾಜ ಸಾಗುತ್ತಿರುವಾಗ ಸ್ವಾರ್ಥಿಗಳ ಕುತಂತ್ರಕ್ಕೆ ಬಲಿಯಾಗಿ ಸಾಮಾಜಿಕ ಸ್ವಾಸ್ಥ್ಯ ಕೆಡುತ್ತದೆ.ವಾಸ್ತವ ವಿರುಧ್ದ ಸುಳ್ಳುಗಳು ಹರಡಲಾರಂಬಿಸುತ್ತದೆ.ಕಲ್ಲು ಎಸೆದು ಗಲಭೆ ಯನ್ನು ಹೊತ್ತಿಉರಿಸೋದು ,ಪಾಕ್ ದ್ವಜ ಹಾರಿಸೋದು,ಸ್ಫೋಟ ನಡೆಸೋದು
ಪೂಜಾ ಮಂದಿರಗಳನ್ನು ಮಲಿನ ಮಾಡೋದು, ನಂತರ ಅದನ್ನು ಅನ್ಯರ ತಲೆ ಮೇಲೆ ಕಟ್ಟುವುದು.ಇದು ಸಮಾಜದ ಕೆಲ ದ್ರೋಹಿಗಳ ಕುತಂತ್ರವಾದರೂ ಅದರ ನಾಶವನ್ನು ಸಮಾಜ ಅನುಭವಿಸಬೇಕಾಗುತ್ತದೆ. ಇಷ್ಟಕ್ಕೂ ಜನ ಹಿಂಸೆಗೆ ಒಗ್ಗಿಕೊಳ್ಳಲು ಕಾರಣ ಅಧಾರ್ಮಿಕ ಸುಖಾಡಂಬರ ವ್ಯಾಮೋಹ ಮತ್ತು ಅಧಿಕಾರದ ಸ್ವಾರ್ಥ ಮಾತ್ರವಾಗಿರುತ್ತದೆ.
ಎಲ್ಲಾ ಮಕ್ಕಳು ಪ್ರಾಕೃತಿಕವಾಗಿ ಉತ್ತಮ ಗುಣದಲ್ಲೇ ಹುಟ್ಟುತ್ತಾರೆ ಆದರೆ ಅವರು ಅವರ ಹೆತ್ತವರು ನಿಮಿತ್ತ ಬದಲಾಗುತ್ತಾರೆಎನ್ನುವುದು ಹದೀಸಿನ ಸಾರವಾಗಿದೆ.
ಹುಡುಗಿಯೊಬ್ಬಳಿಗೆ ಬೊಂಬೆ ಆಟ ಎಂದರೆ ಪಂಚಪ್ರಾಣ.ಒಮ್ಮೆ ಅದರ ಕಾಲು ಮುರಿದು ಹೋಯಿತು.ಮುಂದೆ ಹುಡುಗಿ ಕೆಲಸ, ಅದಕ್ಕೆ ಗಮ್ಮು ಹಚ್ಚೋದು,ಟೇಪು ಕಟ್ಟೋದು.ಬಟ್ಟೆ ಸುತ್ತೋದು.ಇದನ್ನು ಕಂಡು ಕಂಡು ರೋಸಿ ಹೋದ ತಾಯಿ ಆ ಗೊಂಬೆಯನ್ನು ಎತ್ತಿ ಮಾರ್ಗದ ಆ ಕಡೆ‌ ಬಿಸಾಡುತ್ತಾಳೆ.ಇದನ್ನು ನೋಡಿ ಆ ಮಗಳು ಕೇಳಿದ್ದು ನನ್ನ ಕಾಲು ಮುರಿದರೆ ಇದೇ ತರ ಬಿಸಾಡುತ್ತಿಯಾ?
ಮಗಳ ಮನಸ್ಸನ್ನು ನೋಡಿ? ಮಕ್ಕಳ ಮನಸ್ಸಿನಲ್ಲಿ ದ್ವೇಷ,ಕ್ರೌರ್ಯ,ಹಗೆ ಇರೋದಿಲ್ಲ.ಅವರಲ್ಲಿ ಮತಾಂಧತೆ ಸುಳಿದಿರೋದಿಲ್ಲ.ಆ ಮಕ್ಕಳ ಮನಸ್ಸನ್ನು ಹಾಳುಗೆಡವದು ಮತಾಂಧತೆಯ ಕುರುಡುತನವಾಗಿದೆ.ಮಕ್ಕಳನ್ನು ಕ್ರೂರರಾಗಿಸುವುದು ಹೆಚ್ಚಾಗಿ ಸಂಘಟನೆಯ ಸ್ವಾರ್ಥ ವಾಗಿರುತ್ತದೆ.ಉದ್ರೇಕವನ್ನು ಹಸಿ ಸುಳ್ಳಿನ ಮೂಲಕ ಸಿದ್ದಪಡಿಸಲಾಗುತ್ತದೆ.ಮೊನ್ನೆ ಯುವ ನಾಯಕನೊಬ್ಬ ತನ್ನವರನ್ನು ಸಮರ್ಥಿಸಲು ಟಿಪ್ಪುಸುಲ್ತಾನರನ್ನು ಎಳೆದು ತಂದಿದ್ದ .ಸುಲ್ತಾನರಿಗೆ ಸೇವಕರು ದಿನಾಲು ಅವರು ಮಾಡಿದ ಮಾತಾಂತರ,ದೇವಸ್ತಾನ ದ್ವಂಸ,ಕೊಲೆ,ಬಗ್ಗೆ ವರದಿ ನೀಡಬೇಕಿತ್ತಂತೆ ? ಈ ಸುಳ್ಳನ್ನು ಕೇಳುವಾಗ ವ್ಯಕ್ತಿಯಲ್ಲಿರುವ ಅಸಹಿಷ್ಣುತೆಯನ್ನು ಅಳತೆ ಮಾಡಬಹುದಿತ್ತು.ನಾಡು,ನುಡಿ ಕಟ್ಟಿದ ಕೀರ್ತಿ ಶ್ರೇಷ್ಟ,ದೇಶಪ್ರೇಮಿ, ಮತ ಸಹಿಷ್ಣು ದೇವಸ್ತಾನ ಸಂರಕ್ಷಕನಾದ ಸುಲ್ತಾನ ಬಗ್ಗೆ ಕ್ಷುದ್ರ ಜೀವಿಗಳು ಬರೆದ ಅವಿವೇಕದ ಕಟ್ಟು ಕಥೆಯನ್ನು ಹೇಳುವಾಗ ಅಸಹ್ಯವೆನಿಸಿತ್ತು.ಇಂತಹ ಸಮಾಜ ಘಾತುಕ ಬೆಂಕಿ,ರಕ್ತ,ನಂಜು,ಸುಳ್ಳನ್ನು ಬಂಡವಾಳ ವಾಗಿಸಿದವರಿಗಿಂತ ಗುಡ್ಡೆಗಾಡಲ್ಲಿ ಗುಂಡಿಗೆ ಬಿದ್ದ ಆಡಿನ ಮರಿಯನ್ನು ರಕ್ಷಿಸಿದ ಕುರಿ ಕಾಯೋಮಂದಿ ವಾಸಿಯೆಂದು ಬಾವಿಸಿದರೆ ತಪ್ಪಿರಲಿಕ್ಕಿಲ್ಲ.

🎆 ವರದಿ ಅಲ್ ಅಹ್ಸನ್

No comments:

Post a Comment