ಜೀವ ರಕ್ಷಣಾ ಸೇವಾಕಾರ್ಯಗಳು ಗಡಿ ದಾಟಿ ಮ್ಯಾನ್ಮಾರಿನ ಸಂತ್ರಸ್ತರಿಗೆ ತಲುಪಲಿ

ಮರಣ ಮತ್ತು ರೋಗ ವನ್ನು ಬರೀ ಮದ್ದಿನಿಂದ ದೂರಮಾಡಲಾಗದು

ಮೌಲಾನಾ ಯು ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಬಾಲಕ ಇಮ್ರಾಝಿನ ಮರಣವು ದಿಗ್ಭ್ರಮೆಯನ್ನುಂಟುಮಾಡಿದೆ. ಕದಿಕೆಯ ಮರಿಯಂ ಸಾಹಿರಾ ಒಂಬತ್ತು ವರ್ಷ ಪ್ರಾಯದ ಮಗುವಿನ ಆರೋಗ್ಯಕ್ಕಾಗಿ ವರ್ಷ ಪೂರ್ತಿ ಹೆಚ್ಚುಕಡಿಮೆ ಇಪ್ಪತ್ತೈದು ಲಕ್ಷ ಕ್ಕಿಂತಲೂ ಹೆಚ್ಚು ಖರ್ಚು ಮಾಡಿದರೂ ಮುದ್ದು ಮಗಳನ್ನು ಉಳಿಸಲಾಗಲಿಲ್ಲ.
ಬೋಳಾರದ ಹೆಣ್ಣು ಮಗಳು   ನಿಸ್ಮಿತ  ಮಗುವನ್ನು ಹೆತ್ತು ನಾಲ್ಕೈದು ದಿನಗಳಲ್ಲಿ ನಿಮೋನಿಯಕ್ಕೆ ತುತ್ತಾಗಿ ತೀರಿಕೊಳ್ಳುತ್ತಾಳೆ.
ಕೆಲವು ಮರಣಗಳು ನಮ್ಮನ್ನು ಇನ್ನಿಲ್ಲದಂತೆ ಘಾಸಿ ಗೊಳಿಸಿದರೆ ಮತ್ತೆ ಕೆಲವು ಮರಣಗಳು ಗಮನಕ್ಕೆ ಬಾರದೇ ನಡೆದು ಹೋಗುತ್ತದೆ.
ಇದಕ್ಕಿಂತಲೂ ದಯನೀಯ ಸ್ಥಿತಿ ಮಾರಕ ರೋಗಕ್ಕೆ ತುತ್ತಾಗಿ ಅಥವಾ ಅಪಘಾತಗಳಲ್ಲಿ ತೀವ್ರ  ಗಾಯಗೊಂಡು ಚಿಕಿತ್ಸೆಗಾಗಿ ಪರದಾಡುವವರದ್ದು.
ಇಂತಹಾ ಪರಿಸ್ತಿತಿ ಯಾರಿಗೂ ಬೇಡ ಎಂದು ಕೆಲವೊಮ್ಮೆ ಅಂದು ಕೊಂಡರೂ ಏನನ್ನೂ ಮಾಡಲಾಗದ ಸ್ಥಿತಿ?
ಇಲ್ಲಿ ನಮಗೆ ಕೆಲವೊಂದು ಕಾರ್ಯಗಳನ್ನು ಮಾಡಿ ರೋಗ ಮತ್ತು ಮರಣವನ್ನು ದೂರಮಾಡಬಹುದು ಎನ್ನುವುದು ಸಾತ್ವಿಕ ವಿಚಾರ.
ಪ್ರವಾದಿಗಳು ಹೇಳುತ್ತಾರೆ.
ವಿಧಿಯನ್ನು ಪ್ರಾರ್ಥನೆಯು ತಡೆಗಟ್ಟುತ್ತದೆ. ಸತ್ಕರ್ಮವು ಆಯುಷ್ಯವನ್ನು ವೃದ್ಧಿಸುವಂತೆ ಮಾಡುತ್ತದೆ.ಪಾಪಗಳಿಂದ ಅನ್ನಕ್ಕೆ ಕುತ್ತು ಬರುತ್ತದೆ.
ನಮ್ಮಲ್ಲಿರುವ ಕೊರತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದಿಲ್ಲ ಎನ್ನುವುದಾಗಿದೆ.
ರೋಗ ಬಂದ ಮೇಲೆ ಲಕ್ಷ ಖರ್ಚು ಮಾಡಲು ಮುಂದಾಗುತ್ತೇವೆ.ಮರಣ ಬಳಿಕ ದಾನ ಧರ್ಮ ಮಾಡುತ್ತೇವೆ.
ಮರಣ ಹೊಂದಿದವರ ಹೆಸರಲ್ಲಿ ಮಸೀದಿಯನ್ನೇ ಕಟ್ಟುವೆವು.
ಆದರೆ ಜೀವಿತಾವಧಿಯಲ್ಲಿ ಹಸಿದವನಿಗೆ ಅನ್ನ ಕೊಡುವ ಮನಸ್ಸಿಲ್ಲ.ಬದುಕಿರುವಾಗ ತಿರುಗಿ ನೋಡದವ ಮರಣದ ಸಮಯದಲ್ಲಿ ಕಣ್ಣೀರು ಹಾಕಿ ಏನು ಲಾಭ?
ನಮ್ಮ ಮುಂದೆ ನಿತ್ಯದ ಜೀವನಕ್ಕೆ ಪರದಾಡುವ ಮಂದಿ ಅನೇಕ ಇದ್ದಾರೆ.
ಮನೆ ಬೀಳುವ ಸ್ಥಿತಿ ಯಲ್ಲಿ!
ಸೋರುವ ಮಾಡು! ಹಾಳಾಗಿ ಹೋಗುವ ವಸ್ತುಗಳು,ಬೆಂಬಿಡದ ರೋಗಗಳು! ದಾರಿಯೇ ಕಾಣದ ರೀತಿಯಲ್ಲಿ ಬದುಕುವ ಮಂದಿ.
ನಾವೆಷ್ಟೇ ಶಕ್ತರೆಂದು ಎನಿಸಿದರೂ ಒಂದು ರೋಗ ನಮ್ಮನ್ನು ಅಲುಗಾಡಿಸಿ ಬಿಡುತ್ತದೆ.ಮತ್ತೆ ನಮಗೆ ಯಾರೊಂದಿಗೂ ಹಗೆತನ ಇರೋದಿಲ್ಲ.ಪೈಪೋಟಿ ಗೆ ಬೀಳೋದಿಲ್ಲ.
ನನಗೊಂದು ಕಥೆ ನೆನಪಾಗುತ್ತದೆ.ಒಂದೂರಲ್ಲಿ ರಾಜ ಆಡಳಿತ ವಿತ್ತು.ಆದರೆ ಅಲ್ಲಿ ಅಧಿಕಾರ ಅವಧಿ ಒಂದು ವರ್ಷ ಮಾತ್ರವಾಗಿತ್ತು. ಒಂದು ವರ್ಷದ ಮಟ್ಟಿಗೆ ಒಬ್ಬನನ್ನು ರಾಜನನ್ನಾಗಿ ಮಾಡಿ ನಂತರ ದೂರದ ದ್ವೀಪಿಗೆ ಬಿಟ್ಟು ಬರುವ ಸಂಪ್ರದಾಯ. ಅಲ್ಲಿ ಜನವಾಸವಿರಲಿಲ್ಲ. ಅಲ್ಲಿರುವ ಕ್ರೂರ ಪ್ರಾಣಿಗಳಿಗೆ ಆತ ಬಲಿಯಾಗುವುದು ಸಾಮಾನ್ಯ.  ಈ ಕಾರಣದಿಂದ ರಾಜನಾಗಿ ಆರಿಸಲ್ಪಟ್ಟವನು ತನ್ನ ಅಧಿಕಾರದ ಕೊನೆಯಲ್ಲಿ ಸಂಕಷ್ಟ ಎದುರಿಸುತ್ತಿದ್ದ ಒಮ್ಮೆ ಹಾಗೇ ರಾಜನಾದ ಒಬ್ಬ ಮೊದಲ ತಿಂಗಳಲ್ಲೇ ಆ ದ್ವೀಪಿಗೆ ಸೇನೆಯ ನ್ನು ಕಳಿಸಿ ಮೃಗಗಳನ್ನ
ಸಂಹರಿಸುತ್ತಾನೆ.ನಂತರ ಅಲ್ಲಿ ಬೇಕಾದ ಎಲ್ಲಾ ವ್ಯವಸ್ತೆಯ ನ್ನು ಮಾಡಿಕೊಳ್ಳುತ್ತಾನೆ.ವರ್ಷ ಮುಗಿಯುತ್ತಾ ಬಂದಾಗ ಯಾವ ಚಿಂತೆ ಇಲ್ಲದೇ ಆ ದ್ವೀಪಿಗೆ ಹೊರಡುತ್ತಾನೆ.
ಇದು ಕಥೆಯಾದರೂ  ವ್ಯಥೆ ಪಡದಿರಲು  ಪೂರ್ವ ತಯಾರಿಯಾಗಿ ಏನಾದರೂ ಮಾಡಬೇಕೆಂದನ್ನು ಇದು ಹೇಳಿಕೊಡುತ್ತದೆ.
ರೋಗ ,ಮರಣ ಬರುವ ಮೊದಲು ಪುಣ್ಯ ಮಾಡುವುದೂ ಆರೋಗ್ಯ ಕಾಪಾಡುವ ಭಾಗವಾಗಿ ಪ್ರವಾದಿಯವರು (ಸ) ವಿವರಿಸುತ್ತಾರೆ.
ಉತ್ತಮ ಕಾರ್ಯ ಪರರ ಸೇವೆ ಮುಂತಾದವುಗಳಿಂದ ನಮ್ಮ ಆರೋಗ್ಯ ವನ್ನು ಆಯುಷ್ಯವನ್ನೂ ಕಾಪಾಡಬಹುದು ಎನ್ನುವುದು ಪ್ರವಾದಿ ಮಾತು.
ದಾನವು ಅಲ್ಲಾಹನ ಕೋಪವನ್ನುತಣಿಸುತ್ತದೆ. ಕೆಟ್ಟ ಮರಣ ದಿಂದ ಕಾಪಾಡುತ್ತದೆ.
ದಾನದ ಮೂಲಕ ನಿಮ್ಮ ರೋಗಗಳಿಗೆ ಚಿಕಿತ್ಸೆ ಮಾಡಿ ಹದೀಸು
ನಮ್ಮ ಸುತ್ತಲೂ ಇರುವ ಅಸಹಾಯಕರಿಗೆ ,ರೋಗಗ್ರಸ್ತ ಜನರಿಗೆ ನಮ್ಮಿಂದ ಸಾಧ್ಯವಾದ ಸಹಕಾರ ತಲುಪಬೇಕಾಗಿದೆ.ಅದು ವರ್ಗ. ಪಂಗಡ, ಜಾತಿ, ಧರ್ಮ ,ಊರು ಕೇರಿ, ದೇಶ ದಾಟಿ ಮ್ಯಾನ್ಮಾರಿನ ನಿರಾಶ್ರಿತ ಜನರಿಗೂ ಮುಟ್ಟಬೇಕು.ಆ ಮೂಲಕ
ರೋಗ ,ಸಾವು ನೋವನ್ನು ಇನ್ನಷ್ಟು ದೂರ ಮಾಡೋಣ.

ವರದಿ ಅಲ್ ಅಹ್ಸನ್ ಮಾಸಿಕ

No comments:

Post a Comment